‘ಇಲ್ಲಿ ಉಗಿಯಬಾರದು’, ‘ಧೂಮಪಾನ ಮಾಡಬಾರದು’ ಮತ್ತು ‘ವೇಗವಾಗಿ ವಾಹನ ಚಲಾಯಿಸಬಾರದು’ ಮುಂತಾದ ಫಲಕಗಳು ಎಲ್ಲೆಡೆ ಸಾಮಾನ್ಯ. ಆದರೆ ‘ಇಲ್ಲಿ ಮುತ್ತು ಕೊಡುವುದು ನಿಷೇಧಿಸಲಾಗಿದೆ’ ಎನ್ನುವ ಸೂಚನಾ ಫಲಕವನ್ನು ಎಲ್ಲಾದರೂ ಕಂಡಿದ್ದೀರಾ? ಇಲ್ಲ.
ಹಾಗಾದರೆ ಇದನ್ನು ನೋಡಬೇಕು ಎಂದರೆ ಮುಂಬೈಗೆ ಬರಬೇಕಾಗುತ್ತದೆ? ಮುಂಬೈನ ಹೌಸಿಂಗ್ ಸೊಸೈಟಿಯೊಂದರಲ್ಲಿ ಅಂತಹ ಫಲಕ ನೋಡಬಹುದು! ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಪ್ರೀತಿ ವ್ಯಕ್ತಪಡಿಸಿದರೆ ಅಪರಾಧ ಎಂದು ಪರಿಗಣಿಸುವುದನ್ನು ಸುಪ್ರೀಂ ಕೋರ್ಟ್ ಕೂಡ ಒಪ್ಪುವುದಿಲ್ಲ. ಬಹಿರಂಗ ಪ್ರೀತಿ ಪ್ರದರ್ಶನ ‘ಅಶ್ಲೀಲ’ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಆಗುವಷ್ಟರ ಮಟ್ಟಿಗೆ ಇದ್ದರೆ ಮಾತ್ರ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೆನಿಸಿಕೊಳ್ಳುತ್ತದೆ. ಅದೇನೇ ಇದ್ದರೂ, ನಮ್ಮ ಹೌಸಿಂಗ್ ಸೊಸೈಟಿಯ ಮುಂದೆ ನಿಮ್ಮ ಬಹಿರಂಗ ಪ್ರೀತಿ ಪ್ರದರ್ಶನ ಬೇಡ್ವೇ ಬೇಡ ಎಂಬಂತೆ , ಮುಂಬೈನ ಬೋರಿವಲಿಯ ಹೌಸಿಂಗ್ ಸೊಸೈಟಿಯೊಂದು, ಅದರ ಮುಂಭಾಗದ ಗೇಟ್ನ ಹೊರಗೆ ರಸ್ತೆಗೆ ಕಾಣುವಂತೆ ‘ನೋ ಕಿಸ್ಸಿಂಗ್’ ಝೋನ್ ಚಿಹ್ನೆಯ ಫಲಕ ಹಾಕಿದೆ.
ಬೋರಿವಲಿಯ ಸತ್ಯಂ ಶಿವಂ ಸುಂದರಂ ಸೊಸೈಟಿಯ ನಿವಾಸಿಗಳಿಗೆ ಪ್ರೇಮಿಗಳ ಬಗ್ಗೆ ಯಾವುದೇ ಅಭ್ಯಂತರ ಇಲ್ಲ, ಆದರೆ ತಮ್ಮ ಮನೆಯ ಮುಂದೆ ಯಾವುದೇ ಅಶ್ಲೀಲತೆಯನ್ನು ಬಯಸುವುದಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಈ ಸೊಸೈಟಿಯಲ್ಲಿ ವಾಸ ಮಾಡುವ ಕರಣ್ ಮತ್ತು ರುಚಿ ದಂಪತಿ, ತಮ್ಮ ಮನೆಯ ಹೊರಗಿನ ರಸ್ತೆಯಲ್ಲಿ ಜೋಡಿಯೊಂದು ಬಹಿರಂಗ ಪ್ರೀತಿ ಪ್ರದರ್ಶನದಲ್ಲಿ ನಿರತವಾಗಿರುವುದನ್ನು ನೋಡಿ, ಅದರ ವಿಡಿಯೋ ಚಿತ್ರೀಕರಿಸಿದ್ದರು. ಮತ್ತು ಅದನ್ನು ಸ್ಥಳೀಯ ಕಾರ್ಪೊರೇಟರ್ಗೆ ಕಳುಹಿಸಿದ್ದರು. ಕಾರ್ಪೊರೇಟರ್ ಆ ವಿಡಿಯೋವನ್ನು ಪೊಲೀಸರಿಗೆ ಕಳುಹಿಸುವಂತೆ ಸೂಚಿಸಿದರು. ಆದರೆ ಪೊಲೀಸರು ಆ ಬಗ್ಗೆ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಹಾಗಾಗಿ, ಸೊಸೈಟಿಯ ಸದಸ್ಯರ ಜೊತೆ ಈ ಕುರಿತು ಚರ್ಚಿಸಿ, ಈ ರೀತಿಯ ಫಲಕ ಹಾಕುವ ನಿರ್ಧಾರಕ್ಕೆ ಬರಲಾಯಿತು.
ಲಾಕ್ಡೌನ್ ಸಮಯದಲ್ಲಿ ಹಲವಾರು ಕಾರುಗಳು ಮತ್ತು ಬೈಕುಗಳಲ್ಲಿ ಜೋಡಿಗಳು ಆ ಜಾಗಕ್ಕೆ ಬರುತ್ತಿದ್ದರು ಮತ್ತು ಸಂಜೆಯವರೆಗೆ ಸಮಯ ಕಳೆಯುತ್ತಿದ್ದರು. ಆ ದೃಶ್ಯ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡಿತು. ‘ನೋ ಕಿಸ್ಸಿಂಗ್’ ಝೋನ್ ಚಿಹ್ನೆಯ ಫಲಕ ಹಾಕಿದ ಬಳಿಕ ಅಲ್ಲಿಗೆ ಬರುವ ಜೋಡಿಗಳ ಸಂಖ್ಯೆ ಕಡಿಮೆ ಆಗಿದೆ ಮತ್ತು ಈಗ ಜೋಡಿಗಳು ಹೆಚ್ಚಾಗಿ ಅಲ್ಲಿಗೆ ಕೇವಲ ಸೆಲ್ಫಿ ತೆಗೆಸಲಿಕ್ಕಾಗಿ ಮಾತ್ರ ಬರುತ್ತಾರೆ ಎಂದು ನಿವಾಸಿಗಳು ತಿಳಿಸಿದ್ದಾರೆ.
“ನಾವು ಪ್ರೇಮಿಗಳಿಗೆ, ಜೋಡಿಗಳಿಗೆ ವಿರೋಧವಾಗಿಲ್ಲ, ಆದರೆ ಅವರುಗಳು ನಮ್ಮ ಮನೆಯ ಹೊರಗೆ ಮಾಡುವ ಆಶ್ಲೀಲ ಕೃತ್ಯವನ್ನು ವಿರೋಧಿಸುತ್ತೇವೆ. ನಮ್ಮ ಸೊಸೈಟಿಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದಾರೆ. ಎರಡು ತಿಂಗಳ ಹಿಂದೆ ನಾವು ರಸ್ತೆಯಲ್ಲಿ ‘ನೋ ಕಿಸ್ಸಿಂಗ್ ಝೋನ್’ ಎಂಬುದನ್ನು ಪೇಂಟ್ ಮಾಡಿಸಿದೆವು.
ಜೋಡಿಗಳು ಆ ಸ್ಥಳದಲ್ಲಿ ಮುತ್ತು ಕೊಡುವಂತಿಲ್ಲ. ಆಶ್ಲೀಲವಾಗಿ ವರ್ತಿಸಬೇಡಿ ಎಂದು ನಾವು ಜೋಡಿಗಳಲ್ಲಿ ವೈಯಕ್ತಿಕವಾಗಿ ಕೂಡ ಕೇಳಿಕೊಂಡಿದ್ದೆವು” ಎಂದು ಸೊಸೈಟಿಯ ಚೇರ್ಮನ್ ಅಡ್ವೊಕೇಟ್ ವಿನಯ್ ಅನ್ಸುರ್ಕರ್ ಹೇಳಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ನಡೆದುಕೊಳ್ಳುವುದು ಅಥವಾ ಮಾತುಗಳನ್ನಾಡುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ಪ್ರಕಾರ ಅಪರಾಧ.
ಪಾಕಿಸ್ತಾನದಲ್ಲೂ ಖಾಸಗಿ ವಿಮಾನವೊಂದರಲ್ಲಿ ಬಹಿರಂಗ ಪ್ರೀತಿ ಪ್ರದರ್ಶನದ ಪ್ರಕರಣ ನಡೆದಾಗ, ಸಾಮಾಜಿಕ ಜಾಲಾತಾಣಗಳಲ್ಲಿ ಬಾರೀ ವೈರಲ್ ಆಗಿ ಸುದ್ದಿಯಾಗಿತ್ತು. ಸಹ ಪ್ರಯಾಣಿಕರೊಬ್ಬರು ಸಿವಿಲ್ ಏವಿಯೇಶನ್ ಅಥಾರಿಟಿಗೆ ದೂರು ನೀಡಿದ್ದರು.
ಸಲಿಂಗ ಸಂಗಾತಿಗಳು ಕೂಡ ಸಾರ್ವಜನಿಕರಿಗೆ ಅಶ್ಲೀಲವೆನಿಸುವಂತೆ ಬಹಿರಂಗ ಪ್ರೀತಿ ಪ್ರದರ್ಶನ ಮಾಡುವಂತಿಲ್ಲ ಎಂಬುವುದು, ಅಲಹಬಾದ್ ಹೈ ಕೋರ್ಟ್ನಲ್ಲಿ ತೀರ್ಪು ಪಡೆದ ಗೃಹ ರಕ್ಷಕ ದಳದ ಗಾರ್ಡ್ ವಜಾ ಪ್ರಕರಣದಲ್ಲಿ ಸಾಬೀತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ