ನೇಲ್ ಆರ್ಟ್ ಉದ್ಯಮವು ಪ್ರಪಂಚದಾದ್ಯಂತ ಗಮನಾರ್ಹವಾಗಿ ಬೆಳೆದಿದೆ. ಹಸ್ತಾಲಂಕಾರದ ಹೊಸ ತಂತ್ರಗಳು ಸೌಂದರ್ಯ ಪ್ರಿಯರನ್ನು ಆಕರ್ಷಿಸುತ್ತಿವೆ. ಹಸ್ತಾಲಂಕಾರ ಕಲಾವಿದರು ಉಗುರುಗಳ ಅಂದವನ್ನು ಹೆಚ್ಚಿಸುವುದಲ್ಲದೇ ಸೃಜನಶೀಲ ವಿನ್ಯಾಸಗಳಿಂದ ಉಗುರಿಗೆ ಹೊಸ ರೂಪ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಕಾರ್ಯ ಶ್ಲಾಘನೀಯ. ಆದರೆ ಇಲ್ಲೊಂದು ನೇಲ್ ಆರ್ಟ್ ಸಲೂನ್ ಸ್ವಲ್ಪ ಹೊಸ ಪ್ರಯೋಗಗಳಿಗೆ ಮುಂದಾಗಿ ತೊಂದರೆಗೆ ಸಿಲುಕಿಕೊಂಡಿದೆ. ನೇಲ್ ಸನ್ನಿ ಎನ್ನುವ ಸಲೂನ್ ಸೆಂಟರ್ ಫಿಶ್ ಥೆರಪಿಯನ್ನು ಪ್ರಾರಂಭಿಸಲು ಯೋಚಿಸಿತು. 1970 ರ ದಶಕದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಫಿಶ್ ಟ್ಯಾಂಕ್ ಪ್ಲಾಟ್‌ಫಾರ್ಮ್ ಶೂನಿಂದ ಸ್ಫೂರ್ತಿ ಪಡೆದುಕೊಂಡು ಈ ಯೋಜನೆಗೆ ಮುಂದಾಯಿತು.
ಇಲ್ಲಿ ನಕಲಿ ಉಗುರಿನೊಳಗೆ ಜೀವಂತ ಮೀನನ್ನು ಬಿಡಲಾಗಿರುವ ವಿಡಿಯೋವನ್ನು ಅಕ್ವೇರಿಯಂ ಮ್ಯಾನಿಕ್ಯೂರ್ಇನ್ಸ್ಟಾಗ್ರಾಂನ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆ ನಂತರ ಈ ಪೋಸ್ಟ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಇದನ್ನು ಅಳಿಸಲಾಗಿದೆ.
ಇಷ್ಟಕ್ಕೂ ಅಕ್ವೇರಿಯಂ ಮ್ಯಾನಿಕ್ಯೂರ್ ಹೇಗೆ ನಡೆಯುತ್ತದೆ ಗೊತ್ತಾ? ಮೊದಲಿಗೆ ನೇಲ್ ಎಕ್ಸ್ಟೆನ್ಷನ್ ಅಂದರೆ ನಕಲಿ ಉಗುರುಗಳನ್ನು ಸೃಷ್ಟಿಸಲಾಗುತ್ತದೆ. ಆ ನಂತರ ಗ್ರಾಹಕರ ಉಗುರುಗಳನ್ನು ಅಚ್ಚುಕಟ್ಟಾಗಿ ಮ್ಯಾನಿಕ್ಯೂರ್ ಮಾಡಲಾಗುತ್ತದೆ. ಇದಾದ ಮೇಲೆ ಸಿದ್ಧಪಡಿಸಿಕೊಂಡಿರುವ ನಕಲಿ ಉಗುರುಗಳನ್ನು ಗ್ರಾಹಕರ ಉಗುರಿನ ಮೇಲೆ ಫಿಕ್ಸ್ ಮಾಡಲಾಗುತ್ತದೆ. ಬಳಿಕ ನೀರಿನ ಜೊತೆಗೆ ಮೀನನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ನಂತರ ಮೀನನ್ನು ಹೊರ ತೆಗೆಯಲಾಗುತ್ತದೆ. ಪ್ರಯೋಗದ ಹಿನ್ನೆಲೆ ಇದನ್ನು ಮಾಡಲಾಗಿದೆ.
ಈ ವಿಡಿಯೋ ಹಲವಾರು ಕಾರಣಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಸಾಕಷ್ಟು ಹೊಸ ಐಡಿಯಾದಂತೆ ಕಂಡು ಬಂದರೂ ಜನರು ಈ ಸಲೂನ್ ಮೇಲೆ ಕ್ರಮ ಜರುಗಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಶೀರ್ಷಿಕೆ ಕೂಡ ನೀಡಿದ್ದಾರೆ. 'ಯಾವುದೇ ಮೀನಿಗೂ ಹಾನಿಯುಂಟು ಮಾಡುವುದಿಲ್ಲ' ಎಂದು ಸಲೂನ್ ಹೇಳಿದೆ. ಆದರೆ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಣಿ ಹಕ್ಕುಗಳ ಸಂಘಟನೆಯಾದ ಪೆಟಾ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದು ಈ ವಿಡಿಯೋವನ್ನು ಖಂಡಿಸಿದೆ. ಪೆಟಾ ನಿರ್ದೇಶಕಿ ಎಲಿಸಾ ಅಲೆನ್ 'ಸೌಂದರ್ಯ ಪರಿಕರಗಳಿಗಾಗಿ ಪ್ರಾಣಿಗಳನ್ನು ಬಳಸುವುದು ನಿಜಕ್ಕೂ ಬೇಸರದ ಮತ್ತು ಮೂರ್ಖತನದ ಸಂಗತಿ' ಎಂದು ಹೇಳಿದ್ದಾರೆ. 'ದುರ್ಬಲ ಮೀನುಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನಗಳಿಂದ ದೂರ ಮಾಡುವುದು ಮತ್ತು ಅವುಗಳನ್ನು ಕೃತಕ ಆವರಣದಲ್ಲಿ ಸೀಮಿತಗೊಳಿಸುವುದು ಅನೈತಿಕ' ಎಂದು ಹೇಳಿದ್ದಾರೆ.
ಫಿಶ್ ಸ್ಪಾಗಳು ಇಂದು ಸಾಕಷ್ಟು ಹೆಸರನ್ನು ಗಳಿಸಿವೆ. ಫಿಶ್ ಸ್ಪಾಗಳಲ್ಲಿ ಕೈ ಮತ್ತು ಕಾಲುಗಳ ಉಗುರುಗಳ ಸ್ವಚ್ಚತೆಯನ್ನು ಆದ್ಯತೆಯಾಗಿ ಪರಿಗಣಿಸಲಾಗುತ್ತದೆ. ಉಗುರುಗಳ ಇಂಚಿಂಚೂ ಭಾಗವನ್ನೂ ಶುದ್ಧೀಕರಿಸಿ, ಸೌಂದರ್ಯ ವೃದ್ಧಿಸುತ್ತವೆ ಎನ್ನುವುದೊಂದು ನಂಬಿಕೆ. ಅಲ್ಲದೇ ಇದು ದಣಿದ ಕೈಗಳಿಗೆ ಮಸಾಜ್ ಕೂಡ ಮಾಡುವಂತೆ ವರ್ತಿಸುತ್ತವೆ. ಬಹಳ ಪುರಾತನ ಕಾಲದಿಂದಲೂ ಸೌಂದರ್ಯ ಕ್ಷೇತ್ರದಲ್ಲಿ ಇದರ ಬಳಕೆ ಮಾಡಲಾಗುತ್ತಿದೆ. ಆದರೆ ಎಲ್ಲೂ ಸಹ ಮೀನುಗಳನ್ನು ಅವುಗಳ ಸ್ವ ಸ್ಥಾನದಿಂದ ತಂದು ಹಿಂಸೆ ಮಾಡುತ್ತಿರಲಿಲ್ಲ.
ಹೀಗೆ ಮೀನುಗಳು ಕೈಗಳಿಗೆ ಮ್ಯಾನಿಕ್ಯೂರ್ ಮಾಡುವ ದೃಶ್ಯವನ್ನು ನೀವು ಬಾಹುಬಲಿ ಸಿನಿಮಾದಲ್ಲಿ ಗಮನಿಸಿರಬಹುದು. ಅಂದು ಸಹಜವಾಗಿದ್ದ ಸೌಂದರ್ಯ ಚಿಕಿತ್ಸೆ ಇಂದು ಹಿಂಸಾತ್ಮಕವಾಗಿ ಪರಿಣಮಿಸಿರುವುದು ವಿಷಾದನೀಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ