ಸಾಮಾನ್ಯವಾಗಿ ಈ ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಇರುವಂತಹ ಅಪಾರ್ಟ್ಮೆಂಟ್ ಗಳಲ್ಲಿ ಬಹುತೇಕವಾಗಿ ಎಲ್ಲರೂ ಕುಟುಂಬದ ಜೊತೆ ಇರುವವರಾಗಿದ್ದು, ಅಲ್ಲಿ ಬ್ಯಾಚುಲರ್ ಗಳು ಮನೆಯನ್ನು ಬಾಡಿಗೆಗೆ ಕೇಳಿಕೊಂಡು ಬಂದರೆ, ಅವರಿಗೆ ಮನೆಯ ಮಾಲೀಕರು ಫ್ಲ್ಯಾಟ್ ಬಾಡಿಗೆಗೆ ಕೊಡುವ ಮುಂಚೆ ಅನೇಕ ರೀತಿಯ ನಿಯಮಗಳನ್ನು ತಿಳಿಸುತ್ತಾರೆ ಅನ್ನೋದು ನಾವೆಲ್ಲಾ ನೋಡಿರುತ್ತೇವೆ. ಏಕೆಂದರೆ ಫ್ಯಾಮಿಲಿ (Family) ಜನರು ಇರುವ ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮ ಇರ್ತಾರೆ ಮತ್ತು ಚಿಕ್ಕ ಮಕ್ಕಳು ಇರ್ತಾರೆ, ಹೀಗಾಗಿ ಅವಿವಾಹಿತರಿಗೆ ಮನೆಯನ್ನು ಬಾಡಿಗೆ ಕೊಟ್ಟರೆ ಮಧ್ಯರಾತ್ರಿಯ (Mid Night) ವರೆಗೆ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಸ್ನೇಹಿತರ ಜೊತೆ ಹರಟೆ ಮತ್ತು ಪಾರ್ಟಿ ಮಾಡುತ್ತಾರೆ.
ಹಾಗಾಗಿ ಅನೇಕ ಜನರು ಇಡೀ ರಾತ್ರಿಯೆಲ್ಲಾ ಅಪಾರ್ಟ್ಮೆಂಟ್ನಲ್ಲಿ ಅಡ್ಡಾಡುತ್ತಾ ಇರುತ್ತಾರೆ. ಈ ರೀತಿಯಾಗಿ ಮಾಡಿದಾಗ ಉಂಟಾಗುವ ಸದ್ದು ಗದ್ದಲ ಇತರೆ ಜನರಿಗೆ ಕಿರಿಕಿರಿಯನ್ನು ಉಂಟು ಮಾಡಬಹುದು ಅಂತ ಮಾಲೀಕರ ಯೋಚನೆ ಆಗಿರುತ್ತದೆ.
ಅದರಲ್ಲೂ ಒಂದೆರಡು ಅಪಾರ್ಟ್ಮೆಂಟ್ ಒಂದೇ ಕಾಂಪೌಂಡ್ನಲ್ಲಿರುವುದರಿಂದ ಅಲ್ಲಿ ಒಂದು ಸೊಸೈಟಿ ಅಂತ ಮಾಡಿಕೊಂಡಿರುತ್ತಾರೆ ಮತ್ತು ಅಲ್ಲಿ ಇರುವ ಸದಸ್ಯರು ಅಪಾರ್ಟ್ಮೆಂಟ್ಗಳಲ್ಲಿ ವಾಸ ಮಾಡುವವರಿಗಾಗಿ ಅನೇಕ ನಿಯಮಗಳನ್ನು ಜಾರಿಗೆ ತಂದಿರುತ್ತಾರೆ.
ಇದನ್ನೂ ಓದಿ: ಈ ವಡಾಪಾವ್‌ನ ತಿನ್ನೋದಲ್ಲ, ಕೈಯಿಂದ ಎತ್ತೋದಕ್ಕೂ ಆಗಲ್ಲ! ಇದ್ರ ತೂಕ ಬರೋಬ್ಬರಿ ಎರಡೂವರೆ ಕೆಜಿ!
ಹಾಗೆಯೇ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನೋಡಿಕೊಳ್ಳುವುದಕ್ಕೆ ದಂಡ ಸಹ ವಿಧಿಸಲಾಗುತ್ತದೆ. ಈ ನಿಯಮಗಳು ಕೆಲವರಿಗೆ ಆಗಾಗ್ಗೆ ವಿಚಿತ್ರ ನಿಯಮಗಳು ಅಂತ ಅನ್ನಿಸಬಹುದು ಮತ್ತು ಅವುಗಳಲ್ಲಿ ಕೆಲವು ವ್ಯಕ್ತಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತದ್ದು ಆಗಿರುತ್ತವೆ ಅಂತ ಹೇಳಬಹುದು.
ರಾತ್ರಿ 10 ಗಂಟೆಯ ನಂತರ ತಮ್ಮ ಫ್ಲ್ಯಾಟ್ ಗಳಿಗೆ ಅತಿಥಿಗಳನ್ನು ಕರೆದುಕೊಂಡು ಬರುವಂತಿಲ್ಲವಂತೆ..
ಹೀಗೆ ಬೆಂಗಳೂರಿನ ಸೊಸೈಟಿಯೊಂದು ಬಾಡಿಗೆದಾರರಾಗಿ ವಾಸಿಸುವ ಅವಿವಾಹಿತರಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದ್ದಾರೆ ಅಂತ ಹೇಳಲಾಗುತ್ತಿದೆ. ಅದರಲ್ಲಿರುವ ನಿಯಮದ ಪ್ರಕಾರ ಅವಿವಾಹಿತರು ರಾತ್ರಿ 10 ಗಂಟೆಯ ನಂತರ ತಮ್ಮ ಫ್ಲ್ಯಾಟ್ ಗಳಿಗೆ ಯಾವುದೇ ಅತಿಥಿಗಳನ್ನು ಕರೆದುಕೊಂಡು ಬರುವಂತಿಲ್ಲ.
ಬೆಂಗಳೂರಿನ ಕುಂದನಹಳ್ಳಿ ಗೇಟ್ ಪ್ರದೇಶದಲ್ಲಿರುವ ಸೊಸೈಟಿಯು ತನ್ನ ಮಾರ್ಗಸೂಚಿಗಳಲ್ಲಿ, ಅತಿಥಿಯು ರಾತ್ರಿ ಅಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಮಾಲೀಕರಿಂದ ಇ-ಮೇಲ್ ಮೂಲಕ ಪೂರ್ವಾನುಮತಿ ಪಡೆಯುವಂತೆ ಈ ಬಾಡಿಗೆದಾರರನ್ನು ಕೇಳಿದೆ.
ಇದನ್ನೂ ಓದಿ: 3ನೇ ಬಾರಿ ಮದುವೆ ಆಗುತ್ತಿದ್ದ ಗಂಡನ ಚಳಿ ಬಿಡಿಸಿದ ಪತ್ನಿ, ಮದುವೆ ಮನೆಯಲ್ಲಿ ಹೈ-ವೋಲ್ಟೇಜ್ ಡ್ರಾಮಾ
"ರಾತ್ರಿ 10 ಗಂಟೆಯ ನಂತರ ಬ್ಯಾಚುಲರ್ ಗಳು ಈ ಫ್ಲ್ಯಾಟ್ ಗಳಿಗೆ ಯಾವುದೇ ಅತಿಥಿಗಳನ್ನು ಕರೆದುಕೊಂಡು ಬರುವಂತಿಲ್ಲ. ಅತಿಥಿಗಳಿಗೆ ಇಲ್ಲಿ ರಾತ್ರಿ ತಂಗಲು ಅವಕಾಶವಿಲ್ಲ.
ಅಗತ್ಯವಿದ್ದರೆ, ಅತಿಥಿಗಳ ಗುರುತಿನ ಪುರಾವೆಗಳನ್ನು ಸಲ್ಲಿಸುವ ಮೂಲಕ ಮತ್ತು ಮೈಗೇಟ್ ನಲ್ಲಿ ವಾಸ್ತವ್ಯದ ಅವಧಿ ಮತ್ತು ಅತಿಥಿ ಪ್ರವೇಶವನ್ನು ಒದಗಿಸುವ ಮೂಲಕ ಇ-ಮೇಲ್, ಮ್ಯಾನೇಜರ್ ಅಥವಾ ಅಸೋಸಿಯೇಷನ್ ಕಚೇರಿಯ ಮಾಲೀಕರಿಂದ ಪೂರ್ವಾನುಮತಿಯನ್ನು ಕೋರಬೇಕು" ಎಂದು ಬಳಕೆದಾರರೊಬ್ಬರು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ ಸೊಸೈಟಿಯ ನೋಟಿಸ್ ನಲ್ಲಿ ತಿಳಿಸಲಾಗಿದೆ.
ನಿಯಮಗಳನ್ನು ಉಲ್ಲಂಘಿಸಿದರೆ 1000 ರೂಪಾಯಿ ದಂಡ ಬೀಳುತ್ತಂತೆ..
ಈ ನಿಯಮಗಳನ್ನು ಪಾಲಿಸದಿದ್ದರೆ ಸೂಸೈಟಿಯು 1000 ರೂಪಾಯಿಗಳ ದಂಡ ಅಥವಾ ಸೊಸೈಟಿಯಿಂದ ಅವರನ್ನು ಹೊರ ಹಾಕುತ್ತಾರಂತೆ. ರಾತ್ರಿ 10 ಗಂಟೆಯ ನಂತರ ಜೋರಾಗಿ ಮ್ಯೂಸಿಕ್ ಹಾಕಬಾರದು, ತಡರಾತ್ರಿ ಪಾರ್ಟಿಗಳನ್ನು ಮಾಡಬಾರದು ಮತ್ತು ರಾತ್ರಿ 10 ಗಂಟೆಯ ನಂತರ ಫೋನ್ ಕರೆಗಳಿಗಾಗಿ ಕಾರಿಡಾರ್ ಮತ್ತು ಬಾಲ್ಕನಿಗಳನ್ನು ಬಳಸಬಾರದು ಎಂಬುದು ಇತರ ನಿಯಮಗಳಲ್ಲಿ ಸೇರಿದೆ.
ರೆಡ್ಡಿಟ್ ನಲ್ಲಿ ಈ ಪೋಸ್ಟ್ ಅನ್ನು ನೋಡಿದ ಕೆಲ ಬಳಕೆದಾರರು ಈ ನಿಯಮಗಳನ್ನು ಖಂಡಿಸಿದರು ಮತ್ತು ಇವುಗಳ ಬಗ್ಗೆ ತುಂಬಾನೇ ಆಕ್ರೋಶವನ್ನು ವ್ಯಕ್ತಪಡಿಸಿದರು.
"ಇದು ಹಾಸ್ಟೆಲ್ ನಲ್ಲಿರುವ ನಿಯಮಗಳಿಗಿಂತಲೂ ಕೆಟ್ಟದಾಗಿದೆ. ನೀವು ಫ್ಲ್ಯಾಟ್ ಅನ್ನು ಬಾಡಿಗೆಗೆ ನೀಡಲು ಹಣವನ್ನು ಪಾವತಿಸುತ್ತಿದ್ದೀರಿ. ಬಾಡಿಗೆ ಒಪ್ಪಂದಗಳ ಪ್ರಕಾರ ನೀವು ಬಾಡಿಗೆಗೆ ನೀಡುತ್ತಿರುವ ಅವಧಿಗೆ ಅದು ನಿಮ್ಮ ಫ್ಲ್ಯಾಟ್ ಆಗಿರುತ್ತದೆ.
ನಿಮ್ಮ ಫ್ಲ್ಯಾಟ್ ಗೆ ಯಾರು ಬರುತ್ತಾರೆ ಮತ್ತು ಬಾಲ್ಕನಿಯಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
"ಬ್ಯಾಚುಲರ್ ಗಳಿಗೆ ಈ ರೀತಿಯ ನಿಯಮಗಳನ್ನು ಹೇರುವುದು ಸಾಮಾನ್ಯವಾಗಿದೆ. ಆದರೆ ರಾತ್ರಿ 10 ಗಂಟೆಯ ನಂತರ ಬಾಲ್ಕನಿಗಳಲ್ಲಿ ನಿಂತು ಫೋನ್ ನಲ್ಲಿ ಮಾತಾಡಬಾರದು ಎಂಬ ನಿಯಮ ಸ್ವಲ್ಪ ಅತಿಯಾಯ್ತು" ಅಂತ ಎರಡನೇ ಬಳಕೆದಾರರು ಹೇಳಿದರು.
"ಅದಕ್ಕಾಗಿಯೇ ನಾನು ಅಪಾರ್ಟ್ಮೆಂಟ್ ಗಳಲ್ಲಿ ಉಳಿಯುವುದನ್ನು ದ್ವೇಷಿಸುತ್ತೇನೆ, ಏಕಾಂಗಿಯಾಗಿ 3-5 ಅಂತಸ್ತಿನ ಮನೆಯನ್ನು ಮಾಡಿಕೊಂಡು ಇರುವುದು ಒಳ್ಳೆಯದು" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ