ಹಿಂದೂ ಧರ್ಮದಲ್ಲಿ ದೀಪಾವಳಿ(Diwali) ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಮತ್ತು ಪ್ರತಿ ಕುಟುಂಬವು ದೀಪಾವಳಿ ದಿನದಂದು ವಿಶೇಷ ಪೂಜೆಯನ್ನು ಮಾಡುತ್ತಾರೆ. ಅದರಂತೆ ಈ ಬಾರಿಯ ದೀಪಾವಳಿ ಹಬ್ಬವನ್ನು ನವೆಂಬರ್ 4 ರಂದು ಆಚರಿಸಲಾಗುತ್ತದೆ. ಜನರು ಲಕ್ಷ್ಮಿ, ಗಣೇಶನನ್ನು ವಿಶೇಷವಾಗಿ ಪೂಜಿಸುತ್ತಾರೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ. ದೀಪಾವಳಿ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತದೆ. ಆದರೆ ಭಾರತಕ್ಕೆ(India) ಹೋಲಿಸಿದರೆ ನೆರೆಯ ದೇಶದಲ್ಲಿನ ಜನರು ದೀಪಾವಳಿಯನ್ನು ಆಚರಿಸುವ ಶೈಲಿಯು ಸಂಪೂರ್ಣವಾಗಿ ವಿಭಿನ್ನವಾಗಿದೆ.
ನೇಪಾಳದಲ್ಲಿ (Nepal) ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಭಾರತದ ನೆರೆಯ ದೇಶವಾರಿರುವ ನೇಪಾಳದಲ್ಲಿ ಹಿಂದೂಗಳ ಹೆಚ್ಚಿನ ಜನಸಂಖ್ಯೆ ಇದ್ದು, ದೀಪಾವಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸುವ ಪ್ರವೃತ್ತಿ ಇದೆ. ದೇವರು ಮತ್ತು ದೇವತೆಗಳಲ್ಲದೆ, ನೇಪಾಳದಲ್ಲಿ ದೀಪಾವಳಿಯಂದು ಪ್ರಾಣಿಗಳನ್ನು ಪೂಜಿಸುವ ನಂಬಿಕೆಯೂ ಇದೆ. ಅದರಲ್ಲೂ ವಿಶೇಷವಾಗಿ ಜನರು ಶ್ವಾನಗಳನ್ನು ಪೂಜಿಸುತ್ತಾರೆ. ಆ ದಿನ ನಾಯಿಗಳಿಗೆ ಮಾಲೆ ಹಾಕಿ ಅಲಂಕರಿಸುತ್ತಾರೆ. ಮಾತ್ರವಲ್ಲದೆ, ಶ್ವಾನಗಳಿಗೆ ತಿನ್ನಲು ಭಕ್ಷ್ಯಗಳನ್ನು ಸಹ ನೀಡಲಾಗುತ್ತದೆ.
ದೀಪಾವಳಿ ಎಂದರೇನು?
ಲಂಕಾವನ್ನು ವಶಪಡಿಸಿಕೊಂಡ ನಂತರ ಶ್ರೀರಾಮನು 14 ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿದನು. ಅವನು ಹಿಂದಿರುಗಿದ ನೆನಪಿಗಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಯೋಧ್ಯೆಗೆ ಶ್ರೀರಾಮನ ಮರಳುವಿಕೆಯನ್ನು ಭಾರತದದಲ್ಲಿ ಮಾತ್ರವಲ್ಲದೆ ಪಕ್ಕದಲ್ಲಿರುವ ನೇಪಾಳದಲ್ಲಿಯೂ ಆಚರಿಸಲಾಯಿತು. ನೇಪಾಳದಲ್ಲಿ ದೀಪಾವಳಿಯನ್ನು ತಿಹಾರ್ ಎಂದು ಕರೆಯಲಾಗುತ್ತದೆ ಮತ್ತು ಆ ದಿನವನ್ನು ಕುಕುರ್ ತಿಹಾರ್ ಎಂದು ಆಚರಿಸಲಾಗುತ್ತದೆ.
ತಿಹಾರ್ ದಿನದಂದು ನೇಪಾಳದಲ್ಲಿ ದೀಪೋತ್ಸವವನ್ನು ಆಚರಿಸಲಾಗುತ್ತದೆ ಮತ್ತು ಭಾರತದಂತೆಯೇ ಮನೆಗಳನ್ನು ದೀಪಗಳಿಂದ ಬೆಳಗಿಸಿ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ದೀಪಾವಳಿಯ ಹಬ್ಬವು ಇಲ್ಲಿ 4-5 ದಿನಗಳವರೆಗೆ ಇರುತ್ತದೆ ಮತ್ತು ದೀಪಾವಳಿಯ ಎರಡನೇ ದಿನದಂದು ಶ್ವಾನಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
ಶ್ವಾನ ಪೂಜಿಸುವುದರ ಜೊತೆಗೆ ಹೂಮಾಲೆ ಹಾಕಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ. ಅಷ್ಟೇ ಅಲ್ಲದೆ, ಶ್ವಾನಕ್ಕೆ ಹಾಲು, ಹಣ್ಣು, ಬ್ರೆಡ್, ಮೊಟ್ಟೆಯಂತಹ ನೆಚ್ಚಿನ ಖಾದ್ಯಗಳನ್ನು ತಿನ್ನಿಸುವ ಮೂಲಕ ಸತ್ಕಾರವನ್ನೂ ಮಾಡಲಾಗುತ್ತದೆ.
ನಾಯಿಗಳನ್ನು ಏಕೆ ಪೂಜಿಸುತ್ತಾರೆ?
ಮಹಾಭಾರತದ ಕಾಲದಲ್ಲಿಯೂ ಸಹ ಶ್ವಾನಗಳನ್ನು ಯಮ ದೇವನ ಸಂದೇಶವಾಹಕ ಎಂದು ಪರಿಗಣಿಸಲಾಗಿದೆ. ನಾಯಿಯು ಯುಧಿಷ್ಠಿರನೊಂದಿಗೆ ಸ್ವರ್ಗಕ್ಕೆ ಪ್ರಯಾಣಿಸಿದೆ ಎಂದು ನಂಬಿಕೆ. ಶ್ವಾನಗಳು ತಮ್ಮ ಜೀವನದುದ್ದಕ್ಕೂ ನಿಷ್ಠೆಯಿಂದ ಮನುಷ್ಯರನ್ನು ರಕ್ಷಿಸುತ್ತವೆ ಮತ್ತು ಸತ್ತ ನಂತರವೂ ಯಜಮಾನನನ್ನು ನೋಡಿಕೊಳ್ಳುತ್ತದೆ ಎಂದು ನೇಪಾಳದ ಜನರಲ್ಲಿರುವ ನಂಬಿಕೆ. ಹಾಗಾಗಿ ಕುಕುರ್ ತಿಹಾರ್ ದಿನದಂದು ಶ್ವಾನವನ್ನು ಗೌರವಿಸಲು ಇದು ಕಾರಣವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ನೇಪಾಳದಲ್ಲಿ ನಾಯಿಗಳು, ಹಸುಗಳು, ಗೂಳಿಗಳು ಮತ್ತು ಕಾಗೆಗಳನ್ನು ಪೂಜಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ