MP Police: ಸೈಕಲ್‍ನಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದವನಿಗೆ ಬೈಕ್ ಕೊಡಿಸಿದ ಪೊಲೀಸರು!

22 ವರ್ಷದ ಯುವಕನೊಬ್ಬನಿಗೆ ಮೋಟರ್ ಬೈಕನ್ನು (Bike) ಕೊಡಿಸಿದ್ದಾರಂತೆ. ಅರೆ, ಪೊಲೀಸರ ಈ ನಡೆಗೆ ಕಾರಣವೇನು ಅಂತೀರಾ..? ಆನ್‍ಲೈನ್ ಫುಡ್ ಡೆಲಿವರಿ (Food Delivery) ಸಂಸ್ಥೆಯ ಉದ್ಯೋಗಿಯಾಗಿರುವ ಆ ಹುಡುಗ ಸೈಕಲ್ ತುಳಿಯುತ್ತಾ ಮನೆಮನೆಗೆ ಹೋಗಿ , ಆಹಾರದ ಪಾರ್ಸೆಲ್ ತಲುಪಿಸುತ್ತಿರುವುದನ್ನು ಕಂಡ ಪೊಲೀಸರು, ಆತನ ಮೇಲೆ ಕರುಣೆ ತೋರಿ ಈ ಕೆಲಸವನ್ನು ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ದೇಶದಲ್ಲಿ ಅಪರಾಧ ಮಾಡಿರಲಿ ಅಥವಾ ಮಾಡದೇ ಇರಲಿ ಜನರು ಪೊಲೀಸರನ್ನು (Police) ಕಂಡರೆ ಹೆದರುವುದು ಸಾಮಾನ್ಯ. ಆದರೆ, ನಮ್ಮ ನಿಮ್ಮಂತೆ ಅವರು ಕೂಡ ಮನುಷ್ಯರು ಅಲ್ಲವೇ..? ಎಷ್ಟೇ ದರ್ಪದ ವರ್ತನೆ ತೋರಲಿ, ಗಡಸು ಮಾತಿರಲಿ, ಕೆಲವೊಮ್ಮೆ ಅವರೊಳಗಿನ ಮಾನವೀಯ ಮುಖಗಳು ಹೊರಗೆ ಬಂದೇ ಬರುತ್ತದೆ. ಪೊಲೀಸರು (Police) ಮಾಡಿದ, ಕರ್ತವ್ಯಕ್ಕೂ ಮೀರಿದ ಮಾನವೀಯ ಕೆಲಸಗಳ ಕುರಿತ ಘಟನೆಗಳ ಬಗ್ಗೆ ನಾವು ಅಲ್ಲೊಮ್ಮೆ ಇಲ್ಲೊಮ್ಮೆ ಕೇಳುತ್ತಿರುತ್ತೇವೆ. ಅಂತದ್ದೇ ಘಟನೆಯೊಂದು ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ ನಡೆದಿದೆ. ಅಲ್ಲಿನ ಕೆಲವು ಪೊಲೀಸರು ಒಟ್ಟು ಸೇರಿ, 22 ವರ್ಷದ ಯುವಕನೊಬ್ಬನಿಗೆ ಮೋಟರ್ ಬೈಕನ್ನು (Bike) ಕೊಡಿಸಿದ್ದಾರಂತೆ. ಅರೆ, ಪೊಲೀಸರ ಈ ನಡೆಗೆ ಕಾರಣವೇನು ಅಂತೀರಾ..? ಆನ್‍ಲೈನ್ ಫುಡ್ ಡೆಲಿವರಿ (Food Delivery) ಸಂಸ್ಥೆಯ ಉದ್ಯೋಗಿಯಾಗಿರುವ ಆ ಹುಡುಗ ಸೈಕಲ್ ತುಳಿಯುತ್ತಾ ಮನೆಮನೆಗೆ ಹೋಗಿ , ಆಹಾರದ ಪಾರ್ಸೆಲ್ ತಲುಪಿಸುತ್ತಿರುವುದನ್ನು ಕಂಡ ಪೊಲೀಸರು, ಆತನ ಮೇಲೆ ಕರುಣೆ ತೋರಿ ಈ ಕೆಲಸವನ್ನು ಮಾಡಿದ್ದಾರೆ.

ಈ ದಿನಗಳಲ್ಲಿ ಅತ್ಯಂತ ಕಡಿಮೆ ಶಿಕ್ಷಣ ಪಡೆದವರಿಂದ ಹಿಡಿದು, ಸ್ನಾತಕೋತ್ತರ ಪದವಿ ಮತ್ತು ಎಂಜಿನಿಯರಿಂಗ್ ಪದವಿ ಪಡೆದವರು ಸಹ ಬಹಳಷ್ಟು ಮಂದಿ ಆನ್‍ಲೈನ್ ಫುಡ್ ಡೆಲಿವರಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಏಕೆಂದರೆ, ಕೆಲಸ ಸಿಗುವುದು ಅಷ್ಟು ದುಸ್ತರವಾಗಿದೆ. ಈ ಕೆಲಸ ಅಂದುಕೊಂಡಷ್ಟು ಸುಲಭವಲ್ಲ, ಬಿಸಿಲಿರಲಿ, ಮಳೆಯಿರಲಿ, ಚಳಿ ಇರಲಿ ಮತ್ತು ತಾವು ಸ್ವತಃ ಹಸಿದುಕೊಂಡಿದ್ದರೂ ಕೂಡ ಗ್ರಾಹಕರ ಮನೆಗೆ ಊಟ ಡೆಲಿವರಿ ಮಾಡಬೇಕಾಗುತ್ತದೆ. ಆಗ ಮಾತ್ರ ತಮ್ಮ ಮನೆಯಲ್ಲೂ ಒಲೆ ಉರಿಯುತ್ತದೆ ಎಂಬ ಅನಿವಾರ್ಯ ಹಲವರದ್ದು.

ಸೈಕಲ್ ತುಳಿದೇ ಹೋಗಬೇಕು

ಇಂದೋರ್‌ನ ಜಯ್ ಹಲ್ದೆ ಕೂಡ ಅಂತಹ ಆನ್‍ಲೈನ್ ಫುಡ್ ಡೆಲಿವರಿ ಉದ್ಯೋಗಿಗಳಲ್ಲಿ ಒಬ್ಬ. ಆತನ ಬಳಿ ಬೈಕ್ ಇಲ್ಲ, ಆಹಾರ ಡೆಲಿವರಿಗೆ ಎಷ್ಟೇ ಕಿಲೋ ಮೀಟರ್ ದೂರ ಹೋಗಬೇಕಿದ್ದರೂ ಸೈಕಲ್ ತುಳಿದೇ ಹೋಗಬೇಕು ಎಂಬಂತಹ ಸ್ಥಿತಿ. ಬೈಕಲ್ಲಿ ಹೋದರೂ, ತಡವಾಗಿ ತಲುಪಿದರೆ ಗ್ರಾಹಕರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಮಾತ್ರವಲ್ಲ, ಕೆಲವೊಮ್ಮೆ ಆ ಆಹಾರವನ್ನು ಅವರಿಗೆ ಉಚಿತವಾಗಿ ಕೊಡಬೇಕಾಗುತ್ತದೆ.

ಇದನ್ನೂ ಓದಿ: Kindness: ದೇವರೇ ಡ್ಯೂಟಿಯಲ್ಲಿದ್ದಾರೆ! ರಸ್ತೆ ಬದಿ ವ್ಯಾಪಾರಿಗಳಿಗೆ ತಂಪು ನೀರು, ವಿಡಿಯೋಗೆ ನೆಟ್ಟಿಗರು ಫಿದಾ

ಸೈಕಲ್ ತುಳಿದು ದಣಿದಿದ್ದ ಡೆಲಿವರಿ ಬಾಯ್

ಅಂತದ್ದರಲ್ಲಿ, ಸೈಕಲ್‍ನಲ್ಲಿ ಆಹಾರ ಡೆಲಿವರಿ ಮಾಡಲು ಸರಿಯಾದ ಸಮಯಕ್ಕೆ ತಲುಪುವುದು ಸುಲಭದ ಕೆಲಸವಲ್ಲ. ಅಲ್ಲಿನ ವಿಜಯನಗರ ಪೊಲೀಸ್ ಠಾಣೆಯ ಉಸ್ತುವಾರಿ ಹೊಂದಿರುವ ತೆಹಜೀಬ್ ಖಾಜಿ ಅವರು ಇತ್ತೀಚೆಗೆ ರಾತ್ರಿ ಗಸ್ತು ತಿರುಗುತ್ತಿದ್ದಾಗ, ಆಹಾರ ಪೊಟ್ಟಣ ಡೆಲಿವರಿ ಮಾಡಲು ವೇಗವಾಗಿ ಸೈಕ್ಲಿಂಗ್ ಮಾಡುತ್ತಾ ಹೋಗುತ್ತಿದ್ದ, ಬೆವರಿನಿಂದ ಸಂಪೂರ್ಣವಾಗಿ ತೋಯ್ದಿದ್ದ ಜಯ್ ಹಲ್ದೆ ಕಣ್ಣಿಗೆ ಬಿದ್ದರು.

ಸಮಸ್ಯೆ ಕೇಳಿ ತಿಳಿದ ಪೊಲೀಸರು

“ಆ ವ್ಯಕ್ತಿಯ ಜೊತೆ ಮಾತನಾಡಿದಾಗ, ಆತನ ಕುಟುಂಬ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದೆ ಮತ್ತು ಬೈಕ್ ಖರೀದಿಸಲು ಆತನ ಬಳಿ ಹಣ ಇಲ್ಲ ಎಂಬುವುದು ನಮಗೆ ತಿಳಿದುಬಂತು” ಎಂದು ಆ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆತನ ಕಷ್ಟದ ಪರಿಸ್ಥಿತಿ ಕಂಡು ಮರುಗಿದ ಖಾಜಿ ಮತ್ತು ವಿಜಯನಗರ ಪೊಲೀಸ್ ಸ್ಟೇಷನ್‍ನ ಇತರ ಕೆಲವು ಪೊಲೀಸರು ಒಟ್ಟು ಸೇರಿ, ಆಟೋಮೊಬೈಲ್ ಶೋರೂಂ ಒಂದಕ್ಕೆ ಆರಂಭಿಕ ಮೊತ್ತವನ್ನು ಪಾವತಿಸಿ, ಜಯ್ ಹಲ್ದೆಗೆ ಒಂದು ಬೈಕ್ ಕೊಡಿಸಿದರು.

ಇದನ್ನೂ ಓದಿ: Modi In Berlin: 2024ರಲ್ಲಿಯೂ ಪ್ರಧಾನಿಯಾಗಿ ಮೋದಿಯೇ ಬೇಕು, ಬರ್ಲಿನ್​ನಲ್ಲಿ ಮೋದಿ ಒನ್ಸ್​ ಮೋರ್ ಘೋಷಣೆ

ಬೈಕ್ ಖರೀದಿಯ ಉಳಿದ ಕಂತುಗಳನ್ನು ತಾನೇ ಸ್ವತಃ ಕಟ್ಟಿಕೊಂಡು ಹೋಗುವುದಾಗಿ ಪೊಲೀಸರಿಗೆ ಜಯ್ ಹಲ್ದೆ ಹೇಳಿರುವುದಾಗಿ ತೆಹಜೀಬ್ ಖಾಜಿ ತಿಳಿಸಿದ್ದಾರೆ.

ಪೊಲೀಸರ ಈ ಮಾನವೀಯ ಕೆಲಸಕ್ಕೆ ಧನ್ಯವಾದ ಸೂಚಿಸಿರುವ ಜಯ್ ಹಲ್ದೆ, “ನಾನು ಈ ಮೊದಲು ನನ್ನ ಸೈಕಲ್‍ನಲ್ಲಿ 6 - 8 ಫುಡ್ ಪಾರ್ಸೆಲ್‍ಗಳನ್ನು ಡೆಲಿವರಿ ಮಾಡುತ್ತಿದ್ದೆ, ಆದರೆ ಈಗ ಬೈಕ್‍ನಲ್ಲಿ ಓಡಾಡುತ್ತಾ ರಾತ್ರಿ 15-20 ಫುಡ್ ಪಾರ್ಸೆಲ್‍ಗಳನ್ನು ಡೆಲಿವರಿ ಮಾಡುತ್ತಿದ್ದೇನೆ” ಎಂದು, ಪೊಲೀಸರ ಸಹಾಯದಿಂದ ತನ್ನ ಕೆಲಸಕ್ಕೆ ಎಷ್ಟು ಅನುಕೂಲವಾಯಿತು ಎಂಬುದನ್ನು ಹೇಳಿದ್ದಾನೆ.
Published by:Divya D
First published: