ಸಾಮಾನ್ಯವಾಗಿ ಯಾರಾದರೂ ತಮ್ಮ ಕೆಲಸವನ್ನು ಕಳೆದುಕೊಂಡರೆ (Layoff), ಹೊಸ ಕೆಲಸದ ಹುಡುಕಾಟಕ್ಕೆ ತಮ್ಮ ರೆಸ್ಯೂಮೆಯನ್ನು (Resume) ಅನೇಕ ರೀತಿಯ ಉದ್ಯೋಗವಕಾಶಗಳನ್ನು ತಿಳಿಸುವ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ತಮಗೆ ಪರಿಚಯವಿರುವ ಜನರಿಗೆ ಯಾವುದಾದರೂ ಕೆಲಸ ಇದ್ದರೆ ಹೇಳಿ ಅಂತ ವಿನಂತಿಸಿಕೊಳ್ಳುತ್ತಾರೆ. ಇಲ್ಲಿಯೂ ಸಹ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬ ಇದೇ ರೀತಿ ಮಾಡಿದ್ದಾರೆ ನೋಡಿ. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ವಾಟ್ಸಾಪ್ ನ ಮಾತೃಸಂಸ್ಥೆಯಾದ ಮೆಟಾ (Meta Layoffs 2022) , ಕೆಲವು ದಿನಗಳ ಹಿಂದೆ ಸುಮಾರು 11,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತು. ಈ ಅಂಕಿ ಅಂಶ ನೋಡುತ್ತಿದ್ದರೆ, ಇದು ಕಂಪನಿಯಲ್ಲಿರುವ ಉದ್ಯೋಗಿಗಳಲ್ಲಿ 13 ಪ್ರತಿಶತದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಹೇಳಲಾಗುತ್ತಿದೆ.
ಮೆಟಾದಲ್ಲಿ ಕೆಲಸ ಕಳೆದುಕೊಂಡಿದ್ದಾರೆ ರಾಜು ಕದಮ್
ಕೆಲಸದಿಂದ ತೆಗೆದು ಹಾಕಿದ ನಂತರ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳು ಹೊಸ ಅವಕಾಶಗಳಿಗಾಗಿ ಹುಡುಕುತ್ತಿರುವ ಜನರ ಪೋಸ್ಟ್ ಗಳು ಸೇರಿದಂತೆ ವಿವಿಧ ಪೋಸ್ಟ್ ಗಳಿಂದ ತುಂಬಿ ತುಳುಕುತ್ತಿವೆ. ಲಿಂಕ್ಡ್ಇನ್ ಬಳಕೆದಾರರಾದ ರಾಜು ಕದಮ್ ಅವರ ಈ ಪೋಸ್ಟ್ ತುಂಬಾನೇ ಹರಿದಾಡುತ್ತಿದೆ ಅಂತ ಹೇಳಬಹುದು.
ರಾಜು ಕದಮ್ ಅವರನ್ನು ಮೆಟಾ ಕೆಲಸದಿಂದ ತೆಗೆದು ಹಾಕಿದ ನಂತರ ಹೊಸ ಕೆಲಸವನ್ನು ಹುಡುಕಲು ತನಗೆ ಸಹಾಯ ಮಾಡುವಂತೆ ನೆಟ್ಟಿಗರಿಗೆ ಕೋರಿದ್ದಾರೆ. ಇವರು ಹಂಚಿಕೊಂಡ ಪೋಸ್ಟ್ ನ ಬಗ್ಗೆ ನಂಬಲಸಾಧ್ಯವಾದ ಸಂಗತಿಯೆಂದರೆ, ಕದಮ್ ಅವರಿಗಾಗಿ ಹೊಸದೊಂದು ಉದ್ಯೋಗವನ್ನು ಹುಡುಕಿ ಕೊಡಲು ನೆಟ್ಟಿಗರು ಮುಂದಾಗುವುದಕ್ಕೆ ಪ್ರೇರೇಪಿಸಿತು.
ರಾಜು ಕದಮ್ ಪೋಸ್ಟ್ ನಲ್ಲಿ ಏನೆಲ್ಲಾ ಬರೆದಿದ್ದಾರೆ?
"ದುರದೃಷ್ಟವಶಾತ್, ಇಂದು ನಾನು ಮೆಟಾ ದಿಂದ ವಜಾಗೊಂಡ 11,000 ಉದ್ಯೋಗಿಗಳ ಭಾಗವಾಗಿದ್ದೇನೆ ಎಂಬ ದುಃಖದ ಸುದ್ದಿಯನ್ನು ನಾನು ಸ್ವೀಕರಿಸಿದೆ, ನಾನು ಮೆಟಾಗೆ ಸೇರಿದಾಗಿನಿಂದ ಎಲ್ಲಾ ವಲಯಗಳಲ್ಲಿಯೂ ಬಲವಾದ ಕಾರ್ಯಕ್ಷಮತೆಯನ್ನು ಹೊಂದಿದ್ದರಿಂದ ಭಾಗಶಃ ನನ್ನನ್ನು ಕೆಲಸದಿಂದ ಈ ರೀತಿಯಾಗಿ ತೆಗೆದು ಹಾಕುತ್ತಾರೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು 9 ತಿಂಗಳ ಹಿಂದೆ ಮೆಟಾದಲ್ಲಿ ಕೆಲಸ ಮಾಡಲು ಶುರು ಮಾಡಿದೆ, ಆದರೆ ಅದು ಇದ್ದಕ್ಕಿದ್ದಂತೆ ಈ ರೀತಿಯಾಗಿ ಕೊನೆಗೊಂಡಿತು" ಎಂದು ಅವರು ಬರೆದಿದ್ದಾರೆ. ಮುಂದಿನ ಕೆಲವು ಸಾಲುಗಳಲ್ಲಿ, ಅವರು ತಮ್ಮ ಕೆಲಸದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದು ಮತ್ತು ಕಂಪನಿಯಲ್ಲಿ ಕೆಲಸ ಮಾಡುವಾಗ ಕಲಿಯಲು ಸಹಾಯ ಮಾಡಿದ ಜನರಿಗೆ ಧನ್ಯವಾದವನ್ನು ಸಹ ಹೇಳಿದ್ದಾರೆ.
"ನಾನು ಎಚ್ 1ಬಿ ವೀಸಾದಲ್ಲಿದ್ದೇನೆ ಮತ್ತು ಯುಎಸ್ಎ ತೊರೆಯುವ ನನ್ನ ಸಮಯ ಇಂದು ಪ್ರಾರಂಭವಾಗಿದೆ. ನನಗೆ ಕೆಲಸ ಹುಡುಕಲು ಸಹಾಯ ಮಾಡಲು ನಾನು ಮೆಟಾದಲ್ಲಿನ ಎಲ್ಲಾ ನನ್ನ ಜೊತೆ ಕೆಲಸ ಮಾಡಿದ ಸಹದ್ಯೋಗಿಗಳಿಗೆ, ನನಗೆ ಪರಿಚಯವಿರುವವರಿಗೆ, ಲಿಂಕ್ಡ್ಇನ್ ಸಮುದಾಯವನ್ನು ಸಂಪರ್ಕಿಸುತ್ತಿದ್ದೇನೆ.
ಇಲ್ಲದಿದ್ದರೆ, ನಾನು ನನ್ನ ಮಕ್ಕಳೊಂದಿಗೆ ಯುಎಸ್ಎ ತೊರೆಯಬೇಕಾಗುತ್ತದೆ. ನಾನು 16 ವರ್ಷಗಳಿಂದ ಯುಎಸ್ಎನಲ್ಲಿದ್ದೇನೆ ಮತ್ತು 2008, 2015, 2020 ರಲ್ಲಿ ಅನೇಕ ರೀತಿಯ ಕೆಲಸದ ಸಂಕಷ್ಟಗಳನ್ನು ನೋಡಿದ್ದೇನೆ ಆದರೆ ನನ್ನ ಕೆಲಸವನ್ನು ಎಂದಿಗೂ ಕಳೆದುಕೊಂಡಿರಲಿಲ್ಲ” ಎಂದು ಹೇಳಿದರು.
“ನನ್ನ ಇಬ್ಬರು ಪುತ್ರರು ಯುಎಸ್ ನಾಗರಿಕರು ಮತ್ತು ಇದು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಯುಎಸ್ಎ ನಲ್ಲಿ ಯಶಸ್ವಿಯಾಗಲು ಅವರಿಗೆ ಉತ್ತಮ ಅವಕಾಶವನ್ನು ನೀಡಲು ನಾನು ನನ್ನ ಶಕ್ತಿಮೀರಿ ಏನು ಬೇಕಾದರೂ ಮಾಡುತ್ತೇನೆ. ಆದ್ದರಿಂದ, ನನಗೆ ಯುಎಸ್ಎ ಎಎಸ್ಎಪಿಯಲ್ಲಿ ಹೊಸ ಕೆಲಸದ ಅಗತ್ಯವಿದೆ. ನನಗೆ ಕೆಲಸ ಹುಡುಕಲು ಸಹಾಯ ಮಾಡಲು ನಿಮ್ಮನ್ನು ವಿನಂತಿಸಿಕೊಳ್ಳುತ್ತಿದ್ದೇನೆ. ಧನ್ಯವಾದಗಳು" ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ. ಅವರು ತಮ್ಮ ಸಿವಿ ಮತ್ತು ಎರಡು ಫೋಟೋಗಳ ಲಿಂಕ್ ನೊಂದಿಗೆ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.
ರಾಜು ಮಾಡಿಕೊಂಡ ವಿನಂತಿಗೆ ಸ್ಪಂದಿಸಿದ ಉದ್ಯೋಗದಾತರು
ಸುಮಾರು ಐದು ದಿನಗಳ ಹಿಂದೆ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಜನರು ವಿವಿಧ ಕಾಮೆಂಟ್ ಗಳನ್ನು ಹಾಕಿದ್ದಾರೆ. ಕೆಲವರು ಅವರನ್ನು ಇಂತಹ ಸಮಯದಲ್ಲಿ ಆತ್ಮವಿಶ್ವಾಸದಿಂದಿರಲು ಹೇಳಿದರೆ, ಇನ್ನೂ ಅನೇಕರು ಉದ್ಯೋಗಾವಕಾಶಗಳಿಗಾಗಿ ಲಿಂಕ್ ಗಳನ್ನು ಹಂಚಿಕೊಂಡಿದ್ದಾರೆ. ಉದ್ಯೋಗಾವಕಾಶಗಳ ಬಗ್ಗೆ ಮಾತನಾಡಲು ಕೆಲವು ಉದ್ಯೋಗದಾತರು ಸಹ ಅವರನ್ನು ಸಂಪರ್ಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ