ಯಾವ ಕಾಲದಲ್ಲೂ ಈ ಗ್ರಾಮದಲ್ಲಿಲ್ಲ ಯುಗಾದಿ ಸಂಭ್ರಮ; ಕಾರಣ ಕೇಳಿದ್ರೆ ನಿಮಗೂ ಅಚ್ಚರಿ ಆಗುತ್ತದೆ

ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗಜಾಪುರ  ಗ್ರಾಮದ ಬಹುತೇಕರು ಯುಗಾದಿ ಹಬ್ಬವನ್ನು ಆಚರಿಸೋದಿಲ್ಲ. ಕೇವಲ ಈ ಗ್ರಾಮ ಮಾತ್ರವಲ್ಲ ಕೂಡ್ಲಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಈಗಲೂ ಯುಗಾದಿ ಹಬ್ಬ ಆಚರಣೆ ಮಾಡಲ್ಲ.

news18-kannada
Updated:March 25, 2020, 7:40 AM IST
ಯಾವ ಕಾಲದಲ್ಲೂ ಈ ಗ್ರಾಮದಲ್ಲಿಲ್ಲ ಯುಗಾದಿ ಸಂಭ್ರಮ; ಕಾರಣ ಕೇಳಿದ್ರೆ ನಿಮಗೂ ಅಚ್ಚರಿ ಆಗುತ್ತದೆ
ಯುಗಾದಿ
  • Share this:
ನಾಡಿನೆಲ್ಲಡೆ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರಿಂದ ಆಚರಿಸ್ತಾರೆ. ಆದರೆ ಗಣಿನಾಡು ಬಳ್ಳಾರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಯುಗಾದಿ ಹಬ್ಬ ಮಾಡುವುದಿಲ್ಲ. ಒಂದು ವೇಳೆ ಹಬ್ಬ ಮಾಡಿದರೆ ಕೇಡು ಆಗುತ್ತಂತೆ. ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ಹಲವು ಗ್ರಾಮಗಳಲ್ಲಿ ನೂತನ ಸಂವತ್ಸರ ಹಬ್ಬವನ್ನೇ ಆಚರಿಸುವುದಿಲ್ಲ. ಬದಲಾಗಿ ಹಬ್ಬದ ಎರಡು ದಿನ ಸ್ನಾನ, ಪೂಜೆ ಮಾಡದೇ ಕಾಲ ಕಳೆಯುವ ಗ್ರಾಮಗಳಿವೆ. ಅಷ್ಟಕ್ಕೂ ಯಾಕೆ ಹೀಗೆ? ದೇಶದೆಲ್ಲೆಡೆ ಯುಗಾದಿ ಹಬ್ಬ ಆಚರಿಸದರೆ ಇಲ್ಯಾಕೆ ಆಚರಿಸಲ್ಲಾ? ಗೊತ್ತಾ? ಇಲ್ಲಿದೆ ಸ್ಪೆಷೆಲ್ ರಿಪೋರ್ಟ್

ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗಜಾಪುರ  ಗ್ರಾಮದ ಬಹುತೇಕರು ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಕೇವಲ ಈ ಗ್ರಾಮ ಮಾತ್ರವಲ್ಲ ಕೂಡ್ಲಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಈಗಲೂ ಯುಗಾದಿ ಹಬ್ಬ ಆಚರಣೆ ಮಾಡುವುದಿಲ್ಲ. ಈ ಗ್ರಾಮಗಳಲ್ಲಿ ನೂತನ ಸಂವತ್ಸರ ಹಬ್ಬದ ಆಚರಣೆ ಮಾಡೋಕೆ ಗ್ರಾಮಸ್ಥರು ಹಿಂದೇಟು ಹಾಕುತ್ತಾರೆ. ಒಂದು ವೇಳೆ ಹಿರಿಯರ ಮಾತು ಮೀರಿ ಯುಗಾದಿ ಹಬ್ಬ ಮಾಡಲು ಹೋದರೆ ಕೇಡು ಉಂಟಾಗುತ್ತೆ ಎಂಬ ಭಯವೂ ಇದೆ. ಹೀಗಾಗಿ ಈ ಹಬ್ಬವನ್ನ ಆಚರಣೆ ಮಾಡಿದರೆ ಕುಟುಂಬದ ಸದಸ್ಯರಿಗೆ ಕೆಡಕು ಉಂಟಾಗುತ್ತದೆ, ಇಲ್ಲವೇ ಮನೆಯಲ್ಲಿ ಯಾರಾದರು ಸಾವನ್ನಪ್ಪುತ್ತಾರೆ ಎನ್ನುವ ಮೂಢನಂಬಿಕೆ ಇಲ್ಲಿನ ಗ್ರಾಮಸ್ಥರಲ್ಲಿದೆ.
ಇಷ್ಟು ಮಾತ್ರವಲ್ಲ ಕೆಲ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಎರಡು ದಿನವೂ ಕೂಡ ಸ್ನಾನ ಮಾಡದೇ ದೇವರಿಗೆ ಪೂಜಿಸದೇ ಕಾಲ ಕಳೆಯುತ್ತಾರೆ. ತಮ್ಮ ಪೂರ್ವಿಕರು ಮಾಡಿಕೊಂಡ ಸಂಪ್ರದಾಯದಂತೆ ಕಳೆದ ಹಲವು ದಶಕಗಳಿಂದ ಈ ಗ್ರಾಮಗಳಲ್ಲಿ ಯುಗಾದಿ ಹಬ್ಬವನ್ನ ಆಚರಣೆ ಮಾಡುವುದಿಲ್ಲ. ಅದರಲ್ಲೂ ನಾಯಕ, ಗಂಗಾಮಸ್ತ ಮತ್ತು ಉಪ್ಪಾರ ಜನಾಂಗದ ಜನರೇ ಹೆಚ್ಚಾಗಿರುವ ಗ್ರಾಮಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲು ಹಿಂದೇಟು ಹಾಕುತ್ತಾರಂತೆ

ಅಂದಹಾಗೆ, ಕೂಡ್ಲಿಗಿ ತಾಲೂಕಿನ ಗಜಾಪುರ, ತಿಮ್ಮಲಾಪುರ, ಯಾಲ್ದಳ್ಳಿ, ಅಗ್ರಹಾರ ಸೇರಿದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಇಂದಿಗೂ ಯುಗಾದಿ ಹಬ್ಬ ಆಚರಣೆ ಮಾಡುವುದಿಲ್ಲ. ಇದರಲ್ಲಿ ಗಂಗಾಮಸ್ತ, ನಾಯಕ ಮತ್ತು ಉಪ್ಪಾರ ಜನಾಂಗದ ಸದಸ್ಯರು ಗ್ರಾಮಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲು ಹಿಂದೇಟು ಹಾಕುತ್ತಾರೆ. ಈ ಸಮುದಾಯದ ಪೂರ್ವಿಕರು ಹಬ್ಬಕ್ಕೆ ಬೇವು ತರಲು ಹೋದವರು ಮನೆಗೆ ಮರಳಿ ಬಾರಲೇ ಇಲ್ಲವಂತೆ. ಇನ್ನು ಯುಗಾದಿ ಹಬ್ಬ ಆಚರಣೆ ಮಾಡುವ ಸಂದರ್ಭದಲ್ಲಿ ಗ್ರಾಮದಲ್ಲಿ ಅವಘಡಗಳು ಸಂಭವಿಸಿವೆಯಂತೆ. ಈ ಕಾರಣಕ್ಕೆ ಯುಗಾದಿ ಹಬ್ಬ ಆಚರಣೆ ಮಾಡಿದ್ರೆ ಕೆಡಕು ಉಂಟಾಗುತ್ತೆ ಅನ್ನೋ ಭಯ ಇಲ್ಲಿಯ ಗ್ರಾಮಸ್ಥರಲ್ಲಿದೆ.

ಅಲ್ಲದೇ ಯುಗಾದಿ ಹಬ್ಬದ ಸಂದರ್ಭದಲ್ಲಿನ ಮೂರು ದಿನಗಳ ಕಾಲ ಇವರು ಹೊಸ ಬಟ್ಟೆ, ಸಿಹಿ ತಿಂಡಿ ತಿನ್ನುವುದಿಲ್ಲ. ಅಗ್ರಹಾರ ಗ್ರಾಮದ ಸಾದರ ಲಿಂಗಾಯತ ಸಮುದಾಯವರು ಸಹ ಯುಗಾದಿ ಹಬ್ಬ ಆಚರಣೆ ಮಾಡುವುದಿಲ್ಲ. ಮೂಢನಂಬಿಕೆ ಮರೆತು ಸರ್ವರಿಗೂ ಒಳಿತು ಮಾಡುವ ಹಬ್ಬವನ್ನು ಆಚರಿಸಬೇಕು ಎಂದು ಕನಕದುರ್ಗಮ್ಮ ದೇವಸ್ಥಾನದ ಅರ್ಚಕ ಗಾದೆಪ್ಪ ಹೇಳುತ್ತಾರೆ.

ನಾಡಿನೆಲ್ಲಡೆ ನೂತನ ವರುಷದ ದಿನವಾಗಿ ಚಂದ್ರಮಾನ ಯುಗಾದಿಯನ್ನ ಮನೆಮಂದಿಯೆಲ್ಲ ಆಚರಣೆ ಮಾಡುತ್ತಾರೆ. ಹಬ್ಬದ ದಿನ ಒಬ್ಬಟ್ಟು ತಿಂದು, ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಹಬ್ಬವನ್ನು ಬರ ಮಾಡಿಕೊಳ್ಳುತ್ತಾರೆ. ನಿಜವಾಗಿಯೂ ಗ್ರಾಮಗಳಲ್ಲಿಯೂ ಹಬ್ಬಗಳ ಆಚರಣೆ ಉಳಿದುಕೊಂಡಿದೆ. ಆದರೆ ಯುಗಾದಿ ಹಬ್ಬ ಮಾಡಿದರೆ ಕೇಡುಂಟಾಗುತ್ತದೆ ಎಂಬ ಮೂಢನಂಬಿಕೆಗೆ ತೊಡೆದುಹಾಕಲು ವಿವಿಧ ಸಮುದಾಯದ ಪ್ರಜ್ಞಾವಂತರು ಮುಂದಾಗುತ್ತಿದ್ದಾರೆ.

ಆದರೂ ಬಳ್ಳಾರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಈ ಹಬ್ಬ ಆಚರಣೆ ಮಾಡಲು ಭಯ ಬೀಳುತ್ತಿರುವುದು ವಿಪರ್ಯಾಸ.
First published: March 25, 2020, 7:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading