ಪಾಲ್ಗಡ್: ಮಗಳ ಮದುವೆಗೆ ಒಂದು ತಿಂಗಳು ಮಾತ್ರ ಇದೆ. ಅದಕ್ಕೆಂದೇ 10 ಲಕ್ಷ ರೂ ತೆಗೆದಿರಿಸಿದ್ದ. ಆದರೆ, ಇನ್ನಷ್ಟು ಹಣ ಬೆಳೆಸುವ ಆಸೆಗೆ ಬಿದ್ದು ಬಿಟ್ಕಾಯಿನ್ ವ್ಯಾಪಾರಕ್ಕೆ ಆ ಹಣ ವಿನಿಯೋಗಿಸಿದ. ಆದರೆ, ನಸೀಬು ಬೇರೆಯೇ ಇತ್ತು. ಆ ಎಲ್ಲಾ 10 ಲಕ್ಷ ರೂ ಹಣವನ್ನು ಬಿಟ್ಕಾಯಿನ್ ವ್ಯಾಪಾರದಲ್ಲಿ ಕಳೆದುಕೊಂಡ. ಇದು ಮಹಾರಾಷ್ಟ್ರದ ಪಾಲಗಡ್ ಜಿಲ್ಲೆಯ ವ್ಯಾಪಾರಿಯೊಬ್ಬನ ಶೋಚನೀಯ ಕಥೆ. ಇಷ್ಟೇ ಆಗಿದ್ದ ಈ ಸುದ್ದಿ ಬರುತ್ತಿರಲಿಲ್ಲ. ಆತ ಬಿಟ್ಕಾಯಿನ್ ದಂಧೆಯಲ್ಲಿ ಮದುವೆಗೆಂದು ಎತ್ತಿಟ್ಟಿದ್ದ ಹಣ ಕಳೆದುಕೊಂಡ ಎಂದು ಗೊತ್ತಾದರೆ ಜನರು ಅಪಹಾಸ್ಯ ಮಾಡಬಹುದು ಎಂದು ಭಯಗೊಂಡು ಕಳ್ಳರು ಹಣ ಲಪಟಾಯಿಸಿದರೆಂದು ಸುಳ್ಳು ಕಥೆ ಕಟ್ಟಿದ. ಜೊತೆಗೆ ಪೊಲೀಸ್ ಠಾಣೆಯಲ್ಲೂ ದೂರು ಕೊಟ್ಟ.
ಇದು ಸುಮಂತ್ ಲಿಗಾಯತ್ ಎಂಬಾತನ ಕಥೆ. ಪಾಲ್ಗಡ್ನಲ್ಲಿ ಅಂಗಡಿಗಳಿಗೆ ಈತ ದಿನಸಿ ಮತ್ತಿತರ ವಸ್ತುಗಳನ್ನ ಪೂರೈಸುವ ವ್ಯಾಪಾರಿ. ತನ್ನಿಡೀ ಜೀವಮಾನದಲ್ಲಿ ದುಡಿದು ಉಳಿಸಿದ 10 ಲಕ್ಷ ರೂ ಹಣ ದುರದೃಷ್ಟಕ್ಕೆ ಬಿಟ್ಕಾಯಿನ್ ವ್ಯವಹಾರದಲ್ಲಿ ನಷ್ಟವಾಗಿ ಹೋಗಿದ್ದು ದುರಂತ. ಅದರಲ್ಲೂ ಮಗಳ ಮದುವೆಗೆ ಒಂದು ತಿಂಗಳಷ್ಟೇ ಇರುವಾಗ ಈ ಬೆಳವಣಿಗೆ ಆಗಿದ್ದು ಸುಮಂತ್ಗೆ ದಿಕ್ಕು ತೋಚದಂತಾಗಿತ್ತು. ಮನೆಯವರಿಗೆ ವಿಷಯ ತಿಳಿದರೆ ರಾದ್ಧಾಂತ ಆಗುತ್ತದೆಂದು ಕಳ್ಳತನದ ಕಥೆ ಕಟ್ಟಿ ಬಚಾವಾಗಲು ಯತ್ನಿಸಿದ್ದ.
ಪೊಲೀಸರು ಈತನ ದೂರನ್ನು ಸ್ವೀಕರಿಸಿ ಪ್ರಕರಣವನ್ನ ದಾಖಲಿಸಿಕೊಂಡರು. ತನಿಖೆ ನಡೆಸಿದ ಬಳಿಕ ಪೊಲೀಸರಿಗೆ ಈತ ಕೊಟ್ಟಿದ್ದು ಸುಳ್ಳು ದೂರು ಎಂದು ಗೊತ್ತಾಯಿತು. ಸುಮಂತ್ ಲಿಗಾಯತ್ನಿಗೆ ಮತ್ತೊಮ್ಮೆ ಇಂಥ ಸುಳ್ಳು ಕಂಪ್ಲೇಂಟ್ ಕೊಡಬಾರೆಂದು ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ಬಿಟ್ಕಾಯಿನ್ ಈಗ ಟ್ರೆಂಡಿ ಆಗಿರುವ ಹೊಸ ಹಣ ಚಲಾವಣೆ ವ್ಯವಸ್ಥೆ. ಯಾವುದೇ ಸರ್ಕಾರದ ಹಣಕಾಸು ವ್ಯವಸ್ಥೆಗೆ ನಿಲುಕದ ಕ್ರಿಪ್ಟೋಕರೆನ್ಸಿಗಳಲ್ಲಿ ಬಿಟ್ ಕಾಯಿನ್ ಕೂಡ ಒಂದು. 12 ವರ್ಷಗಳ ಹಿಂದೆಯೇ ಶುರುವಾದ ಬಿಟ್ಕಾಯಿನ್ ಯಾವುದೇ ಮಧ್ಯವರ್ತಿಗಳಿಲ್ಲದೇ ಹಣ ವರ್ಗಾವಣೆ ಮಾಡಲು ಏರ್ಪಡಿಸಿರುವ ಬಹಳ ಸುರಕ್ಷಿತ ವ್ಯವಸ್ಥೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಬಿಟ್ಕಾಯಿನ್ಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಬಿಟ್ಕಾಯಿನ್ ಬೆಲೆ ಹತ್ತಾರು ಪಟ್ಟು ಹೆಚ್ಚಿದೆ. ಆದರೆ, ಮಹಾರಾಷ್ಟ್ರದ ಈ ವ್ಯಕ್ತಿ ಎಲ್ಲಾ 10 ಲಕ್ಷ ಹಣವನ್ನು ಬಿಟ್ಕಾಯಿನ್ ವ್ಯವಹಾರದಲ್ಲಿ ಹೇಗೆ ಕಳೆದುಕೊಂಡ ಎಂಬ ಪ್ರಶ್ನೆಗೆ ಉತ್ತರ ಗೊತ್ತಾಗಿಲ್ಲ.
ಇಡೀ ಜೀವಮಾನ ಗಳಿಕೆಯ ಹಣ ಕಳೆದುಕೊಂಡ ವೃದ್ಧ; ನೆರವಿಗೆ ಬಂದ ಪೊಲೀಸ್ ಅಧಿಕಾರಿ
ಕಾಶ್ಮೀರದ ಶ್ರೀನಗರದಲ್ಲಿ ವೃದ್ಧರೊಬ್ಬರು ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾ ಜೀವಮಾನವಿಡೀ ದುಡಿದು ಗಳಿಸಿದ 1 ಲಕ್ಷ ರೂ ಹಣವನ್ನು ಕಳೆದುಕೊಂಡ ಘಟನೆ ಇತ್ತೀಚೆಗೆ ನಡೆದಿದೆ. 90 ವರ್ಷದ ಶೇಂಗಾ ವ್ಯಾಪಾರಿ ಅಬ್ದುಲ್ ರೆಹಮಾನ್ ಅವರ ಹಣವನ್ನು ಕಳ್ಳರು ಕಳೆದ ವಾರ ದೋಚಿ ಹೋಗಿದ್ದರು.
ಇದನ್ನೂ ಓದಿ: Viral Story: ಪಾರ್ಸೆಲ್ ಮೇಲೆ ಮೊಬೈಲ್ ಸಂಖ್ಯೆ ಬರೆಯಬೇಡಿ! ಈ ಯುವತಿಗೆ ಎದುರಿಸಿದ ಸಮಸ್ಯೆಯೇ ಇದಕ್ಕೆ ದೊಡ್ಡ ಉದಾಹರಣೆ!
ಈ ವೃದ್ಧ ತನ್ನದೇ ಅಂತಿಮ ಸಂಸ್ಕಾರಕ್ಕಾಗಿ ಜೋಡಿಸಿಟ್ಟ ಹಣ ಅದಾಗಿತ್ತು. ಆ ಹಣ ಹೋಯಿತೆಂದು ದಿಕ್ಕು ತೋಚದೇ ಇದ್ದ ಈ ವೃದ್ಧ ಅಳಲು ತೋಡಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಚೌಧರಿ ಗಮನಕ್ಕೆ ಬಂದಿತು. ರೆಹಮಾನ್ ಕಥೆ ಕೇಳಿದ ಅಧಿಕಾರಿ ಚೌಧರಿ ಕೂಡಲೇ ಆ ವೃದ್ಧನಿಗೆ ಸಹಾಯ ಮಾಡಲು ನಿರ್ಧರಿಸಿದರು.
ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಚೌಧರಿ (Sandeep Chaudhary) ತಮ್ಮ ಜೇಬಿನಿಂದ ರೆಹಮಾನ್ಗೆ 1 ಲಕ್ಷ ರೂಪಾಯಿಗಳನ್ನು ನೀಡಿ ಆ ವೃದ್ಧನಿಗೆ ಸಹಾಯ ಮಾಡಿದ್ದಾರೆ. ಈ ಸಹಾಯವು ರೆಹಮಾನ್ ಮುಖದಲ್ಲಿ ಮಾಯವಾದ ನಗುವನ್ನು ಮತ್ತೆ ತಂದು ಕೊಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ