ಕ್ಯಾಪ್ಟನ್ ಕೂಲ್ ಅಂತಾನೆ ಪ್ರಖ್ಯಾತಿ ಪಡೆದ ಎಂ.ಎಸ್. ಧೋನಿ (MS Dhoni ) ಬರೀ ಕ್ರಿಕೆಟ್ ಮೈದಾನದಲ್ಲಿ ಆಡಿದ ಆಟದಿಂದ ಸುದ್ದಿಯಲ್ಲಿರದೆ, ಈಗ ತಮ್ಮ ಆಟದ ಮೈದಾನದ ಹೊರಗೆ ಮಾಡುವಂತಹ ಕೆಲಸಗಳಿಂದಲೂ ಸುದ್ದಿಯಲ್ಲಿದ್ದಾರೆ. ಧೋನಿ ತಮ್ಮ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ನಿನ್ನೆ ನಡೆದ ಒಂದು ಘಟನೆಯೇ ಸಾಕ್ಷಿ ಎಂದು ಹೇಳಬಹುದು.ಭಾನುವಾರ ದುಬೈನಲ್ಲಿ ನಡೆದಂತಹ 2021ರ ಐಪಿಎಲ್ನ ಮೊದಲನೆಯ ಅರ್ಹತಾ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ಗಳಿಂದ ರೋಚಕ ಜಯ ಗಳಿಸುವುದರ ಮೂಲಕ ಫೈನಲ್ ತಲುಪಿದೆ. ಮತ್ತೊಮ್ಮೆ ಧೋನಿ ತಾವು ಪಂದ್ಯವನ್ನು ಗೆಲ್ಲಿಸಿಕೊಡಬಹುದು ಎಂದು ಕೊನೆಯ ಗೆಲುವಿನ ರನ್ ಹೊಡೆಯುವುದರ ಮೂಲಕ ತೋರಿಸಿದ್ದಾರೆ.
ಸಿಎಸ್ಕೆ (ಚೆನ್ನೈ ಸೂಪರ್ ಕಿಂಗ್ಸ್) ಭಾನುವಾರ ರಾತ್ರಿ ಗೆಲುವು ಪಡೆದ ನಂತರ ಒಂದು ವಿಶಿಷ್ಟವಾದ ಘಟನೆ ನಡೆದಿದ್ದು, ಈಗ ಆ ಘಟನೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಏನಪ್ಪಾ ಆ ವಿಡಿಯೋ ತುಣುಕಿನಲ್ಲಿರುವುದು ಅಂತೀರಾ..? ಹಾಗಾದರೆ ನೋಡೋಣ ಬನ್ನಿ ಏನು ನಡೆಯಿತು ಅಂತ.
ಧೋನಿ ಗೆಲುವಿನ ಆ ರನ್ ಹೊಡೆದಾಗ ಸಿಎಸ್ಕೆ ತಂಡದ ಡುಗೌಟ್ನಲ್ಲಿದ್ದ ಆಟಗಾರರು ಮತ್ತು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದಂತಹ ಅಭಿಮಾನಿಗಳು ಖುಷಿಯಿಂದ ಕುಣಿದಾಡಲು ಪ್ರಾರಂಭಿಸಿದರು. ಆದರೆ, ಅಲ್ಲೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ ಇಬ್ಬರು ಚಿಕ್ಕ ಮಕ್ಕಳು ಧೋನಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದಕ್ಕಾಗಿ ಸಂತೋಷದಿಂದ ತಮ್ಮ ತಾಯಿಗೆ ಅಪ್ಪಿಕೊಂಡು ಅಳಲು ಪ್ರಾರಂಭಿಸಿದರು.
ಇದನ್ನೂ ಓದಿ:MS Love- ಎಂಎಸ್ ಧೋನಿಗೆ ಪತ್ನಿ ಕಣ್ಣೆದುರಲ್ಲೇ ಯುವತಿಯೊಬ್ಬಳು ಲವ್ ಪ್ರೊಪೋಸ್ ಮಾಡಿದ ಘಟನೆ
ಆ ಸಂತೋಷದಿಂದ ಇಟ್ಟಂತಹ ಕಣ್ಣೀರನ್ನು ವಿಡಿಯೋದಲ್ಲಿ ನೋಡಿದ ಧೋನಿ ತಕ್ಷಣವೇ ಪಂದ್ಯದ ಚೆಂಡಿನ ಮೇಲೆ ತಮ್ಮ ಆಟೋಗ್ರಾಫ್ ಮಾಡಿ ಆ ಮಕ್ಕಳಿರುವ ಗ್ಯಾಲರಿಗೆ ಕಡೆ ಹೋದರು. ಚೆಂಡನ್ನು ತಮ್ಮ ಪುಟ್ಟ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದರು. ತಮ್ಮ ನೆಚ್ಚಿನ ಆಟಗಾರ ಧೋನಿಯಿಂದ ಪಡೆದಂತಹ ಚೆಂಡು ಈ ಚಿಕ್ಕ ಮಕ್ಕಳಿಗೆ ತಮ್ಮ ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುವ ಕ್ಷಣವಾಗಿ ಬದಲಾಯಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ ಚೆಂಡನ್ನು ಕ್ಯಾಚ್ ಹಿಡಿದ ಆ ಮಕ್ಕಳು ತುಂಬಾ ಸಂತೋಷ ಪಟ್ಟರು.
ರೋಮಾಂಚಕ ಗೆಲುವಿನೊಂದಿಗೆ ಸಿಎಸ್ಕೆ ಮತ್ತೊಮ್ಮೆ ಐಪಿಎಲ್ನಲ್ಲಿ ಫೈನಲ್ ತಲುಪಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ. ಧೋನಿ ಕೇವಲ 6 ಎಸೆತಗಳಲ್ಲಿ ಔಟಾಗದೆ 18 ರನ್ಗಳನ್ನು ಗಳಿಸಿದರು. ಡಿಸಿ ವಿರುದ್ಧದ ಪಂದ್ಯದ ಕೊನೆಯ 11 ಎಸೆತಗಳಲ್ಲಿ 24 ರನ್ಗಳ ಅವಶ್ಯಕತೆ ಇದ್ದಾಗ, ಧೋನಿ ಬಂದು ಆವೇಶ್ ಖಾನ್ ಎಸೆತವನ್ನು ಸಿಕ್ಸ್ ಬಾರಿಸಿದರು.
ಇದನ್ನೂ ಓದಿ: Happy Birthday MS Dhoni: ಇಂದು ಧೋನಿ ಹುಟ್ಟುಹಬ್ಬ; 39ನೇ ವರ್ಷಕ್ಕೆ ಕಾಲಿಟ್ಟ ಕೂಲ್ ಕ್ಯಾಪ್ಟನ್
ಕೊನೆಯ ಓವರ್ನಲ್ಲಿ 13 ರನ್ಗಳ ಅಗತ್ಯವಿದ್ದಾಗ ಧೋನಿ ಟಾಮ್ ಕರ್ರನ್ ಓವರ್ನಲ್ಲಿ ಮೂರು ಬೌಂಡರಿಗಳನ್ನು ಹೊಡೆದರು. ಇಂಗ್ಲೆಂಡ್ ವೇಗಿ ಧೋನಿಗೆ ನಿಧಾನಗತಿಯ ಚೆಂಡುಗಳನ್ನು ಹಾಕಿದರೂ ಅವುಗಳನ್ನು ಅರಿತು ಬೌಂಡರಿಗೆ ಅಟ್ಟುವುದರ ಮೂಲಕ ಧೋನಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ