ಕೋವಿಡ್ -19 ವಿನಾಶಕಾರಿ ಎರಡನೇ ಅಲೆಯ ನಂತರ ಇದೀಗ ಜಗತ್ತಿನ ಎಲ್ಲಾ ಜಿಮ್ಗಳು, ಕಠಿಣ ನಿರ್ಬಂಧಗಳ ಜೊತೆಗೆ ಮರು ತೆರೆಯಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಜನರ ಸುರಕ್ಷತೆಯ ದೃಷ್ಟಿಯಿಂದ ಸರಕಾರ ರೂಪಿಸಿರುವ ನಿಯಮಗಳಿಗೆ ಅನುಸಾರವಾಗಿ, ವಿವಿಧ ರಾಜ್ಯಗಳ ಜಿಮ್ ಮಾಲೀಕರು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಚಂಡೀಗಢ ನಗರದ ಸೆಕ್ಟರ್ -1ನಲ್ಲಿರುವ ಚಂಡಿಗಢ ಲೇಕ್ ಕ್ಲಬ್, ಮತ್ತೊಮ್ಮೆ ಫಿಟ್ನೆಸ್ ಉತ್ಸಾಹಿಗಳನ್ನು ಸ್ವಾಗತಿಸಲು ಸಿದ್ಧವಾಗಿರುವ ಸಂಸ್ಥೆಗಳಲ್ಲಿ ಒಂದಾಗಿದೆ. ಆದರೆ ಅದು ಹೊರಡಿಸಿರುವ ನಿರ್ಬಂಧಗಳ ಪಟ್ಟಿ ಇತರ ಸಂಸ್ಥೆಗಳಿಗಿಂತ ಭಿನ್ನವಾಗಿದೆ. ಕೆಲವರಿಗೆ ವಿಲಕ್ಷಣ ಎನಿಸಿದರೆ ಇನ್ನು ಕೆಲವರಿಗೆ ಅದು ಅತಿರೇಕ ಎನಿಸಬಹುದು. ಈ ಮಾರ್ಗಸೂಚಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆ ಮಾರ್ಗಸೂಚಿಯಲ್ಲಿ 4 ಮುಖ್ಯಾಂಶಗಳಿವೆ. ಜಿಮ್ಗೆ ಬರುವವರು ಸೂಕ್ತ ಜಿಮ್ಸೂಟ್ಗಳನ್ನು ಬಳಸಬೇಕು ಮತ್ತು ಅವರು ಧರಿಸುವ ಒಳ ಉಡುಪುಗಳ ಬಗ್ಗೆಯೂ ಗಮನ ನೀಡಲಾಗುವುದು. ಕೇವಲ ಅನುಮೋದಿತ ಒಳ ಉಡುಪುಗಳಿಗೆ ಮಾತ್ರ ಅನುಮತಿ ನೀಡಲಾಗುವುದು, ಅನುಮೋದಿತ ಒಳ ಉಡುಪುಗಳ ಮಾದರಿಗಳನ್ನು ಜಿಮ್ನಲ್ಲಿ ಇರಿಸಲಾಗಿದೆ. ಸದಸ್ಯರು ತಮ್ಮದೇ ಒಳ ಉಡುಪುಗಳನ್ನು ತರಬಹುದು, ಆದರೆ ಅನುಮೋದನೆಗಾಗಿ ಅದಕ್ಕೆ ಸ್ಟ್ಯಾಂಪ್ ಹಾಕಲಾಗುವುದು ಎಂದು ಕೂಡ ಬರೆಯಲಾಗಿದೆ.
ಎರಡನೇ ಅಂಶವೆಂದರೆ, ಸದಸ್ಯರು ಕೊಳೆಯಾದ ಅಥವಾ ದುರ್ವಾಸನೆ ಉಳ್ಳ ಸಾಕ್ಸ್ ಧರಿಸಿದರೆ ದಂಡ ವಿಧಿಸಲಾಗುವುದು.
ಆದರೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿರುವುದು ಮೂರನೇ ಅಂಶ. ಅದರ ಪ್ರಕಾರ ಜಿಮ್ನಲ್ಲಿ ಯಾವುದೇ ಕೆಟ್ಟ ಪದಗಳನ್ನು ಬಳಸುವ ಹಾಗಿಲ್ಲ, ಆದರೆ ಜಿಮ್ ಅನುಮೋದಿಸಿರುವ ಪಂಜಾಬಿ ಕೆಟ್ಟ ಪದಗಳ ಪಟ್ಟಿಯಲ್ಲಿ ಇರುವ ಕೆಟ್ಟ ಪದಗಳನ್ನು ಮಾತ್ರ ಬಳಸಲು ಅವಕಾಶ ನೀಡಲಾಗುವುದು.
“ಶಾರ್ಟ್ಸ್ ಧರಿಸುವ ಸದಸ್ಯರು ಅನಗತ್ಯ ಗಮನ ಸೆಳೆಯುವುದನ್ನು ತಪ್ಪಿಸಲು ಕಾಲುಗಳನ್ನು ಶೇವ್ ಮಾಡಿರಬೇಕು, ತಪ್ಪಿದಲ್ಲಿ ಅಲ್ಲೇ ಶೇವ್ ಮಾಡಿಸಲಾಗುವುದು” ಎಂದು ಕೊನೆಯ ಅಂಶದಲ್ಲಿ ಬರೆಯಲಾಗಿದೆ.
ದ ಲೇಕ್ ಕ್ಲಬ್ ಚಂಢಿಗಡ್ನ ಈ ಮಾರ್ಗದರ್ಶಿ ಸೂಚಿಯನ್ನು ಹಲವಾರು ಟ್ವಿಟ್ಟರ್ ಬಳಕೆದಾರರು ಶೇರ್ ಮಾಡಿಕೊಂಡಿದ್ದು, ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಪತ್ರಕರ್ತ ಅರ್ಶ್ದೀಪ್ ಸಂದು ಈ ಬಗ್ಗೆ ಬರೆದಿರುವ ಟ್ವೀಟ್ನಲ್ಲಿ (ಈಗ ತೆಗೆಲಾಗಿದೆ) “ದ ಲೇಕ್ ಕ್ಲಬ್ ಚಂಡಿಗಢ ನೋಟಿಸ್ನ ಪ್ರತಿ ಸಾಲನ್ನು ಓದಿ. ’ಒಳ ಉಡುಪು ಅನುಮೋದನೆ ಸ್ಟ್ಯಾಂಪಿಂಗ್’ ಮತ್ತು ‘ಅನುಮೋದಿತ ಕೆಟ್ಟ ಪದಗಳು’ ಮಜವಾಗಿದೆ. ಜೊತೆಗೆ, ಶಾರ್ಟ್ಸ್ ಹಾಕಬೇಕಿದ್ದರೆ ‘ಕಾಲುಗಳನ್ನು ಶೇವ್ ಮಾಡುವುದು”.
“ಕೇವಲ ಅನುಮೋದಿತ ಒಳ ಉಡುಪುಗಳನ್ನು ಹಾಕಬೇಕು ಮತ್ತು ಒಳ ಉಡುಪಿನ ಬ್ರಾಂಡ್ ಪರಿಶೀಲಿಸುವವರು ಯಾರು? ಸದಸ್ಯ ಬೇರೆ ಭಾಷೆಯಲ್ಲಿ ಬೈಗುಳ ಬಳಸಿದರೆ ಏನಾಗುತ್ತದೆ” ಎಂದು ತೆಹಸೀನ್ ಪೂನಾವಾಲ ಎಂಬುವರು ಮಾರ್ಗಸೂಚಿಯ ಅಂಶಗಳನ್ನು ಪ್ರಶ್ನಿಸಿದ್ದಾರೆ.
ಈ ವಿಲಕ್ಷಣ ಸೂಚನೆಯನ್ನು ನೋಡಿ ಬಹಳಷ್ಟು ಮಂದಿ ದಂಗಾಗಿದ್ದಾರೆ. ಇನ್ನು ಕೆಲವರು ಇದನ್ನು ನಕಲಿ ಎಂದು ಕರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ