ಪ್ರತಿಯೊಬ್ಬರಲ್ಲೂ ಒಂದು ಅದ್ಭುತವಾದ ಕಲಾ ಶಕ್ತಿ ಇರುತ್ತದೆ ಎನ್ನುವ ಅದ್ಭುತವಾದ ಮಾತಿದೆ. ಹೇಳಿ ಕೇಳಿ ಇದು ಪ್ರತಿಭಾಶಾಲಿಗಳ ಯುಗ! ಸಾಮಾಜಿಕ ಮಾಧ್ಯಮದ ವರದಾನದ ಮೂಲಕ ಅನೇಕ ಸುಪ್ತ ಪ್ರತಿಭೆಗಳು ಬೆಳಕಿಗೆ ಬಂದಿವೆ, ಬರುತ್ತಿವೆ, ಬರಲಿವೆ. ಈ ನಿಟ್ಟಿನಲ್ಲಿ ಇಂದು ಮಿಲಿಯನ್ಗಟ್ಟಲೇ ವಿಡಿಯೋಗಳು ಹೊರ ಬರುತ್ತಿವೆ. ಅವರಲ್ಲಿ ಕೆಲವರು ಕಳೆದು ಹೋಗಬಹುದು. ಇನ್ನೂ ಕೆಲವರು ನೆನಪಲ್ಲಿ ಉಳಿಯಬಹುದು. ರಾನು ಮಂಡಾಲ್ನಂತಹ ಕಲಾವಿದೆಯರು ಪ್ರಶ್ನೆಯನ್ನು ಉಳಿಸಬಹುದು. ಆದರೆ ಇದೆಲ್ಲದರ ಆಚೆಗೆ ಭರವಸೆಯಾಗಿ ಕಾಣ ಸಿಗುವ ಕಲಾವಿದರೊಬ್ಬರು ಇಲ್ಲಿದ್ದಾರೆ. ನಿಜವಾದ ಕೌಶಲ್ಯ, ವಿಜಯ ಸಾಧಿಸುತ್ತದೆ ಎನ್ನುವುದಕ್ಕೆ ಈ ಪಿಟೀಲು ವಾದಕರ ಜನಪ್ರಿಯ ವಿಡಿಯೋ ಸಾಕ್ಷಿಯಾಗಿದೆ. ಕೋಲ್ಕತ್ತಾದ ಬೀದಿಗಳಲ್ಲಿ ವಯಲಿನ್ ನುಡಿಸುತ್ತಾ ಮನಸ್ಸನ್ನು ಆರ್ದ್ರಗೊಳಿಸುವ 2 ನಿಮಿಷಗಳ ವಿಡಿಯೋ ನೆಟ್ಟಿಗರನ್ನು ಕಂಬನಿಯಲ್ಲಿ, ಅಸಹಾಯಕತೆಯಲ್ಲಿ ಮುಳುಗಿಸಿದೆ.
Watch this old man's talent from Kolkata pic.twitter.com/bewfNFzQF0
— Aarif Shah (@aarifshaah) June 5, 2021
ಕ್ಲಾಸಿಕ್ ಬಾಲಿವುಡ್ ಹಾಡುಗಳಾದ 1964ರ ಕಾಶ್ಮೀರ ಕಿ ಕಾಲಿ ಯಿಂದ ದಿವಾನಾ ಹುವಾ ಬಾದಲ್ ಮತ್ತು ದಿಲ್ ಅಪ್ನಾ ಔರ್ ಪ್ರೀತ್ ಪರೈ ದಿಂದ ಅಜೀಬ್ ದಸ್ತಾನ್ ಹೈ ಹೇ ತನಕ ಹಾಡುಗಳನ್ನು ಪಿಟೀಲಿನ ಮೂಲಕ ಮರು ಸೃಷ್ಟಿ ಮಾಡಿದ್ದಾರೆ ಈ ಅನಾಮಿಕ ಕಲಾವಿದ.
ಈ ಹಾಡುಗಳನ್ನು ಸೆರೆ ಹಿಡಿದು "ಕೋಲ್ಕತ್ತಾದ ಈ ವೃದ್ಧರ ಕೌಶಲ್ಯಗಳನ್ನು ನೋಡಿ" ಎಂದು ಬಳಕೆದಾರರೊಬ್ಬರು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
His name is Bhogoban Mali, he resides somewhere around Girish Park what I came to know.. one time help won’t work for these artists,if someone can do something for the long run that will be a real help I guess.Not only for him for all the talented artists like him. https://t.co/y5nCvODTfm
— Savvy (@savvygupta) June 7, 2021
ಈ ವಿಡಿಯೋವನ್ನು ಸೋಮವಾರ ಪೋಸ್ಟ್ ಮಾಡಿದಾಗಿನಿಂದ 87,300 ವೀಕ್ಷಣೆಗಳು ಮತ್ತು ಸಾವಿರಾರು ಲೈಕ್ಗಳು ಮತ್ತು ರೀ ಟ್ವೀಟ್ಗಳಿಸಿದೆ. "ಇವರು ಒಬ್ಬ ಕಲಾವಿದರು. ತಾವು ಸಂಕಷ್ಟದಲ್ಲಿದ್ದರೂ ಲಾಕ್ಡೌನ್ ಸಮಯದಲ್ಲಿ ಕೋಲ್ಕತ್ತಾದ ಜನರಿಗೆ ಮನರಂಜನೆ ನೀಡುತ್ತಿದ್ದಾರೆ" ಎಂದು ಬಳಕೆದಾರ ಆರಿಫ್ ಶಾ ಕಮೆಂಟ್ ಮಾಡಿದ್ದಾರೆ.
ಕೋಲ್ಕತಾ ನಿವಾಸಿ ಭೋಗೊಬನ್ ಮಾಲಿಯವರನ್ನು ಪಿಟೀಲು ವಾದಕ ಎಂದು ಆ ನಂತರದಲ್ಲಿ ಗುರುತಿಸಲಾಯಿತು. ಸಂಗೀತ ನಿರ್ದೇಶಕ ಸ್ಯಾವಿ ಗುಪ್ತಾ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
@arrahman @SonuSood @srijitspeaketh Really music can heal the lot of pain what we’re going through,but these people also need little recognition for such a soulful presentation. 🙏🙏 https://t.co/Dfkkwa0pGe
— Shubhendu (@shubhendu1975) June 6, 2021
'ಇವರು ಭೋಗೊಬನ್ ಮಾಲಿ. ನನಗೆ ತಿಳಿದಿರುವಂತೆ ಗಿರೀಶ್ ಪಾರ್ಕ್ ಸುತ್ತಮುತ್ತ ಇವರು ವಾಸಿಸುತ್ತಾರೆ. ಇವರಿಗೆ ಒಂದು ಭಾರಿ ಸಹಾಯ ಮಾಡುವುದಕ್ಕಿಂತ, ದೀರ್ಘಕಾಲ ಇವರ ಜೀವನ ನಿರಾಂತಕವಾಗಿ ನಡೆಯಲು ಸಹಾಯ ಮಾಡಿ. ಇವರೊಬ್ಬರಿಗೆ ಮಾತ್ರವಲ್ಲ. ಇಂತಹ ಅನೇಕ ಕಲಾವಿದರಿದ್ದಾರೆ. ಅವರೆಲ್ಲರಿಗೂ ನೆರವಾಗಿ' ಎಂದು ಸ್ಯಾವಿಯವರು ಮನವಿ ಮಾಡಿಕೊಂಡಿದ್ದಾರೆ.
ಅನಾಮಿಕ ಎನ್ನುವವರು ಪ್ರತಿಕ್ರಿಯಿಸಿದ್ದು, 'ಇವರು ಗಿಟಾರ್ ಹೋಲುವಂತಹ ವಾದ್ಯವನ್ನು ಹೊಂದಿದ್ದಾರೆ. ಇದು ಮತ್ತೊಬ್ಬ ಬಡ ಕಲಾವಿದನ ಪರಿಸ್ಥಿತಿಯನ್ನು ನಮ್ಮ ಮುಂದೆ ಇಟ್ಟಿದೆ. ಬಹುಶಃ ಸ್ಥಳೀಯ ಎನ್ಜಿಒ ಅವರಿಗೆ ಸಹಾಯ ಮಾಡಬಹುದು' ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು, 'ಇಂತಹ ವಿಡಿಯೋಗಳನ್ನು ನೋಡಿದಾಗ ನನ್ನ ಮನಸ್ಸು ಮುದುಡುತ್ತದೆ. ನನ್ನನ್ನೇ ನಾನು ಕಳೆದುಕೊಂಡು ಬಿಡುವಷ್ಟು ನೋವಿಗೆ ಒಳಗಾಗುತ್ತೇನೆ. ಇಂತಹವರಿಗಾಗಿ ನೆರವಾಗಲು ಮನಸ್ಸು ತೀವ್ರವಾಗಿ ಹಂಬಲಿಸುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ ಎನ್ನುವುದು ಅರಿವಾದಾಗ ಇನ್ನಷ್ಟು ನೋವಾಗುತ್ತದೆ. ಎಂತಹವರಿಗೂ ಇದು ಕಷ್ಟ ಸಾಧ್ಯ, ಯಾರಾದರೂ ಅಥವಾ ಯಾವುದಾದರೂ ಸ್ವಯಂ ಸಂಘ ಸಂಸ್ಥೆ ಈ ಕಲಾಸಿರಿವಂತನಿಗೆ ನೆರವಾಗಬಹುದೇ?' ಎಂದಿದ್ದಾರೆ.
ಇನ್ನೊಬ್ಬ ಬಳಕೆದಾರರು 'ನಾನು ಕಂಬನಿ ಮಿಡಿದಿದ್ದು ಏಕೆ ಎಂದು ತಿಳಿಯಲಿಲ್ಲವೆಂದು' ನೊಂದುಕೊಂಡಿದ್ದಾರೆ. 'ಅವರ ಪ್ರತಿಭೆಯ ದೈವತ್ವಕ್ಕೆ ನಮನ' ಎಂದಿದ್ದಾರೆ.
ಶುಭೇಂದು ಎನ್ನುವವರು ಕಮೆಂಟಿಸಿ, 'ಸಂಗೀತ ಎಲ್ಲಾ ನೋವುಗಳನ್ನು ಮಾಗಿಸುತ್ತದೆ. ಆದರೆ ಇಂತಹ ನೋವು ನೀಗಿಸುವ ಮಾಂತ್ರಿಕರನ್ನು ಗುರುತಿಸಿ ಅವರಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು' ಎಂದಿದ್ದಾರೆ.
'ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಇಂತಹ ಅಪರೂಪದ ಕಲಾವಿದ ರಸ್ತೆಯಲ್ಲಿರುವುದು ನಿಜಕ್ಕೂ ನೋವಿನ ಸಂಗತಿ' ಎಂದು ಕಂಬನಿಗರೆದಿದ್ದಾರೆ ಮತ್ತೊಬ್ಬ ಬಳಕೆದಾರರು.
ನಿಖಿಲ್ ಎನ್ನುವ ಇನ್ನೊಬ್ಬ ಬಳಕೆದಾರರು 'ಈ ಬೇಸಿಗೆಗೆ ವರುಣ ವೃಷ್ಟಿಯಂತಿದೆ ಈ ಸಂಗೀತ' ಎಂದಿದ್ದಾರೆ. ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದು, 'ಅಪ್ರತಿಮ ಪ್ರತಿಭಾವಂತ ಕಲಾವಿದರು ಈ ಸಮಯದಲ್ಲಿ ಸಾಕಷ್ಟು ನರಳುತ್ತಿದ್ದಾರೆ' ಎಂದು ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ