ತಾಯಿ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ಮಕ್ಕಳಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸಾಕು ಹಲವಾರು ರೀತಿಯ ಔಷಧಿಗಳನ್ನು ಮಾಡುತ್ತಾಳೆ. ಮಗುವಿನ ಜೀವಕ್ಕೆ ಅಪಾಯವಿದೆ ಎಂದರೆ ತನ್ನ ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಾಳೆ. ತಾಯಿ ಮಗನಿಗಾಗಿ ಹೋರಾಟ ಮಾಡಿದ ಕಥೆಗಳನ್ನು ಕೇಳಿರುತ್ತೇವೆ, ಆದರೆ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬಳು ಮಗನ ಪ್ರಾಣ ಉಳಿಸಲು ಸಿಂಹದೊಂದಿಗೆ ಹೋರಾಡಿರುವ ಘಟನೆ ನಡೆದಿದೆ.
ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬಳು ತನ್ನ ಐದು ವರ್ಷದ ಮಗನನ್ನು ಸಿಂಹ ದಾಳಿಯಿಂದ ರಕ್ಷಿಸಿದ್ದಕ್ಕಾಗಿ ಆಕೆಯನ್ನು ರಿಯಲ್ ಹೀರೋ ಎಂದು ಕರೆಯಲಾಗುತ್ತಿದೆ. ಕ್ಯಾಲಿಫೋರ್ನಿಯಾದ ಮೀನು ಮತ್ತು ವನ್ಯಜೀವಿ ಇಲಾಖೆಯ ಪ್ರಕಾರ, ಮಗು ಲಾಸ್ ಏಂಜಲೀಸ್ ಕೌಂಟಿಯ ಕ್ಯಾಲಬಾಸಾಸ್ ಬಳಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಸಿಂಹ ದಾಳಿ ಮಾಡಿದ್ದು, ಸುಮಾರು 45 ಗಜಗಳ ದೂರಕ್ಕೆ ಎಳೆದುಕೊಂಡು ಹೋಗಿದೆ.
ಬಾಲಕನ ಕಿರುಚಾಟದಿಂದ ಎಚ್ಚೆತ್ತ ಆತನ ತಾಯಿ ಹೊರಗೆ ಓಡಿ ಬಂದು ನೋಡಿದಾಗ ಮಗನನ್ನ ಸಿಂಹ ಎಳೆದೊಯ್ಯುತಿತ್ತು. ಇದನ್ನು ಕಂಡ ತಾಯಿ ಮಗನನ್ನ ರಕ್ಷಿಸುವ ಸಲುವಾಗಿ ಸಿಂಹದ ವಿರುದ್ಧ ಹೋರಾಡಿದ್ದಾರೆ. ಯಾವುದೇ ಶಸ್ತ್ರಗಳ ಸಹಾಯವಿಲ್ಲದೆ, ಕೈಗಳ ಮೂಲಕ ಸಿಂಹಕ್ಕೆ ಹೊಡೆಯಲು ಮತ್ತು ಗುದ್ದಲು ಆರಂಭಿಸಿದ್ದಾರೆ. ಸಿಂಹ ಮಗುವನ್ನು ಬಿಡುವ ತನಕ ತಾಯಿ ಹೋರಾಟ ನಡೆಸಿದ್ದಾರೆ.
ಆಟವಾಡುತ್ತಿದ್ದ ಮಗುವಿನ ಮೇಲೆ ಸಿಂಹ ದಾಳಿ ಮಾಡಿದಾಗ ಅದರಿಂದ ಉಂಟಾದ ಗದ್ದಲ ಮತ್ತು ಹುಡುಗನ ಕಿರುಚಾಟವು ಮನೆಯ ಒಳಗಿದ್ದ ತಾಯಿಗೆ ಕೇಳಿಸಿ, ಆಕೆ ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಮಗುವನ್ನು ಸಿಂಹದ ಹಿಡಿದಿರುವುದನ್ನ ನೋಡಿ, ತಕ್ಷಣವೇ ಸಿಂಹವನ್ನು ಹೊಡೆಯಲು ಪ್ರಾರಂಭಿಸಿದ್ದು, ಕೊನೆಗೂ ಕೈನಿಂದ ಮಗುವನ್ನು ರಕ್ಷಿಸಿ, ದೊಡ್ಡ ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕ್ಯಾಲಿಫೋರ್ನಿಯಾ ಮೀನು ಮತ್ತು ವನ್ಯಜೀವಿ ಇಲಾಖೆಯ ಕ್ಯಾಪ್ಟನ್ ಪ್ಯಾಟ್ರಿಕ್ ಫಾಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವೈರಲ್ ಆಯ್ತು ರೈಲು ಮತ್ತು ಬೃಹತ್ ಟ್ರಕ್ ನಡುವಿನ ಅಪಘಾತದ ವಿಡಿಯೋ- ನೋಡಿದ್ರೆ ಒಂದು ಕ್ಷಣ ಅಚ್ಚರಿಯಾಗತ್ತೆ
ಈ ತಾಯಿ ತನ್ನ ಮಗನ ಜೀವವನ್ನು ಉಳಿಸಿದ ರಿಯಲ್ ಹೀರೋ , ಅದರ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ತಾಯಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇನ್ನು ಸಿಂಹವು ಹುಡುಗನ ತಲೆ, ಕುತ್ತಿಗೆ ಮತ್ತು ದೇಹದ ಹಲವು ಕಡೆ ಗಾಯವನ್ನು ಮಾಡಿದ್ದು, ಬಾಲಕನ ಪೋಷಕರು ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಮಗು ಗಾಯಗಳಿಂದ ಚೇತರಿಸಿಕೊಳ್ಳುವ ತನಕ ಆಸ್ಪತ್ರೆಯಲ್ಲಿಯೇ ಇರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಗಾಯಗೊಂಡ ಆ ಹುಡುಗನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ, ಈಗ ಆತನ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಸ್ವಲ್ಪ ಭಯಭೀತನಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಂತರ ಈ ಪ್ರಾಣಿಯನ್ನು ವನ್ಯಜೀವಿ ಅಧಿಕಾರಿಗಳು ಗುಂಡಿಕ್ಕಿ ಹೊಡೆದುರುಳಿಸಿದ್ದಾರೆ. ಕ್ಯಾಲಿಫೋರ್ನಿಯಾದ ಮೀನು ಮತ್ತು ವನ್ಯಜೀವಿ ಇಲಾಖೆ (ಸಿಡಿಎಫ್ಡಬ್ಲ್ಯೂ) ಪ್ರಕಾರ ಘಟನಾ ಸ್ಥಳಕ್ಕೆ ಬಂದ ವನ್ಯಜೀವಿ ಅಧಿಕಾರಿಯು ಆಕ್ರಮಣಕಾರಿ ಸಿಂಹವನ್ನು ಪವರ್ತದ ಮೂಲೆಯಲ್ಲಿ ಕಂಡು ಮುಂದಿನ ದಿನಗಳಲ್ಲಿ ಬೇರೆಯವರ ಮೇಲೂ ದಾಳಿ ಮಾಡುವ ಸಾಧ್ಯತೆ ಇರುವ ಕಾರಣ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಡಿಎನ್ಎ ಪರೀಕ್ಷೆಯು ದಾಳಿ ಮಾಡಿರುವ ಸಿಂಹ ಇದೇ ಎಂದು ದೃಢಪಡಿಸಿದೆ.
ಅಲ್ಲದೇ ಕಳೆದ ತಿಂಗಳು, ಕೊಲೊರಾಡೋದಲ್ಲಿನ ಒಂದು ಮನೆಯಲ್ಲಿ ಸಿಂಹವೊಂದು ಡೆಕ್ ಅಡಿಯಲ್ಲಿ ಅಡಗಿರುವುದನ್ನ ಕಂಡ ಕುಟುಂಬದ ಸದಸ್ಯರು , ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಇಲಾಖೆ ಅಧಿಕಾರಿಗಳು ಸಿಂಹವನ್ನು ಸೆರೆ ಹಿಡಿದು, ಸ್ಥಳಾಂತರ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ