ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ಮಂಗವೊಂದು ಎಟಿಎಂ ಮಶಿನ್ ಒಪನ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಕೊರೋನಾ ಹರಡುವಿಕೆ ಭೀತಿಯಿಂದ ಯಾರೂ ಕೂಡ ಎಟಿಎಂನತ್ತ ಮುಖ ಮಾಡುತ್ತಿರುವುದು ವಿರಳ. ಇದರ ಪರಿಣಾಮವೋ ಇದೀಗ ಮತ್ತೊಂದು ಪ್ರಾಣಿ ಎಟಿಎಂನಲ್ಲಿ ಕಾಣಿಸಿಕೊಂಡಿದೆ.
ಹೌದು, ಉತ್ತರ ಪ್ರದೇಶದ ಘಾಸಿಯಾಬಾದ್ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಮಶಿನ್ ಒಳಗಡೆ ಹಾವೊಂದು ನುಗ್ಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಟಿಎಂ ರೂಮ್ ಒಳಗಡೆ ಉದ್ದನೆಯ ಹಾವು ಆಕಸ್ಮಿಕವಾಗಿ ಪ್ರವೇಶಿಸಿದೆ. ಇದನ್ನು ನೋಡಿದ ಸೆಕ್ಯೂರಿಟಿ ಗಾರ್ಡ್ ಬಾಗಿಲನ್ನು ಮುಚ್ಚಿದ್ದಾರೆ.
ಇದರಿಂದ ಹೊರಗಡೆ ಬರಲಾಗದ ಹಾವು ಕೊನೆಗೆ ಎಟಿಎಂ ಮಶಿನ್ ಒಳಗೆ ಪ್ರವೇಶಿಸಿತು. ಈ ವೇಳೆ ಸ್ಥಳದಲ್ಲಿ ಸೇರಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅನೇಕರು ಶೇರ್ ಮಾಡಿ ಭಯಾನಕ ಎಂದು ಕಮೆಂಟಿಸಿದ್ದಾರೆ.
ಅಲ್ಲದೆ ಕೆಲವರು ಇನ್ಮುಂದೆ ಎಟಿಎಂಗೆ ಹೋದಾಗ ಜಾಗರೂಕತೆಯಿಂದ ಇರುವಂತೆ ಈ ವಿಡಿಯೋ ಮೂಲಕ ಎಚ್ಚರಿಸಿದ್ದಾರೆ. ಸದ್ಯ ಸೆಕ್ಯೂರಿಟಿ ಗಾರ್ಡ್ ಅವರ ಸಮಯ ಪ್ರಜ್ಞೆಯಿಂದ ಎಟಿಎಂನಲ್ಲಿದ್ದ ಹಾವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ಹೊರ ತೆಗೆಯಲಾಗಿದೆ. ಅದೃಷ್ಟವಶಾತ್ ಎಟಿಎಂ ನಲ್ಲಿದ್ದ ಹಾವು ವಿಷಕಾರಿಯಲ್ಲ. ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು ಎಂದು ಕಾರ್ಯಾಚರಣೆ ನಡೆಸಿದ ಜಿಲ್ಲಾ ಅರಣ್ಯ ಅಧಿಕಾರಿ ದೀಕ್ಷಾ ಭಂಡಾರಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ