ವನ್ಯಪ್ರಪಂಚದಲ್ಲಿ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ವರ್ಷ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ 5 ಹೆಣ್ಣು ಚಿರತೆ ಮತ್ತು ಮೂರು ಗಂಡು ಚಿರತೆಗಳನ್ನು ಮಧ್ಯಪ್ರದೇಶಕ್ಕೆ (Madhya Pradesh) ಕರೆತರಲಾಗಿತ್ತು. ಇದರಲ್ಲಿನ ಒಂದು ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಆ ಮೂಲಕ ಭಾರತದಲ್ಲಿ ಚಿರತೆ ಸಂತತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಖುದ್ದು ಈ ವಿಷಯವನ್ನು ಪರಿಸರ ಸಚಿವ ಭೂಪೇಂದರ್ ಯಾದವ್ (Bhupender Yadav) ಅವರು ಬುಧವಾರ ಟ್ವಿಟರ್ ಮೂಲಕ ತಿಳಿಸಿದ್ದಾರೆ. ‘ಇಂದು ಅಮೃತ ಕಾಲದಲ್ಲಿ ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ (History) ಮಹತ್ವದ ಘಟನೆ, ಪ್ರಧಾನಿ ಶ್ರೀ ನರೇಂದ್ರಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ 2022, ಸೆಪ್ಟೆಂಬರ್ 17 ರಂದು ಭಾರತಕ್ಕೆ ಸ್ಥಳಾಂತರಗೊಂಡಿದ್ದ ಚಿರತೆಗಳಲ್ಲಿ ಒಂದು ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ’ ಎಂದು ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಚಿರತೆ ಮರಿಗಳ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಚಿರತೆ ಮರಿಗಳ ಕ್ಯೂಟ್ ವಿಡಿಯೋ ಪ್ರಾಣಿಪ್ರಿಯರನ್ನು ಸೆಳೆಯುತ್ತಿದ್ದು, ಅವುಗಳ ಬಗ್ಗೆ ಸಾಕಷ್ಟು ಪ್ರೀತಿ ಮತ್ತು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.
ಅಭಿನಂದನೆಗಳು ಪ್ರಾಜೆಕ್ಟ್ ಚೀತಾ ಟೀಂ
ಇದೇ ಸಮಯದಲ್ಲಿ ಪರಿಸರ ಸಚಿವರು ಪ್ರಾಜೆಕ್ಟ್ ಚೀತಾ ಟೀಂನ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಚೀತಾಗಳನ್ನು ಭಾರತಕ್ಕೆ ಕರೆತರುವಲ್ಲಿ ಅವರ ಶ್ರಮವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಈ ಹಿಂದೆ ಪರಿಸರ ವ್ಯವಸ್ಥೆಯಲ್ಲಿ ಉಂಟಾದ ಅಸಮತೋಲನವನ್ನು ಸರಿಪಡಿಸುವಲ್ಲಿ ಈ ತಂಡದ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
75 ಕೋಟಿ ಖರ್ಚಾಗಿದೆ
ಜಗತ್ತಿನಲ್ಲೇ ವೇಗವಾಗಿ ಓಡುವ ಪ್ರಾಣಿಯ ಸಂತತಿ ಭಾರತದಲ್ಲಿ ಕಡಿಮೆ ಇದ್ದು, ಅದನ್ನು ಹೆಚ್ಚಿಸುವ ಉದ್ದೇಶವನ್ನು ಪ್ರಾಜೆಕ್ಟ್ ಚೀತಾ ಹೊಂದಿದೆ. 1952 ರಿಂದಲೂ ಚಿರತೆಗಳ ಸಂತತಿ ಅಳಿಯುತ್ತಲೇ ಇದೆ. ಆದರೆ ಇದನ್ನು ಸರಿಪಡಿಸುವಲ್ಲಿ ನಿರ್ಲಕ್ಷ್ಯ ತೋರಿಸಲಾಗಿತ್ತು. ಆದರೆ ವನ್ಯಸಂಪತ್ತನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಪ್ರಾಜೆಕ್ಟ್ ಚೀತಾ ಯೋಜನೆಯನ್ನು ಪ್ರಧಾನಿ ಆರಂಭಿಸಿದರು.
ಈ ನಿಟ್ಟಿನಲ್ಲಿ ಮಧ್ಯಪ್ರದೇಶದ ಕುನೋದಲ್ಲಿನ ಕ್ವಾರಂಟೈನ್ ಆವರಣಕ್ಕೆ 5 ಹೆಣ್ಣು, ಮೂರು ಗಂಡು ಚಿರತೆಗಳ ಮೊದಲ ಬ್ಯಾಚ್ ಅನ್ನು ಬಿಡಲಾಯಿತು. ನವೆಂಬರ್ನಲ್ಲಿ ದೊಡ್ಡ ಆವರಣಗಳಿಗೆ ಚಿರತೆಯನ್ನು ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡಲಾಗಿತ್ತು. ಬಳಿಕ ಚಿರತೆಗಳು ಕಾಡಿಗೆ ಹೊಂದಿಕೊಂಡು ಬೇಟೆಯಾಡುವುದನ್ನು ಅಭ್ಯಾಸ ಮಾಡಿಕೊಂಡಿತ್ತು.
2009 ರಲ್ಲೇ ಆಫ್ರಿಕನ್ ಚಿರತೆ ಯೋಜನೆ ಇದ್ದರೂ ಕಾರ್ಯಗತವಾಗಿರಲಿಲ್ಲ. ಆ ಬಳಿಕ 75 ವರ್ಷಗಳ ನಂತರ ಭಾರತಕ್ಕೆ ಚಿರತೆಗಳು ಆಗಮಿಸಿವೆ. ಕುನೋ ಪರಿಸರವು ಇದಕ್ಕೆ ಅನುಕೂಲಕರವಾಗಿದೆ. ಅಲ್ಲಿನ ಗ್ರಾಮಸ್ಥರ ಸುರಕ್ಷತೆ ದೃಷ್ಟಿಯಿಂದ ಸುತ್ತಮುತ್ತಲಿನ 25 ಗ್ರಾಮಗಳನ್ನು ಖಾಲಿ ಮಾಡಿಸಲಾಗಿದೆ. ಚಿರತೆಗಳ ಸ್ಥಳಾಂತರಕ್ಕೆ 75 ಕೋಟಿ ಖರ್ಚು ಮಾಡಲಾಗಿದೆ.
ಸಾವನ್ನಪ್ಪಿದ್ದ ಸಾಶಾ
ಹೀಗೆ ಸ್ಥಳಾಂತರಿಸಿದ್ದ ಚಿರತೆಗಳಲ್ಲಿ ಒಂದಾದ ಸಾಶಾ ಮುತ್ರಪಿಂಡ ಸಂಬಂಧಿ ಕಾಯಿಲೆಯಿಂದ ಸೋಮವಾರ ಸಾವನ್ನಪ್ಪಿದೆ.
ಇನ್ನೂ ಎರಡನೇ ಬ್ಯಾಚ್ ಚಿರತೆಗಳನ್ನು ಫ್ರೆಬ್ರವರಿ 18 ರಂದು 12 ಚಿರತೆಗಳನ್ನು ದಕ್ಷಿಣ ಆಫ್ರಿಕಾದಿಂದ ಸ್ಥಳಾಂತರಿಸಲಾಯಿತು. ಹೆಚ್ಚುತ್ತಿರುವ ಬೇಟೆಯ ಮನಸ್ಥಿತಿ ಮತ್ತು ಚಿರತೆಗಳ ಆವಾಸಸ್ಥಾನದ ಕೊರತೆಯಿಂದ ಭಾರತದಲ್ಲಿ ಚಿರತೆಗಳ ಸಂತತಿ ಅಳಿವಿನ ಅಂಚಿಗೆ ತಲುಪಿದೆ.
1947 ರಲ್ಲಿ ಕೊನೆಯ ಚಿರತೆಯು ಛತ್ತೀಸ್ಗಡ್ನ ಕೊರಿಯಾ ಜಿಲ್ಲೆಯಲ್ಲಿ ಮೃತಪಟ್ಟಿತ್ತು. 1952 ರಲ್ಲಿ ಈ ಸಂತತಿ ಅಳಿವಿನ ಅಂಚಿಗೆ ತಲುಪಿದೆ ಎಂದು ಘೋಷಿಸಲಾಯಿತು.
Congratulations 🇮🇳
A momentous event in our wildlife conservation history during Amrit Kaal!
I am delighted to share that four cubs have been born to one of the cheetahs translocated to India on 17th September 2022, under the visionary leadership of PM Shri @narendramodi ji. pic.twitter.com/a1YXqi7kTt
— Bhupender Yadav (@byadavbjp) March 29, 2023
ಕುನೋ ಬಗ್ಗೆ ತಿಳಿದುಕೊಳ್ಳಿ
ಇನ್ನೂ ಕುನೋ ಭಾರತದ ರಾಷ್ಟ್ರೀಯ ಉದ್ಯಾನವನವಾಗಿದ್ದು, ಅನೇಕ ವೈವಿದ್ಯಮಯವಾದ ಪ್ರಾಣಿ, ಪಕ್ಷಿಗಳು ಇಲ್ಲಿವೆ. 2018 ರಲ್ಲಿ ಈ ಅಭಯಾರಣ್ಯಕ್ಕೆ ರಾಷ್ಟ್ರೀಯ ಉದ್ಯಾನವನ ಎಂದು ಹೆಸರಿಡಲಾಯ್ತು. 1981 ರಲ್ಲಿ ಸ್ಥಾಪಿಸಲಾದ ಈ ಅಭಯಾರಣ್ಯದಲ್ಲಿ 1990 ರಲ್ಲಿ ಏಷ್ಯಾಟಿಕ್ ಸಿಂಹ ಮರುಪರಿಚಯ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ