ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಮ್ಮ ಸಾಕು ಪ್ರಾಣಿಗಳ ಜೊತೆ ವಿಮಾನದ ಮೂಲಕ ಪ್ರಯಾಣಿಸಬೇಕಿದ್ದರೆ, ವಿಶೇಷ ಅನುಮತಿ ಪಡೆಯಬೇಕು. ಅಷ್ಟೇ ಅಲ್ಲ, ಪ್ರಯಾಣಿಕರು ಅವುಗಳನ್ನು ತಮ್ಮ ಜೊತೆ ಕೊಂಡೊಯ್ಯುವಾಗ ಅವುಗಳಿಗೆಂದೇ ವಿಶೇಷ ಪಂಜರಗಳನ್ನು ಕೂಡ ಬಳಸಬೇಕಿರುತ್ತದೆ. ಆದರೆ, ಪುಟ್ಟ ಹಲ್ಲಿ(Tiny Lizard)ಯೊಂದು, ಯಾರ ಗಮನಕ್ಕೂ ಬಾರದೆ, ಬಾರ್ಬಡೋಸ್ನಿಂದ ಯಾರ್ಕ್ಶೈರ್ಗೆ ಪ್ರಯಾಣ ಮಾಡಿದ ವಿಚಿತ್ರ ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಬಾರ್ಬಡೋಸ್ನಿಂದ ಯಾರ್ಕ್ಶೈರ್ಗೆ ಪ್ರಯಾಣಿಸಿದ್ದ ಲೀಸಾ ರಸೆಲ್ ಎಂಬವರು, ಪ್ರಯಾಣದ ಬಳಿಕ ತಮ್ಮ ಲಗೇಜ್ ತೆಗೆಯುತ್ತಿದ್ದಾಗ, ಪುಟ್ಟ ಹಲ್ಲಿಯೊಂದು ತಮ್ಮ ಸೂಟ್ಕೇಸ್ನಲ್ಲಿ ಇರುವುದು ಗಮನಕ್ಕೆ ಬಂತು. ರಜೆಗೆಂದು ಕೆರಿಬಿಯನ್ಗೆ ಹೋಗಿದ್ದ ಲೀಸಾ, ದಕ್ಷಿಣ ಯಾರ್ಕ್ಶೈರ್ನಲ್ಲಿರುವ ರೊತೆರಮ್ಗೆ ಮರಳಿದ್ದರು.
ತಮ್ಮ ಬ್ಯಾಗಿನಿಂದ ಬಟ್ಟೆಗಳನ್ನು ಹೊರ ತೆಗೆಯುತ್ತಿದ್ದಾಗ, ವಸ್ತ್ರವೊಂದರ ನಡುವೆ ಪುಟಾಣಿ ಹಲ್ಲಿಯೊಂದು ಆರಾಮವಾಗಿ ಕುಳಿತಿರುವುದು ಅವರಿಗೆ ಕಾಣ ಸಿಕ್ಕಿತು. ಆ ವಸ್ತ್ರದಲ್ಲಿ ಅದು ಸುಮಾರು 24 ಗಂಟೆಗಳ ಕಾಲ ಅದು ಕುಳಿತಿದ್ದಿರಬಹುದು ಎಂಬುವುದನ್ನು ಅರ್ಥ ಮಾಡಿಕೊಂಡರು.
47 ವರ್ಷ ವಯಸ್ಸಿನ ಲೀಸಾ ರಸೆಲ್ ವೃತ್ತಿಯಲ್ಲಿ ಬ್ಯೂಟಿಶಿಯನ್. “ಅದು ಸತ್ತು ಹೋಗಿದೆ ಎಂದು ನಾನು ಭಾವಿಸಿದ್ದೆ ಮತ್ತು ಅದು ಅಲ್ಲಾಡಲು ಆರಂಭಿಸಿದಾಗ ನಾನು ಕಿರುಚಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:JEE Advanced 2021 Registrations: ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಹೀಗೆ ರಿಜಿಸ್ಟ್ರೇಶನ್ ಮಾಡಿ..!
“ತನ್ನ ಹೊಸ ಪ್ಯಾಡ್ನಲ್ಲಿ ಅದು ಖುಷಿಯಾಗಿತ್ತು ಅನಿಸುತ್ತದೆ. ನಾನಂತೂ ಶಾಕ್ ಆಗಿದ್ದೆ; ಅದು ಈ ಪ್ರಯಾಣದಲ್ಲಿ ಬದುಕುಳಿದದ್ದು ಮಾತ್ರವಲ್ಲ, ತುಂಬಿಕೊಂಡಿದ್ದ ನನ್ನ ಸೂಟ್ಕೇಸ್ನಲ್ಲಿ ಅಪ್ಪಚ್ಚಿಯಾಗದೆ ಉಳಿದಿತ್ತು. ಮರಳುವಾಗ ನನ್ನ ಸೂಟ್ಕೇಸ್ ಎಷ್ಟು ತುಂಬಿಕೊಂಡಿತ್ತೆಂದರೆ, ಅದರ ಜಿಪ್ ಹಾಕಲು ನಾನು ಅದರ ಮೇಲೆ ಕುಳಿತುಕೊಳ್ಳ ಬೇಕಾಯಿತು” ಎಂದಿದ್ದಾರೆ ಲೀಸಾ ರಸೆಲ್.
“ಸೂಟ್ಕೇಸ್ನ ಬಟ್ಟೆ ರಾಶಿಯಲ್ಲಿ ನನ್ನ ಬ್ರಾ ಮೇಲ್ಭಾಗದಲ್ಲಿ ಇದ್ದದ್ದು ಆ ಪುಟಾಣಿ ಹಲ್ಲಿಯ ಅದೃಷ್ಟ. ಅಲ್ಲಿ ಧಗೆ ಇದ್ದಿದ್ದರಿಂದ ನಾನು ಅದನ್ನು ಧರಿಸುವ ಗೋಜಿಗೆ ಹೋಗಿರಲಿಲ್ಲ” ಎಂದಿರುವ ಲೀಸಾ, “ ಅದು ಅಲ್ಲಾಡಿದಾಗ ನಾನು ಕಿರುಚಲು ಆರಂಭಿಸಿದೆ. 4,000 ಮೈಲಿಯ ಪ್ರಯಾಣದ ನಂತರ ನಿಮ್ಮ ಬ್ರಾದಲ್ಲಿ ನಿರೀಕ್ಷಿಸುವುದು ಇದನ್ನಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ:TCS Recruitment 2021: ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಟಿಸಿಎಸ್; ಅರ್ಜಿ ಸಲ್ಲಿಸಲು ಹೀಗೆ ಮಾಡಿ
ಪುಟಾಣಿ ಹಲ್ಲಿಯ ಕುರಿತು, ಲೀಸಾ ಆರ್ಎಸ್ಪಿಸಿಎಗೆ ಕರೆ ಮಾಡಿ ತಿಳಿಸಿದರು. ಆರ್ಎಸ್ಪಿಸಿಎ ಕೂಡಲೇ ಇನ್ಸ್ಪೆಕ್ಟರ್ ಸ್ಯಾಂಡ್ರಾ ಡ್ರಾನ್ಸ್ಫಿಲ್ಡ್ಸ್ ಅವರನ್ನು , ಆ ವಿದೇಶಿ ಹಲ್ಲಿಯನ್ನು ತೆಗೆದುಕೊಂಡು ಬರಲು ಕಳುಹಿಸಿತು. ಸ್ಯಾಂಡ್ರಾ ಆ ಪುಟಾಣಿ ಹಲ್ಲಿ ಮರಿಗೆ ಸ್ವಲ್ಪ ನೀರು ಕುಡಿಸಿದರು. ಮತ್ತು ಅದಕ್ಕೆ ‘ಬಾರ್ಬಿ’ ಎಂದು ಹೆಸರಿಟ್ಟರುವ ಸ್ಯಾಂಡ್ರಾ ಅದು ಅಷ್ಟು ದೂರ ಪ್ರಯಾಣಿಸಿದರೂ ಸುರಕ್ಷಿತವಾಗಿ ಇದ್ದದ್ದನ್ನು ಕಂಡು ಸಂತೋಷ ವ್ಯಕ್ತ ಪಡಿಸಿದ್ದಾರೆ. ತನ್ನ ಮೂಲ ಪ್ರದೇಶವನ್ನು ಬಿಟ್ಟು ಬೇರೆ ಜಾಗಕ್ಕೆ ಬಂದಿದ್ದರೂ ಕೂಡ ಹಲ್ಲಿ ಮರಿ ಬಾರ್ಬಿ ಆರೋಗ್ಯವಂತ ಸ್ಥಿತಿಯಲ್ಲಿ ಇದೆ. ಅದನ್ನು ಸರೀಸೃಪ ವಿಶೇಷ ತಜ್ಞರ ಆರೈಕೆಯಲ್ಲಿ ಇಡಲಾಗಿದ್ದು, ಅದಕ್ಕೆ ಯಾವುದೇ ಹಾನಿ ಆಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ