ಮರದ ಒಂದು ಸಣ್ಣ ಕೊಂಬೆಯನ್ನೂ ಕತ್ತರಿಸದೆ ಮೂರಂತಸ್ತಿನ ಮನೆ ಕಟ್ಟಿದ್ದಾರೆ, ಏನ್ ಸಖತ್ತಾಗಿದೆ ನೋಡಿ!

ಈ ಮನೆಯನ್ನು ನೆಲಮಟ್ಟದಿಂದ 9 ಅಡಿ ಮೇಲೆ ನಿರ್ಮಿಸಲಾಗಿದೆ. ಅದಕ್ಕೆ ಮರದ ಕೊಂಬೆಯನ್ನೇ ಆಸರೆಯನ್ನಾಗಿ ಮಾಡಿಕೊಳ್ಳಲಾಗಿದೆ. ಇಡೀ ಕಟ್ಟಡದ ನಿರ್ಮಾಣವನ್ನು ಉಕ್ಕಿನಿಂದ ಮಾಡಲಾಗಿದೆ.

ಮಾವಿನ ಮರದಲ್ಲಿ ಮನೆ  ನಿರ್ಮಾಣ

ಮಾವಿನ ಮರದಲ್ಲಿ ಮನೆ ನಿರ್ಮಾಣ

  • Share this:
ಮನೆ ನಿರ್ಮಾಣದ (Home building) ಬಗ್ಗೆ ಎಲ್ಲರಿಗೂ ತಮ್ಮದೇ ಕನಸು, ಅಭಿರುಚಿ ಇರುತ್ತದೆ. ಕೆಲವರು ಬೆಟ್ಟದ ಮೇಲೆ ಮನೆಯ ಮಾಡಿ ಏಕಾಂತ ಬಯಸಿದರೆ, ಮತ್ತೆ ಕೆಲವರು ಸಂತೆಯಲ್ಲಿ ಮನೆ ಮಾಡಿ ಜಂಜಾಟದ ಬದುಕಿಗೆ ಒಗ್ಗಿ ಹೋಗಿರುತ್ತಾರೆ. ಆದರೆ, ಇಲ್ಲೊಬ್ಬ ಮನೆಯ ಮಾಲೀಕ 3 ಅಂತಸ್ತಿನ(Built a 3-story house) ಮನೆ ನಿರ್ಮಿಸಿದ್ದಾರೆ. ಅದರಲ್ಲೇನು ವಿಶೇಷ ಎಂದಿರಾ? ವಿಶೇಷವಿದೆ. ತನ್ನ ಕನಸಿನ ಮನೆಯನ್ನು ನಿರ್ಮಿಸಲು ಈ ವ್ಯಕ್ತಿ ತನ್ನ ನಿವೇಶನದಲ್ಲಿದ್ದ ಮಾವಿನ ಮರದ ಒಂದೇ ಒಂದು ರೆಂಬೆ ಕೊಂಬೆಯನ್ನೂ ಕತ್ತರಿಸದಂತೆ ನೋಡಿಕೊಂಡಿದ್ದಾರೆ. 40 ಅಡಿ ಉದ್ದವಿರುವ ಮಾವಿನ ಮರದ (Mango tree) ಮೇಲೆ 3 ಅಂತಸ್ತಿನ ಮನೆ ನಿರ್ಮಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ! ಈತನ ಹೆಸರು ಕುಲ್ ಪ್ರದೀಪ್ ಸಿಂಗ್ (Kul Pradeep Singh). ಸದ್ಯ ಈತನ ನಿರ್ಮಾಣದ ಮನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ( Limca Book of Records)ಸೇರ್ಪಡೆಯಾಗಿದೆ.

ಮನೆ 40 ಅಡಿ ನಿರ್ಮಾಣ
ಒಮ್ಮೆ ಹಾಸಿಗೆಯಿಂದ ಎದ್ದೇಳದೆಯೇ ಮಾವಿನ ಹಣ್ಣು ಕೀಳುವುದನ್ನು, ನಿಮ್ಮ ಪಕ್ಕದಲ್ಲಿಯೇ ಉಂಟಾಗುವ ಪಕ್ಷಿಗಳ ಸದ್ದಿಗೆ ಎಚ್ಚರವಾಗುವುದನ್ನು, ಅವುಗಳ ಗೂಡು ನಿಮ್ಮ ಬೆಡ್ ರೂಂನಲ್ಲೇ ನಿರ್ಮಾಣವಾಗುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ.

ಇದನ್ನೂ ಓದಿ: North Delhi: ಉತ್ತರ ದೆಹಲಿಯಲ್ಲಿವೆ ಯಾವಾಗ ಬೇಕಾದರೂ ಬಿದ್ದು ಹೋಗುವ 700 ಕ್ಕೂ ಹೆಚ್ಚು ಅಪಾಯಕಾರಿ ಕಟ್ಟಡಗಳು;

ನಮ್ಮಲ್ಲಿ ಬಹುತೇಕರಿಗೆ ಇಂತಹ ಕಲ್ಪನೆಯೇ ವಿಚಿತ್ರವೆನ್ನಿಸಬಹುದು. ಇಲ್ಲವೇ ಡಿಸ್ನಿ ಸಿನಿಮಾದಲ್ಲಿನ ದೃಶ್ಯದಂತೆ ಭಾಸವಾಗಬಹುದು. ಆದರೆ, ಅಜ್ಮೇರ್‌ನಲ್ಲಿ ಜನಿಸಿರುವ ವ್ಯಾಪಾರಿ ಕುಲ್ ಪ್ರದೀಪ್ ಸಿಂಗ್ ಕುಟುಂಬದ ಪಾಲಿಗೆ ಇದು ಪ್ರತಿ ದಿನ ನೈಜ ಅನುಭವವೇ ಆಗಿ ಹೋಗಿದೆ. ಯಾಕೆಂದರೆ ಅವರ ಮನೆ 40 ಅಡಿ ಉದ್ದವಿರುವ ಮಾವಿನ ಮರದ ಮೇಲೆ ನಿರ್ಮಾಣವಾಗಿದೆ!!

ಹಣ್ಣುಗಳ ಮರಗಳಿಗೆ ಹೆಸರುವಾಸಿ
ಉದಯ್‌ ಪುರದಲ್ಲಿ ನಿರ್ಮಾಣವಾಗಿರುವ ಈ 3 ಅಂತಸ್ತಿನ ಮನೆಯಲ್ಲಿ 2 ಬೆಡ್ ರೂಂ, 1 ಕಿಚನ್, 1 ಲೈಬ್ರರಿ ಹಾಗೂ 1 ಹಾಲ್ ಇದೆ. “ನಾವು ನಿರ್ಮಾಣ ಮಾಡಿರುವ ಮರದ ಮನೆಯ ಪ್ರದೇಶವು ಈ ಮುನ್ನ ಹಣ್ಣುಗಳ ಮರಗಳಿಗೆ ಹೆಸರುವಾಸಿಯಾಗಿತ್ತು. ಜನರು ಜೀವನೋಪಾಯಕ್ಕಾಗಿ ಇಲ್ಲಿದ್ದ 4000 ಮರಗಳಿಂದ ಹಣ್ಣುಗಳನ್ನು ಕಿತ್ತು ಮಾರುತ್ತಿದ್ದರು. ಆದರೆ, ಈ ಪ್ರದೇಶದ ಜನಸಂಖ್ಯೆಯಲ್ಲಿ ಏರಿಕೆಯಾಗಿದ್ದರಿಂದಾಗಿ ಮರಗಳನ್ನು ಕಡಿಯಲು ಶುರು ಮಾಡಿದರು” ಎಂದು ಕುಲ್ ಪ್ರದೀಪ್ ಸಿಂಗ್ ವಿವರಿಸುತ್ತಾರೆ.

1999ರಲ್ಲಿ ಕುಲ್ ಪ್ರದೀಪ್ ಸಿಂಗ್ ಅವರು ಉದಯ್‌ ಪುರ್‌ನಲ್ಲಿ ಜಮೀನೊಂದರ ಖರೀದಿಯ ಹುಡುಕಾಟದಲ್ಲಿದ್ದರು. ಆ ಸಂದರ್ಭದಲ್ಲವರು ಆ ಪ್ರದೇಶದಲ್ಲಿದ್ದ ಯಾವುದೇ ಮರಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲವೆಂದು ನಿರ್ಧರಿಸಿದ್ದರು.

ಸವಾಲಾಗಿ ಸ್ವೀಕರಿಸಿದರು
“ಆಸ್ತಿ ಮಾರಾಟಗಾರನಿಗೆ ನಾನು ಈ ಪ್ರದೇಶದ ಯಾವುದೇ ಮರವನ್ನು ಕತ್ತರಿಸಬೇಡಿ; ಬದಲಿಗೆ ಬೇರೆಲ್ಲಿಗಾದರೂ ಸ್ಥಳಾಂತರಿಸಿ ಎಂದು ತಿಳಿಸಿದೆ. ಆತ ನನ್ನ ಸಲಹೆ ತಿರಸ್ಕರಿಸಿ ನಡೆದುಬಿಟ್ಟ. ಇದನ್ನೇ ಸವಾಲಾಗಿ ಸ್ವೀಕರಿಸಿದ ನಾನು, ಮರವೊಂದರ ಮೇಲೆ ನನಗಾಗಿ ಮನೆಯೊಂದನ್ನು ನಿರ್ಮಿಸಿಕೊಳ್ಳಲು ನಿರ್ಧರಿಸಿದೆ. ಕೆಲವೇ ದಿನಗಳಲ್ಲಿ ಮಧ್ಯದಲ್ಲಿ ಮಾವಿನ ಮರವಿದ್ದ ಈ ಜಮೀನು ನನಗೆ ಸಮಂಜಸವಾದ ಬೆಲೆಗೆ ದೊರೆಯಿತು” ಎನ್ನುತ್ತಾರೆ ಕುಲ್ ಪ್ರದೀಪ್ ಸಿಂಗ್.

ಉಕ್ಕಿನಿಂದ ನಿರ್ಮಾಣ
ಕುಲ್ ಪ್ರದೀಪ್ ಸಿಂಗ್ ಮನೆಯ ನಿರ್ಮಾಣ ವಾಸ್ತುಶಿಲ್ಪಿಯೊಬ್ಬರ ನೆರವಿನಿಂದ 1 ವರ್ಷದ ಅವಧಿಯೊಳಗೆ ಪೂರ್ಣಗೊಂಡಿದೆ. ಮನೆ ನಿರ್ಮಾಣವಾಗುವ ಹೊತ್ತಿನಲ್ಲಿ ಮಾವಿನ ಮರವು 20 ಅಡಿ ಎತ್ತರವಿತ್ತು. ಆಗ 2 ಅಂತಸ್ತಿನ ಮನೆಯನ್ನು ಮಾತ್ರ ನಿರ್ಮಿಸಲಾಗಿತ್ತು. ಈ ಮನೆಯನ್ನು ನೆಲಮಟ್ಟದಿಂದ 9 ಅಡಿ ಮೇಲೆ ನಿರ್ಮಿಸಲಾಗಿದೆ. ಅದಕ್ಕೆ ಮರದ ಕೊಂಬೆಯನ್ನೇ ಆಸರೆಯನ್ನಾಗಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಅಬ್ಬಾ! 100 ವರ್ಷಕ್ಕೂ ಹಳೆಯ ಭಾರತೀಯ ಹೋಟೆಲ್‌ಗಳಿವು; ಹೇಗಿದೆ ನೋಡಿ...

ಇಡೀ ಕಟ್ಟಡದ ನಿರ್ಮಾಣವನ್ನು ಉಕ್ಕಿನಿಂದ ಮಾಡಲಾಗಿದೆ. ಗೋಡೆ ಹಾಗೂ ನೆಲವನ್ನು ಸೆಲ್ಯುಲೋಸ್ ಶೀಟ್ ಮತ್ತು ಫೈಬರ್‌ನಿಂದ ಮಾಡಲಾಗಿದೆ. ಮರದ ಸುತ್ತ 4 ಕಂಬಗಳನ್ನು ನಿರ್ಮಿಸಲಾಗಿದ್ದು, ಮಿಂಚಿನ ಸಂದರ್ಭದಲ್ಲಿ ವಿದ್ಯುತ್ ನಿರ್ವಾಹಕದಂತೆ ಕೆಲಸ ನಿರ್ವಹಿಸುತ್ತದೆ. ಮರ, ಪಕ್ಷಿ, ಪ್ರಕೃತಿ ಬಗ್ಗೆ ಕಕ್ಕುಲಾತಿ ಇರುವವರು ಮನೆಯನ್ನು ಹೀಗೂ ನಿರ್ಮಿಸಿಕೊಳ್ಳಬಹುದು. ಆಸಕ್ತಿಯಿದ್ದರೆ ನೀವೂ ಪ್ರಯತ್ನಿಸಿ!!
Published by:vanithasanjevani vanithasanjevani
First published: