ಹನಿಮೂನ್‌ಗೆ ವಿಶ್ವವಿದ್ಯಾಲಯದ ಅತಿಥಿಗೃಹ ಬಳಸಿಕೊಂಡ ನವ ದಂಪತಿ..! ತನಿಖೆಗೆ ಆದೇಶ

Kakinada JNTU: ರಾಜ್ಯ ಸರ್ಕಾರವೂ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ವಿಶ್ವವಿದ್ಯಾಲಯಕ್ಕೆ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಲು ಕೋರಿದೆ. ಅತಿಥಿಗೃಹವನ್ನು ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣ ವಿಭಾಗದ ನಿರ್ದೇಶಕಿ ಎ. ಸ್ವರ್ಣ ಕುಮಾರಿ ಎಂಬುವವರು ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಹೊಸದಾಗಿ ಮದುವೆಯಾಗಿ ತಮ್ಮ ಹನಿಮೂನ್‌ಗೆ ಅಂತ ಬೇರೆ ದೂರದ ಪ್ರವಾಸಿ ತಾಣಗಳಿಗೆ ನವ ದಂಪತಿ ಹೋಗುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ ನವ ದಂಪತಿ ವಿಶ್ವವಿದ್ಯಾಲಯದ ಅತಿಥಿಗೃಹವನ್ನು ತಮ್ಮ ಹನಿಮೂನ್ ಕಾಟೇಜ್ ಆಗಿ ಪರಿವರ್ತಿಸಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಹೊಸದಾಗಿ ಮದುವೆಯಾದ ದಂಪತಿ ಆಂಧ್ರಪ್ರದೇಶದ ಕಾಕಿನಾಡ ನಗರದಲ್ಲಿರುವ ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದ (ಜೆಎನ್‌ಟಿಯು) ಅತಿಥಿಗೃಹವನ್ನು ತಮ್ಮ ಹನಿಮೂನ್ ಕಾಟೇಜ್ ಆಗಿ ಪರಿವರ್ತಿಸಿಕೊಂಡಿದ್ದು, ಇಡೀ ರಾಜ್ಯದಲ್ಲಿ ವ್ಯಾಪಕ ಖಂಡನೆ ಮತ್ತು ಟೀಕೆಗಳಿಗೆ ಗುರಿಯಾಗಿದೆ.


ಈ ಸುದ್ದಿ ತಿಳಿದು ದಿಗ್ಭ್ರಮೆಗೊಂಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಶನಿವಾರ ಅತಿಥಿಗೃಹದ ದುರುಪಯೋಗದ ಕುರಿತು ತನಿಖೆ ನಡೆಸಲು ಆಂತರಿಕ ಸಮಿತಿಯೊಂದನ್ನು ರಚಿಸಿದೆ.


ರಾಜ್ಯ ಸರ್ಕಾರವೂ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ವಿಶ್ವವಿದ್ಯಾಲಯಕ್ಕೆ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಲು ಕೋರಿದೆ. ಅತಿಥಿಗೃಹವನ್ನು ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣ ವಿಭಾಗದ ನಿರ್ದೇಶಕಿ ಎ. ಸ್ವರ್ಣ ಕುಮಾರಿ ಎಂಬುವವರು ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇವರೂ ಇದೇ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದರು ಎಂದು ತಿಳಿದುಬಂದಿದೆ.


WhatsApp: ವಾಟ್ಸ್ಆ್ಯಪ್ ಮೂಲಕ ಕೋವಿಡ್ ಲಸಿಕೆ ಬುಕ್ ಮಾಡುವುದು ಹೇಗೆ? ಈ ಹಂತ ಅನುಸರಿಸಿ

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಜೆಎನ್‌ಟಿಯು ರಿಜಿಸ್ಟ್ರಾರ್ ಆರ್. ಶ್ರೀನಿವಾಸ ರಾವ "ನಮ್ಮ ಸಿಬ್ಬಂದಿಯೊಬ್ಬರು ಅತಿಥಿಗೃಹವನ್ನು ಇನ್ನೊಬ್ಬ ಪ್ರಾಧ್ಯಾಪಕರ ವಿದ್ಯಾರ್ಥಿಯ ಸಲುವಾಗಿ ಬುಕ್ ಮಾಡಿದ್ದಾರೆ. ಆದರೆ ಅದನ್ನು ಬಳಸಿದ ಉದ್ದೇಶ ತಪ್ಪಾಗಿದೆ ಮತ್ತು ನಾವು ಅದರ ಬಗ್ಗೆ ತನಿಖೆ ಆರಂಭಿಸಿದ್ದೇವೆ" ಎಂದು ತಿಳಿಸಿದರು.ಆಂತರಿಕ ಸಮಿತಿಯು ಕೆಲವೇ ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ, ನಂತರ ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


Video Viral: ನಾನು ಸೆಲೆಕ್ಟ್​ ಮಾಡಿದ ಹಾಡು ಹಾಕಿದ್ರೆ ಮಂಟಪಕ್ಕೆ ಬರ್ತೇನೆ ಎಂದು ಹಠ ಹಿಡಿದ ವಧು!

ಅತಿಥಿಗೃಹವನ್ನು ನವ ದಂಪತಿ ತಮ್ಮ ಹನಿಮೂನ್‌ ಕಾಟೆಜ್ ಆಗಿ ಪರಿವರ್ತಿಸಿದ್ದಾರೆ ಎಂದು ತಿಳಿದು ಬಂದ ನಂತರ ವಿದ್ಯಾರ್ಥಿ ಸಂಘಗಳು ಕಾಕಿನಾಡ ನಗರದ ಜೆಎನ್‌ಟಿಯುನಲ್ಲಿ ಪ್ರತಿಭಟನೆ ನಡೆಸಿದವು.


ಅತಿಥಿಗೃಹವು ಕೇವಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿಚಾರವಾಗಿ ಬರುವಂತಹ ಪ್ರಾಧ್ಯಾಪಕರಿಗೆ ಮಾತ್ರ ಕಾಯ್ದಿರಿಸಲಾಗಿದ್ದು, ಬೇರೆ ಯಾರಿಗೂ ಅದರಲ್ಲಿ ಪ್ರವೇಶ ಇರುವುದಿಲ್ಲ. ಇದು ಶಿಕ್ಷಣ ಸಂಸ್ಥೆಯ ಪಾವಿತ್ರ್ಯವನ್ನು ಹಾಳುಮಾಡುತ್ತದೆ ಎಂದು ವಿದ್ಯಾರ್ಥಿ ಸಂಘಗಳು ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.


ಈ ದಂಪತಿಯ ವಿಶ್ವವಿದ್ಯಾಲಯದ ಅತಿಥಿಗೃಹವನ್ನು ತಮ್ಮ ಹನಿಮೂನ್ ಕಾಟೆಜ್ ಆಗಿ ಪರಿವರ್ತಿಸುವುದಕ್ಕೆ ಮತ್ತು ಅತಿಥಿಗೃಹ ಅಲಂಕರಿಸಲು ಕೆಲವು ವಿಶ್ವವಿದ್ಯಾಲಯದ ಸಿಬ್ಬಂದಿ ಸಹಾಯ ಮಾಡಿದರು ಮತ್ತು ಅಲಂಕೃತ ಕೋಣೆಯ ವಿಡಿಯೋ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದಂಪತಿ ಈ ವಿಡಿಯೋವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ಅದು ಈಗ ಸಾರ್ವಜನಿಕವಾಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.


ಈ ಎಲ್ಲದರ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.First published: