200 ಹದ್ದುಗಳಿಗೆ ಪ್ರತಿನಿತ್ಯ ಆಹಾರ ಕೊಡುವ ಬೆಂಗಳೂರಿನ ಮಹಿಳೆ, ಈಕೆಯ ದಿನಚರಿಯೇ ಅಚ್ಚರಿ ಹುಟ್ಟಿಸುತ್ತದೆ !

ಪಾರಿವಾಳ, ಗುಬ್ಬಿಗಳಿಗೆಲ್ಲಾ ಆಹಾರ ಹಾಕುವವರು ಸಾಕಷ್ಟು ಜನರಿದ್ದಾರೆ. ಆದರೆ ಬೆಂಗಳೂರಿನಲ್ಲಿ ಅನೇಕ ಕಡೆ ಹದ್ದುಗಳು ಕಸದ ರಾಶಿಯ ನಡುವೆ ಆಹಾರಕ್ಕಾಗಿ ತಡಕಾಡುತ್ತಾ ಇರುತ್ತವೆ. ಮೂಲತಃ ಮಾಂಸಾಹಾರಿಗಳಾದ ಇವು ಆಹಾರ ಸಿಗದೆ ಅನ್ನ ತಿನ್ನುವ ನಿದರ್ಶನಗಳೂ ಸಾಕಷ್ಟಿವೆ. ಇಂಥಾ ಹದ್ದುಗಳಿಗೆ ಆಹಾರ ಹಾಕುವ ಈಕೆಯ ಹೆಸರು ಮರ್ಲಿನ್.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ದಿನಾ ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಬೆಂಗಳೂರಿನ ಬಿಟಿಎಂ ಲೇಔಟಿನ ಅರಕೆರೆಯ ಅದೊಂದು ರಸ್ತೆಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿಬಿಡುತ್ತೆ. ಎಲ್ಲೆಲ್ಲಿಂದಲೋ ಹಾರಿ ಬರೋ ನಾನಾ ಬಗೆಯ ಹದ್ದುಗಳು ಆಕಾಶಕ್ಕೇ ಅಡ್ಡವಾದಂತೆ ಗಸ್ತು ಹೊಡೆಯುತ್ತಿರುತ್ತವೆ. ಇಷ್ಟಗಲ ಹರಡಿರುವ ಅವುಗಳ ರೆಕ್ಕೆ, ತೀಕ್ಷ್ಣವಾದ ಕಣ್ಣುಗಳು ಆಕೆಯನ್ನು ಹುಡುಕುತ್ತಾ ಇರುತ್ತವೆ. ಆಕೆ ಬರುವವರಗೆ ತಾಳ್ಮೆಯಿಂದ ಎಲ್ಲವೂ ಕಾಯುತ್ತಾ ಸುತ್ತಲಿನ ಕಟ್ಟಡಗಳ ಮೇಲೆ ಸಾಲಾಗಿ ಶಿಸ್ತಿನಿಂದ ಕುಳಿತಿರುತ್ತವೆ.

ಆಗ ಬರುತ್ತಾಳೆ ಆಕೆ... ಕೈಯಲ್ಲೊಂದು ಚೀಲ ಹಿಡಿದು ನಿಧಾನಕ್ಕೆ ರಸ್ತೆಯ ಒಂದು ಬದಿಯಲ್ಲಿ ನಡೆದುಕೊಂಡು ಬರುತ್ತಾಳೆ.. ಅವಳಿಗೆ ಗೊತ್ತು... ತನಗಾಗೇ ನೂರಾರು ಹದ್ದುಗಳು ಹಸಿದುಕೊಂಡು ಕಾಯುತ್ತಾ ಇರುತ್ತವೆ ಎಂದು. ಇದು ಮರ್ಲಿನ್ ಎಂಬ ಕರುಣಾಮಯಿಯ ವಿಚಿತ್ರ ವ್ಯಾಮೋಹ.

ಪಾರಿವಾಳ, ಗುಬ್ಬಿಗಳಿಗೆಲ್ಲಾ ಆಹಾರ ಹಾಕುವವರು ಸಾಕಷ್ಟು ಜನರಿದ್ದಾರೆ. ಆದರೆ ಬೆಂಗಳೂರಿನಲ್ಲಿ ಅನೇಕ ಕಡೆ ಹದ್ದುಗಳು ಕಸದ ರಾಶಿಯ ನಡುವೆ ಆಹಾರಕ್ಕಾಗಿ ತಡಕಾಡುತ್ತಾ ಇರುತ್ತವೆ. ಮೂಲತಃ ಮಾಂಸಾಹಾರಿಗಳಾದ ಇವು ಆಹಾರ ಸಿಗದೆ ಅನ್ನ ತಿನ್ನುವ ನಿದರ್ಶನಗಳೂ ಸಾಕಷ್ಟಿವೆ. ಇಂಥಾ ಹದ್ದುಗಳಿಗೆ ಆಹಾರ ಹಾಕುವ ಈಕೆಯ ಹೆಸರು ಮರ್ಲಿನ್.

ಚಿಕನ್ ಸ್ಟಾಲ್ ಗಳಿಂದ ಅವರು ಬಿಸಾಕುವ ಕೋಳಿಯ ತಲೆ ಮತ್ತು ಕಾಲುಗಳನ್ನು ಈಕೆ ಸಂಗ್ರಹಿಸಿ ತೆಗೆದುಕೊಂಡು ಹೋಗ್ತಾರೆ. ನಂತರ ಅವುಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಬೆಳಗ್ಗೆಯೇ ಚೀಲದಲ್ಲಿ ತುಂಬಿಸಿ ತರುತ್ತಾರೆ. ಆಕೆ ದೂರದಲ್ಲಿ ಬರುತ್ತಿರುವಾಗಲೇ ಹದ್ದುಗಳು ಕಾತರತೆಯಿಂದ ಕಾಯುತ್ತಾ ಇರುತ್ತವೆ. ತಂದ ಆಹಾರವನ್ನು ಆಕೆ ಒಂದು ಬದಿಯಲ್ಲಿ ಹಾಕಿಬಿಡ್ತಾರೆ.. ಆಗ ಶುರು ನೋಡಿ ಆಟ...

ದೈತ್ಯಾಕಾರದ ಹದ್ದುಗಳು ಒಂದೊಂದಾಗಿ ಹಾರಿ ಬರುತ್ತವೆ. ಕಣ್ಣು ಮುಚ್ಚಿ ಬಿಡುವುದರೊಳಗೆ ಆಗಸದಿಂದ ನೆಲದ ಕಡೆ ಸಲೀಸಾಗಿ ಜಾರಿ ಕ್ಷಣಾರ್ಧದಲ್ಲಿ ಕಾಲಿನಿಂದ ಮಾಂಸದ ತುಂಡನ್ನು ಹಿಡಿದು ಹಾರಿ ಹೋಗುತ್ತವೆ. ಒಂದರ ಹಿಂದೆ ಒಂದರಂತೆ ನೂರಾರು ಹದ್ದುಗಳು ಕೆಲವೇ ನಿಮಿಷಗಳಲ್ಲಿ ಮಾಂಸದ ರಾಶಿಯನ್ನು ಖಾಲಿ ಮಾಡಿಬಿಡುತ್ತವೆ.

ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ತನಗಾಗೇ ಬಾಲ ಅಲ್ಲಾಡಿಸುತ್ತಾ ಕಾಯುತ್ತಿರುವ ಬೀದಿ ನಾಯಿಗಳಿಗೆ ಬಿಸ್ಕತ್, ಬ್ರೆಡ್​ಗಳನ್ನು ಹಾಕಿ ಅವುಗಳ ಮೈದಡವಿ ಮಾತನಾಡಿಸಿ ಸಂತೃಪ್ತಿಯಿಂದ ಮನೆಗೆ ಮರಳುತ್ತಾರೆ. ಅವುಗಳ ಪಾಲಿಗೆ ಈಕೆ ಅನ್ನದಾತೆ, ಇದು ಆಕೆಗೆ 20 ವರ್ಷಗಳ ನಿರಂತರ ಕಾಯಕ. ದೇವರು ನನಗೆ ಈ ಕೆಲಸ ಮಾಡಲು ಪ್ರೇರಣೆ ನೀಡಿದ್ದಾನೆ, ಅದಕ್ಕಾಗೇ ಮಾಡ್ತಿದ್ದೇನೆ ಎನ್ನುತ್ತಾರೆ ಮರ್ಲಿನ್. ಈ ಎಲ್ಲಾ ಪ್ರಾಣಿ ಪಕ್ಷಿಗಳ ಹಾರೈಕೆಯಿಂದಲೇ ಇಡೀ ಪ್ರದೇಶ ಅಭಿವೃದ್ಧಿಯಾಗಿದೆ ಎನ್ನುವ ನಂಬಿಕೆ ಇವರದ್ದು.

ಯಾವುದೇ ರೀತಿಯ ಪ್ರಚಾರ ಬಯಸದ ಈಕೆಗೆ ವಿರೋಧವೇನೂ ಕಡಿಮೆ ಇಲ್ಲ. ಅನೇಕ ಸ್ಥಳೀಯರ ವಿರೋಧದ ನಡುವೆಯೂ ಇವರ ನಿಸ್ವಾರ್ಥ ಸೇವೆ ಮುಂದುವರೆದಿದೆ. ಕೆಲವರಂತೂ ಮಾಂಸದ ತುಂಡುಗಳಿಂದ ಎಲ್ಲೆಡೆ ಗಲೀಜಾಗುತ್ತದೆ ಎಂದು ಇವರನ್ನು ಓಡಿಸೋ ಪ್ರಯತ್ನವನ್ನೂ ಮಾಡಿದ್ದರಂತೆ. ಆದ್ರೆ ಇವರ ಈ ಕೆಲಸ ನೋಡಿ ಸ್ಥಳೀಯರಾದ ಕಿಶೋರ್ ಕುಟುಂಬಸ್ಥರು ತಮ್ಮ ಮನೆಯ ಮುಂದಿನ ಸ್ಥಳದಲ್ಲಿ ಹದ್ದುಗಳಿಗೆ ಆಹಾರ ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ.

ಯಾರ ಬಳಿಯೂ ಇದಕ್ಕೆ ಸಹಾಯ ಕೇಳದ, ತಾನೇ ನಡೆಸುವ ನಿತ್ಯ ಸೇವೆ ಎಂದೇ ಭಾವಿಸಿದ್ದಾರೆ. ಇದಕ್ಕಾಗಿ ಕಳೆದ 20 ವರ್ಷಗಳಿಂದ ಮರ್ಲಿನ್ ಬೇರೆ ಊರಿಗೂ ಪ್ರಯಾಣಿಸಿಲ್ಲ. ಮಳೆ, ಬಿಸಿಲು, ಚಳಿ, ಕೋವಿಡ್ ಯಾವ ಸಂದರ್ಭದಲ್ಲೂ ಮರ್ಲಿನ್ ಈ ಕೆಲಸ ನಿಲ್ಲಿಸಿಲ್ಲ.
Published by:Soumya KN
First published: