ಬೀದಿಯಲ್ಲಿ ಓಡಾಡಿಕೊಂಡಿರುವ ನಾಯಿಗಳನ್ನು ನೋಡಿದಾಗ, ಅವು ತಲೆಕೆಟ್ಟರೆ ಎಲ್ಲಿ ಕಚ್ಚಿ ಬಿಡುತ್ತವೋ ಎಂದು ಒಮ್ಮೊಮ್ಮೆ ಭಯವಾಗುತ್ತದೆ. ಹಾಗಿರುವಾಗ, ಸಿಂಹಗಳು ರಸ್ತೆಯಲ್ಲಿ ಓಡಾಡಿಕೊಂಡಿದ್ದರೆ ಏನನ್ನಿಸಬಹುದು? ಬಹುಶ: ಇದಕ್ಕೆ ಕಾಂಬೋಡಿಯಾದ ನೋಮ್ ಪೆನ್ನ ಮಂದಿ ಸೂಕ್ತ ಉತ್ತರ ನೀಡಬಹುದೇನೋ! ಯಾಕಂತೀರಾ? ಇತ್ತೀಚೆಗೆ ಅಲ್ಲಿ ಸಿಂಹವೊಂದು ಬೀದಿಯಲ್ಲಿ ಆರಾಮಾಗಿ ಓಡಾಡಿಕೊಂಡಿದೆ! ಹೌದು , ಸಿಂಹವೊಂದು ಬೀದಿಯಲ್ಲಿ ಆರಾಮಾಗಿ ಓಡಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ರಕರ್ತ ಮ್ಯಾಕ್ ಗ್ರಿಗೋರ್ ಮಾರ್ಶಲ್ ಈ ಕುರಿತ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿ, ಸರಣಿ ಟ್ವೀಟ್ಗಳ ಮೂಲಕ ರಸ್ತೆಯಲ್ಲಿ ಓಡಾಡಿಕೊಂಡಿರುವ ಆ ಸಿಂಹದ ಕುರಿತು ಮಾಹಿತಿ ನೀಡಿದ್ದಾರೆ.
ಕಾಂಬೋಡಿಯಾ ರಾಜಧಾನಿ ನೊಮ್ ಪೆನ್ನ ಮನೆಯೊಂದರಲ್ಲಿ ಸಾಕಲಾಗಿದ್ದ ಸಿಂಹದ ವಿಡಿಯೋ ಟಿಕ್ಟಾಕ್ನಲ್ಲಿ ವೈರಲ್ ಆದ ಬಳಿಕ ಕಾಂಬೋಡಿಯಾದ ಅಧಿಕಾರಿಗಳು ವಶಪಡಿಸಿಕೊಂಡ ಸಿಂಹ ಇದೇ ಎಂದು ಮಾರ್ಶಲ್ ತನ್ನ ಟ್ವೀಟ್ಗಳಲ್ಲಿ ನೆನಪಿಸಿದ್ದಾರೆ.
ಜೂನ್ 27ರಂದು 70 ಕೆಜಿ ತೂಕದ ಸಿಂಹ ವಶಪಡಿಸಿಕೊಂಡು ರಕ್ಷಣಾ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಆದರೆ ಸಿಂಹದ ಮಾಲೀಕ ಚೀನಾ ಪ್ರಜೆ ಕ್ವೀ ಜಿಯಾವೋ ಪದೇ ಪದೇ ಮನವಿ ಮಾಡಿಕೊಂಡ ನಂತರ, ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಅದನ್ನು ಮಾಲೀಕರಿಗೆ ಹಿಂದಿರುಗಿಸಲು ಆದೇಶ ನೀಡಿದರು.
ಸಿಂಹ ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಆರಾಮವಾಗಿ ನಡೆದುಕೊಂಡು ಹೋಗುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡುತ್ತಾ, ಮಾರ್ಶಲ್ “ ನೋಮ್ ಪೆನ್ನ ಶ್ರೀಮಂತ ಚೀನಿ ಉದ್ಯಮಿ ಒಬ್ಬರು ತನ್ನ ಮನೆಯಲ್ಲಿ ಸಿಂಹವನ್ನು ಸಾಕು ಪ್ರಾಣಿಯಾಗಿ ಇಟ್ಟುಕೊಂಡಿದ್ದು, ಆ ಸಿಂಹ ಯಾವುದೇ ಮೇಲ್ವಿಚಾರಣೆ ಇಲ್ಲದೆ ರಸ್ತೆಯಲ್ಲಿ ಓಡಾಡಿಕೊಂಡಿದೆ. ಈ ಹುಚ್ಚು ಕ್ರೌರ್ಯವನ್ನು ಎಷ್ಟು ಕಾಲ ಮುಂದುವರಿಸಲು ಅನುಮತಿ ನೀಡಲಾಗುವುದು?”ಎಂದು ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಸಿಂಹ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಳ್ಳುತ್ತಾ, ”ಕೆಲವು ತಿಂಗಳುಗಳ ಹಿಂದೆ ಕಾಂಬೋಡಿಯಾದ ವನ್ಯಜೀವಿ ಅಧಿಕಾರಿಗಳು ಈ ಸಿಂಹವನ್ನು ಮನೆಯೊಂದರಿಂದ ವಶಪಡಿಸಿಕೊಂಡರು. ಶ್ರೀಮಂತರು ಏನನ್ನು ಕೂಡ ಮಾಡಬಹುದು ಎಂದು ಭಾವಿಸಿರುವ ಕಾಂಬೋಡಿಯಾದ ಶ್ರೀಮಂತರ ಮಕ್ಕಳಲ್ಲಿ ಇದು ಆಕ್ರೋಶಕ್ಕೆ ಕಾರಣವಾಯಿತು” ಎಂದು ಮಾರ್ಶಲ್ ಬರೆದುಕೊಂಡಿದ್ದಾರೆ.
“ಅಂತಿಮವಾಗಿ, ಸರ್ವಾಧಿಕಾರಿ ಹುನ್ ಸೇನ್ ಮಧ್ಯ ಪ್ರವೇಶಿಸಿ, ಸುರಕ್ಷಿತ ಪಂಜರದೊಳಗೆ ಇರಿಸಲಾಗಿದ್ದ ಆ ಸಿಂಹವನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಮಾಡಿದರು. ಆದರೆ ಅದೀಗ ಬಿಕೆಕೆ1ನ ಶ್ರೀಮಂತ ನೆರೆಹೊರೆಯಲ್ಲಿ ಸುತ್ತಾಡಿಕೊಂಡಿದೆ” ಎಂದು ಮತ್ತೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಸಿಂಹವನ್ನು ಅವಹೇಳನ ಮಾಡಲಾಗಿದೆ ಮತ್ತು ಅದನ್ನು ಇಟ್ಟಿರುವ ಪರಿಸ್ಥಿತಿ ‘ಭಯಾನಕ’ವಾಗಿದೆ ಎಂದು ಮಾರ್ಶಲ್ ತಮ್ಮ ಟ್ವೀಟ್ಗಳಲ್ಲಿ ತಿಳಿಸಿದ್ದು, “ಸಿಂಹಕ್ಕೆ ಕ್ರೂರವಾಗಿ ಹಾನಿ ಮಾಡಲಾಗಿದೆ ಮತ್ತು ಅದರ ಉಗುರುಗಳನ್ನು ಕೀಳಲಾಗಿದೆ, ಆದರೂ ಇನ್ನೂ ಅದು ಭೀತಿಕಾರಕವೇ. ಈ ಸ್ಥಿತಿಯಲ್ಲಿ ಬದುಕುತ್ತಿರುವುದು ಸಿಂಹದ ಪಾಲಿಗೂ ಭಯಾನಕ ವಿಷಯವೇ. ಕ್ವಿ ಕ್ಸಿಯಾವೋಗೆ ಆ ಸಿಂಹವನ್ನು ಇಟ್ಟುಕೊಳ್ಳಲು ಬಿಡಬೇಕು ಎಂದು ಬಿಕೆಕೆ1ನ ನಿವಾಸಿಗಳು ಇನ್ನೂ ಅಲೋಚಿಸುತ್ತಿದ್ದಾರೆಯೇ ಎಂದು ಕಾದು ನೋಡೋಣ” ಎಂದು ಬರೆದಿದ್ದಾರೆ.
“ವಿದೇಶದಿಂದ ಕಳ್ಳ ಸಾಗಾಣೀಕೆ ಮಾಡಿಕೊಂಡ ಅಪರೂಪದ ಪ್ರಭೇದವದು. ಕಾನೂನು ಪ್ರಕಾರ ವನ್ಯಜೀವಿಗಳನ್ನು , ಅದರಲ್ಲೂ ಮುಖ್ಯವಾಗಿ ಅಪರೂಪದ ಪ್ರಭೇದಗಳನ್ನು ಮನೆಯಲ್ಲಿ ಸಾಕುವಂತಿಲ್ಲ” ಎಂದು ಆರಂಭದಲ್ಲಿ ಸಿಂಹ ವಶಪಡಿಸಿಕೊಂಡಿದ್ದಾಗ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದರು.
ಮುದ್ದಿನ ಸಿಂಹವನ್ನು ಮರಳಿ ಪಡೆದ ಬಳಿಕ, “ನನಗೆ ತುಂಬಾ ಸಂತೋಷವಾಗಿದೆ. ನಾನು ಅವನನ್ನು ಮರಳಿ ಪಡೆಯುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ಕ್ವಿ ಕ್ಸಿಯಾವೋ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ