ಬೆಂಗಳೂರು (ಏಪ್ರಿಲ್ 09): ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಅನುಭವವಾಗುವಷ್ಟು ಹೊಗೆ-ಧೂಳು ರೈಲ್ವೆ ನಿಲ್ದಾಣದಲ್ಲಿ ಕಾಣದಿರಬಹುದು. ಆದ್ರೆ ಹಾಗಂತ ಅಲ್ಲೇನೂ ಶುದ್ಧ ಗಾಳಿ ಇದೆ ಎಂದಲ್ಲ. ಇದೀಗ ನೈಋತ್ಯ ರೈಲ್ವೆ ಮತ್ತು ಭಾರತೀಯ ರೈಲು ನಿಲ್ದಾಣ ಅಭಿವೃದ್ಧಿ ಸಂಸ್ಥೆ ಜೊತೆಯಾಗಿ ರೈಲ್ವೆ ನಿಲ್ದಾಣಗಳನ್ನು ಮತ್ತಷ್ಟು ಉತ್ತಮವಾಗಿಸೋಕೆ ನಿರ್ಧರಿಸಿವೆ. ಇದಕ್ಕೆ ಅಡಿಯಲ್ಲಿ ‘Smart Railway Projects’ ಆಯ್ಕೆಯಾಗಿರೋದು ಬೆಂಗಳೂರಿನ Atechtron ಸಂಸ್ಥೆ.
ಈಗಾಗಲೇ ಬೆಂಗಳೂರಿನ ನಾನಾ ಕಡೆ 10 ಗಾಳಿ ಶುದ್ಧೀಕರಣ ಯಂತ್ರಗಳು ಇರುವುದನ್ನು ಅನೇಕರು ಗಮನಿಸಿರಬಹುದು. ಕಾರ್ಪೊರೇಶನ್ ಸರ್ಕಲ್, ಟೌನ್ ಹಾಲ್ ಸೇರಿದಂತೆ ಅತೀ ಹೆಚ್ಚು ವಾಯುಮಾಳಿನ್ಯ ಇರುವ ಪ್ರದೇಶಗಳಲ್ಲಿ ಈ ಗಾಳಿ ಶುದ್ಧೀಕರಣ ಯಂತ್ರಗಳು ಕಳೆದ 2 ವರ್ಷಗಳಿಂದ ಉತ್ತಮ ನಿರ್ವಹಣೆ ನೀಡುತ್ತಿವೆ. ಇದಕ್ಕೆ ಆ ಸರ್ಕಲ್ಗಳಲ್ಲಿ ಹೆಚ್ಚಿನ ಸಮಯ ಕರ್ತವ್ಯನಿರತರಾಗಿರುವ ಟ್ರಾಫಿಕ್ ಪೋಲೀಸರೇ ಸಾಕ್ಷಿ. ಈಗ ಮತ್ತೊಂದೆ ಹೆಜ್ಜೆ ಮುಂದಕ್ಕೆ ಹೋಗಿ ಈ Air Purifiers ರೈಲ್ವೆ ನಿನಿಲ್ದಾಣಗಳ ಗಾಳಿಯನ್ನು ಶುದ್ಧೀಕರಿಸಲು ಸಜ್ಜಾಗುತ್ತಿವೆ.
ಬೆಂಗಳೂರು ಮೂಲದ ಸಂಸ್ಥೆಯಾಗಿರೋದ್ರಿಂದ ಬೆಂಗಳೂರಿನಲ್ಲೇ ಕೆಲಸ ಆರಂಭಿಸಲು ಸೂಚಿಸಲಾಗಿದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ, ಬಯ್ಯಪ್ಪನಹಳ್ಳಿ, ಕೆ ಆರ್ ಪುರಂ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳಲ್ಲಿ ಇನ್ನು 3 ತಿಂಗಳಲ್ಲಿ ಗಾಳಿ ಶುದ್ಧೀಕರಣ ಯಂತ್ರಗಳು ಸ್ಥಾಪನೆಯಾಗಲಿವೆ. ಕ್ರಮೇಣವಾಗಿ ದೇಶದ ಎಲ್ಲಾ ದೊಡ್ಡ ನಿಲ್ದಾಣಗಳಲ್ಲೂ ಇವುಗಳ ಸ್ಥಾಪನೆ ಮಾಡುವ ಆಲೋಚನೆ ರೈಲ್ವೆ ಇಲಾಖೆಗಿದೆ.
ರೈಲ್ವೆ ನಿಲ್ದಾಣಗಳಲ್ಲಿ ಬೃಹತ್ ಟವರ್ಗಳನ್ನು ನಿರ್ಮಿಸಿ ಅದರಲ್ಲಿ ಏರ್ ಪ್ಯೂರಿಫೈಯರ್ ಅಳವಡಿಸಲಾಗುತ್ತದೆ. ಪ್ರತೀ ಪ್ಯೂರಿಫೈಯರ್ ನಿಮಿಷಕ್ಕೆ 26,000 ಕ್ಯುಬಿಕ್ ಅಡಿಗಳಷ್ಟು ಸ್ಥಳದ ಗಾಳಿಯನ್ನು ಫಿಲ್ಟರ್ ಮಾಡುತ್ತದೆ. ಪ್ರತೀ ಟವರ್ಗೂ 30ರಿಂದ 35 ಲಕ್ಷ ರೂಪಾಯಿ ಬೆಲೆ ಇದ್ದು ಸಂಪೂರ್ಣವಾಗಿ ನಮ್ಮ ಬೆಂಗಳೂರಿನಲ್ಲೇ ತಯಾರಾಗಿದೆ. ನ್ಯಾನೊ ಫಿಲ್ಟರೇಶನ್ ತಂತ್ರಜ್ಞಾನ ಬಳಸಿ 6 ಪದರಗಳ ಪ್ಲಾಸ್ಮಾ ಫಿಲ್ಟರ್ ಬಳಸಲಾಗುತ್ತದೆ. ಫಿಲ್ಟರ್ ಒಳಗೆ ಹೋಗುವ ಗಾಳಿಯಿಂದ ಹಾನಿಕಾರಕ ರಾಸಾಯನಿಕ, ಧೂಳು ಎಲ್ಲವನ್ನೂ ತೆಗೆದು ಶುದ್ಧ ಗಾಳಿಯನ್ನು ಹೊರಹಾಕುತ್ತದೆ.
ಪ್ರತೀ ಟವರ್ನ ನಿರ್ವಹಣೆಗೆ ತಿಂಗಳಿಗೆ 6ರಿಂದ 7 ಲಕ್ಷ ರೂಪಾಯಿ ಖರ್ಚಾಗಲಿದೆ. ಹೆಚ್ಚು ತಂತ್ರಜ್ಞಾನ ಬಳಸಿರೋದ್ರಿಂದ ಸದಾ ಅದರ ನಿರ್ಹಣೆಗೆ ಜನ ಇರಬೇಕಿಲ್ಲ. ಎಲ್ಲಾ ಸೇರಿ ಇಡೀ ಬೆಂಗಳೂರಿನ ಅಷ್ಟೂ ಟವರ್ಗಳ ನಿರ್ವಹಣೆಗೆ ಗರಿಷ್ಠ 24 ಜನರಿದ್ದರೆ ಸಾಕು ಎನ್ನುತ್ತಾರೆ ಏಟೆಕ್ಟ್ರಾನ್ ಸಂಸ್ಥೆಯ ಸಂಸ್ಥಾಪಕ ರಾಜೀವ್ ಕೃಷ್ಣ. ಏರ್ ಮಾನಿಟರಿಂಗ್ ಮತ್ತು ಗಾಳಿಯ ಗುಣಮಟ್ಟದ ಮೇಲೂ ಈ ಟವರ್ಗಳು ನಿಗಾ ಇಡಲಿವೆ.
ಇಷ್ಟಲ್ಲಾ ಇದ್ದರೂ ರೈಲ್ವೆ ಇಲಾಖೆ ಈ ಸಂಸ್ಥೆಗೆ ಒಂದೇ ಒಂದು ರೂಪಾಯಿ ಹಣ ನೀಡುವುದಿಲ್ಲ. ಬದಲಿಗೆ, ಪ್ರತೀ ಟವರ್ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಲಾಗಿದ್ದು ಅದರಿಂದ ಬರುವ ಆದಾಯವನ್ನು ಇವರು ಪಡೆಯಬಹುದಾಗಿದೆ. ಇಷ್ಟು ಹಣ ಟವರ್ಗಳ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಸಾಕಾಗುತ್ತದೆ ಎನ್ನುತ್ತಾರೆ ರಾಜೀವ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ