ಈ ಪ್ರೀತಿಯಲ್ಲಿ (Love) ಹುಡುಗ ಮತ್ತು ಹುಡುಗಿ (Young Couple) ಮಧ್ಯೆ ಎಲ್ಲವೂ ಸರಿಯಾಗಿದ್ದಾಗ, ಇವರಿಗೆ ತಮ್ಮ ಸುತ್ತಮುತ್ತಲೂ ಇರುವ ಪ್ರಪಂಚದ ಪರಿವೇ ಇರುವುದಿಲ್ಲ. ಆದರೆ ಅದೇ ಪ್ರೀತಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿ ಪ್ರೀತಿ ಕಡಿಮೆ ಆದರೆ, ಇಡೀ ಪ್ರಪಂಚವೇ ಅವರ ಪಾಲಿಗೆ ಇಲ್ಲವಾಯಿತು ಅಂತ ತಿಳಿದುಕೊಳ್ಳುವುದಕ್ಕೆ ಶುರು ಮಾಡುತ್ತಾರೆ ಅಂತ ಹೇಳಬಹುದು. ಹೌದು, ಪ್ರೀತಿಯಲ್ಲಿ ಜಗಳ, ಕೋಪ ಮತ್ತು ವಾದ ವಿವಾದಗಳಿಂದ ಪ್ರೇಮಿಗಳ (Lovers)ನಡುವೆ ಬ್ರೇಕಪ್ (Breakup) ಅಂತಾದಾಗ ಇಬ್ಬರಿಗೂ ನೋವಿನ ಮತ್ತು ಯಾತನಾಮಯ ಅನುಭವವಾಗಿರುತ್ತದೆ ಅಂತ ಹೇಳಬಹುದು.
ಇದರಲ್ಲಿ ಭಾಗಿಯಾಗಿರುವ ಇಬ್ಬರಿಗೂ ಅಪಾರ ನೋವು ಮತ್ತು ಸಂಕಟವನ್ನು ಉಂಟು ಮಾಡಬಹುದು. ನೀವು ಪ್ರೀತಿಸುವ ವ್ಯಕ್ತಿಯನ್ನು ಸಂಪೂರ್ಣವಾಗಿ ಬಿಟ್ಟು ಬಿಡುವುದು ಸಹ ತುಂಬಾನೇ ಕಷ್ಟಕರವಾದ ಕೆಲಸವಾಗಿರುತ್ತದೆ. ಹಾಗೆ ಬಿಡಲು ಬಾರದೇ ಇರುವ ಒಬ್ಬ ಪ್ರಿಯಕರ ತನ್ನ ಮಾಜಿ ಗೆಳತಿ ಹಿಂತಿರುಗಿ ತನ್ನ ಬಳಿ ಬರುವಂತೆ ಎಂತಹ ಕೆಲಸವನ್ನು ಮಾಡಿದ್ದಾನೆ ನೋಡಿ.
ಮಾಜಿ ಗೆಳತಿಯ ಮನವೊಲಿಸಲು ಈ ಪ್ರಿಯಕರ ಮಾಡಿದ ಪ್ರಯತ್ನ ನೋಡಿ
ಚೀನಾದಲ್ಲಿರುವ ಒಬ್ಬ ಪ್ರಿಯಕರ ತನ್ನ ಮಾಜಿ ಗೆಳತಿಯನ್ನು ಬಿಡಲು ಸಾಧ್ಯವೇ ಇಲ್ಲ ಅಂತ ಅನ್ನಿಸುತ್ತದೆ ನೋಡಿ. ಏಕೆಂದರೆ ಅವನು ಅವಳನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ತನ್ನ ಮೊಣಕಾಲಿನ ಮೇಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 21 ಗಂಟೆಗಳ ಕಾಲ ಕೂತಿದ್ದಾನೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಯ ಕಚೇರಿಯ ಹೊರಗೆ ಮಳೆಯಲ್ಲಿ ಮಂಡಿಯೂರಿ 21 ಗಂಟೆಗಳ ಕಾಲ ಕೂತಿದ್ದಾನೆ.
ಈ ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ಈಗ ಚೀನಾದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿ ಮಾಡಿದೆ ಅಂತ ಹೇಳಬಹುದು. ಈ ವ್ಯಕ್ತಿಯು ಮಾಡಿರುವ ಈ ಕೆಲಸ ಅಷ್ಟೇನು ಒಳ್ಳೆಯದಲ್ಲ ಬಿಡಿ ಅಂತ ಅನೇಕರು ಹೇಳಿದ್ದಾರೆ.
ಸ್ಥಳೀಯರು ಆ ಹುಡುಗನಿಗೆ ಇಂತಹ ಪ್ರಯತ್ನವನ್ನು ಕೈಬಿಡುವಂತೆ ಹೇಳಿದ್ದಾರೆ
ವರದಿಯ ಪ್ರಕಾರ, ಮಾರ್ಚ್ 28 ರಂದು ಮಧ್ಯಾಹ್ನ 1 ಗಂಟೆಯಿಂದ ಮರುದಿನ ಬೆಳಗ್ಗೆ 10 ಗಂಟೆಯವರೆಗೆ ಎಂದರೆ ಬರೋಬ್ಬರಿ 21 ಗಂಟೆಗಳ ಕಾಲ ಡಾಝೌನಲ್ಲಿರುವ ಕಟ್ಟಡದ ಪ್ರವೇಶದ್ವಾರದ ಹೊರಗೆ ಮಂಡಿಯೂರಿ ಕುಳಿತಿದ್ದಾನೆ.
ಮಳೆ ಮತ್ತು ಚಳಿ ಇದ್ದರೂ ಸಹ ಅದಕ್ಕೆ ಬಗ್ಗದೆ, ಹಾಗೆಯೇ ಕೈಯಲ್ಲಿ ಗುಲಾಬಿ ಹೂಗುಚ್ಛವನ್ನು ಹಿಡಿದುಕೊಂಡು ತನ್ನ ಮಾಜಿ ಪ್ರಿಯತಮೆ ತನ್ನ ಬಳಿ ಮತ್ತೆ ಬರುತ್ತಾಳೆ ಅನ್ನೋ ಒಂದು ನಂಬಿಕೆಯಿಂದ ಅವಳ ಕಚೇರಿಯ ಹೊರಗೆ ಮಂಡಿಯೂರಿ ಕುಳಿತ್ತಿದ್ದ ಘಟನೆ ನಡೆದಿದೆ.
ತನ್ನ ಮಾಜಿ ಗೆಳತಿ ತನ್ನ ಈ ಪ್ರಯತ್ನಕ್ಕೆ ತನ್ನ ಮನಸ್ಸು ಬದಲಾಯಿಸಿಕೊಂಡು ತನ್ನ ಬಳಿ ಬರುತ್ತಾಳೆ ಅಂತ ಅಷ್ಟು ಹೊತ್ತು ಕಾಯುತ್ತಾ ಕುಳಿತ್ತಿದ್ದನು.
ಯುವಕನ ಮನವೊಲಿಸಲು ಸ್ಥಳೀಯರ ಪ್ರಯತ್ನ
ಏತನ್ಮಧ್ಯೆ, ಸ್ಥಳೀಯರು ಆ ಹುಡುಗನ ಸುತ್ತಲೂ ಜಮಾಯಿಸಿ ಅವನ ಪ್ರಯತ್ನವನ್ನು ಕೈಬಿಡುವಂತೆ ಒತ್ತಾಯಿಸಿದರು ಎಂದು ವಿಡಿಯೋ ಮಾಧ್ಯಮ ಸಂಸ್ಥೆ ಜಿಯುಪೈ ನ್ಯೂಸ್ ವರದಿ ಮಾಡಿದೆ.
"ನಮ್ಮಲ್ಲಿ ಅನೇಕರು ಅವನನ್ನು ಬಿಟ್ಟು ಹೋಗುವಂತೆ ಹೇಳಲು ಪ್ರಯತ್ನಿಸಿದೆವು. ಮಂಡಿಯೂರಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಅವನ ಮಾಜಿ ಗೆಳತಿ ಇಷ್ಟಾದರೂ ಹೊರಗೆ ಬಂದಿಲ್ಲ ಮತ್ತು ಎಲ್ಲಿಯೂ ಕಾಣಿಸಿಕೊಂಡಿಲ್ಲ, ಆದರೆ ಈ ಹುಡುಗ ಮಾತ್ರ ಹಾಗೆಯೇ ನಿಂತಿದ್ದಾನೆ” ಎಂದು ಲಿ ಎಂಬ ಉಪನಾಮದ ವ್ಯಕ್ತಿ ಹೇಳಿದ್ದಾರೆ. ಅಷ್ಟೊಂದು ಜನರು ಆ ಸ್ಥಳದಲ್ಲಿ ಜಮಾಯಿಸಿದರೂ ಸಹ ಅವನ ಮಾಜಿ ಗೆಳತಿ ಎಲ್ಲಿಯೂ ಕಾಣಿಸಲಿಲ್ಲ.
ಪೊಲೀಸರಿಗೆ ಪ್ರಶ್ನೆ ಹಾಕಿದ ಯುವಕ
ಪೊಲೀಸರು ಸಹ ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದರು ಮತ್ತು ಅವನನ್ನು ಅಲ್ಲಿಂದ ಹೊರ ಹೋಗುವಂತೆ ಮನವೊಲಿಸಲು ಪ್ರಯತ್ನಿಸಿದರು.
ಆದರೆ ಆ ಯುವಕ ಪೊಲೀಸರಿಗೆ "ನಾನು ಇಲ್ಲಿ ಮಂಡಿಯೂರಿ ಕುಳಿತುಕೊಳ್ಳುವುದು ಕಾನೂನುಬಾಹಿರವೇ? ಇದು ಕಾನೂನುಬಾಹಿರವಲ್ಲದಿದ್ದರೆ, ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ” ಅಂತ ಕೇಳಿಕೊಂಡನಂತೆ.
ಇದನ್ನೂ ಓದಿ: Love Story: ಗಂಡ ಅಗಲಿದ 6 ತಿಂಗಳ ನಂತರ ಆತನ ಬೆಸ್ಟ್‌ಫ್ರೆಂಡ್ ಜೊತೆ ಪ್ರೀತಿಯಲ್ಲಿ ಬಿದ್ದ ಮಹಿಳೆ
ಕೆಲವು ದಿನಗಳ ಹಿಂದೆ ತನ್ನ ಮಾಜಿ ಗೆಳತಿ ಅವನೊಂದಿಗೆ ಬೇರ್ಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು, ಈಗ ಅವರು ಕ್ಷಮೆ ಕೋರುತ್ತಿದ್ದಾರೆ ಎಂದು ಹೇಳಿದರು. ಅಂತಿಮವಾಗಿ ಮಾರ್ಚ್ 29 ರಂದು ಬೆಳಗ್ಗೆ 10 ಗಂಟೆಗೆ ಆ ವ್ಯಕ್ತಿ ಅಲ್ಲಿಂದ ಚಳಿ ತಾಳಲಾಗದೆ ಹೊರಟು ಹೋದನಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ