Tokyo Olympics: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ 26 ವರ್ಷದ ಕ್ರೀಡಾಪಟು ಮೀರಾಬಾಯಿ ಚಾನು ವೇಯ್ಟ್ಲಿಫ್ಟಿಂಗ್ನ 49 ಕೆಜಿ ತೂಕದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಮೀರಾಬಾಯಿ ಚಾನು ಗೆದ್ದ ಬೆಳ್ಳಿ ಪದಕವು ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ದಕ್ಕಿದ ಮೊದಲ ಪದಕವಾಗಿದೆ. ಮೊದಲ ದಿನವೇ ಪದಕ ಗೆದ್ದ ಹೊಸ ದಾಖಲೆಯನ್ನೂ ಚಾನು ತಮ್ಮ ಹೆಸರಿಗೆ ಬರೆದುಕೊಂಡದ್ದು ವಿಶೇಷವಾದ ಸಂಗತಿ.ಚಾನು ಮೊದಲನೆಯ ಹಂತದಲ್ಲಿ 87 ಕೆಜಿ ತೂಕವನ್ನು ಎತ್ತಿ ಮತ್ತು ನಂತರದ ಹಂತದಲ್ಲಿ ಸುಮಾರು 115 ಕೆಜಿ ತೂಕವನ್ನು ಯಾವುದೇ ಅಳುಕಿಲ್ಲದೆ ಎತ್ತುವ ಮೂಲಕ ಭಾರತಕ್ಕೆ ಬೆಳ್ಳಿ ಪದಕದ ಬಗ್ಗೆ ಭರವಸೆ ನೀಡಿದರು. ಚಾನು ಒಟ್ಟು 202 ಕೆಜಿ ತೂಕವನ್ನು ಎತ್ತುವುದರ ಮೂಲಕ ಬೆಳ್ಳಿ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಅವರು ಪದಕ ಗಳಿಸಿದ್ದಾರೆ ಎಂಬುದರ ಬಗ್ಗೆ ತಿಳಿದ ಕೂಡಲೇ ಅವರ ಮುಖದಲ್ಲಿ ಎಲ್ಲಿಲ್ಲದ ಖುಷಿ ಕಾಣುತ್ತಿತ್ತು. ಪದಕ ಗೆದ್ದಾಗ ಎಲ್ಲರ ಗಮನ ಗೆದ್ದ ಬೆಳ್ಳಿ ಪದಕದ ಮೇಲೆ ಇತ್ತು. ಆದರೆ ಕೆಲವರು ಆಕೆ ಧರಿಸಿದ ಕಿವಿಯೋಲೆಗಳನ್ನು ಗಮನಿಸಿದ್ದಾರೆ. ಆಕೆಯ ತಾಯಿ ಚಾನುಗೆ ಅದೃಷ್ಟ ಒಲಿದು ಬರಲಿ ಎಂದು ಹರಿಸಿ ಕಿವಿಯೋಲೆಗಳನ್ನು ಮಾಡಿಸಿ ಉಡುಗೊರೆಯಾಗಿ ಕೊಟ್ಟಿದ್ದರು.
ಚಾನು ಧರಿಸಿದ್ದ ಕಿವಿಯೋಲೆಗಳಿಂದಲೂ ಅವಳಿಗೆ ಅದೃಷ್ಟ ಒಲಿದು ಬಂದಿರಬಹುದೆಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚಾನು ಒಲಂಪಿಕ್ಸ್ನಲ್ಲಿ ಧರಿಸಿದ್ದ ಕಿವಿಯೋಲೆಯನ್ನು ಐದು ಒಲಿಂಪಿಕ್ಸ್ ರಿಂಗ್ಗಳನ್ನು ಪ್ರತಿನಿಧಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅವರ ಕಿವಿಯೋಲೆಗಳ ವಿನ್ಯಾಸವು ಐದು ಒಲಿಂಪಿಕ್ ರಿಂಗ್ ಗಳ ಆಕಾರದಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ. ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲಲು ಕಿವಿಯೋಲೆಯು ಅದೃಷ್ಟದ ಸಂಕೇತವಾಗಿದೆ ಎಂದು ಹೇಳಬಹುದಾಗಿದೆ.
ಐದು ವರ್ಷಗಳ ಹಿಂದೆ ತನ್ನ ಸ್ವಂತ ಆಭರಣಗಳನ್ನು ಮಾರಿ ತಾಯಿ ಮೀರಾಬಾಯಿಗೆ ಕಿವಿಯೋಲೆಯನ್ನು ಮಾಡಿಸಿ ಉಡುಗೊರೆಯಾಗಿ ನೀಡಿದ್ದರಂತೆ ಎಂದು ಹೇಳಲಾಗಿದೆ. ಕಿವಿಯೋಲೆಗಳು ಅದೃಷ್ಟ ತರುತ್ತವೆ ಎಂಬ ಭರವಸೆ ಚಾನುಗೆ ಇತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ, ಒಲಿಂಪಿಕ್ಸ್‌ನ ಮೊದಲ ದಿನದಂದು ಪದಕ ಗೆದ್ದ ಏಕೈಕ ಭಾರತೀಯ ಮೀರಾಬಾಯಿಗೆ ಆಕೆಯ ತಾಯಿ ನೀಡಿದ ಅದೃಷ್ಟದ ಕಿವಿಯೋಲೆ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದಾರಂತೆ.
ನಾನು ಟಿವಿಯಲ್ಲಿ ಕಿವಿಯೋಲೆಗಳನ್ನು ನೋಡಿದೆ. ರಿಯೋ ಒಲಿಂಪಿಕ್ಸ್‌ಗೂ ಮುಂಚೆಯೇ ನಾನು ಅವುಗಳನ್ನು 2016ರಲ್ಲಿ ಅವಳಿಗೆ ಕೊಟ್ಟಿದ್ದೆ. ನನ್ನ ಬಳಿ ಇದ್ದಂತಹ ಚಿನ್ನ ಮತ್ತು ಉಳಿತಾಯ ಮಾಡಿದ ಹಣವನ್ನು ಸೇರಿಸಿ ಈ ವಿಶಿಷ್ಟವಾದ ವಿನ್ಯಾಸದ ಕಿವಿಯೋಲೆಗಳನ್ನು ಮಾಡಿಸಿ ಚಾನುಗೆ ಉಡುಗೊರೆಯಾಗಿ ನೀಡಿದ್ದೆ, ಈ ಕಿವಿಯೋಲೆಗಳು ಆಕೆಗೆ ಅದೃಷ್ಟ ಮತ್ತು ಯಶಸ್ಸನ್ನು ತಂದು ಕೊಡುತ್ತದೆ ಎಂದು ನನಗೆ ಭರವಸೆ ಇತ್ತು ಎಂದು ಮೀರಾಬಾಯಿಯ ತಾಯಿ ಸೈಖೋಮ್ ಲೀಮಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ