Viral Video: ಬಿಸಿಯೂಟದ ಸಿಬ್ಬಂದಿ ಗಣಿತ ಪಾಠಕ್ಕೆ ತಲೆದೂಗಿದ ಮಕ್ಕಳು!

ಮಕ್ಕಳಿಗೆ ಮನಮುಟ್ಟುವಂತೆ ಆ ಗಣಿತ ಸಮಸ್ಯೆಯನ್ನು ಬಿಡಿಸಿ ವಿವರಿಸಿದರು ವಿಶಾಖಾ. ಮಕ್ಕಳು ಮಂತ್ರಮುಗ್ಧರಾಗಿ ಕೇಳಿಸಿಕೊಂಡರು. ಕ್ಲಾಸ್​ನಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶಬ್ಧ! ಇದೆಲ್ಲ ಶಿಕ್ಷಕ ಪರೇಶ್ ದಾಸ್ ಅವರ ಮೊಬೈಲಲ್ಲಿ ರೆಕಾರ್ಡ್ ಆಗಿತ್ತು.

ವಿಶಾಖಾ ಪಾಲ್

ವಿಶಾಖಾ ಪಾಲ್

  • Share this:
ಮುರ್ಷಿದಾಬಾದ್: ಮಹಿಳೆಯರು ಅಂದರೇ ಹಾಗೆ! ಅವರು ನಿರ್ವಹಿಸುವ ಕೆಲಸ ಒಂದೇ ಎರಡೇ? ಮನೆ, ಸಂಸಾರ, ಉದ್ಯೋಗ ಅಂತ ಎಲ್ಲಾ ಕಡೆ ಜವಾಬ್ದಾರಿ ನಿಭಾಯಿಸುತ್ತಾರೆ ಮಹಿಳೆಯರು. ಅದರ ಮಧ್ಯೆ ವೈಯಕ್ತಿಕ ಜೀವನಕ್ಕೆ ಸಮಯ ಕೊಡೋದಾದರೂ ಯಾವಾಗ? ಎಂಬ ಪ್ರಶ್ನೆ ಬಂದೇ ಬರುತ್ತದೆ. ಮಹಿಳೆ ಸರ್ವಾಂತರ್ಯಾಮಿ! ಎಲ್ಲಿ ಹೋದರೂ ಅವಳ ಅಸ್ತಿತ್ವ-ಅನಿವಾರ್ಯತೆ ಇದ್ದೇ ಇರುತ್ತೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯೊಂದು ಇದೀಗ ವೈರಲ್ (Viral Video)  ಆಗುತ್ತಿದೆ. ಬಿಶಾಖಾ ಪಾಲ್ ಎಂಬ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ (Mid Day Meal) ಸಿಬ್ಬಂದಿಯೋರ್ವರು ಅದ್ಭುತವಾಗಿ ಗಣಿತ ಪಾಠ (Mathematics Teaching) ಹೇಳಿದ ವಿಡಿಯೋವೇ ಅದ್ಭುತ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ. 350 ಮಕ್ಕಳಿಗೆ ಅಡುಗೆ ಮಾಡಿ ಉಣಬಡಿಸುತ್ತಿದ್ದ ಬಿಸಿಯೂಟದ ಸಿಬ್ಬಂದಿಯ ಗಣಿತ ಕೌಶಲಕ್ಕೆ ನೆಟ್ಟಿಗರು ಶಹಬ್ಬಾಸ್ ಎನ್ನುತ್ತಿದ್ದಾರೆ!

ವಿಶಾಖಾ ಅವರು ಮುರ್ಷಿದಾಬಾದ್ ಸಮೀಪದ ಫರಕ್ಕಾ ನಯನಸುಖ್ ಶ್ರೀಮಂತ ಪಾಲ್ ಪ್ರಾಥಮಿಕ ಶಾಲೆಯ ಮಧ್ಯಾಹ್ನದ ಊಟ ತಯಾರಿಸುವ ಸಿಬ್ಬಂದಿ. ಬಿಸಿಯೂಟ ತಯಾರಿಸುವುದು, ಮಕ್ಕಳಿಗೆ ಉಣಬಡಿಸುವುದು ಅವರ ದಿನನಿತ್ಯದ ಕೆಲಸ. ಆದರೆ ವಿಶಾಖಾ ಅಷ್ಟಕ್ಕೇ ಸೀಮಿತರಲ್ಲ ಎಂಬುದನ್ನು ಜಗತ್ತಿಗೆ ತೋರಿಸಲು ಅವರೊಳಗೆ ಇರುವ ಅದ್ಭುತ ಕೌಶಲವೊಂದು ಹೊರಬೀಳಬೇಕಾಯಿತು.

4ನೇ ತರಗತಿ ಗಣಿತ ಸಮಸ್ಯೆ ಮಾಸ್ತರರಿಗೇ ಕಷ್ಟ!
ಅಂದೂ ಎಂದಿನಂತೆ ವಿಶಾಖಾ ಮಧ್ಯಾಹ್ನದ ಬಿಸಿಯೂಟ ತಯಾರಿಯಲ್ಲಿ ನಿರತರಾಗಿದ್ದರು. ಇತ್ತ ತರಗತಿಗಳಲ್ಲಿಯೂ ಎಂದಿನಂತೆ ಪಾಠ ಪ್ರವಚನಗಳು ನಡೆಯುತ್ತಿದ್ದವು. ಆದರೆ 4ನೇ ತರಗತಿಯಲ್ಲಿ ಗಣಿತ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಒಂದು ಗಣಿತ ಸಮಸ್ಯೆಯನ್ನು ಸರಳವಾಗಿ ವಿವರಿಸಲು ಆಗುತ್ತಿರಲಿಲ್ಲ. ಮಕ್ಕಳಿಗೂ ಅವರು ಹೇಳುತ್ತಿರುವುದು ಅರ್ಥವಾಗುತ್ತಿರಲಿಲ್ಲ.ಚಾಕ್​ ಪೀಸ್ ಕೈಗೆತ್ತಿಕೊಂಡ ಬಿಸಿಯೂಟದ ಸಿಬ್ಬಂದಿ!
ಆಗ ಗಣಿತದ ಫೀಲ್ಡ್​ಗೆ ಧುಮಿಕಿದವರೇ ಬಿಸಿಯೂಟದ ಸಿಬ್ಬಂದಿ ವಿಶಾಖಾ! ಅವರು ಚಾಕ್ ಪೀಸ್ ಕೈಗೆತ್ತಿಕೊಂಡರು ನೋಡಿ! ಮುಂದೆ ನಡೆದದ್ದೇ ಮ್ಯಾಜಿಕ್! ಗಣಿತ ಮಾಸ್ತರರ ಬಳಿಯೂ ವಿವರಿಸಲು ಸಾಧ್ಯವಾಗದ ಸಮಸ್ಯೆಗೆ ವಿಶಾಖಾ ಪಾಲ್ ಬಳಿ ಸರಳ ಉತ್ತರವಿತ್ತು. ಮಕ್ಕಳಿಗೆ ಮನಮುಟ್ಟುವಂತೆ ಆ ಗಣಿತ ಸಮಸ್ಯೆಯನ್ನು ಬಿಡಿಸಿ ವಿವರಿಸಿದರು ವಿಶಾಖಾ. ಮಕ್ಕಳು ಮಂತ್ರಮುಗ್ಧರಾಗಿ ಕೇಳಿಸಿಕೊಂಡರು. ಕ್ಲಾಸ್​ನಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶಬ್ಧ! ಇದೆಲ್ಲ ಶಿಕ್ಷಕ ಪರೇಶ್ ದಾಸ್ ಅವರ ಮೊಬೈಲಲ್ಲಿ ರೆಕಾರ್ಡ್ ಆಗಿತ್ತು.

ಇದನ್ನೂ ಓದಿ: Naneghat Reverse Fall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ! ವಿಡಿಯೋ ನೋಡಿ

ಕ್ಲಾಸ್ ಹೊರಗೆ ನಿಂತು ಪಾಠ ಕೇಳಿಸಿಕೊಂಡಿದ್ದರಂತೆ!
ವಿಶಾಖಾ ಬಡತನ ಮತ್ತು ಜೀವನೋಪಾಯದ ಕಾರಣದಿಂದ ಹತ್ತನೇ ತರಗತಿಯ ನಂತರ ಶಾಲೆಗೆ ಹೋಗುವುದನ್ನು ನಿಲ್ಲಿಸಿದರಂತೆ. ಆದರೆ ಬಿಸಿಯೂಟದ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿಕೊಂಡರು. ಮನಸ್ಸಲ್ಲಿ ಶಿಕ್ಷಣದ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಅವಕಾಶ ಸಿಕ್ಕಾಗೆಲ್ಲ ವಿವಿಧ ಕ್ಲಾಸ್​ಗಳ ಹೊರಗೆ ನಿಂತು ಪಾಠಗಳನ್ನು ಕೇಳಿಸಿಕೊಳ್ಳುತ್ತಿದ್ದರಂತೆ! ಕ್ಲಾಸ್​ನ ಹೊರಗೆ ನಿಂತು ಕೇಳಿಸಿಕೊಂಡದ್ದೇ ಮ್ಯಾಜಿಕ್​ಗೆ ಕಾರಣವಾಯಿತು. ಅಡುಗೆ ಸಿಬ್ಬಂದಿ ಮಾಡಿದ ಪಾಠಕ್ಕೆ ನೆಟ್ಟಿಗರು ತಲೆದೂಗಿದರು.

ಇದನ್ನೂ ಓದಿ: Galaxy: ನಮ್ಮ ಬ್ರಹ್ಮಾಂಡ ಹೇಗಿದೆ? ಕಲರ್ ಕಲರ್ ಫೋಟೋ ಇಲ್ಲಿದೆ!

ನನ್ನಿಂದ ಕಲಿತರೆ ಹೆಮ್ಮೆ ಪಡುವೆ!
'ನಾನು ನನ್ನ ಜೀವನ ನಡೆಸಲು ಅಡುಗೆ ಮಾಡುತ್ತೇನೆ. ಆದರೆ ಓದುವ ಅದಮ್ಯ ಬಯಕೆ ನನ್ನ ಹೃದಯದಲ್ಲಿ ಇನ್ನೂ ಇದೆ. ನಾನು ಕಲಿಸಿದ ವಿಷಯದಿಂದ ವಿದ್ಯಾರ್ಥಿಗಳು ಯಾವುದೇ ರೀತಿಯ ಪ್ರಯೋಜನವನ್ನು ಪಡೆದರೆ ನಾನು ಹೆಮ್ಮೆಪಡುತ್ತೇನೆ’ ಎಂದು ಸಂಕೋಚದಿಂದಲೇ ಪ್ರತಿಕ್ರಿಯಿಸುತ್ತಾರೆ ವಿಶಾಖಾ ಪಾಲ್.

ವರದಿ:  ಕೌಶಿಕ್ ಅಧಿಕಾರಿ
Published by:guruganesh bhat
First published: