Pet Care: ಬರೀ ಮುದ್ದು ಮಾಡೋದಷ್ಟೇ ಅಲ್ಲ, ನಾಯಿಯಿಂದ ದುಡ್ಡೂ ಗಳಿಸಬಹುದು ಅಂತಿದ್ದಾರೆ ಈ ಮಹಿಳೆ!

ನಾವು-ನೀವೆಲ್ಲ ನಾಯಿ, ಬೆಕ್ಕುಗಳನ್ನು ಪ್ರೀತಿಯಿಂದ ಸಾಕುತ್ತೇವೆ. ಆಕೈಕೆ ಮಾಡಿ, ಮುದ್ದು ಮಾಡುತ್ತೇವೆ. ಆದರೆ ಅದೇ ಸಾಕುಪ್ರಾಣಿಗಳಿಂದ ಉದ್ಯಮವನ್ನು ಕಟ್ಟಿ ಬೆಳೆಸಬಹುದು ಎನ್ನುವುದನ್ನು ಈ ಸಾಧಕಿ ತೋರಿಸಿ ಕೊಟ್ಟಿದ್ದಾರೆ.

ಮಹಿಳಾ ಉದ್ಯಮಿ ನಿಶ್ಮಾ

ಮಹಿಳಾ ಉದ್ಯಮಿ ನಿಶ್ಮಾ

  • Share this:
ಸಾಕುಪ್ರಾಣಿಗಳನ್ನು (Pets) ಮಕ್ಕಳಂತೆ ಲಾಲನೆ ಪಾಲನೆ ಮಾಡುವ ಅದೆಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಮಾತು ಬಾರದ ಮುಗ್ಧ ಪ್ರಾಣಿಗಳ ಗೆಳೆತನ ಅದೆಷ್ಟೋ ನೆಮ್ಮದಿ ನೀಡುತ್ತದೆ ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಇನ್ನು ಸಾಕುಪ್ರಾಣಿ ಆರೈಕೆ (Pet Care) ಹಾಗೂ ಸಾಕುಪ್ರಾಣಿ ಪೋಷಣಾ ಉದ್ಯಮವು (Pet Nutrition Industry) ಇಂದು ವಿಶ್ವದಲ್ಲೇ ತೀವ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕ್ಷೇತ್ರವಾಗಿದೆ. ಸ್ಟಾಟಿಸ್ಟಾ ಅಂಕಿ ಅಂಶದ ಪ್ರಕಾರ 2019ರಲ್ಲಿ ಭಾರತವು 21 ಮಿಲಿಯನ್‌ಗಿಂತಲೂ ಹೆಚ್ಚಿನ ಸಾಕುಪ್ರಾಣಿಗಳಿಗೆ ತವರು ಎಂದೆನಿಸಿದ್ದು, ಈ ಸಂಖ್ಯೆ 2023ರಲ್ಲಿ ಸುಮಾರು 31 ಮಿಲಿಯನ್‌ಗಿಂತಲೂ ಅಧಿಕವಾಗಲಿದೆ ಎಂಬುದಾಗಿ ಊಹಿಸಲಾಗಿದೆ. ಅದರಲ್ಲೂ ಸಾಕುಪ್ರಾಣಿ ಕಾಳಜಿ ಹಾಗೂ ಆರೈಕೆಯ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಲ್ಲಿ ಭಾರತ ಮುಂದಿದೆ. ಸಾಕುಪ್ರಾಣಿಗಳ ಆಹಾರ, ಔಷಧಗಳು, ಆರೈಕೆ, ಆಟಿಕೆಗಳು ಹಾಗೂ ಸಲಕರಣೆಗಳು ಮೊದಲಾದ ಉದ್ಯಮದಲ್ಲಿ ಭಾರತದ ಅದೆಷ್ಟೋ ಉದ್ಯಮಿಗಳು ತೊಡಗಿಕೊಂಡಿದ್ದು 2022ರಲ್ಲಿ ಇದು $490 ಮಿಲಿಯನ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.  ಹೀಗೆ ಸಾಕು ಪ್ರಾಣಿ ಪೋಷಣೆ ಹಾಗೂ ಆರೈಕೆ ಉತ್ಪನ್ನಗಳ ಉದ್ಯಮದಲ್ಲಿ ಚೆನ್ನಾಗಿ ಸಂಪಾದನೆ ಮಾಡಬಹುದು ಎಂಬುದನ್ನು ಕಂಡುಕೊಂಡ ನಿಶ್ಮಾ ಸಿಂಘಲ್ (Nishma Singhal) ಎಂಬುವರರ ಸಾಧನೆ ಬಗ್ಗೆ ಮಾಹಿತಿ ಇಲ್ಲಿದೆ.

ಯಾರು ಈ ನಿಶಾ ಸಿಂಘಲ್?

ದೆಹಲಿಯಲ್ಲೇ ಹುಟ್ಟಿ ಬೆಳೆದ ನಿಶ್ಮಾ ಮುಂಬೈನ ಪದ್ಮಶ್ರೀ ಡಾ. ಡಿ.ವೈ ಪಾಟೀಲ್ ವಿದ್ಯಾಪೀಠದಿಂದ ಕಾಸ್ಮೆಟಿಕ್ ತಂತ್ರಜ್ಞಾನದಲ್ಲಿ ಬಿಟೆಕ್ ಪಡೆದಿದ್ದಾರೆ ಮತ್ತು ಇಟಲಿಯ ಯೂನಿವರ್ಸಿಟಿ ಡೆಗ್ಲಿ ಸ್ಟುಡಿ ಡಿ ಪಡೋವಾದಿಂದ ಸುಗಂಧ ದ್ರವ್ಯಗಳಲ್ಲಿ ಹಾಗೂ ಸೌಂದರ್ಯ ಸಾಧನಗಳಲ್ಲಿ ಪರಿಣತಿಯೊಂದಿಗೆ ಎಂಬಿಎ ಪಡೆದಿದ್ದಾರೆ. ಅವರು ಪ್ಯಾರಿಸ್‌ನ ISIPCAಯಿಂದ ಯುರೋಪಿಯನ್ ಸುಗಂಧ ಮತ್ತು ಸೌಂದರ್ಯವರ್ಧಕಗಳಲ್ಲಿ ಮಾಸ್ಟರ್ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಾಕುಪ್ರಾಣಿ ಪೋಷಣೆಯ ಉದ್ಯಮದಲ್ಲಿ ಆಸಕ್ತಿ ಮೂಡಿದ್ದು ಹೇಗೆ?

ಪುರುಷರ ಸೌಂದರ್ಯ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದ ನಿಶ್ಮಾಗೆ ಸಾಕುಪ್ರಾಣಿ ಪೋಷಣೆಯ ಉದ್ಯಮದಲ್ಲಿ ಮನಸ್ಸು ಮೂಡಿದ್ದರ ಹಿಂದೆ ಘಟನೆಯೊಂದಿದೆ. ಆಕೆಯ ಸಂಬಂಧಿ ಶಿಟ್ಜು ಬ್ರೀಡ್‌ ತಳಿಯ ಮುದ್ದಾದ ನಾಯಿಮರಿಯನ್ನು ದತ್ತು ತೆಗೆದುಕೊಂಡಾಗ ಆಕೆಗೆ ಆಸಕ್ತಿ ಬಂತು.

ನಾಯಿಮರಿಗೆ ‘ಒರಿಯೋ’ ಎಂದು ಹೆಸರಿಟ್ಟ ನಂತರ ಆ ನಾಯಿ ನಿಶ್ಮಾ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿತು ಎಂಬುದಾಗಿ ಆಕೆ ಸ್ಮರಿಸಿಕೊಳ್ಳುತ್ತಾರೆ. ನಾಯಿ ಮರಿಯ ಪಾಲನೆ ಪೋಷಣೆಗಾಗಿ ಮಾಡುತ್ತಿದ್ದ ಶಾಪಿಂಗ್‌, ಆರೈಕೆ ಹೇಗೆ ಮಾಡಬಹುದು ಎಂಬುದನ್ನು ಸ್ನೇಹಿತರಿಂದ ತಿಳಿದುಕೊಂಡಿದ್ದರೂ ಸೂಕ್ತ ಮಾಹಿತಿ ಸಿಕ್ಕಿರಲಿಲ್ಲ.  ಈ ನಾಯಿ ತಳಿ ಇತರ ತಳಿಗಳಿಗಿಂತ ಹೇಗೆ ಭಿನ್ನವಾಗಿದೆ, ಅದನ್ನು ಇನ್ನೂ ಚೆನ್ನಾಗಿ ಆರೈಕೆ ಮಾಡುವುದು ಹೀಗೆ ಮೊದಲಾದ ಮಾಹಿತಿಗಳನ್ನು ನಿಶ್ಮಾ ಹಾಗೂ ಸೋದರ ಸಂಬಂಧಿ ಅನೇಕ ಅಂಗಡಿಗಳಿಗೆ ಭೇಟಿ ನೀಡಿ ಕಲೆಹಾಕಿದ್ದರು.

ಇದನ್ನೂ ಓದಿ: Air Pollution: ಈ ಪಟ್ಟಣಕ್ಕೆ ಏನಾಗಿದೆ? ದಕ್ಷಿಣ ಭಾರತದ 10 ನಗರಗಳಲ್ಲಿ ಉಸಿರಾಟವೂ ಕಷ್ಟ!

ಅಂತಾರಾಷ್ಟ್ರೀಯ ಸಾಕು ಪ್ರಾಣಿ ಉತ್ಪನ್ನಗಳಿಗಿದ್ದ ವಿಪರೀತ ದರ

ಈ ಸಮಯದಲ್ಲಿ ಆಕೆ ಕಂಡುಕೊಂಡ ಅಂಶವೆಂದರೆ ಉತ್ತಮ ಮಟ್ಟದ ಅಂತಾರಾಷ್ಟ್ರೀಯ ಸಾಕು ಪ್ರಾಣಿ ಉತ್ಪನ್ನಗಳಿಗಿದ್ದ ಬೇಡಿಕೆ ಹಾಗೂ ವಿಪರೀತ ದರ. ಅದೇ ಸಮಯದಲ್ಲಿ ದೇಶೀಯ ಉತ್ಪನ್ನಗಳು ಇವುಗಳಿಗಿಂತ ಅತಿ ಕಡಿಮೆ ದರದಲ್ಲಿ ಲಭ್ಯವಾಗಿರುವುದನ್ನು ನಿಶ್ಮಾ ಮನದಟ್ಟು ಮಾಡಿಕೊಂಡರು. ಇದರಿಂದ ಪ್ರೇರಣೆ ಪಡೆದುಕೊಂಡ ನಿಶ್ಮಾ ಜೊವಿಯನ್ ಪೆಟ್ಸ್ (Zoivane Pets) ಹೆಸರಿನ ಸಾಕುಪ್ರಾಣಿಗಳ ಸ್ವದೇಶಿ ಹಾಗೂ ನೈಸರ್ಗಿಕವಾಗಿರುವ ಅಂದಗಾರಿಕಾ ಉತ್ಪನ್ನಗಳ ಉದ್ಯಮವನ್ನು ಆರಂಭಿಸಿಯೇ ಬಿಟ್ಟರು.

ಸಾಕುಪ್ರಾಣಿ ಆರೈಕೆ ಉದ್ಯಮದ ಮುನ್ನಡೆಸುವಿಕೆ

ಸೂರತ್‌ನಲ್ಲಿ ನೆಲೆಸಿರುವ ನಿಶ್ಮಾ ತಮ್ಮ ವ್ಯವಹಾರವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಸೂಕ್ತ ಉತ್ಪನ್ನಗಳನ್ನು ರೂಪಿಸಲು ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದರು. ಅಂತೆಯೇ ಚಿಲ್ಲರೆ ವ್ಯಾಪಾರಿಗಳು ಹಾಗೂ ಸಾಕು ಪ್ರಾಣಿ ಪೋಷಣೆ ಮಾಡುವ ಹಲವಾರು ಜನರಿಗೆ ಉತ್ಪನ್ನಗಳನ್ನು ಅರ್ಥಮಾಡಿಸುವ ನಿಟ್ಟಿನಲ್ಲಿ ಸಮೀಕ್ಷೆಗಳನ್ನು ಕೈಗೊಂಡರು.

ನಾಯಿ-ಬೆಕ್ಕುಗಳಿಗೂ ಬಂತು ಶ್ಯಾಂಪು!

ಸೆಪ್ಟೆಂಬರ್ 2020ರಲ್ಲಿ ಜೊವಿಯನ್ ಪೆಟ್ಸ್ (Zoivane Pets) ನಾಯಿ ಹಾಗೂ ಬೆಕ್ಕುಗಳ ಶ್ಯಾಂಪೂಗಳು, ಡಿಟ್ಯಾಂಗ್ಲಿಂಗ್ ಸ್ಪ್ರೇಗಳಂತಹ ಕೆಲವು ಉತ್ಪನ್ನಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿತು ಹಾಗೂ ಸೆಲೆಬ್ರಿಟಿಗಳಾದ ಶಿಲ್ಪಾ ಶೆಟ್ಟಿ ಮತ್ತು ಆಥಿಯಾ ಶೆಟ್ಟಿಯವರು ಸಾಕುತ್ತಿದ್ದ ನಾಯಿ ಬೆಕ್ಕುಗಳಿಗೆ ಅದನ್ನು ಬಳಸುವಂತೆ ಕಳುಹಿಸಿಕೊಟ್ಟಿತು.

ಇದನ್ನೂ ಓದಿ: Twitter account ತೆಗೆಯಲು19 ವರ್ಷದ ಯುವಕನಿಗೆ 5,000 ಡಾಲರ್ ಆಫರ್‌ ಮಾಡಿದ Elon Musk! ಯಾಕೆ ಗೊತ್ತೇ?

ಸಾಕು ಪ್ರಾಣಿಗಳ ಸೌಂದರ್ಯಕ್ಕಾಗಿ ಹಲವು ಪ್ರಾಡಕ್ಟ್

ಸಂಸ್ಥೆಯಲ್ಲಿಯೇ ರೂಪಿಸಲಾದ ಈ ಸಾಕು ಪ್ರಾಣಿ ಉತ್ಪನ್ನಗಳನ್ನು ಮೂರನೇ ವ್ಯಕ್ತಿ ಸೌಲಭ್ಯಗಳ ಮೂಲಕ ತಯಾರಿಸಲಾಗುತ್ತದೆ. 100 ml ಶ್ಯಾಂಪುವಿಗೆ 200 ರೂ ಮತ್ತು 5L ಶ್ಯಾಂಪುವಿಗೆ 5,000 ರೂ. ದರ ನಿಗದಿಪಡಿಸಲಾಗಿದೆ. ಇನ್ನು 60ಕ್ಕೂ ಹೆಚ್ಚಿನ ಉತ್ಪನ್ನಗಳಿಗೆ 200 ರೂ. ದರ ನಿಗದಿಪಡಿಸಲಾಗಿದೆ.

ಇದು ದೇಶಾದ್ಯಂತ ಸುಮಾರು 400 ಚಿಲ್ಲರೆ ಅಂಗಡಿಗಳಲ್ಲಿ ಮತ್ತು ಅಮೆಜಾನ್, ಫ್ಲಿಪ್‌ಕಾರ್ಟ್, ನೈಕಾ, ಮಿಂತ್ರಾ ಮತ್ತು ಮೀಶೋನಂತಹ ಆನ್‌ಲೈನ್ ಸ್ಟೋರ್‌ಗಳಲ್ಲಿ 10,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸವಾಲುಗಳನ್ನು ಎದುರಿಸಿ ನಿಂತ ನಿಶ್ಮಾ

ತಮ್ಮದೇ ಉದ್ಯಮ ಆರಂಭಿಸುವ ಹಾಗೂ ತಾನೇ ಬಾಸ್ ಆಗಬೇಕೆಂಬ ಇಚ್ಚೆಯನ್ನು ಹೊಂದಿದ್ದ ನಿಶ್ಮಾರಿಗೆ ಉದ್ಯಮದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಹೇಗೆ ಪ್ರಗತಿ ಸಾಧಿಸಬೇಕೆಂಬ ಅನುಭವ ಪಡೆದುಕೊಂಡಿದ್ದರು. ಆದರೂ, ಈ ಉದ್ಯಮದಲ್ಲಿ ನಿಶ್ಮಾ ಸವಾಲುಗಳನ್ನು ಎದುರಿಸಬೇಕಾಯಿತು.

ಜೊವಿಯನ್ ಪೆಟ್ಸ್ (Zoivane Pets) ನಂತಹ ಅದೆಷ್ಟೋ ಸಾಕು ಪ್ರಾಣಿ ಆರೈಕೆ ಉದ್ಯಮಗಳಿದ್ದು ಅದೆಲ್ಲಾ ಸ್ಪರ್ಧೆಯನ್ನು ಆಕೆ ಮೆಟ್ಟಿ ನಿಂತು ತಮ್ಮ ಉದ್ಯಮದ ಪ್ರಗತಿಯನ್ನು ಸಾಧಿಸಬೇಕಾಗಿತ್ತು. ಸಾಕುಪ್ರಾಣಿ ಪಾಲಕರಿಗೆ ಉತ್ಪನ್ನಗಳ ಮಾಹಿತಿ ನೀಡುವುದು, ಮಾರುಕಟ್ಟೆಯಲ್ಲಿದ್ದ ಪ್ರತಿಸ್ಪರ್ಧೆಗಳು, ಸೂಕ್ತ ಗ್ರಾಹಕರನ್ನು ತಲುಪುವುದು, ಉತ್ಪನ್ನಗಳ ಮಾರಾಟ ಹೀಗೆ ನಿಶ್ಮಾ ಹಲವಾರು ಸವಾಲುಗಳನ್ನು ಸ್ವೀಕರಿಸಿ ತಮ್ಮ ಉದ್ಯಮದಲ್ಲಿ ಮುಂದೆ ಬಂದಿದ್ದಾರೆ.

1 ಕೋಟಿ ಆದಾಯ ಗಳಿಸುವತ್ತ ಗುರಿ

ಹಣವನ್ನು ವ್ಯರ್ಥವಾಗಿ ವಿನಿಯೋಗಿಸದೇ ಲಾಭದಾಯಕವಾಗಿ ಉಳಿಸುವತ್ತ ಗಮನ ಹರಿಸಿದ್ದೇವೆ. ಬಿಡುವಿನ ವೇಳೆಯಲ್ಲಿ ಫೋಟೋಶಾಪ್ ಹಾಗೂ ಕೋರಲ್ ಡ್ರಾ (CorelDRAW) ತರಬೇತಿಯನ್ನು ಪಡೆದುಕೊಂಡ ನಿಶ್ಮಾರಿಗೆ ಈ ತರಬೇತಿ ಪ್ರಾಡಕ್ಟ್ ಪ್ಯಾಕೇಜಿಂಗ್‌ಗೆ ಸಹಕಾರವನ್ನು ನೀಡಿತು. ಬೇರೆ ಬೇರೆ ವಿನ್ಯಾಸಗಳಲ್ಲಿ ಪ್ಯಾಕೇಜಿಂಗ್ ಅನ್ನು ಸ್ವತಃ ನಿಶ್ಮಾ ಅವರೇ ಮಾಡಿದರ. 25 ಲಕ್ಷ ರೂಗಳ ಆರಂಭ ಹೂಡಿಕೆಯಲ್ಲಿ ತೊಡಗಿಸಿದ ಉದ್ಯಮ ಮಾರ್ಚ್ 2022 ರ ಆರ್ಥಿಕ ವರ್ಷದ ಕೊನೆಯಲ್ಲಿ 1 ಕೋಟಿಗಳ ಆದಾಯವನ್ನು ಗಳಿಸುವ ನಿಟ್ಟಿನಲ್ಲಿದೆ ಎಂಬುದು ನಿಶ್ಮಾ ಅಭಿಪ್ರಾಯವಾಗಿದೆ.

ಹಣ ಹೂಡಿಕೆಗೆ ಉದ್ಯಮಿಗಳ ಆಸಕ್ತಿ

ಜೊವಿಯನ್ ಪೆಟ್ಸ್ (Zoivane Pets) ಉತ್ಪನ್ನಗಳ ಕಾರ್ಯತಂತ್ರ ವಿಧಾನವು ಸಫಲವಾಗಿ ಮುನ್ನಡೆಯುವುದರಿಂದ ವ್ಯಾಪಾರ ಲಾಭದಾಯಕವಾಗಿದೆ. ಹೀಗಾಗಿ ಅನೇಕ ಹೂಡಿಕೆದಾರರು, ವಾಣಿಜ್ಯೋದ್ಯಮಿಗಳು ನಿಶ್ಮಾ ಅವರನ್ನು ಸಂಪರ್ಕಿಸುತ್ತಿರುವುದರಿಂದ ಹಣಕಾಸಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಮಹತ್ವಾಕಾಂಕ್ಷಿ ಮತ್ತು ಮಹಿಳಾ ಉದ್ಯಮಿಗಳಿಗೆ, ಔದ್ಯೋಗಿಕ ವಲಯದಲ್ಲಿರುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಎಂಬುದಕ್ಕೆ ನಿಶ್ಮಾ ಒಂದು ಉತ್ತಮ ಉದಾಹರಣೆಯಾಗಿದ್ದು ಪ್ರತಿಯೊಂದು ಸವಾಲುಗಳನ್ನು ಸುಲಭವಾಗಿ ಪರಿಹರಿಸಿ ಹೇಗೆ ಮಾರುಕಟ್ಟೆಯಲ್ಲಿ ಯಶಸ್ವಿ ಸಾಧಕರಾಗಬಹುದು ಎಂಬ ಸಲಹೆಯನ್ನು ನಿಶ್ಮಾ ನೀಡಿದ್ದಾರೆ.
Published by:Annappa Achari
First published: