ಹತ್ತು ಸಾವಿರ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸಿದ ಸಮಾಜ ಸೇವಕಿ !

news18
Updated:May 30, 2018, 12:27 PM IST
ಹತ್ತು ಸಾವಿರ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸಿದ ಸಮಾಜ ಸೇವಕಿ !
news18
Updated: May 30, 2018, 12:27 PM IST
ನ್ಯೂಸ್ 18 ಕನ್ನಡ

ಇಂದಿನ ಕಾಲದಲ್ಲಿ ಶಿಕ್ಷಣ ಎಂಬುದು ದುಬಾರಿಯಾಗಿದೆ. ವ್ಯಾಪಾರೀಕರಣಗೊಂಡಿರುವ ಶಿಕ್ಷಣ ಕ್ಷೆತ್ರದಲ್ಲಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಎಂಬುದು ಮರೀಚಿಕೆ. ಅದೆಷ್ಟೊ ಬಡ ಮಕ್ಕಳು ಶಾಲೆಯ ಶುಲ್ಕವನ್ನು ಭರಿಸಲಾಗದೆ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿರುವುದು ನಾವು ಕೇಳಿರುತ್ತೀವಿ. ಆದರೆ ಗುಜರಾತಿ​ನ ವಡೋದರದ ಮಕ್ಕಳಿಗೆ ಶಾಲೆಗೆ ಹೋಗಲು ಯಾವುದೇ ಸಮಸ್ಯೆಯಿಲ್ಲ. ಏಕೆಂದರೆ ಅಲ್ಲಿನ ಬಡ ಮಕ್ಕಳ ಪಾಲಿನ ವಿದ್ಯಾ ಸರಸ್ವತಿಯಾಗಿ ನಿಶಿತಾ ರಜಪೂತ್ ಕಾಣಿಸುತ್ತಾರೆ.

ನಿಶಿತಾ ರಜಪೂತ್, ಗುಜರಾತ್​​ನಲ್ಲಿ ಶಿಕ್ಷಣ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಉದಾರ ಮನಸಿನಿಂದಾಗಿ ಇಂದು ವಡೋದರಾದ ಅನೇಕ ಹೆಣ್ಣುಮಕ್ಕಳು ಶಾಲೆಯ ಮೆಟ್ಟಿಲು ಹತ್ತಿದ್ದಾರೆ. ಅವರ ಶಿಕ್ಷಣದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ ನಿಶಿತಾ, ಸಮಾಜ ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ. ಶಾಲಾ ಶುಲ್ಕ ಭರಿಸಲಾಗದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುವ ಮಹತ್ವದ ಕಾರ್ಯವನ್ನು ಅವರು ನಿರ್ವಹಿಸುತ್ತಿದ್ದಾರೆ.

ನಿಶಿತಾ ರಜಪೂತ್ ಕಳೆದ ಏಳು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಮೊದಲ ಬಾರಿಗೆ 351 ಹುಡುಗಿಯರ ಶಿಕ್ಷಣ ಶುಲ್ಕವನ್ನು ಭರಿಸಿ ಶಿಕ್ಷಣ ಸೇವೆ ಆರಂಭಿಸಿದ್ದರು. ಇದೀಗ ಸಮಾಜ ಸೇವೆಯಲ್ಲಿ ಏಳು ವಸಂತಗಳನ್ನು ದಾಟಿರುವ ಯುವ ಸಮಾಜ ಸೇವಕಿ ಕಳೆದ ವರ್ಷ ಭರಿಸಿರುವ ಶಾಲಾ ಶುಲ್ಕದ ಮೊತ್ತ ಬರೋಬ್ಬರಿ 67.ಲಕ್ಷ ರೂಪಾಯಿಗಳು.

ಶಿಕ್ಷಣದ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಲು ಪಣತೊಟ್ಟಿರುವ  ನಿಶಿತಾ ರಜಪೂತ್, ಒಟ್ಟಾರೆ 10 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ವ್ಯಾಪಾರೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸುವ ಇವರು ಈ ವರ್ಷ 1 ಕೋಟಿ ರೂ. ಶುಲ್ಕವನ್ನು ಪಾವತಿಸಲಿದ್ದಾರಂತೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ 'ಬೇಟಿ ಪಡಾವೊ ಬೇಟಿ ಬಚವೊ' ಅಭಿಯಾನದಲ್ಲೂ ಇವರು ಸಕ್ರಿಯರಾಗಿದ್ದಾರೆ. ತಮಗೆ ದೇಣಿಗೆಯಾಗಿ ಸಿಗುವ ಹಣವನ್ನು ಶಾಲಾ ಮಕ್ಕಳ ಶುಲ್ಕದ ಖಾತೆಯಲ್ಲಿ ಠೇವಣಿ ಇಡುವ ಮೂಲಕ ಆದರ್ಶ ಮೆರೆಯುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಶುಲ್ಕದ ಖರ್ಚು ವೆಚ್ಚಗಳ ಮಾಹಿತಿಯನ್ನು ಫಲಾನುಭವಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಇವರ ಈ ಪಾರದರ್ಶಕತೆಯ ನಡೆಯಿಂದಾಗಿ ಇಂದು ದೇಶ ವಿದೇಶಗಳಿಂದ ಆರ್ಥಿಕ ನೆರವು ಸಿಗುತ್ತಿದೆ. ಇದೆನ್ನೆಲ್ಲಾ ಠೇವಣಿ ಇಡುವ ಮೂಲಕ ಬಡ ವಿದ್ಯಾರ್ಥಿಗಳ ಸುಶಿಕ್ಷಿತರನ್ನಾಗಿ ಮಾಡುತ್ತಿದ್ದಾರೆ. ಶಿಕ್ಷಣ ವಂಚಿತ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಇವರ ಸಾಮಾಜಿಕ ಕಳಕಳಿ ವಡೋದರದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣವಾಗಿದೆ.
First published:May 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ