Murder plan: ಹೊಸ ಮೊಬೈಲ್ ತೆಗೆದುಕೊಂಡಿದ್ದಕ್ಕೆ ಪತ್ನಿ ಹತ್ಯೆಗೆ ಸ್ಕೆಚ್, ಹೆಂಡತಿ ಕೊಲ್ಲಲು ಸುಪಾರಿ ಕೊಟ್ಟ

ಹೆಂಡತಿ ತನಗೆ ಹೇಳದೇ ಕೇಳದೇ ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದಾಳೆ ಅಂತಾ ಕೋಪಗೊಂಡು ಕಟ್ಟಿಕೊಂಡ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕಿಲ್ಲರ್ಸ್‌ಗಳಿಗೆ ಇಲ್ಲೊಬ್ಬ ಭೂಪ ಗುತ್ತಿಗೆ ನೀಡಿದ್ದನಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವು ಕೊಲೆಗಳ (Murders) ಹಿಂದಿನ ಕಾರಣಗಳು ಎಷ್ಟೆಲ್ಲಾ ಕ್ಷುಲ್ಲಕವಾಗಿರುತ್ತದೆ ಎಂದರೆ ಕೇಳುಗರಿಗೆ ಈ ಕಾರಣಕ್ಕೆ ಕೊಲೆ ಆಯ್ತಾ ಅಂತ ಆಶ್ಚರ್ಯವಾಗುತ್ತದೆ. ಹೆಚ್ಚಾಗಿ ಗಂಡ-ಹೆಂಡತಿ (Husband and Wife) ಮಧ್ಯೆ ಇಂತ ಸಣ್ಣ ಸಣ್ಣ ಕಾರಣಗಳಿಗೆ ಗಲಾಟೆ ಆಗುವುದು, ಗಲಾಟೆ ಮಿತಿ ಮೀರಿ ವಿಚ್ಛೇದನ (Divorce) ಹಂತಕ್ಕೆ ಹೋಗುತ್ತವೆ. ಜೊತೆಗೆ ಇದೆಲ್ಲಾ ಮೀರಿ ಕೆಲವೊಮ್ಮೆ ಕೊಲೆಯೇ ನಡೆದು ಹೋಗುತ್ತದೆ. ಹೆಂಡತಿ ಚೆನ್ನಾಗಿ ಅಡುಗೆ ಮಾಡಿಲ್ಲ ಎಂದು ಕೊಲೆ, ಗಂಡ ಮನೆಗೆ ತಡವಾಗಿ ಬಂದಿದ್ದಕ್ಕೆ ಕೊಲೆ, ನಾನ್ ವೆಜ್ ಚೆನ್ನಾಗಿ ಮಾಡಿಲ್ಲವೆಂದು ಕೊಲೆ ಹೀಗೆ ಒಂದಾ?.. ಎರಡಾ?. ಇಂತ ಸಾಲು ಸಾಲು ಕ್ಷುಲ್ಲಕ ವಿಚಾರಗಳಿಗೆ ಗಂಡ ಹೆಂಡತಿಯನ್ನು ಕೊಲ್ಲುವುದು, ಹೆಂಡತಿ ಗಂಡನನ್ನು ಕೊಲೆ ಮಾಡುತ್ತಿರುವ ಹೇಯ ಕೃತ್ಯವನ್ನು ಕೇಳುತ್ತಿರುತ್ತೇವೆ. ಕೊಲೆ ಮಾಡುವುದು ಇಲ್ಲಾ ಹತ್ಯೆಗೆ ಯತ್ನಿಸುವಂತಹ (Attempted) ಪ್ರಕರಣಗಳು ಸುತ್ತಾಮುತ್ತಾ ನಡೆಯುತ್ತಲೇ ಇರುತ್ತವೆ.

ಮೊಬೈಲ್ ಫೋನ್ ಖರೀದಿಸಿದ ಹಿನ್ನಲೆ
ಕೋಲ್ಕತ್ತಾದಲ್ಲೂ ಇಂತದ್ದೇ ಒಂದು ಪ್ರಕರಣ ನಡೆದಿದೆ, ಸ್ವತ: ಗಂಡನೇ ಹೆಂಡತಿಯನ್ನು ಕೊಲ್ಲಲು ಸುಪಾರಿ ನೀಡಿದ್ದಾನಂತೆ. ಕೊಲೆ ಮಾಡಿಸಲು ಕಾರಣ ಏನಿರಬಹುದು ಅಂತಾ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಹೌದು ಹೆಂಡತಿ ತನಗೆ ಹೇಳದೇ ಕೇಳದೇ ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದಾಳೆ ಅಂತಾ ಕೋಪಗೊಂಡು ಕಟ್ಟಿಕೊಂಡ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕಿಲ್ಲರ್ಸ್‌ಗಳಿಗೆ ಇಲ್ಲೊಬ್ಬ ಭೂಪ ಗುತ್ತಿಗೆ ನೀಡಿದ್ದನಂತೆ. ತನ್ನ ಅನುಮತಿಯಿಲ್ಲದೇ ಹೊಸ ಮೊಬೈಲ್ ಫೋನ್ ಖರೀದಿಸಿದ ಹಿನ್ನಲೆ ಹೆಂಡತಿಯನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾನೆ. ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದು ಸದ್ಯ ಆಸ್ಪತ್ರೆಯಲ್ಲಿದ್ದಾಳೆ.

ಕೋಲ್ಕತ್ತಾದಲ್ಲಿ 40 ವರ್ಷದ ರಾಜೇಶ್ ಜಾ ಎಂಬಾತ ತನ್ನ ಅನುಮತಿಯಿಲ್ಲದೆ ಸ್ಮಾರ್ಟ್‌ಫೋನ್ ಖರೀದಿಸಿದ ಪತ್ನಿಯನ್ನು ಹತ್ಯೆ ಮಾಡಲು ಸುಪಾರಿ ಕಿಲ್ಲರ್‌ ಸೂರಜಿತ್ ಎಂಬಾತನಿಗೆ ಬಾಡಿಗೆ ನೀಡಿದ ಆರೋಪದ ಮೇಲೆ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಸುಪಾರಿ ಪಡೆದ ಆರೋಪಿಗಳು ಚೂಪಾದ ವಸ್ತುಗಳಿಂದ ಮಹಿಳೆಯ ಗಂಟಲಿಗೆ ಗಾಯಗೊಳಿಸಿದ್ದರಿಂದ ಗಂಟಲಿಗೆ 7 ಹೊಲಿಗೆ ಹಾಕಲಾಗಿದೆ.

ಇದನ್ನೂ ಓದಿ: Crime News: ಕೊಲೆಯಲ್ಲಿ ಅಂತ್ಯವಾದ ಜಗಳ: ಸೊಸೆಯಿಂದಲೇ ಹತ್ಯೆಯಾದ ಅತ್ತೆ

ಕೋಲ್ಕತ್ತಾದ ದಕ್ಷಿಣ ಹೊರವಲಯದಲ್ಲಿರುವ ನರೇಂದ್ರಪುರದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣಕ್ಕೆ ಸಂಬಂದಿಸಿದಂತೆ ಓರ್ವ ದಾಳಿಕೋರನನ್ನು ಬಂಧಿಸಲಾಗಿದ್ದು. ಇದೀಗ ದಾಳಿಕೋರನಿಂದ ನೇಮಕಗೊಂಡ ಇನ್ನೊಬ್ಬ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ.

ಸ್ಮಾರ್ಟ್‌ಫೋನ್ ಅವಶ್ಯಕತೆ
ನರೇಂದ್ರಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ ಮಹಿಳೆಯು, ಕೆಲವು ತಿಂಗಳ ಹಿಂದೆ ರಾಜೇಶ್‌ಗೆ ಸ್ಮಾರ್ಟ್‌ಫೋನ್ ಕೊಡಿಸುವಂತೆ ಕೇಳಿದ್ದಳು, ಅದನ್ನು ಅವನು ನಿರಾಕರಿಸಿದ್ದನು. ಈಕೆ ಮಕ್ಕಳಿಗೆ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದಳು. ಹೀಗಾಗಿ ಕೆಲವು ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಅವಶ್ಯಕತೆ ಇತ್ತು. ಇದೇ ಸಲುವಾಗಿ ಗಂಡನನ್ನು ತನಗೆ ಫೋನ್ ಕೊಡಿಸುವಂತೆ ಕೇಳಿದ್ದಳು, ಆದರೆ ಪತಿ ಇದಕ್ಕೆ ಒಪ್ಪಿರಲಿಲ್ಲ.

ಹೀಗಾಗಿಯೇ ಆಕೆಯೇ ಟ್ಯೂಷನ್ ತರಗತಿಗಳಿಂದ ಸಂಪಾದಿಸಿದ ಸ್ವಲ್ಪ ಹಣದಲ್ಲಿ ಮಹಿಳೆ ಜನವರಿ 1 ರಂದು ಸ್ಮಾರ್ಟ್‌ಫೋನ್ ಖರೀದಿಸಿದ್ದಾಳೆ. ಈ ವಿಷಯ ಪತಿಗೆ ತಿಳಿದಾಗ ಅವನು ಕೋಪಗೊಂಡನು ಮತ್ತು ಹೆಂಡತಿಗೆ ನಿನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Roberrt ಸಿನಿಮಾ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್​​​ ಹಾಕಿದ್ದ ಮತ್ತಿಬ್ಬರು ಅಂದರ್: ಇವ್ರ ಹಿಸ್ಟರಿ ಕೇಳಿ ಪೊಲೀಸರೇ ದಂಗು!

ಮಹಿಳೆಯ ಕಿರುಚಾಟ
ಆಕೆಯ ಪತಿ ರಾಜೇಶ್ ರಾತ್ರಿ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಲು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅವನು ತನ್ನ ಕೋಣೆಗೆ ಹಿಂತಿರುಗಲಿಲ್ಲ. ಏನೋ ತಪ್ಪಾಗಿದೆ ಎಂದು ಭಾವಿಸಿದ ಮಹಿಳೆ ಆತನನ್ನು ಹುಡುಕಲು ಹೋದಾಗ ಇಬ್ಬರು ವ್ಯಕ್ತಿಗಳು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಂಟಲಿಗೆ ಇರಿದ ಕಾರಣ ಮಹಿಳೆ ಕಿರುಚುತ್ತಲೇ ಕುಸಿದು ಬಿದ್ದಳು.

ಮಹಿಳೆಯ ಕಿರುಚಾಟ ಕೇಳಿದ ಸ್ಥಳೀಯರು ಆಕೆಯನ್ನು ರಕ್ಷಿಸಲು ಮುಂದಾದರು. ಮತ್ತು ದಾಳಿಕೋರರಲ್ಲಿ ಒಬ್ಬನನ್ನು ಮತ್ತು ರಾಜೇಶ್‌ನನ್ನು ಹಿಡಿದಿದ್ದಾರೆ. ಆದರೆ, ಮತ್ತೊಬ್ಬ ದಾಳಿಕೋರ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
Published by:vanithasanjevani vanithasanjevani
First published: