Love Story: ಪಕ್ಕದ ಮನೆಯಲ್ಲೇ 11 ವರ್ಷ ಗುಟ್ಟಾಗಿ ಸಂಸಾರ; ಕೇರಳದಲ್ಲೊಂದು ವಿಚಿತ್ರ ಲವ್ ಸ್ಟೋರಿ!

11 ವರ್ಷ ತಮ್ಮ ಮಗಳು ಪಕ್ಕದ ಮನೆಯಲ್ಲೇ ಇದ್ದರೂ ಆಕೆಯ ಮನೆಯವರಿಗೆ ಆ ವಿಷಯವೇ ಗೊತ್ತಾಗಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಕೇರಳದಲ್ಲಿ ಇಂತಹ ವಿಚಿತ್ರವಾದ ಲವ್ ಸ್ಟೋರಿಯೊಂದು ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಿರುವನಂತಪುರಂ (ಜೂನ್ 10): ಆಕೆ ಮನೆಯಿಂದ ನಾಪತ್ತೆಯಾಗಿ 11 ವರ್ಷಗಳೇ ಕಳೆದಿತ್ತು. ಆಕೆಗಾಗಿ ಎಲ್ಲ ಕಡೆಯೂ ಹುಡುಕಾಡಿದ ಆಕೆಯ ಪೋಷಕರು ಕೊನೆಗೆ ಆಕೆ ಯಾರೊಂದಿಗೋ ಓಡಿ ಹೋಗಿರಬಹುದು ಎಂಬ ನಿರ್ಧಾರಕ್ಕೆ ಬಂದು ಸುಮ್ಮನಾಗಿಬಿಟ್ಟಿದ್ದರು. ಆದರೆ, ಕೊನೆಗೂ 11 ವರ್ಷಗಳ ಹಿಂದೆ ಕಾಣೆಯಾಗಿದ್ದ ಆ ಯುವತಿ ಮತ್ತೆ ಸಿಕ್ಕಿದ್ದಾಳೆ; ಅದೂ ಆಕೆಯ ತವರು ಮನೆಯಿಂದ ಕೇವಲ 500 ಮೀಟರ್ ದೂರವಿದ್ದ ಪ್ರಿಯಕರನ ಮನೆಯಲ್ಲಿ! 11 ವರ್ಷ ಆಕೆ ಪಕ್ಕದ ಮನೆಯಲ್ಲೇ ಇದ್ದರೂ ಆಕೆಯ ಮನೆಯವರಿಗೆ ಆ ವಿಷಯವೇ ಗೊತ್ತಾಗಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಅದಕ್ಕೂ ದೊಡ್ಡ ಮತ್ತೊಂದು ಅಚ್ಚರಿಯ ವಿಚಾರವೆಂದರೆ ಆ ಯುವತಿ ತಮ್ಮ ಮಗನ ರೂಮಿನಲ್ಲೇ ಅಷ್ಟು ವರ್ಷಗಳ ಕಾಲ ಇದ್ದರೂ ಆ ಮನೆಯವರಿಗೇ ಗೊತ್ತಾಗಿರಲಿಲ್ಲ!

ಮನೆಯವರಿಗೇ ಗೊತ್ತಿಲ್ಲದೆ ಬರೋಬ್ಬರಿ 11 ವರ್ಷ ಒಬ್ಬಳು ಯುವತಿ ಆ ಮನೆಯಲ್ಲಿ ವಾಸ ಮಾಡಲು ಸಾಧ್ಯವಾ? ಎಂದು ಅಚ್ಚರಿಯಾಗದೇ ಇರದು. ಆದರೆ, ಇದು ಕೇರಳದಲ್ಲಿ ನಿಜವಾಗಿಯೂ ನಡೆದ ಘಟನೆ. ಕೇರಳದ ಪಲಕ್ಕಾಡ್​ನ ಆಯಲೂರು ಎಂಬ ಹಳ್ಳಿಯ 18 ವರ್ಷದ ಯುವತಿ ಸಜಿತಾ 11 ವರ್ಷದ ಹಿಂದೆ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಕೊನೆಗೂ ಆಕೆಯ ಬಗ್ಗೆ ಮನೆಯವರಿಗೆ ಸುಳಿವು ಸಿಕ್ಕಿದ್ದು, ತಮ್ಮ ಮನೆಯ ಬಳಿಯೇ ಇರುವ ಮನೆಯಲ್ಲಿ ಇಷ್ಟು ವರ್ಷ ಆಕೆ ಗುಟ್ಟಾಗಿ ಬಚ್ಚಿಟ್ಟುಕೊಂಡಿದ್ದ ಸುದ್ದಿ ತಿಳಿದು ಶಾಕ್ ಆಗಿದ್ದಾರೆ!

29 ವರ್ಷದ ಸುಜಿತಾ 34 ವರ್ಷದ ಅಲಿಂಚುವಟ್ಟಿಲ್ ರೆಹಮಾನ್ ಎಂಬ ಯುವಕನನ್ನು 11 ವರ್ಷದ ಹಿಂದೆ ಪ್ರೀತಿ ಮಾಡುತ್ತಿದ್ದಳು. ಆಕೆಯ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿದ್ದ ಆತನ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಆಕೆಗೆ ಆತನ ಮೇಲೆ ಪ್ರೀತಿ ಹುಟ್ಟಿತ್ತು. ಆದರೆ, ಆಕೆ ಹಿಂದೂ, ಆತ ಮುಸ್ಲಿಂ ಆಗಿದ್ದರಿಂದ ಮನೆಯವರು ತಮ್ಮ ಪ್ರೀತಿಗೆ ಒಪ್ಪುವುದಿಲ್ಲವೆಂದು ಸುಜಿತಾ ಆತನೊಂದಿಗೆ ನಾಪತ್ತೆಯಾಗಿದ್ದಳು.

ಇದನ್ನೂ ಓದಿ: Crime News: ಮಗನಿಗೆ ತಿಳಿಯದಂತೆ ಸೊಸೆಯನ್ನೇ ಮಾರಾಟ ಮಾಡಿದ ಮಾವ; ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ರೆಹಮಾನ್ ಜೊತೆಗೆ ಹೋಗಿದ್ದ ಸುಜಿತಾ ಆತನದೇ ಮನೆಯ ಸಣ್ಣ ರೂಮಿನಲ್ಲಿ 11 ವರ್ಷಗಳ ಕಾಲ ವಾಸವಾಗಿದ್ದಳು. ಆದರೂ ಈ ವಿಷಯ ಆಕೆಯ ಮನೆಯವರಿಗೆ ಗೊತ್ತಾಗಿರಲಿಲ್ಲ. 11 ವರ್ಷ ಮನೆಯಿಂದ ಹೊರಗೇ ಬಾರದ ಆಕೆ ಇನ್ನೂ ಆತನನ್ನು ಮದುವೆಯಾಗಿಲ್ಲ. ಹಾಗಿದ್ದರೆ ಈ ವಿಷಯ ಹೊರಬಿದ್ದಿದ್ದು ಹೇಗೆ? ಎಂಬ ಕುತೂಹಲ ನಿಮಗಿದ್ದರೆ ಮುಂದೆ ಓದಿ...

ಕಳೆದ 3 ತಿಂಗಳಿನಿಂದ ರೆಹಮಾನ್​ ನಾಪತ್ತೆಯಾಗಿದ್ದ. ಆತನನ್ನು ಹುಡುಕುವಂತೆ ಆತನ ಮನೆಯವರು ದೂರು ನೀಡಿದ್ದರು. ಈ ವೇಳೆ ರೆಹಮಾನ್ ಮತ್ತು ಸಜಿತಾ ಪಕ್ಕದ ಊರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಗೊತ್ತಾಗಿತ್ತು. ಆಗ ಪೊಲೀಸರು ಅವರಿಬ್ಬರನ್ನೂ ಕೋರ್ಟ್​ ಎದುರು ಹಾಜರುಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿತು. 11 ವರ್ಷದಿಂದ ನಾನು ರೆಹಮಾನ್ ಜೊತೆಗೆ ಆತನದೇ ರೂಮಿನಲ್ಲಿ ವಾಸವಾಗಿದ್ದೇನೆ. ಇದು ಆತನ ಮನೆಯವರಿಗೂ ಗೊತ್ತಿರಲಿಲ್ಲ. ನಾವಿಬ್ಬರೂ ಈಗಲಾದರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದೇವೆ. ನಮ್ಮಿಬ್ಬರನ್ನೂ ದೂರ ಮಾಡಬೇಡಿ ಎಂದು ಸಜಿತಾ ನ್ಯಾಯಮೂರ್ತಿಗಳ ಮುಂದೆ ನಡೆದ ವಿಷಯವನ್ನು ಹೇಳಿದ್ದಾಳೆ.

11 ವರ್ಷ ಪಕ್ಕದ ಮನೆಯಲ್ಲೇ ಮಗಳಿದ್ದರೂ ಅಪ್ಪ-ಅಮ್ಮನಿಗೆ ಗೊತ್ತಾಗಲಿಲ್ಲ, 11 ವರ್ಷದಿಂದ ತಮ್ಮ ಮನೆಯಲ್ಲೇ ಮಗನ ರೂಮಿನಲ್ಲಿರುವ ಯುವತಿ ಬಗ್ಗೆ ಆತನ ಮನೆಯವರಿಗೂ ಅನುಮಾನ ಬಂದಿಲ್ಲ ಎಂಬ ವಿಷಯ ಕೇಳಿ ಕೋರ್ಟ್​ನಲ್ಲಿದ್ದವರೂ ಶಾಕ್ ಆಗಿದ್ದಾರೆ. ಹಿಂದೂ- ಮುಸ್ಲಿಂ ಆಗಿದ್ದರಿಂದ ತಮ್ಮ ಮನೆಯವರು ಮದುವೆಗೆ ಒಪ್ಪುವುದಿಲ್ಲವೆಂದು ಈ ರೀತಿ ಇಷ್ಟು ವರ್ಷ ಗುಟ್ಟಾಗಿ ವಾಸವಾಗಿದ್ದೆವು ಎಂದು ಆಕೆ ಹೇಳಿದ್ದಾಳೆ.

ಅಷ್ಟಕ್ಕೂ ಆಗಿದ್ದೇನು?:
2010ರ ಫೆಬ್ರವರಿ ತಿಂಗಳಲ್ಲಿ ಸಜಿತಾ ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಪರಾರಿಯಾಗಿದ್ದಳು. ತಮ್ಮ ಮನೆಯ ಪಕ್ಕದಲ್ಲೇ ಇದ್ದ ರೆಹಮಾನ್ ಮನೆಯೊಳಗೆ ಯಾರಿಗೂ ಗೊತ್ತಾಗದಂತೆ ಹೋಗಿದ್ದ ಸಜಿತಾ ಆತನ ಸಣ್ಣದಾದ ರೂಮಿನಲ್ಲೇ ವಾಸವಾಗಿದ್ದಳು. ಆಗ ಆಕೆಯನ್ನು ಎಲ್ಲ ಕಡೆಯೂ ಹುಡುಕಿದ್ದ ಪೊಲೀಸರಿಗೆ ಆಕೆಯ ಸುಳಿವು ಸಿಕ್ಕಿರಲಿಲ್ಲ. ರೆಹಮಾನ್ ಜೊತೆಗೆ ಸಜಿತಾ ಪ್ರೇಮ ಸಂಬಂಧವಿದೆ ಎಂಬ ವಿಷಯ ಯಾರಿಗೂ ಗೊತ್ತಿರದ ಕಾರಣ ಆತನ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ. ಹೀಗಾಗಿ, ಪೊಲೀಸರು ಆತನ ಮನೆಯನ್ನು ಹುಡುಕಿರಲಿಲ್ಲ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Bangalore Crime: ಬ್ಯಾಂಡೇಜ್ ಹಾಕೋಕೆ ಲೇಡಿ ನರ್ಸ್ ಬೇಕು!; ಬೆಂಗಳೂರಲ್ಲಿ ಯುವಕರ ಹೈಡ್ರಾಮಾ

ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ರೆಹಮಾನ್ ಬಹಳ ಸಿಡುಕು ಸ್ವಭಾವದವನಾಗಿದ್ದ. ಹೀಗಾಗಿ, ಆತನ ಮನೆಯವರು ಕೂಡ ಆತನ ಜೊತೆ ಮಾತನಾಡಲು ಹೆದರುತ್ತಿದ್ದರು. ಹೀಗಾಗಿ, ಯಾರೂ ಆತನ ರೂಮಿಗೆ ಹೋಗುತ್ತಿರಲಿಲ್ಲ. ಆತ ಕೆಲಸಕ್ಕೆ ಹೋಗುವಾಗ ತನ್ನ ರೂಮನ್ನು ಲಾಕ್ ಮಾಡಿ ಹೋಗುತ್ತಿದ್ದ. ಆತ ಇದ್ದಾಗಲೂ ತನ್ನ ರೂಮಿನೊಳಗೆ ಯಾರಿಗೂ ಬರಲು ಬಿಡುತ್ತಿರಲಿಲ್ಲ. ರೆಹಮಾನ್​ನ ತಂದೆ-ತಾಯಿ, ಅಣ್ಣ ಕೂಡ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ, ಅವರೂ ಇಡೀ ದಿನ ಮನೆಯಲ್ಲಿ ಇರುತ್ತಿರಲಿಲ್ಲ.

ಮನೆಯಲ್ಲಿದ್ದವರೆಲ್ಲ ಹೊರಗೆ ಹೋದ ಮೇಲೆ ಸಜಿತಾ ರೂಮಿನಿಂದ ಹೊರಗೆ ಬರುತ್ತಿದ್ದಳು. ರೂಮಿನ ಕಿಟಕಿ ಫ್ರೇಮನ್ನು ಎತ್ತಿಟ್ಟು ಹೊರಗೆ ಬರುತ್ತಿದ್ದ ಆಕೆ ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ಮತ್ತೆ ವಾಪಾಸ್ ರೂಮು ಸೇರಿಕೊಳ್ಳುತ್ತಿದ್ದಳು. ಆಕೆ ತನ್ನ ಬಟ್ಟೆಗಳನ್ನೂ ರೂಮಿನೊಳಗೆ ಒಣಗಿಸಿಕೊಳ್ಳುತ್ತಿದ್ದಳು. ಆಕೆಗಾಗಿ ರೂಮಿನಲ್ಲಿ ಸಣ್ಣದೊಂದು ಟಿವಿಯನ್ನೂ ಇಟ್ಟಿದ್ದ ರೆಹಮಾನ್ ಯಾವುದೇ ಕಾರಣಕ್ಕೂ ಹೊರಗೆ ಓಡಾಡಬಾರದೆಂದು ತಾಕೀತು ಮಾಡಿದ್ದ. ಹೀಗಾಗಿ, 11 ವರ್ಷದಿಂದ ಆ ರೂಮೇ ಆಕೆಯ ಪ್ರಪಂಚವಾಗಿತ್ತು.

ಇತ್ತೀಚೆಗೆ ಮನೆಯವರು ರೆಹಮಾನ್​ಗೆ ಮದುವೆಗೆ ಹುಡುಗಿ ಹುಡುಕಲು ಶುರು ಮಾಡಿದ್ದರು. ಆದರೆ, ಆತ ಮದುವೆಯಾಗಲು ಒಪ್ಪದೆ 3 ತಿಂಗಳ ಹಿಂದೆ ಸಜಿತಾಳೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದ. ಇದರಿಂದ ಅವರಿಬ್ಬರ ರಹಸ್ಯ ಸಂಸಾರದ ವಿಷಯ ಹೊರಬಿದ್ದಿತ್ತು.
Published by:Sushma Chakre
First published: