ಸಾವನ್ನಪ್ಪಿದರೆ ಮನೆ ಬಿಟ್ಟು ಹೋಗುವ ವಿಚಿತ್ರ ಸಂಪ್ರದಾಯ!

news18
Updated:August 19, 2018, 10:16 PM IST
ಸಾವನ್ನಪ್ಪಿದರೆ ಮನೆ ಬಿಟ್ಟು ಹೋಗುವ ವಿಚಿತ್ರ ಸಂಪ್ರದಾಯ!
news18
Updated: August 19, 2018, 10:16 PM IST
-ನ್ಯೂಸ್ 18 ಕನ್ನಡ

ಪ್ರೀತಿ ಪಾತ್ರರ ಮರಣದ ನಂತರ ಅವರ ನೆನಪುಗಳು ಸದಾ ನಮ್ಮನ್ನು ಕಾಡುತ್ತಿರುತ್ತದೆ. ಅವರೊಂದಿಗಿನ ಒಡನಾಟ ಮರೆಯುವುದು ಬಹಳ ಕಷ್ಟ. ಭಾರತದಂತಹ ದೇಶದಲ್ಲಿ ಸಂಪ್ರದಾಯ ಪದ್ದತಿಗಳಿಂದ ನಿಧನ ಹೊಂದಿದವರ ನೆನಪು ಚಿರಕಾಲ ಉಳಿಯುತ್ತದೆ. ದೇಶದ ಹೆಚ್ಚಿನ ಭಾಗದಲ್ಲಿ ಸಾವಿಗೆ ಶೋಕ ವ್ಯಕ್ತಪಡಿಸಲಾಗುತ್ತದೆ. ಆದರೆ ಕೆಲವೊಂದು ಕಡೆ ಸಾವನ್ನು ಸಂಭ್ರಮಿಸುವ ಸಂಪ್ರದಾಯ ಕೂಡ ಇದೆ.

ಇವೆಲ್ಲದರ ನಡುವೆ ವಿಚಿತ್ರವಾದ ಸಂಪ್ರದಾಯವೊಂದು ಛತ್ತೀಸ್ಗಡದ ಬುಡಕಟ್ಟು ಜನಾಂಗದಲ್ಲಿದೆ. ಬಸ್ತಾರ್​ ಪ್ರದೇಶದ ಬೈಗಾ ಬುಡಕಟ್ಟು ಜನಾಂಗದವರ ಮನೆಯಲ್ಲಿ ಸಾವು ಸಂಭವಿಸಿದರೆ ಮನೆಯನ್ನೇ ಬಿಟ್ಟು ಹೋಗುವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಇತರೆ ಬುಡಕಟ್ಟು ಜನಾಂಗದಿಂದ ಸದಾ ಪ್ರತ್ಯೇಕವಾಗಿರಲು ಬಯಸುವ ಇವರು ಬೇರೆ ಸಮುದಾಯದೊಂದಿಗೆ ಹೆಚ್ಚಿನ ಒಡನಾಟ ಹೊಂದಲು ಇಚ್ಛಿಸುವುದಿಲ್ಲ.

ಈ ಜನಾಂಗದ ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದರೆ ತಮ್ಮ ಮನೆ ಬಿಟ್ಟು ಹೋಗುತ್ತಾರೆ. ಅಲ್ಲದ ಹೊಸ ಪ್ರದೇಶಕ್ಕೆ ತೆರಳಿ ಹೊಸ ಮನೆಯೊಂದನ್ನು ಕಟ್ಟುತ್ತಾರೆ. ಅಲ್ಲಿ ಮತ್ತೊಮ್ಮೆ ಹೊಸ ಜೀವನವನ್ನು ಪ್ರಾರಂಭಿಸುವ ಇವರು ಸಾವನ್ನಪ್ಪಿರುವವರನ್ನು ಮರೆಯಲು ಪ್ರಯತ್ನಿಸುತ್ತಾರೆ. ಬೈಗಾ ಬುಡಕಟ್ಟು ಜನರು  ಮಧ್ಯ ಪ್ರದೇಶ ಮತ್ತು ಛತ್ತೀಸ್ಗಡದ ಕಾಡು ಪ್ರದೇಶಗಳಲ್ಲಿ ವಾಸಿಸುತ್ತಾರೆ.

ದೇವರಿಗೆ ಯಾರ ಮೇಲಾದರೂ ಕೋಪವಿದ್ದರೆ ಅವರು ಸಾವನ್ನಪ್ಪುತ್ತಾರೆ ಎಂಬುದು ಇವರ ನಂಬಿಕೆ. ಹಳೆಯ ಮನೆಯಲ್ಲೇ ವಾಸಿಸುವುದರಿಂದ ದೇವರ ಕೋಪವು ಇವರ ಮೇಲೆ ಬೀಳುತ್ತದೆ ಎಂದು ಭಯ ಪಡುತ್ತಾರೆ. ಹೀಗಾಗಿ ಭವಿಷ್ಯದ ಹಿತ ದೃಷ್ಟಿಯಿಂದ ಮನೆಯನ್ನು ಬದಲಿಸಿಕೊಳ್ಳುವ ಸಂಪ್ರದಾಯವನ್ನು ಬೈಗಾ ಬುಡಕಟ್ಟಿನವರು ಮುಂದುವರೆಸಿದ್ದಾರೆ.

ಮನೆಯನ್ನು ಬಿಟ್ಟು ಬರುವ ಇವರು ಆರಂಭದಲ್ಲಿ ಸಂಬಂಧಿಕರ ಮನೆಗಳಲ್ಲಿ ವಾಸಿಸುತ್ತಾರೆ. ನಂತರ ಹಳೆಯ ಮನೆಯನ್ನು ಕೆಡವಿ ಹೊಸ ಸ್ಥಳದಲ್ಲಿ ಮತ್ತೊಂದು ಮನೆ ನಿರ್ಮಿಸುತ್ತಾರೆ. ಈ ಮನೆಯ ಗೃಹ ಪ್ರವೇಶದಂದು ತಮ್ಮ ಇಷ್ಟ ದೇವತೆಯನ್ನು ಪ್ರತಿಸ್ಠಾಪಿಸಿ, ಮನೆಯೊಳಗೆ ಪ್ರವೇಶಿಸುತ್ತಾರೆ.

ಛತ್ತೀಸ್ಗಡದ ದಕ್ಷಿಣ ಬಸ್ತಾರ್ ಗ್ರಾಮಗಳನ್ನು ಹೊರತು ಪಡಿಸಿ ಪಾಖನಾರ್, ಬಸ್ತನಾರ್, ಆಲನಾರ್, ಛಿಂದಬಾಹರ್ ಮತ್ತು ಚಂದ್ರಗಿರಿ ಪ್ರದೇಶಗಳಲ್ಲೂ ಈ ವಿಚಿತ್ರ ಸಂಪ್ರದಾಯವನ್ನು ಕಾಣಬಹುದಾಗಿದ್ದು, ವಿಶ್ವವೇ ಜಾಗತಿಕೀರಣಗೊಳ್ಳುತ್ತಿರುವ ಸಮಯದಲ್ಲಿ ಕೆಲ ಸಂಪ್ರದಾಯಗಳು ವಿಶ್ವವನ್ನೆ ಪುಟ್ಟ ಗ್ರಾಮಗಳತ್ತ ನೋಡುವಂತೆ ಮಾಡುತ್ತಿರುವುದು ಮಾತ್ರ ವಿಚಿತ್ರ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...