ಈ ಪ್ರಪಂಚದಲ್ಲಿ ಪ್ರೀತಿ ಅನ್ನೋ ಒಂದು ಭಾವನೆ ಏನೆಲ್ಲಾ ವಂಡರ್ ಮಾಡಬಹುದು ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಪ್ರೀತಿ ಅನ್ನೋ ಶಬ್ಧವೇ ಹಾಗೇ. ಪ್ರತಿಯೊಬ್ಬರು ಕೂಡ ತಮ್ಮ ಪ್ರೀತಿಯನ್ನು ವಿಭಿನ್ನವಾಗಿಯೇ ವ್ಯಕ್ತಪಡಿಸಲು ಬಯಸುತ್ತಾರೆ. ಆ ಮೂಲಕ ಪ್ರತಿ ಪ್ರೇಮಿಗಳು ಸಹ ಉಳಿದವರಿಗಿಂತ ತಾವು ವಿಭಿನ್ನವಾಗಿ ನಿಲ್ಲಲು ಇಚ್ಚಿಸುತ್ತಾರೆ. ಈಗ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಕೂಡ ತಮ್ಮ ಪ್ರೇಯಸಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಈ ಹಿಂದೆ ಯಾರೂ ಮಾಡಿರದಂತಹ ವಿಭಿನ್ನ ಐಡಿಯಾ ಮಾಡಿದ್ದಾರೆ. 2.5 ಕಿ.ಮೀ ರಸ್ತೆಯುದ್ದಕ್ಕೂ ಬರವಣಿಗೆಯ ಮೂಲಕ ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಘಟನೆ ನಡೆದಿದ್ದು, ಧರಂಗುಟ್ಟಿ ಹಳ್ಳಿಯ ಶಿರೋಲ್ ತೆಹೆಸಿಲ್ ನ ಸ್ಥಳೀಯರು ಬೆಳಗೆದ್ದು ಬಂದು ನೋಡಿದಾಗ ರಸ್ತೆಯ ತುಂಬೆಲ್ಲಾ 'ಐ ಲವ್ ಯೂ', 'ಐ ಮಿಸ್ ಯೂ ' ಎಂದು ಬರೆದಿದೆ. ಇಷ್ಟಕ್ಕೂ ಈ ರೀತಿ ತಮ್ಮ ಪ್ರೀತಿಯನ್ನು ನಿವೇದಿಸಿಕೊಂಡಿರುವ ವ್ಯಕ್ತಿ ಯಾರೆಂಬುದು ಅಲ್ಲಿನ ನಿವಾಸಿಗಳಿಗೆ ತಿಳಿದು ಬಂದಿಲ್ಲ. ಅಲ್ಲದೆ, 'ಐ ಮಿಸ್ ಯೂ, ಜೀವನದ ಜೊತೆಗೂ, ಜೀವನದ ನಂತರವೂ!' ಎನ್ನುವ ಮೆಸೇಜ್ ಅದೇ ರಸ್ತೆಯ ಮೇಲೆ ಬರೆಯಲಾಗಿದೆ.
ಜೈಸಿಂಗ್ಪುರದಿಂದ ಧುರಂಗುಟ್ಟಿ ಮಾರ್ಗದಲ್ಲಿ 2.5 ಕಿ.ಮೀ ದೂರದವರೆಗೆ ಬಿಳಿ ಆಯಿಲ್ ಪೇಯಿಂಟ್ ಬಳಸಿ ಈ ಮೆಸೆಜ್ ಬರೆಯಲಾಗಿದೆ ಎಂದು ಗುರುತಿಸಲಾಗಿದೆ. ಇನ್ನು ಸ್ಥಳೀಯ ಆಡಳಿತವೂ ಈ ಮೆಸೇಜ್ ಅಳಿಸಲು ತಂಡವೊಂದನ್ನು ಕಳುಹಿಸಿದ್ದು, ಆ ತಂಡವೂ ಬಿಳಿ ಬಣ್ಣ ಬಳಸಿ ಪ್ರತಿಯೊಂದು ಮೆಸೆಜನ್ನು ಕೂಡ ಅಳಿಸಿ ಹಾಕುತ್ತಿದೆ. ಸದ್ಯ ಈ ಫೋಟೋ ಕೂಡ ವೈರಲ್ ಆಗಿದೆ.
Belagavi Lok Sabha Bypoll: ಮಾರ್ಚ್ 30ಕ್ಕೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ
ಹೀಗೆ ಐ ಲವ್ ಯೂ ಬರೆದವರು ಯಾರೆಂದು ಇದುವರೆಗೂ ಪತ್ತೆಹಚ್ಚಲೂ ಸಾಧ್ಯವಾಗಿಲ್ಲ. ಆದರೆ ಖಂಡಿತಾ ಗ್ರಾಮದ ಯುವಕರೇ ಈ ಕೆಲಸ ಮಾಡಿರಬಹುದೆಂದು ಶಂಕಿಸಲಾಗುತ್ತಿದೆ. ಇದೇ ರೀತಿ ತನ್ನ ಪ್ರೇಯಸಿಯನ್ನು ಸೆಳೆಯಲು ಚೀನಾದ 30 ವರ್ಷದ ವ್ಯಕ್ತಿಯೊಬ್ಬ ಖಾಸಗಿ ದ್ವೀಪವನ್ನು ನಿರ್ಮಿಸಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು ಕೂಡ ಈ ಸಂದರ್ಭದಲ್ಲಿ ಚರ್ಚೆಗೆ ಬಂದಿದೆ.
ಚೀನಾದ ಗ್ಸೂ ಎನ್ನುವ ವ್ಯಕ್ತಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆದರೆ ಆಕೆ ತನ್ನ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಬೇಕೆಂದು ಬಯಸಿ ತನ್ನ ಪ್ರೀತಿಯನ್ನು ತೊರೆದು ತನ್ನೂರಿಗೆ ಹೋದಳು. ಅವಳಿಗಾಗಿ ಗ್ಸೂ ತನ್ನ ಜೀವಮಾನ ಪೂರ್ತಿ ಕೂಡಿಟ್ಟಿದ್ದ ಉಳಿತಾಯದ ಹಣವನ್ನು ವೆಚ್ಚ ಮಾಡಿ ಒಂದು ಖಾಸಗಿ ದ್ವೀಪವನ್ನೇ ನಿರ್ಮಿಸಿದನು. ಆದರೆ ಅನಾಮಿಕ ಪ್ರೇಯಸಿ ನಗರದಲ್ಲಿಯೇ ನೆಲೆನಿಂತಳು.
ಆದರೆ ಗ್ಸೂ ನೋಟ್ಬುಕ್ ಚಿತ್ರದ ನೋಹಾನಂತೆ ಖಾಸಗಿ ಪ್ರೀತಿಯ ದ್ವೀಪ ನಿರ್ಮಾಣ ಮಾಡಲು ಆರಂಭಿಸಿದರು. ಈ ಪ್ರೀತಿಯ ಖಾಸಗಿ ದ್ವೀಪದಲ್ಲಿ ಸೇತುವೆ ಇದ್ದು, ಸಂಪೂರ್ಣ ಪಿಂಕ್ ಬಣ್ಣದ ಹೂವುಗಳಿಂದ ಆವೃತ್ತವಾಗಿದೆ. ಜೊತೆಗೆ ಚೆರ್ರಿ ಮತ್ತು ಪೀಚ್ ಮರ, ಹುಲ್ಲುಗಾವಲ್ಲನ್ನು ಸಹ ಅಲಂಕಾರಿಕ ಸಾಮಗ್ರಿ ಬಳಸಿ ಡಿಸೈನ್ ಮಾಡಲಾಗಿದೆ. ನೋಡುವುದಕ್ಕೆ ಕಣ್ಮನ ಸೆಳೆಯುವ ಈ ದ್ವೀಪ ಪ್ರೀತಿಯ ಚಿಲುಮೆ ಚಿಮ್ಮಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ