ಸೋಷಿಯಲ್ ಮೀಡಿಯಾಗಳು ಹೆಚ್ಚು ಜನಪ್ರಿಯವಾಗಿರುವ ಇಂದಿನ ಕಾಲದಲ್ಲಿ ಮದುವೆಗಳೆಂದರೆ (Marriage) ಹಬ್ಬಗಳಂತೆ (Festival) ಭಾವಿಸಲಾಗುತ್ತದೆ. ಬಹಳಷ್ಟು ಮದುವೆಗಳಲ್ಲಿ ಆಡಂಬರ ಹೆಚ್ಚು. ಅದರಲ್ಲೂ ಮೊದಲು ಸೆಲೆಬ್ರಿಟಿಗಳು (Celebrities), ಶ್ರೀಮಂತ ಉದ್ಯಮಿಗಳು (Businessman), ನಟ ನಟಿಯರಷ್ಟೇ (Film Actors) ಮಾಡಿಕೊಳ್ಳುತ್ತಿದ್ದ ಡೆಸ್ಟಿನೇಷನ್ ವೆಡ್ಡಿಂಗ್ (Destination wedding) ಇಂದು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಹೀಗೆ ನಮ್ಮ ಇಷ್ಟದ ಸ್ಥಳಗಳಲ್ಲಿ ಮದುವೆ ಮಾಡಿಕೊಳ್ಳುವುದು ಅನೇಕ ಜೋಡಿಗಳ ಕನಸು ಕೂಡ. ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ. ಅದು ತಮ್ಮಿಷ್ಟದಂತೆ ನಡೆಯಬೇಕು. ಇಂಥ ಜಾಗದಲ್ಲೇ ನಡೆಯಬೇಕು. ಇಂಥ ಕಾಸ್ಟ್ಯೂಮ್‌ಗಳಲ್ಲೇ ನಡೆಯಬೇಕು ಅನ್ನೋ ಆಸೆ ಹಲವರಿಗಿರುತ್ತದೆ.
ಹಾಗಾಗಿ ಬಹಳಷ್ಟು ಜನರು ರಾಜಸ್ಥಾನದಲ್ಲೋ, ಗೋವಾದ ಕಡಲ ತೀರದಲ್ಲೋ ಮದುವೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ನೆರೆಯ ಕೇರಳ ಕೂಡ ಇಂಥ ಡೆಸ್ಟಿನೇಶನ್ ವೆಡ್ಡಿಂಗ್ ಸ್ಪಾಟ್‌ಗಳಲ್ಲಿ ಮುಂಚೂಣಿಯಲ್ಲಿದೆ.
ಯುವಜೋಡಿಗಳನ್ನು ಆಕರ್ಷಿಸಲು ಸಜ್ಜಾದ ಕೇರಳ !
ಪ್ರೀಮಿಯಂ ಹೋಟೆಲ್‌ಗಳು, ದೊಡ್ಡ ಹಾಲ್‌ಗಳನ್ನು ನಿರ್ಮಿಸುವ ಮೂಲಕ ಮತ್ತು ವೈವಿಧ್ಯಮಯ ಪಾಕಪದ್ಧತಿಗಳನ್ನು ಏರ್ಪಡಿಸುವ ಮೂಲಕ ಯುವ ಜೋಡಿಗಳನ್ನು ಆಕರ್ಷಿಸಲು ಕೇರಳ ಸಜ್ಜಾಗುತ್ತಿದೆ. ಹೌದು, ಕೇರಳ ಸರ್ಕಾರವು ರಾಜ್ಯದ ವೈಶಿಷ್ಟ್ಯಗಳನ್ನು ಪ್ರದರ್ಶಿಸಲು ಮತ್ತು ಅಂತಹ ವಿವಾಹಗಳನ್ನು ಆಕರ್ಷಿಸಲು ಮುಂದಾಗಿದೆ.
ಅಂದಹಾಗೆ ನ್ಯೂಯಾರ್ಕ್ ಟೈಮ್ಸ್ನ 2023ರಲ್ಲಿ ಭೇಟಿ ನೀಡಲೇಬೇಕಾದ 52 ಸ್ಥಳಗಳ ಪಟ್ಟಿಯಲ್ಲಿ ಕೇರಳವು 13 ನೇ ಸ್ಥಾನ ಪಡೆದಿದೆ. ಅಲ್ಲದೇ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಸ್ಥಳ ಇದಾಗಿದೆ. ಈ ಮೂಲಕ ಈ ವರ್ಷದ ಆರಂಭದಲ್ಲಿ ಕೇರಳವನ್ನು ಪಟ್ಟಿಯಲ್ಲಿ ಸೇರಿಸಿರುವುದು ಕೇರಳ ಸರ್ಕಾರವನ್ನು ಇನ್ನಷ್ಟು ಪ್ರೋತ್ಸಾಹಿಸಿದೆ.
ಡೆಸ್ಟಿನೇಷನ್ ವೆಡ್ಡಿಂಗ್ ಉತ್ತೇಜಿಸಲು ಮಾರ್ಕೆಟಿಂಗ್ ಅಭಿಯಾನ
ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಕೇರಳ ಸ್ಥಾನ ಪಡೆದಿರುವುದು ತನ್ನ ಜವಾಬ್ದಾರಿಯುತ ಪ್ರವಾಸೋದ್ಯಮ ಯೋಜನೆಗೆ ಮನ್ನಣೆ ಎಂದು ಕೇರಳ ಸರ್ಕಾರ ಪರಿಗಣಿಸಿದೆ. ಅಲ್ಲದೇ ಇದು ಸ್ಥಳೀಯ ಸಮುದಾಯಗಳಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಿದೆ. ಕೇರಳ ಪ್ರವಾಸೋದ್ಯಮ ಇಲಾಖೆಯು ರಾಜ್ಯವನ್ನು ಆದರ್ಶ ವಿವಾಹದ ತಾಣವಾಗಿ ಉತ್ತೇಜಿಸಲು ಡಿಜಿಟಲ್ ಮತ್ತು ವಿಮಾನ ನಿಲ್ದಾಣ ಆಧಾರಿತ ಮಾರ್ಕೆಟಿಂಗ್ ಪ್ರಚಾರಗಳನ್ನು ನಡೆಸಲು ನಿರ್ಧರಿಸಿದೆ.
ಕೇರಳ ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಸ್, “ ಕೇರಳವು ಆದರ್ಶ ವಿವಾಹದ ತಾಣವಾಗಿ ಹೊರಹೊಮ್ಮಲು ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಡೆಸ್ಟಿನೇಶನ್ ವೆಡ್ಡಿಂಗ್ ನಮ್ಮ ಪ್ರವಾಸೋದ್ಯಮದ ಪ್ರಮುಖ ವಿಭಾಗವಾಗಲಿದೆ. ಇದಕ್ಕಾಗಿಯೇ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಬೃಹತ್ ಮಾರ್ಕೆಟಿಂಗ್ ಅಭಿಯಾನದೊಂದಿಗೆ ಮುಂದುವರಿಯುತ್ತಿದೆ " ಎಂದು ಹೇಳಿದ್ದಾರೆ.
ಮದುವೆಯಾಗುವವ ಅವಶ್ಯಕತೆಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಅಭಿಯಾನಗಳು, ಕೇರಳದ ಮೋಡಿಮಾಡುವ ನೈಸರ್ಗಿಕ ಸೌಂದರ್ಯ, ಶಾಂತ ಕಡಲತೀರಗಳು, ಪ್ರಶಾಂತ ಹಿನ್ನೀರು, ಪರಿಪೂರ್ಣ ಹವಾಮಾನ ಮತ್ತು ಸೊಗಸಾದ ಪಾಕಪದ್ಧತಿಯನ್ನು ಹೈಲೈಟ್ ಮಾಡುವ ನಿರೀಕ್ಷೆಯಿದೆ.
ಕೋವಿಡ್ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ!
ರಾಜ್ಯಕ್ಕೆ ಪ್ರವಾಸಿಗರ ಆಗಮನದ ಸಂಖ್ಯೆಯಲ್ಲಿನ ಹೆಚ್ಚಳವು ಉತ್ತೇಜಕ ಅಂಶವಾಗಿದೆ. ಕೇರಳವು ದೇಶೀಯ ಪ್ರವಾಸಿಗರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಎರಡು ವರ್ಷಗಳ ಹಿಂದೆ ಕೋವಿಡ್ -19 ಕಾರಣದಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿತ್ತು. ಆದರೆ ಸಾಂಕ್ರಾಮಿಕ ರೋಗದ ನಂತರ 2022ರಲ್ಲಿ ಪ್ರವಾಸಿಗರ ಸಂಖ್ಯೆ ಭಾರಿ ಜಿಗಿತವನ್ನು ಕಂಡಿದೆ.
ಕೇರಳ ಪ್ರವಾಸೋದ್ಯಮ ಅಂಕಿಅಂಶಗಳ ಪ್ರಕಾರ, ದೇಶೀಯ ಪ್ರವಾಸಿಗರ ಸಂಖ್ಯೆ 2022 ರಲ್ಲಿ ಹಿಂದಿನ ವರ್ಷಕ್ಕಿಂತ 150 ಪ್ರತಿಶತದಷ್ಟು ಏರಿಕೆಯಾಗಿದೆ. ಹಾಗೆಯೇ 1.8 ಕೋಟಿಗೆ ತಲುಪಿದೆ. ಅಂತರಾಷ್ಟ್ರೀಯ ಪ್ರವಾಸಿಗರ ಹರಿವಿನ ಬೆಳವಣಿಗೆಯು ತುಂಬಾ ಹೆಚ್ಚಿದ್ದು, ಇದು 2022 ರಲ್ಲಿ 3.4 ಲಕ್ಷಕ್ಕೆ ಐದು ಪಟ್ಟು ಹೆಚ್ಚಾಗಿದೆ. ಆದರೆ ಈ ಸಂಖ್ಯೆ ಇನ್ನೂ ಸಾಂಕ್ರಾಮಿಕದ ಮೊದಲಿನ ಸಮಯಕ್ಕೆ ಹಿಂತಿರುಗಿಲ್ಲ ಎನ್ನಲಾಗಿದೆ.
ಇಷ್ಟಲ್ಲದೇ ಮದುವೆಯೆಂದರೆ ಹೆಚ್ಚು ನೆಂಟರು ಇಷ್ಟರು ಸ್ನೇಹಿತರು ಬರುತ್ತಾರೆ. ಡೆಸ್ಟಿನೇಷನ್ ವೆಡ್ಡಿಂಗ್‌ಗಳಲ್ಲಿ ಬಹಳಷ್ಟು ಜನರು ಕೆಲ ದಿನಗಳ ಕಾಲ ಉಳಿಯುತ್ತಾರೆ. ಇವರು ತಂಗುವಂಥ ಪ್ರೀಮಿಯಂ ಹೋಟೆಲ್‌ಗಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಮಧ್ಯ ಕೇರಳಕ್ಕೆ ಹೆಚ್ಚು ಬೇಡಿಕೆ!
ಕೇರಳ ರಾಜ್ಯದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗಳು ಹೆಚ್ಚಾಗಿ ಮಧ್ಯ ಕೇರಳದ ಸುತ್ತಮುತ್ತ ನಡೆಯುತ್ತವೆ. ಎರಡು ದಶಕಗಳ ಹಿಂದೆ ಆಗಿನ ಪ್ರಧಾನಿ ಎಬಿ ವಾಜಪೇಯಿ ಅವರ ಭೇಟಿಯ ನಂತರ ಕೊಟ್ಟಾಯಂನ ಕುಮರಕೊಮ್ ಪ್ರವಾಸಿ ತಾಣವಾಗಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿತು. ಇದರಿಂದಾಗಿ ಈ ಸ್ಥಳದಲ್ಲಿ ಪ್ರೀಮಿಯಂ ಹೋಟೆಲ್‌ಗಳ ಸಂಖ್ಯೆಯು ಹೆಚ್ಚಾಗಿವೆ.
ಹಿನ್ನೀರು ಮತ್ತು ಸರೋವರಗಳ ರಮಣೀಯ ಸೌಂದರ್ಯವು ರಾಜ್ಯದ ಹೊರಗಿನಿಂದ ಅನೇಕ ಯುವ ಜೋಡಿಗಳನ್ನು ಕುಮಾರಕೋಮ್ ಆಕರ್ಷಿಸಿದೆ. ಆದರೆ ಸಾಂಕ್ರಾಮಿಕ ಕೋವಿಡ್ ಬಳಿಕ ಕುಮಾರಕೋಮ್‌ನ ಹೋಟೆಲ್‌ಗಳು ತೀವ್ರತರ ನಷ್ಟವನ್ನು ಅನುಭವಿಸಿದ್ದವು.
6 ತಿಂಗಳು ಮುಂಚಿತವಾಗಿ ಬುಕ್ಕಿಂಗ್
ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. “ ಕಳೆದ ಅಕ್ಟೋಬರ್‌ನಿಂದ ಇಲ್ಲಿ ಹೆಚ್ಚು ಹೆಚ್ಚು ಮದುವೆಗಳು ನಡೆಯುತ್ತಿವೆ. ನಾವು 100 ಕ್ಕೂ ಹೆಚ್ಚು ಮದುವೆಗಳನ್ನು ಮಾಡಿಸಿದ್ದೇವೆ. ಅತಿಥಿಗಳು ಸಮಾರಂಭಗಳಿಗಾಗಿ 2-3 ದಿನಗಳನ್ನು ಕಳೆಯುತ್ತಾರೆ. ಅವರು ಆರು ತಿಂಗಳು ಅಥವಾ ಅದಕ್ಕಿಂತ ಮುಂಚಿತವಾಗಿ ಕಾಯ್ದಿರಿಸುತ್ತಾರೆ ” ಎಂದು ಪ್ರದೇಶದ ಹೋಟೆಲ್‌ಗಳ ಸಂಘದ, ವೆಂಬನಾಟ್ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಚೇಂಬರ್‌ನ ಅಧ್ಯಕ್ಷ ಸಂಜಯ್ ವರ್ಮಾ ಹೇಳುತ್ತಾರೆ.
ಇನ್ನು ನಗರದಲ್ಲಿ ಮದುವೆಗಳನ್ನು ಇಷ್ಟಪಡುವವರಿಗೆ, ಕೊಚ್ಚಿ ಮೊದಲ ಆಯ್ಕೆಯಾಗಿದೆ. ರಾಜ್ಯದ ಸಾಂಸ್ಕೃತಿಕ ರಾಜಧಾನಿಯಾಗಿರುವ ತ್ರಿಶೂರ್ ಕೂಡ ಬೇಡಿಕೆಯಲ್ಲಿದೆ.
ಕಳೆದ ವರ್ಷ ಕೊಚ್ಚಿ ಮತ್ತು ತ್ರಿಶೂರ್‌ನಲ್ಲಿರುವ ಹಯಾತ್ ಗ್ರೂಪ್ ಹೋಟೆಲ್‌ಗಳು ಕ್ರಮವಾಗಿ 36 ಮತ್ತು 27 ಡೆಸ್ಟಿನೇಶನ್ ವೆಡ್ಡಿಂಗ್‌ಗಳನ್ನು ನಡೆಸಿದ್ದವು. ಅಲ್ಲದೇ ತ್ರಿಶೂರ್‌ನ ಹೋಟೆಲ್‌ಗಳಲ್ಲಿ 117 ಸ್ಥಳೀಯ ವಿವಾಹಗಳೂ ನಡೆದಿವೆ.
ಕೇರಳದ ಇತರ ಜನಪ್ರಿಯ ಮದುವೆ ಸ್ಥಳಗಳು
ತಿರುವನಂತಪುರಂ : ದಕ್ಷಿಣ ಕೇರಳದ ತಿರುವನಂತಪುರಂ ಇಂಥದ್ದೊಂದು ಪ್ರಸಿದ್ಧ ತಾಣಗಳ ಲಿಸ್ಟ್ ಸೇರಲು ರೆಡಿಯಾಗಿದೆ. “ ವಿವಾಹ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡಲು ತಿರುವನಂತಪುರಂನಲ್ಲಿರುವ ಕೋವಲಂ ಮತ್ತು ಪೂವರ್‌ನಂತಹ ಬೀಚ್ ಸ್ಥಳಗಳೊಂದಿಗೆ ಪಾಲುದಾರರಾಗಲು ಯೋಜಿಸಿದ್ದೇವೆ.
ನಾವು ನಗರದಲ್ಲಿ ದೊಡ್ಡ ಹಾಲ್‌ಗಳಲ್ಲಿ ಒಂದನ್ನು ಹೊಂದಿದ್ದೇವೆ. ಮದುವೆಯ ಅತಿಥಿಗಳಿಗಾಗಿ ವಿವಿಧ ಭಕ್ಷ್ಯ ಭೋಜನಗಳನ್ನು ಏರ್ಪಡಿಸುತ್ತೇವೆ. ಭವಿಷ್ಯದಲ್ಲಿ ನಾವು ನಮ್ಮ ಆದಾಯದ ಗಣನೀಯ ಭಾಗವನ್ನು ಮದುವೆಗಳಿಂದ ಸಂಗ್ರಹಿಸಲು ನಿರೀಕ್ಷಿಸುತ್ತೇವೆ ” ಎಂದು ಹಯಾತ್ ತಿರುವನಂತಪುರಂನ ಜನರಲ್ ಮ್ಯಾನೇಜರ್ ರಾಹುಲ್ ರಾಜ್ ಹೇಳಿದ್ದಾರೆ.
ಅಲ್ಲದೇ, ಒ ಬೈ ತಾಮಾರ ದಂತಹ ಬ್ಯುಸಿನೆಸ್ ಹೋಟೆಲ್‌ಗಳು ಸಹ ದೊಡ್ಡ ಹಾಲ್‌ಗಳೊಂದಿಗೆ ಡೆಸ್ಟಿನೇಶನ್ ವೆಡ್ಡಿಂಗ್‌ಗಳನ್ನು ಆಯೋಜಿಸಲು ಸಿದ್ಧವಾಗುತ್ತಿವೆ.
ಕೋವಲಂ : ಕೋವಲಂ ಈಗಾಗಲೇ ಡೆಸ್ಟಿನೇಷನ್ ವೆಡ್ಡಿಂಗ್‌ಗಳಿಗೆ ಆಕರ್ಷಣೆಯಾಗಿದೆ. ಕೋವಲಂನಲ್ಲಿರುವ ರವೀಜ್ ಗ್ರೂಪ್ ಹೋಟೆಲ್‌ಗಳು ಮತ್ತು ಕೊಲ್ಲಂನ ಅಷ್ಟಮುಡಿಗಳು ಡೆಸ್ಟಿನೇಶನ್ ವೆಡ್ಡಿಂಗ್‌ಗಳಿಗೆ ನೆಚ್ಚಿನ ತಾಣಗಳಾಗಿವೆ.
“ ನಾವು ಕೋವಲಂನಲ್ಲಿ 30 ಮತ್ತು ಅಷ್ಟಮುಡಿಯಲ್ಲಿ 15 ವಿವಾಹಗಳನ್ನು ನಡೆಸಿದ್ದೇವೆ. ಇವರಲ್ಲಿ ಹೆಚ್ಚಿನವರು ಉತ್ತರ ಭಾರತೀಯ ಅಥವಾ ಎನ್‌ಆರ್‌ಐ ದಂಪತಿಗಳು, ಸಮುದ್ರ ಅಥವಾ ಸರೋವರದ ಸ್ಥಳಗಳನ್ನು ಆದ್ಯತೆ ನೀಡುತ್ತಾರೆ ” ಎಂದು ರವೀಜ್ ಗ್ರೂಪ್‌ನ ಸೇಲ್ಸ್ ಡೈರೆಕ್ಟರ್ ಎಂಎಸ್ ಶರತ್ ಹೇಳಿದ್ದಾರೆ.
ಇದನ್ನೂ ಓದಿ: Sri Lanka: ಈ ದೇಶಕ್ಕೆ ಭೇಟಿ ನೀಡಬೇಕಾದ್ರೆ ಒಂದಷ್ಟು ರಹಸ್ಯಗಳನ್ನು ತಿಳಿದುಕೊಂಡಿರಲೇಬೇಕು!
ವಯನಾಡ್ : ಉತ್ತರ ಕೇರಳದ ವಯನಾಡ್ ನಗರಗಳ ಗಡಿಬಿಡಿಯಿಂದ ದೂರವಾಗಿ ಮದುವೆಗೆ ಆದ್ಯತೆ ನೀಡುವ ಜೋಡಿಗಳ ಗಮನವನ್ನು ಸೆಳೆಯುತ್ತಿದೆ.
ಮೈಸೂರು, ಕೋಯಿಕ್ಕೋಡ್ ಮತ್ತು ಕಣ್ಣೂರಿನ ವಿಮಾನ ನಿಲ್ದಾಣಗಳಿಂಲೂ ಈ ಪ್ರದೇಶಕ್ಕೆ ಬರಬಹುದು. " ಹೆಚ್ಚು ದೊಡ್ಡ ಹೋಟೆಲ್‌ಗಳಿಲ್ಲದಿದ್ದರೂ, ಇಲ್ಲಿಗೆ ಬರುವ ಜನರು ಮದುವೆಗಳಿಗೆ ನೈಸರ್ಗಿಕ ಪರಿಸರದಲ್ಲಿರುವ ರೆಸಾರ್ಟ್‌ಗಳು ಮತ್ತು ವಿಲ್ಲಾಗಳನ್ನು ಆದ್ಯತೆ ನೀಡುತ್ತಾರೆ " ಎಂದು ವಯನಾಡ್ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ವಾಂಚೇಶ್ವರನ್ ಹೇಳಿದರು.
ಒಟ್ಟಾರೆ, ರಾಜಸ್ಥಾನ ಮತ್ತು ಗೋವಾ ಈಗ ಡೆಸ್ಟಿನೇಷನ್ ವೆಡ್ಡಿಂಗ್‌ಗಳಿಗೆ ಪ್ರಮುಖ ಸ್ಥಳಗಳಾಗಿವೆ. ಈ ರಾಜ್ಯಗಳಿಗಿಂತ ಭಿನ್ನವಾಗಿ, ಕೇರಳವು ಗಿರಿಧಾಮಗಳು, ಹಿನ್ನೀರು, ಕಡಲತೀರಗಳು, ಕಾಡುಗಳು ಮುಂತಾದವು ಈ ವಿಷಯದಲ್ಲಿ ಹೆಚ್ಚಿನ ಕೊಡುಗೆಗಳನ್ನು ಹೊಂದಿದೆ.
"ನಾವು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಮೂಲಕ ಕೇರಳವನ್ನು ವಿಶಿಷ್ಟ ತಾಣವಾಗಿ ತೋರಿಸುತ್ತಿದ್ದೇವೆ " ಎಂದು ಕೇರಳ ಪ್ರವಾಸೋದ್ಯಮ ನಿರ್ದೇಶಕ ಪಿಬಿ ನೂಹ್ ಹೇಳುತ್ತಾರೆ.
ಹೆಚ್ಚಿನ ಡೆಸ್ಟಿನೇಷನ್ ವೆಡ್ಡಿಂಗ್‌ಗಳು ಮೆಹಂದಿ ಮತ್ತು ಸಂಗೀತದೊಂದಿಗೆ ಎರಡು ಮೂರು ದಿನಗಳ ಕಾಲ ನಡೆಯುತ್ತವೆ. ಅಲ್ಲದೇ ಮದುವೆಯೆಂದರೆ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡಲು ಒಂದು ಅವಕಾಶವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ, ವಧು ಅಥವಾ ವರ ಕೇರಳದವರಾಗಿರುತ್ತಾರೆ ಎಂದು ಹಯಾತ್ ಹೋಟೆಲ್ಸ್ ಕೇರಳದ ಮಾರುಕಟ್ಟೆ ನಿರ್ದೇಶಕ ಶಾನಾ ಹೇಳುತ್ತಾರೆ.
ಹಾಗಾಗಿ ಕೇರಳವು ಡೆಸ್ಟಿನೇಷನ್ ವೆಡ್ಡಿಂಗ್ ಹೊಸ ಹಾಟ್‌ಸ್ಪಾಟ್ ಆಗಿದೆ ಎಂದರೆ ತಪ್ಪಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ