ಪ್ರಿಯತಮೆ(Sweetheart)ಯ ಬಳಿ ಸಾಕುಪ್ರಾಣಿ(Pet) ಇದ್ದರೆ, ಆಕೆಯ ಸಂತೋಷಕ್ಕಾಗಿ ತಮಗಿಷ್ಟವಿರಲಿ ಬಿಡಲಿ ಪ್ರೇಮಿ ಅದನ್ನು ಮುದ್ದು ಮಾಡುವುದುಂಟು. ಇನ್ನು ಅದನ್ನು ಎದುರು ಹಾಕಿಕೊಳ್ಳುವ ಧೈರ್ಯವನ್ನಂತೂ ಯಾರೂ ಮಾಡಲಿಕ್ಕಿಲ್ಲ. ಆದರೆ ಇಲ್ಲೊಬ್ಬ ಭೂಪ, ತನ್ನ ಮನದನ್ನೆಯ ಸಾಕು ಪ್ರಾಣಿ ಅರಚುತ್ತದೆ , ಪರಚುತ್ತದೆ ಎಂಬ ಸಿಟ್ಟಿಗೆ(Annoyed), ಅದನ್ನು ಅದಲು ಬದಲು(Exchange) ಮಾಡುವ ಸಾಹಸಕ್ಕೆ ಕೈ ಹಾಕಿದ್ದು ಮಾತ್ರವಲ್ಲ, ಆಕೆಯನ್ನು ಮದುವೆಯಾದ ನಂತರವೂ ಆ ವಿಷಯವನ್ನು ಬಾಯ್ಬಿಡದೆ ಮಳ್ಳನಂತಿದ್ದಾನೆ. ವರ್ಷಗಳಿಂದ ಆ ಗುಟ್ಟನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಆಜೀರ್ಣವಾಯಿತೋ ಏನೋ, ಈಗ ಸಾಮಾಜಿಕ ಮಾಧ್ಯಮದ ಪೋಸ್ಟ್ ಒಂದರಲ್ಲಿ ಗುಟ್ಟನ್ನು ಬಿಚ್ಚಿಟ್ಟಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಭೂಪ!
“6 ವರ್ಷಗಳ ಹಿಂದೆ, ನನ್ನ ಆಗಿನ ಗೆಳತಿ, ಈಗಿನ ಪತ್ನಿಯ ಬೆಕ್ಕನ್ನು ಅದೇ ರೀತಿ ಕಾಣುವ ಮತ್ತೊಂದು ಬೆಕ್ಕಿನೊಂದಿಗೆ ಬದಲಾಯಿಸಿದೆ. ಅವಳ ಬಳಿ ಸಂಪೂರ್ಣ ಕಪ್ಪು ಬಣ್ಣದ ಆಕ್ರಮಣಶೀಲ ಬೆಕ್ಕು ಇತ್ತು. ಅದು ಎಲ್ಲರಿಗೂ ಪರಚುತ್ತಿತ್ತು ಎಂದು ಆತ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ.“ನನ್ನ ಹೆಂಡತಿ ಈ ಹಿಂದೆ ಗೆಳತಿಯಾಗಿದ್ದಾಗ, ಒಂದು ವಾರ ಆಕೆ ತನ್ನ ಕುಟುಂಬದವರನ್ನು ಕಾಣಲು ಮನೆಯಿಂದ ಹೊರಗೆ ಹೋಗಿದ್ದಳು ಮತ್ತು ಆಕೆಯ ಅಪಾರ್ಟ್‍ಮೆಂಟ್‍ಗೆ ಹೋಗಿ , ಬೆಕ್ಕಿಗೆ ಊಟ ನೀಡಬೇಕಿತ್ತು” ಎಂದು ಆತ ಹೇಳಿದ್ದಾನೆ.
ಇದನ್ನು ಓದಿ: Blue Whale ಒಂದು ದಿನದಲ್ಲಿ ಎಷ್ಟು ಆಹಾರ ಸೇವಿಸುತ್ತದೆ? ಅಧ್ಯಯನಗಳು ಏನು ಹೇಳುತ್ತವೆ?
ಪರಚುತ್ತಿತ್ತು ಎಂದು ಬೆಕ್ಕನ್ನೇ ಬದಲಾಯಿಸಿಬಿಟ್ಟ
ಹೀಗೆ ಮೊದಲನೇ ದಿನ ಊಟ ನೀಡಲು ಅಪಾರ್ಟ್‍ಮೆಂಟ್‍ಗೆ ಹೋದಾಗ ಬೆಕ್ಕು ಪರಚಿದೆ, ಆಗ ಬೆಕ್ಕಿನ ಮುಂದೆ ತಮಾಷೆಯಾಗಿ, ಇನ್ನೊಮ್ಮೆ ಹೀಗೆ ಪರಚಿದರೆ ನಿನ್ನನ್ನೆ ಬದಲಾಯಿಸಿ ಬಿಡುತ್ತೇನೆ ಎಂದಿದ್ದ. ಆದರೆ ಬೆಕ್ಕು ಈತನನ್ನು ಕಂಡಾಗೆಲ್ಲ ಪರಚುತ್ತಲೇ ಇತ್ತು ಇದರಿಂದ ಈ ಬೆಕ್ಕನ್ನು ಅದಲು ಬದಲು ಮಾಡಿ ತಂದಿಟ್ಟದ. ಈ ವಿಚಾರ ಆಕೆಯ ಪ್ರೇಯಸಿಗೂ ತಿಳಿದಿರಲಿಲ್ಲ. 6 ವರ್ಷದ ಬಳಿಕ ಈತನೇ ಈ ಗುಟ್ಟನ್ನು ರಟ್ಟು ಮಾಡಿದ್ದಾನೆ.
“ಮರುದಿನ ಬೆಳಗ್ಗೆ ನಾನು ಸ್ಥಳೀಯ ಪ್ರಾಣಿ ಆಶ್ರಯ ಕೇಂದ್ರಕ್ಕೆ ಹೋದೆ. ಅಲ್ಲಿ, ಈಗಾಗಲೇ ಲಿಟರ್ ಬಾಕ್ಸ್ ತರಬೇತಿ ಪಡೆದಿರುವ ಮತ್ತು ಜನರಿಗೆ ಹೊಂದಿಕೊಂಡಿರುವ, ಅದೇ ರೀತಿಯ ಬೆಕ್ಕನ್ನು ಕಂಡೆ. ಆದರೆ ಕೊಂಚ ಮೊಂಡು ಬೆಕ್ಕಾಗಿತ್ತು. ಆದರೆ, ಒಟ್ಟಾರೆ ಅದು ಹೆಚ್ಚು ಸ್ನೇಹಪರ ಮತ್ತು ಉತ್ತಮ ವರ್ತನೆಯದ್ದಾಗಿತ್ತು. ಹಾಗೂ ಅದರ ಮೊಂಡುತನ ಮೂಲ ಬೆಕ್ಕನ್ನು ಹೋಲಲು ಸಹಾಯ ಮಾಡುವಂತಿತ್ತು” ಎಂದು ಆತ ಹೇಳಿದ್ದಾನೆ.
ಅದಲು-ಬದಲು ಮಾಡಿದ ಬೆಕ್ಕು ಇನ್ನೂ ಜೀವಂತ
ಆ ಬೆಕ್ಕನ್ನು ಆತ ದತ್ತು ಪಡೆದ. ಅದನ್ನು ತನ್ನ ಗೆಳತಿಯ ಅಪಾರ್ಟ್‍ಮೆಂಟ್‍ಗೆ ತೆಗೆದುಕೊಂಡು ಹೋಗಿ, ಇರಿಸಿದ. ಬಳಿಕ ಅಸಲಿ ಬೆಕ್ಕನ್ನು ಹತ್ತಿರದ ಪಟ್ಟಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದ. “ಅದನ್ನು ಸ್ಥಳಿಯ ಪ್ರದೇಶದಲ್ಲಿ ಬಿಟ್ಟರೆ ನನ್ನ ಹೆಂಡತಿಗೆ ತಿಳಿಯುತ್ತದೆ ಎಂಬ ಭಯದಿಂದ” ಹಾಗೆ ಮಾಡಿದೆ ಎನ್ನುತ್ತಾನೆ ಆತ.“ಅದು ನಡೆದು 6 ವರ್ಷ ಕಳೆದಿದೆ. ನಾವು 4 ವರ್ಷದ ಹಿಂದೆ ಮದುವೆ ಆದೆವು. ಬದಲಿ ಬೆಕ್ಕು ಈಗಲೂ ನಮ್ಮಲ್ಲಿದೆ. ಅದು ಮೂಲ ಬೆಕ್ಕಿನ ಹೆಸರಿಗೆ ಪ್ರತಿಕ್ರಿಯಿಸುತ್ತದೆ. ನನ್ನ ಹೆಂಡತಿಗೆ ಏನೂ ಗೊತ್ತಿಲ್ಲ. ಆಕೆ ಈ ಬೆಕ್ಕನ್ನು ಪ್ರೀತಿಸುತ್ತಾಳೆ ಮತ್ತು ಅದು ಎಷ್ಟು ಚೆನ್ನಾಗಿ ವರ್ತಿಸುತ್ತದೆ ಎಂದು ಹೆಮ್ಮೆ ಪಡುತ್ತಾಳೆ” ಎಂದು ಪೋಸ್ಟ್ ಮಾಡಿದ್ದಾನೆ.
ಇದನ್ನು ಓದಿ :Amazon ಯಡವಟ್ಟು: ಪೌಚ್ ಆರ್ಡರ್ ಮಾಡಿದ್ರೆ ಪಾಸ್ಪೋರ್ಟ್ನ್ನೇ ಕಳಿಸಿಬಿಟ್ಟಿದೆ ಅಮೇಜಾನ್... ಯಾರದ್ದು ಇದು?
ಪೋಸ್ಟಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
“ನಿಮ್ಮ ಸಂಗಾತಿಗೆ ಸುಲಭವಾಗಿ ಹೇಗೆ ಸುಳ್ಳು ಹೇಳುತ್ತೀರಿ? ನಾನು ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಏನನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ತುಂಬಾ ತಪ್ಪೆನಿಸುತ್ತದೆ” ಎಂದು ಒಬ್ಬರು ಬರೆದುಕೊಂಡರೆ, ಇನ್ನೊಬ್ಬರು “ ಈ ಪೋಸ್ಟನ್ನು ಅಳಿಸಿ ಹಾಕಿ, ಈ ಖಾತೆಯನ್ನು ತೆಗೆದು ಬಿಡಿ. ಯಾವತ್ತೂ ಯಾರಿಗೂ ಹೇಳಬೇಡಿ. ಚಿಕ್ಕ ವಿಷಯಗಳಿಗಾಗಿ ಜನ ವಿಚ್ಛೇದನ ಪಡೆಯುವುದನ್ನು ನೋಡಿದ್ದೇನೆ ಮತ್ತು ನಾನು ನಿಮ್ಮ ಹೆಂಡತಿಯನ್ನು ದೂಷಿಸುವುದಿಲ್ಲ” ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ