ಅಮ್ಮಾ.. ನಾನು GAY ಎಂದು ಮಗ ಹೇಳಿದಾಗ ಎದೆಯೊಡೆದಿತ್ತು, ಆದರೆ ನಾನೀಗ ಹೆಮ್ಮೆಯ ತಾಯಿ!

ಏನೋ ಒಂದು ಘಳಿಗೆ ಹುಡುಗರ ಮೇಲೆ ಅಕರ್ಷಣೆ ಅನಿಸಿರಬಹುದು. ಸ್ವಲ್ಪ ದಿನಗಳು ಅಷ್ಟೇ ಹೀಗೆಲ್ಲಾ. ಹುಡುಗಿಯರೊಂದಿಗೆ ಬೇರೆತರೆ ಎಲ್ಲವೂ ಸರಿ ಹೋಗುತ್ತೆ ಎಂದಿದ್ದರು ಆ ತಾಯಿ.

ಬಿಹುವಿನ ತಂದೆ-ತಾಯಿ

ಬಿಹುವಿನ ತಂದೆ-ತಾಯಿ

  • Share this:
ಭಾರತದಲ್ಲಿ ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್​​ ಹೇಳಿ ಮೂರು ವರ್ಷಗಳು ಕಳೆದಿದೆ. ಆದರೆ ಶತಮಾನಗಳಿಂದ ಸಲಿಂಗ ಕಾಮ ಅಥವಾ ಸಲಿಂಗ ಪ್ರೇಮ, ಬಾಂಧವ್ಯ, ಸಂಬಂಧವೆಂಬುವುದು ನಮ್ಮ ನೆಲೆದಲ್ಲಿದೆ. ಆದರೆ ನಾವು ಅದನ್ನು ಸಹಜ ಎಂದು ಒಪ್ಪಿಕೊಳ್ಳಲು ಸಮಯ ಸಾಕಷ್ಟು ಹಿಡಿಯಿತು. ಇಂದು ದೇಶದಲ್ಲಿ ಸಲಿಂಗಿಗಳಿಗೆ ಎಲ್ಲರಂತೆ ಬದುಕುವ, ತಮ್ಮ ಇಷ್ಟಾನುಸಾರ ಆಯ್ಕೆ ಮಾಡುವ ಹಕ್ಕು ಸಿಕ್ಕಿದೆ. ಆದರೆ 3 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಸಲಿಂಗ ಕಾಮ ಎಂಬುದು ಅಪರಾಧ, ಸಲಿಂಗಿಗಳೆಲ್ಲಾ ಅಪರಾಧಿಗಳು ಎನ್ನುತ್ತಿತ್ತು ಕಾನೂನು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಾಯಿಯೊಬ್ಬಳು ಎದೆಯೆತ್ತರಕ್ಕೆ ಬೆಳೆದ ತನ್ನ ಮಗ ಗೇ ಎಂಬುವುದನ್ನು ಒಪ್ಪಿಕೊಳ್ಳುವ ಭಾವನಾತ್ಮಕ ಕಥೆ ಇಲ್ಲಿದೆ.

3 ವರ್ಷಗಳ ಹಿಂದಿನ ಘಟನೆಯಿದು. ತಂದೆ-ತಾಯಿ, ಇಬ್ಬರು ಗಂಡು ಮಕ್ಕಳ ಸುಂದರ ಕುಟುಂಬ ಮುಂಬೈನಲ್ಲಿ ನೆಲೆಸಿತ್ತು. ತಂದೆ ಸರ್ಕಾರಿ ಉದ್ಯೋಗದಲ್ಲಿದ್ದರೆ ತಾಯಿ ಹೋಂ ಮೇಕರ್​. ಹರೆಯದ ಮಕ್ಕಳು ಹೊರ ಜಗತ್ತಿನಲ್ಲಿ ಏನೇ ಸಮಸ್ಯೆಗಳನ್ನು ಎದುರಿಸಿದರು ತಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ತಾಯಿ ಇಬ್ಬರು ಗಂಡು ಮಕ್ಕಳನ್ನು ಸ್ನೇಹಿತರಂತೆ ಕಾಣುತ್ತಿದ್ದರು. ಅದೊಂದು ದಿನ 2ನೇ ಮಗ 25 ವರ್ಷದ ಬಿಹು ಅಮ್ಮಾ.. ನಾನು ನಿನ್ನೊಂದಿಗೆ ಒಂದು ವಿಷಯ ಹೇಳಬೇಕಿದೆ ಅಂದಿದ್ದ. ಕಾಲೇಜ್​​ ಮುಗಿಸಿರುವ ಮಗ ಪ್ರೀತಿಯಲ್ಲಿ ಮಾಡುತ್ತಿರಬೇಕು, ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಾನೆ ಎಂದ ತಾಯಿ ಅಂದಾಜಿಸಿದ್ದರು.

ಆದರೆ ಬಿಹು ಸಾಕಷ್ಟು ಒದ್ದಾಟದ ಬಳಿಕ ಎದೆಯಿಂದ ಅಕ್ಷರಳನ್ನು ಹೆಕ್ಕಿ ತಾಯಿಯ ಮುಂದೆ ಸತ್ಯ ಬಿಚ್ಚಿಟ್ಟಿದ್ದ. ಅಮ್ಮಾ ನಾನು ಗೇ ಎಂದಿದ್ದ ಬಿಹು. ಅಚ್ಚರಿಗೊಂಡ ತಾಯಿ ಪಕ್ಕಾನಾ ಎಂದು ಪ್ರಶ್ನಿಸಿದ್ದರು. ಹೌದು ಎಂದು ಮಗ ಉತ್ತರಿಸಿದ್ದೇ ತಾಯಿಯ ಎದೆಯೊಡೆದಿತ್ತು. ಸಾಧ್ಯವೇ ಇಲ್ಲ ನಾನು ಹೆತ್ತ ಮಗ ಸಲಿಂಗಿ ಆಗಲು ಸಾಧ್ಯವೇ ಇಲ್ಲ ಎಂದಿತ್ತು ತಾಯಿಯ ಹೃದಯ. ರಾತ್ರಿ ಇಡೀ ನಿದ್ದೆ ಇಲ್ಲದೆ ಕಳೆದ ತಾಯಿ ಬೆಳಗ್ಗೆ ಮಗನ ಬಳಿ ಹೋಗಿ ಏನೋ ಒಂದು ಘಳಿಗೆ ಹಾಗೇ ಅನಿಸಿರಬಹುದು. ಸ್ವಲ್ಪ ದಿನಗಳು ಅಷ್ಟೇ ಹೀಗೆಲ್ಲಾ. ಹುಡುಗಿಯರೊಂದಿಗೆ ಬೇರೆತರೆ ಎಲ್ಲವೂ ಸರಿ ಹೋಗುತ್ತೆ ಎಂದಿದ್ದರು.

ಇದನ್ನೂ ಓದಿ: ಡ್ರೋನ್ ಹಾರಾಟದಿಂದ ಭಯಗೊಂಡ ಹಕ್ಕಿಗಳು: ಸಮುದ್ರ ತೀರಲ್ಲಿ 3,000 ಮೊಟ್ಟೆಗಳು ಅನಾಥ

ನಾನು ಹೇಗಿದ್ದೆನೋ ಹಾಗೆಯೇ ನನ್ನ ಸ್ವೀಕರಿಸಲು ಇಷ್ಟವಿಲ್ಲದಿದ್ದರೆ ಪರವಾಗಿಲ್ಲ. ಆದರೆ ನಾನು ಏನು ಎಂಬುವುದೇ ಸುಳ್ಳು ಅನ್ನಬೇಡ ಎಂದು ಹತಾಷೆಯಲ್ಲಿ ಹೇಳಿದ ಬಿಹು ಮುಂಬೈ ತೊರೆದು ಕೆಲಸಕ್ಕೆ ಹೊರ ರಾಜ್ಯಕ್ಕೆ ತೆರಳಿದ. ಮುನಿಸಿಕೊಂಡು ಹೋದ ಮಗನನ್ನು ಸಂಪರ್ಕಿಸಲು ತಾಯಿ ಯತ್ನಿಸಿದ್ದರು. ಗೆಳೆಯರ ಮೊಬೈಲ್​ಗೆ ಕರೆ ಮಾಡಿ ಮಗನೊಂದಿಗೆ ಮಾತನಾಡಿದ್ದರು. ಅಮ್ಮಾ ನೀನು ನನ್ನ ಸದಾ ಮಗ ಎಂದು ನೋಡುವಂತೆಯೇ ನೋಡು. ಸಲಿಂಗಿಯಾಗಿ ನೋಡಬೇಡ. ನಾನು ಏನೇ ಆಗಿದ್ದರೂ, ಆಗದಿದ್ದರು ನಿನ್ನ ಮಗ. ನಮ್ಮ ಸಂಬಂಧ ಎಂದಿನ ಮೊದಲ ಸ್ಥಾನದಲ್ಲಿರಬೇಕೆ ಹೊರತು ನನ್ನ ಲೈಂಗಿಕ ಆಯ್ಕೆಯಲ್ಲ ಎಂದಿದ್ದ.

ಮಗನ ಮಾತು ಕೇಳಿದ ತಾಯಿಗೆ ವಾಸ್ತವ ಅರ್ಥವಾಗುತ್ತಾ ಹೋಯಿತು. ದಿನ ಕಳೆದಂತೆ ಮನಸ್ಸಿನ ಒದ್ದಾಟ ಒಂದು ಸ್ಪಷ್ಟ ಚಿತ್ರಣ ಕೊಡಲು ಆರಂಭಿಸಿತು. ನನ್ನ ಮಗ, ನಾನು ಜನ್ಮ ಕೊಟ್ಟ ಮಗ ಗೇ ಎಂದೊಡನೇ ಏಕೆ ಎಲ್ಲವೂ ಬದಲಾಗಬೇಕು ಎಂದು ಅನಿಸತೊಡಗಿತು. ಆದರೆ ಸರ್ಕಾರಿ ಉದ್ಯೋಗದಲ್ಲಿರುವ ಗಂಡ ಹೇಗೆ ಸ್ವೀಕರಿಸುತ್ತಾರೆ. ದೊಡ್ಡ ಮಗನ ಮದುವೆ ಹೇಗೆ. ಸಲಿಂಗ ಕಾಮಿಯ ಅಮ್ಮಾ ನೀನು. ನೀನೇ ಸರಿಯಾಗಿ ಮಗನನ್ನು ಬೆಳೆಸಿಲ್ಲ ಎಂದು ಸಮಾಜ ದೂರತ್ತದೆಯೇ ಎಂಬ ಭಯ ಕಾಡಿತ್ತು ತಾಯಿಗೆ.

ಇದನ್ನೂ ಓದಿ: Parking Place: ಮನೆ, ಕಾರಿಗಿಂತ ಪಾರ್ಕಿಂಗ್ ಸ್ಥಳವೇ ದುಬಾರಿ; ದಾಖಲೆಯ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರ!

ಅದೇ ವೇಳೆಗೆ ಸಲಿಂಗ ಕಾಮ ಭಾರತದಲ್ಲಿ ಇನ್ಮುಂದೆ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿತ್ತು. ತಾಯಿಯ ಎಲ್ಲಾ ಅಂಜಿಕೆಗಳಿಗೂ ಆ ತೀರ್ಪು ಪೂರ್ಣವಿರಾಮ ಇಟ್ಟಿತ್ತು. ಸಲಿಂಗ ಕಾಮ ಅಪರಾಧವಲ್ಲ ಎಂದ ಮೇಲೆ ತಾನು ಅಪರಾಧಿಯ ತಾಯಿಯಲ್ಲ ಎಂದು ತಮಗೆ ತಾವೇ ಹೇಳಿಕೊಂಡಿದ್ದರು ಆ ತಾಯಿ. ಕೂಡಲೇ ಮಗನಿಗೆ ಕರೆ ಮಾಡಿ ನೀನು ನನ್ನ ಮಗ. ಏನೇ ಆಗಿರು, ಏನೇ ಆಗಬಯಸು ನೀನು ನನ್ನ ಮಗ ಎಂಬುದು ಯಾವುದರಿಂದಲೂ ಬದಲಾಗಲ್ಲ ಎಂದು ಹೇಳಿದ್ದರು. ನಿನ್ನ ಲೈಂಗಿಕ ಆಯ್ಕೆಯನ್ನು ಒಪ್ಪುತ್ತೇನೆ ಹಾಗೂ ನಾನು ಎಂದಿಗೂ ನಿನ್ನ ಬಗ್ಗೆ ಹೆಮ್ಮೆ ತಾಯಿ ಎಂದಿದ್ದರು.

ಬಿಹುವಿನ ಇಡೀ ಕುಟುಂಬ ಇಂದು ಆತನನ್ನು ಸಲಿಂಗಿಯಾಗಿಯೇ ಸ್ವೀಕರಿಸಿದೆ. ತಂದೆ-ತಾಯಿ, ಅಣ್ಣ ಇಂದು ಬಿಹುವಿನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಕುಟುಂಬದ ಬೆಂಬಲದಿಂದ ಬಿಹು ಬಹಿರಂಗವಾಗಿಯೂ ಸಲಿಂಗಿ ಎಂದೇ ಗುರುತಿಸಿಕೊಂಡಿದ್ದಾರೆ. ಇದೇ ರೀತಿ ತಮ್ಮ ಮಕ್ಕಳ ಲೈಂಗಿಕ ಆಯ್ಕೆಯನ್ನು ಒಪ್ಪಿಕೊಳ್ಳಲಾಗದೆ ಒದ್ದಾಡುತ್ತಿರುವ, ನೊಂದಿರುವ ಪೋಷಕರಿಗೆ ಬಿಹುವಿನ ತಾಯಿ ಇಂದು ಆದರ್ಶವಾಗಿದ್ದಾರೆ. ಅವರೊಂದಿಗೆ ತಮ್ಮ ಕಥೆಯನ್ನು ಹಂಚಿಕೊಂಡು ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ. ತಾಯಿ ಎಂದಿಗೂ ತಾಯಿ ಆಕೆಯಿಂತ ಮಿಗಿಲು ಯಾವುದು ಉಂಟು?
Published by:Kavya V
First published: