ಈಗ ಶಾಲೆಗಳಿಗೆಲ್ಲಾ ಬೇಸಿಗೆ ರಜೆಯ (Summer Holiday) ಸಂದರ್ಭ. ಮಕ್ಕಳೆಲ್ಲಾ, ತಮ್ಮ ಅಜ್ಜ-ಅಜ್ಜಿ ಮನೆಗೋ, ನೆಂಟರಿಷ್ಟರ ಮನೆಗೋ, ಅಥವಾ ಬೇಸಿಗೆ ಶಿಬಿರದಲ್ಲೋ ರಜೆಯ ಮಜೆಯ ಸವಿಯನ್ನು ಅನುಭವಿಸುತ್ತಿರುವ ಸಮಯ. ಆದರೆ, ಇಲ್ಲೊಬ್ಬ ಪುಟ್ಟ ಪೋರಿ ಪ್ರವಾಸಿ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಾ, ಪ್ರವಾಸಿಗರಿಗೆ ಮಾಹಿತಿ ಉಣಬಡಿಸುತ್ತಿದ್ದಾಳೆ. ನೀಲೇಶ್ವರಂನ ಸೇಂಟ್ ಪೀಟರ್ಸ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ಎಸ್ ವೇದಾಳಿಗೆ ಪ್ರವಾಸಿಗರನ್ನು ಹೇಗೆ ರಂಜಿಸಬೇಕು ಎಂಬುದು ತಿಳಿದಿದೆ. ‘ಆತಿಥ್ಯ’ ವೆಂಬುದು ಈಕೆಯ ರಕ್ತದಲ್ಲೇ ಇದೆ ಎನ್ನಬಹುದು. ಇವಳಿಗೆ ಇಂಗ್ಲಿಷ್ ಭಾಷೆಯ ( English Language) ಮೇಲಿರುವ ಹಿಡಿತ ಮತ್ತು ನೆರೆಹೊರೆಯ ಐತಿಹಾಸಿಕ ಸ್ಥಳಗಳ ಬಗೆಗಿನ ಜ್ಞಾನ ಕಂಡು ಪ್ರವಾಸಿಗರೇ ಬೆರಗಾಗಿದ್ದಾರೆ.
ಮಕ್ಕಳೆಲ್ಲಾ ಬೇಸಿಗೆಯ ರಜಾದಿನಗಳಲ್ಲಿ ಅಲ್ಲಿಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿರುವಾಗ ವೇದಾ, ತಮ್ಮ ಸ್ಥಳಗಳಿಗೆ ಬರುವ ಪ್ರವಾಸಿಗರನ್ನು ಸುಂದರವಾದ ಜಾಗಗಳನ್ನು ತೋರಿಸಲು ಕರೆದುಕೊಂಡು ಹೋಗುವುದರಲ್ಲಿ ನಿರತಳಾಗಿದ್ದಾಳೆ. ಈ ಪುಟ್ಟ ಹುಡುಗಿಯ ಬಾಯಿಯಿಂದ ಮಾಹಿತಿ ಕೇಳಲು ಪ್ರವಾಸಿಗರಿಗೂ ಸಹ ಅಷ್ಟೇ ಖುಷಿ .
ಪ್ರವಾಸಿ ಮಾರ್ಗದರ್ಶಿಯಾಗಲು ಆಸಕ್ತಿ ಮೂಡಿದ್ದು ಹೇಗೆ?
ವೇದಾಳ ಪೋಷಕರು ಸಾಕಷ್ಟು ವರ್ಷಗಳಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ತಂದೆ ಕೆಕೆ ಸಾಸಿವರ್ಕ್ಸ್ ಅವರು ಪಲೈವೊಳಿಂಜವಲಪ್ಪುವಿನ ಹರ್ಮಿಟೇಜ್ ಬೀಚ್ ರೆಸಾರ್ಟ್‌ನಲ್ಲಿ ವ್ಯವಸ್ಥಾಪಕರಾಗಿದ್ದರು. ಆಕೆಯ ತಾಯಿ ಎನ್‌ವಿ ಸುನಿತಾ ಅನಂತನಪಲ್ಲದ ವೊಳಿಂಜವಲಪ್ಪುವಿನ ಸಮೀಪವಿರುವ ಹೋಮ್‌ಸ್ಟೇನಲ್ಲಿ ಕೇರ್‌ಟೇಕರ್ ಆಗಿದ್ದಾರೆ.
ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರು ಇಲ್ಲಿ ಸ್ಟೇ ಆಗಲು ಬಂದಾಗ ಅಂತಹ ವಿದೇಶಿಯರೊಂದಿಗೆ ವೇದಾ ಆಗಾಗ್ಗೆ ಹೋಗುತ್ತಿರುತ್ತಾಳೆ. ಕಡಲತೀರಕ್ಕೆ ಹೋಗುವುದು, ಹೌಸ್‌ಬೋಟ್ ಸವಾರಿ ಮಾಡುವುದು ಹಾಗೂ ದೇವಾಲಯದ ಉತ್ಸವಗಳಲ್ಲಿ ಭಾಗವಹಿಸುವುದೆಂದರೆ ಈಕೆಗೆ ಎಲ್ಲಿಲ್ಲದ ಖುಷಿ.
ತನ್ನ ಪೋಷಕರಿಂದ ಪಡೆದ ಜ್ಞಾನ, ಹಾಗೂ ಪ್ರವಾಸಿಗರೊಂದಿಗೆ ಸುತ್ತಾಡುತ್ತಾ ತನ್ನ ಸುತ್ತಲಿನ ಸ್ಥಳಗಳ ಬಗ್ಗೆ ಮಾಹಿತಿ ಗ್ರಹಿಸಿದ ಈಕೆ ವಿದೇಶಿಗರಾದ ಪ್ರವಾಸಿಗರು ಕೇಳುವ ಪ್ರಶ್ನೆಗಳಿಗೆ ಚಕಾಚಕ್ ಉತ್ತರಿಸುತ್ತಾಳೆ.
ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದು ವೇದಾಳ ಪ್ಲಸ್ ಪಾಯಿಂಟ್. ಇವಳಿಂದ ಇಲ್ಲಿನ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ತಿಳಿಯಲು ವಿದೇಶಿ ಪ್ರವಾಸಿಗರು ಸಹ ಆಸಕ್ತಿ ತೋರುತ್ತಾರೆ. “ಹೆಚ್ಚಿನ ವಿದೇಶಿ ಪ್ರವಾಸಿಗರು ಇಲ್ಲಿ ಕಂಡುಬರುವ ಕೃಷಿ ಮತ್ತು ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ” ಎಂಬುದು ವೇದ ಗಮನಿಸಿರುವ ಅಂಶ.
ಇದನ್ನೂ ಓದಿ: ಈ ಒಂದು ದೋಸೆ ತಿನ್ನೋಕೆ 6 ಜನ ಬೇಕಂತೆ, ದುಡ್ಡೇನು ಕಮ್ಮಿ ಇಲ್ಲ
ಈ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು ಮತ್ತು ಹೂವುಗಳ ಬಗ್ಗೆ ಅವರು ಆಗಾಗ್ಗೆ ಅವಳನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಇವಳ ಒಡನಾಟವನ್ನು ಆನಂದಿಸಿದವರು ಈ 'ಪುಟ್ಟ' ಪ್ರವಾಸಿ ಮಾರ್ಗದರ್ಶಿಯನ್ನು ಹೊಗಳುವುದನ್ನು ಮರೆಯುವುದಿಲ್ಲ.
“ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಯ ಪ್ರವಾಸಿಗರು ಕೇವಲ 'ತೆಯ್ಯಂ' ವೀಕ್ಷಿಸಲು ಇಲ್ಲಿಗೆ ಬಂದಾಗ ಆಶ್ಚರ್ಯವಾಯಿತು" ಎಂದು ವೇದ ಅಚ್ಚರಿ ವ್ಯಕ್ತಪಡಿಸುತ್ತಾಳೆ.
ಅತಿ ಚಿಕ್ಕ ವಯಸ್ಸಿನಲ್ಲೇ ಎಲ್ಲರೂ ಬೆಕ್ಕಸ ಬೆರಗಾಗುವಂತೆ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಈಕೆಗೆ ಈ ಕೆಲಸ ಅತಿ ಪ್ರಿಯವಾದುದು. ಹಾಗಾಗಿಯೇ, ತನ್ನ ರಜಾದಿನಗಳನ್ನು ವ್ಯರ್ಥ ಮಾಡದೇ ಬಹಳಷ್ಟು ಖುಷಿಯಿಂದಲೇ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಳೆ.
ಈ ಕೆಲಸದಲ್ಲಿ ನನಗೆ ಖುಷಿಯಿದೆ
“ನನಗೆ ಈ ಕೆಲಸದಲ್ಲಿ ಸಾಕಷ್ಟು ಖುಷಿ ಇದೆ. ಪ್ರತಿ ದಿನ ಪ್ರವಾಸಿಗರಿಗೆ ಮಾಹಿತಿ ನೀಡುತ್ತಲೇ ನಾನು ಸಹ ಹೊಸ ವಿಷಯಗಳನ್ನು ಕಲಿಯುತ್ತಿರುತ್ತೇನೆ. ಶಾಲೆಯಲ್ಲಿ ಕಲಿಯಲಾಗದ ಎಷ್ಟೋ ಹೊಸ ವಿಷಯಗಳನ್ನು ಇಲ್ಲಿ ಕಲಿಯಲು ಸಾಧ್ಯವಾಗಿದೆ” ಎಂಬುದು ಈಕೆಯ ಅಂಬೋಣ. ನೀವು ಕಾಸರಗೋಡಿಗೆ ಪ್ರವಾಸಕ್ಕೆ ಹೋದಲ್ಲಿ, ಈಕೆಯನ್ನು ಭೇಟಿಯಾಗಲು ಮರೆಯದಿರಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ