Viral Video: ಅಗಲಿದ ಮಾವುತನಿಗೆ ಗಜರಾಜನ ಅಂತಿಮ ವಿದಾಯ; ಕೇರಳದಲ್ಲೊಂದು ಮನಕಲಕುವ ದೃಶ್ಯ !

ಮನೆಯ ವರಾಂಡದಲ್ಲಿ ನೆಲದ ಮೇಲೆ ಮಲಗಿಸಿದ್ದ ಓಮನಚೆಟ್ಟನ್ ಅವರ ಪಾರ್ಥೀವ ಶರೀರಕ್ಕೆ, ಸೊಂಡಿಲನ್ನು ಮೇಲೆತ್ತಿ ಬಾಗಿ ನಮಿಸಿತು. ಆ ಭಾವುಕ ದೃಶ್ಯವನ್ನು ಕಂಡು ಅಲ್ಲಿ ನೆರೆದಿದ್ದ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಣ್ಣೀರನ್ನು ತಡೆದುಕೊಳ್ಳುವುದು ಕಷ್ಟವಾಗಿತ್ತು.

ಆನೆಯ ಭಾವುಕ ವಿದಾಯ

ಆನೆಯ ಭಾವುಕ ವಿದಾಯ

 • Share this:

  ಬೃಹತ್ ಕಾಯದ ಆನೆಯಿರಲಿ, ಪುಟ್ಟ ಗಾತ್ರದ ಅಳಿಲೇ ಇರಲಿ, ಮನುಷ್ಯ ಕೊಂಚ ಅಕ್ಕರೆ ತೋರಿದರೂ ಸಾಕು, ಬದಲಿಗೆ ಆತನಿಗೆ ನಿಷ್ಕಲ್ಮಶ ಪ್ರೀತಿಯ ಖಜಾನೆಯನ್ನೇ ಮರಳಿಸುತ್ತವೆ ಅವು. ಪ್ರಾಣಿ ಮತ್ತು ಮನುಷ್ಯನ ಗಾಢ ಸ್ನೇಹ ಎಂತಹ ಕಟುಕರ ಮನಸ್ಸನ್ನೂ ಭಾವುಕವಾಗಿಸಬಲ್ಲದು. ಅಂತಹ ಅಪರೂಪದ ಸ್ನೇಹಗಳಲ್ಲಿ ಬ್ರಹ್ಮದಾತನ್ ಮತ್ತು ಓಮನಚೆಟ್ಟನ್ ನಡುವಿನ ಸ್ನೇಹವೂ ಒಂದು. ಕೇರಳ ರಾಜ್ಯದ ದೇವಾಲಯಗಳ ಯಾವುದೇ ಉತ್ಸವ ಇರಲಿ, ಬ್ರಹ್ಮದಾತನ್ ಮತ್ತು ಓಮನಚೆಟ್ಟನ್ ಇರಲೇಬೇಕಿತ್ತು. ಆ ಆನೆ ಮತ್ತು ಅದರ ಮಾವುತನ ಜೋಡಿ ಎಲ್ಲಾ ಗಜಪ್ರೇಮಿಗಳಿಗೂ ಅಚ್ಚುಮೆಚ್ಚು.


  ಅದೊಂದು ಅಪರೂಪದ ವಿದಾಯವಾಗಿತ್ತು. ಸುಮಾರು ಕಾಲು ಶತಮಾತಗಳವರೆಗೆ , ತನ್ನನ್ನು ಅಕ್ಕರೆಯಿಂದ ನೋಡಿಕೊಂಡ ಗುರುವಿಗೆ ವಿದಾಯ ಹೇಳಲು ಪಲ್ಲಟ್ ಬ್ರಹ್ಮದಾತನ್ ಬಂದಾಗ, ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲಿಗಳು ತುಂಬಿ ಬಂದವು. ಬ್ರಹ್ಮದಾತನ್ ಒಂದು ಆನೆ ಮತ್ತು ಓಮನಚೆಟ್ಟನ್ ಅದರ ಮಾವುತ. ಓಮನಚೆಟ್ಟನ್ ಎಂದು ಪ್ರೀತಿಯಂದ ಕರೆಯಲ್ಪಡುವ , ಕೊಟ್ಟಾಯಮ್ ಸಮೀಪದ ಲಕ್ಕತ್ತೂರಿನ ನಿವಾಸಿ, ಕುಞಕ್ಕಾಡ್ ದಾಮೋದರನ್ ನಾಯರ್, ಬ್ರಹ್ಮದಾತನ್‍ನ ಪಾಲಿಗೆ ಕೇವಲ ಒಬ್ಬ ಮಾವುತ ಮಾತ್ರವಲ್ಲ, ಆಟದ ಸಂಗಾತಿಯೂ ಕೂಡ ಆಗಿದ್ದರು. ಸುಮಾರು ಆರು ದಶಕಗಳ ಕಾಲ ಆನೆಗಳನ್ನು ನೋಡಿಕೊಳ್ಳುತ್ತಿದ್ದ ಮಾವುತ ಓಮನಚೆಟ್ಟನ್ , ಗುರುವಾರ ಬೆಳಗ್ಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.


  ಇದನ್ನೂ ಓದಿ:Rohini Sindhoori vs Shilpa Nag: 12 ಕೋಟಿ ಲೆಕ್ಕಕ್ಕೆ ದಾಖಲೆ ಸಮೇತ ಉತ್ತರ ಕೊಟ್ಟ ಶಿಲ್ಪಾನಾಗ್ ..!

  ಆನೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಅಕ್ಕರೆಯಿಂದ ಅವುಗಳ ಲಾಲನೆ-ಪಾಲನೆ ಮಾಡುತ್ತಿದ್ದ ಅಪರೂಪದ ಮಾವುತರಲ್ಲಿ ಅವರು ಕೂಡ ಒಬ್ಬರಾಗಿದ್ದರು. ಕೇರಳ ರಾಜ್ಯದ ಗಜಪ್ರೇಮಿಗಳ ಪ್ರಕಾರ, ಓಮನಚೆಟ್ಟನ್ ಯಾವುದೇ ಆನೆಗೆ, ಅದು ಎಷ್ಟು ಅವಿಧೇಯ ಆನೆಯೇ ಆಗಿರಲಿ ಯಾವತ್ತೂ ಏಟು ಹೊಡೆದಿಲ್ಲವಂತೆ.


  ಕೇರಳ ರಾಜ್ಯದ ದೇವಾಲಯಗಳ ಯಾವುದೇ ಉತ್ಸವ ಇರಲಿ, ಬ್ರಹ್ಮದಾತನ್ ಮತ್ತು ಓಮನಚೆಟ್ಟನ್ ಇರಲೇಬೇಕಿತ್ತು. ಆ ಆನೆ ಮತ್ತು ಅದರ ಮಾವುತ ಎಲ್ಲಾ ಗಜಪ್ರೇಮಿಗಳಿಗೂ ಅಚ್ಚುಮೆಚ್ಚು.  ಅವರು ಕೊನೆಯದಾಗಿ ಜೊತೆಯಾಗಿ ಕಂಡುಬಂದಿದ್ದು, ತ್ರಿಶೂರ್ ಪೂರಮ್‍ನಲ್ಲಿ. ಓಮನಚೆಟ್ಟನ್ ಅವರ ಸಾವಿನ ಸುದ್ದಿ ತಿಳಿದಾಗ, ಬ್ರಹ್ಮದಾತನ್‍ನ ಒಡೆಯರಾದ ಪಲ್ಲಾಡ್ ರಾಜೇಶ್ ಮತ್ತು ಮನೋಜ್, ಮೆಲಂಪಾರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಓಮನಚೆಟ್ಟನ್ ಅವರ ಮನೆಗೆ ಬ್ರಹ್ಮದಾತನ್‍ನನ್ನು ಕರೆದೊಯ್ದರು.


   

  ಲಾಕ್‍ಡೌನ್ ನಿಯಮಗಳಿಂದಾಗಿ, ಶವ ಸಂಸ್ಕಾರದ ಅಂತಿಮ ವಿಧಿವಿಧಾನಗಳನ್ನು ಮುಗಿಸಿ, ಅಂತ್ಯಕ್ರಿಯೆಗೆ ಕಾಯುತ್ತಿದ್ದಾಗ, ಬ್ರಹ್ಮದಾತನ್, ಮನೆಯ ವರಾಂಡದಲ್ಲಿ ನೆಲದ ಮೇಲೆ ಮಲಗಿಸಿದ್ದ ಓಮನಚೆಟ್ಟನ್ ಅವರ ಪಾರ್ಥೀವ ಶರೀರಕ್ಕೆ, ಸೊಂಡಿಲನ್ನು ಮೇಲೆತ್ತಿ ಬಾಗಿ ನಮಿಸಿದಾಗ, ಆ ಭಾವುಕ ದೃಶ್ಯವನ್ನು ಕಂಡು ಅಲ್ಲಿ ನೆರೆದಿದ್ದ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಣ್ಣೀರನ್ನು ತಡೆದುಕೊಳ್ಳುವುದು ಕಷ್ಟವಾಗಿತ್ತು.


  ಓಮನಚೆಟ್ಟನ್ ಅವರ ಮಗ ರಾಜೇಶ್, ಬ್ರಹ್ಮದಾತನ್‍ನ ಸೊಂಡಿಲನ್ನು ಅಪ್ಪಿ ಹಿಡಿದು ಕಣ್ಣೀರಿಟ್ಟಾಗ, ಆ ಗಜರಾಜನ ಕಣ್ಣಾಲಿಗಳು ಕೂಡ ತುಂಬಿ ಬಂದವು. ಆ ದೃಶ್ಯ ಕಂಡು ನೆರೆದಿದ್ದವರೆಲ್ಲಾ ಭಾವುಕರಾದರು. ಆನೆ ಸುಮಾರು 5 ನಿಮಿಷಗಳ ಕಾಲ ಪಾರ್ಥಿವ ಶರೀರ ಮುಂದೆ ನಿಂತು, ಬಳಿಕ ಹಿಂದಕ್ಕೆ ಸರಿಯಿತು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Latha CG
  First published: