ಛತ್ತೀಸಘಡದಲ್ಲಿ ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರಿನ ಅಭ್ಯರ್ಥಿಯೊಬ್ಬ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ ವಿಲಕ್ಷಣ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಅದರಲ್ಲಿ ವಿಲಕ್ಷಣ ಏನಿದೆ? ಒಂದೇ ಹೆಸರಿನ ಬಹಳಷ್ಟು ಮಂದಿ ಇರಬಾರದೇ ಎನ್ನುತ್ತೀರಾ? ಆದರೆ ಅಸಲಿ ಸಂಗತಿ ಬೇರೆಯೇ ಇದೆ.
ಮಹೇಂದ್ರ ಸಿಂಗ್ ಧೋನಿ ಶಾಲಾ ಶಿಕ್ಷಕರಾಗಲು ಹೊರಟಿದ್ದಾರೆ! ಅವರ ತಂದೆಯ ಹೆಸರು ಸಚಿನ್ ತೆಂಡೂಲ್ಕರ್ ! ಅರೇ ಏನಿದು ಎಂದು ತಲೆಕೆಡಿಸಿಕೊಳ್ಳುತ್ತಿದ್ದೀರಾ? ಛತ್ತೀಸಘಡದ ಶಿಕ್ಷಕ ನೇಮಕಾತಿ ಸಂದರ್ಶನದ ಅಧಿಕಾರಿಗಳು ಕೂಡ ಇದೇ ರೀತಿ ಗೊಂದಲಕ್ಕೀಡಾಗಿದ್ದರು! ಹೌದು , ಛತ್ತೀಸಘಡದಲ್ಲಿ ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರಿನ ಅಭ್ಯರ್ಥಿಯೊಬ್ಬ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ ವಿಲಕ್ಷಣ ಪ್ರಸಂಗವೊಂದು ಬೆಳಕಿಗೆ ಬಂದಿದೆ.
ಛತ್ತೀಸಘಡದಲ್ಲಿ ಒಂದು ಕಡೆ 14,850 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡ ಬಗ್ಗೆ ಅಭ್ಯರ್ಥಿಗಳು ಅಸಮಧಾನಗೊಂಡಿದ್ದರೆ, ಮತ್ತೊಂದೆಡೆ ಅದರ ವ್ಯವಹಾರಗಳಲ್ಲಿನ ಗೊಂದಲಗಳ ಅನುಕ್ರಮವು ಮುನ್ನೆಲೆಗೆ ಬಂದಿದೆ. ರಾಯಪುರದ ರಾಜಧಾನಿಯಲ್ಲಿ ಶಿಕ್ಷಕ ಹುದ್ದೆಗೆ ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರಿನ ಅರ್ಜಿ ಬಂದಿತ್ತು. ಇನ್ನೂ ವಿಚಿತ್ರ ಸಂಗತಿಯೆಂದರೆ, ಆ ಧೋನಿಯ ಅಪ್ಪನ ಹೆಸರು ಸಚಿನ್ ತೆಂಡೂಲ್ಕರ್ ಎಂದು ಅರ್ಜಿಯಲ್ಲಿ ಬರೆಯಲಾಗಿತ್ತು. ಇವೆಲ್ಲದ್ದಕ್ಕಿಂತಲೂ ಅಚ್ಚರಿಯ ಸಂಗತಿ ಎಂದರೆ, ಆ ಮಹೇಂದ್ರ ಸಿಂಗ್ ಧೋನಿ ಎಂಬ ಅಭ್ಯರ್ಥಿಯನ್ನು ಅಧಿಕಾರಿಗಳು ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ಮಾಡಿದ್ದು. ಆದರೆ ಆ ಅಭ್ಯರ್ಥಿ ಸಂದರ್ಶನಕ್ಕೆ ಹಾಜರಾಗದಿದ್ದಾಗ , ಈ ವಿಲಕ್ಷಣ ಪ್ರಕರಣ ಬೆಳಕಿಗೆ ಬಂತು.
ಶುಕ್ರವಾರ ಸುಮಾರು 15 ಅಭ್ಯರ್ಥಿಗಳ ಸಂದರ್ಶನ ನಡೆಸಲಾಯಿತು. ಆದರೆ ಮಹೇಂದ್ರ ಸಿಂಗ್ ಧೋನಿ ಸಂದರ್ಶನಕ್ಕೆ ಬರದಿದ್ದಾಗ , ಅಧಿಕಾರಿಗಳಿಗೆ ಆ ಬಗ್ಗೆ ಸಂಶಯ ಬಂತು. ಅವರು ಆ ಅರ್ಜಿಯ ಮೇಲೆ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ, ಅದು ನಕಲಿ ಅರ್ಜಿ ಎಂಬುದು ಬೆಳಕಿಗೆ ಬಂತು.ಮಹೇಂದ್ರ ಸಿಂಗ್ ಧೋನಿಯ ಅರ್ಜಿಯಲ್ಲಿ ಇರುವ ಮಾಹಿತಿಯ ಪ್ರಕಾರ, ಆತ ದುರ್ಗ್‍ನ ಸಿಎಸ್‍ವಿಟಿಯು ವಿಶ್ವವಿದ್ಯಾನಿಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ಸಂಗತಿ ಬೆಳಕಿಗೆ ಬಂದ ಕೂಡಲೇ ಇತರ ಅಭ್ಯರ್ಥಿಗಳು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಿಂದ , ಆ ಸುದ್ದಿ ಎಲ್ಲಡೆ ವೈರಲ್ ಆಯಿತು. ಈಗ ಅಧಿಕಾರಿಗಳು ಆ ನಕಲಿ ಅಭ್ಯರ್ಥಿ ಮಹೇಂದ್ರ ಸಿಂಗ್ ಧೋನಿಯ ವಿರುದ್ಧ ಎಫ್‍ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.
ಅದು ನಕಲಿ ಅರ್ಜಿ ಆಗಿತ್ತು ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದರೂ, ಆ ಅರ್ಜಿ ಸಂದರ್ಶನಕ್ಕೆ ಹೇಗೆ ಆಯ್ಕೆ ಆಯ್ತು ಎಂಬುದರ ಬಗ್ಗೆ ಅವರಿಗೆ ಯಾವುದೇ ಸುಳಿವಿಲ್ಲ. ಒಂದು ವೇಳೆ ನಿಜಕ್ಕೂ ಎಫ್‍ಐಆರ್ ದಾಖಲಾಗಿದ್ದರೆ, ಆ ಬಗ್ಗೆ ತನಿಖೆ ನಡೆದರೆ, ಈ ಇಡೀ ಪ್ರಕರಣ ಹೇಗೆ ನಡೆಯಿತು ಎಂಬುದನ್ನು ತಿಳಿಯುವುದು ಆಸಕ್ತಿದಾಯಕವಾಗಿರುತ್ತದೆ. ಸದ್ಯಕ್ಕೆ ಈ ಪ್ರಕರಣ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ