Aadhar Card - PAN Card: ರಾಷ್ಟ್ರದಲ್ಲಿ ಎದುರಾಗಿದ್ದ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಪರಿಗಣಿಸಿ, ಕೇಂದ್ರ ಸರಕಾರವು, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು, ಗಡುವನ್ನು ವಿಸ್ತರಿಸಿತ್ತು. ಮಾರ್ಚ್ 31 ರಿಂದ ಜೂನ್ 30ರ ವರೆಗೆ ಗಡುವು ವಿಸ್ತರಿಸಲಾಗಿದೆ. ಇದೀಗ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಗಡುವು ಸಮೀಪಿಸುತ್ತಿದ್ದು, ಕೆಲವೇ ಸಮಯ ಉಳಿದಿದೆ.
ಯಾರಾದರೂ ಪ್ಯಾನ್ ಕಾರ್ಡ್ನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಲು ವಿಫಲವಾದರೆ, ಅದು ನಿಷ್ಕ್ರೀಯಗೊಳ್ಳುತ್ತದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಒಂದು ವೇಳೆ ಗಡುವಿನ ಅವಧಿ ಮುಗಿದ ಬಳಿಕ, ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಿದರೆ, ಆಗ ಪ್ಯಾನ್ ಕಾರ್ಡ್ “ ಆಧಾರ್ ಸಂಖ್ಯೆಯನ್ನು ತಿಳಿಸಿದ ದಿನಾಂಕದಿಂದ ಕಾರ್ಯರೂಪಕ್ಕೆ ಬರುತ್ತದೆ” ಎಂದು ಅದು ಸ್ಪಷ್ಟೀಕರಣ ನೀಡಿದೆ.
ಕೇಂದ್ರ ಸರಕಾರವು, 2021ರ ಬಜೆಟ್ನಲ್ಲಿ , ಆದಾಯ ತೆರಿಗೆ ಕಾಯ್ದೆ 1961ಕ್ಕೆ ಹೊಸ ಸೆಕ್ಷನ್ 234ಹೆಚ್ ಅನ್ನು ಸೇರಿಸಿತು. ಅದರ ಪ್ರಕಾರ, ಗಡುವಿನ ಅವಧಿ ಮೀರಿದ ನಂತರ ವ್ಯಕ್ತಿಗಳು ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಿದರೆ,ಅವರಿಗೆ ಶುಲ್ಕ ವಿಧಿಸಬಹುದು. ಹೊಸ ಸೆಕ್ಷನ್ 234ಹೆಚ್ ಪ್ರಕಾರ, 2021ರ ಜುಲೈ 1 ಅಥವಾ ಅದರ ನಂತರ ಪ್ಯಾನ್ ಕಾರ್ಡ್ನೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿದರೆ, ವ್ಯಕ್ತಿ 1,000 ರೂ. ಮೀರದ ದಂಡವನ್ನು ಪಾವತಿಸಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾದರೆ, ಪ್ಯಾನ್ ಕಾರ್ಡ್ ಅನ್ನು ಉಲ್ಲೇಖಿಸುವುದು ಕಡ್ಡಾಯವಾಗಿರುವ ಕಡೆಯಲ್ಲೆಲ್ಲಾ, ನಿಮಗೆ ಹಣಕಾಸಿನ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ನ ಫೆಬ್ರವರಿ 2021ರ ಅಧಿಸೂಚನೆಯಲ್ಲಿ, ಒಮ್ಮೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ನೊಂದಿಗೆ ಸಂಪರ್ಕ ಹೊಂದಿದ ನಂತರ , ಅದು ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಸಂಪರ್ಕ ಹೊಂದಿದ ದಿನಾಂಕದಿಂದ ಕಾರ್ಯರೂಪಕ್ಕೆ ಬರುತ್ತದೆ ಎಂದು ತಿಳಿಸಲಾಗಿದೆ.
ಒಂದು ವೇಳೆ ಗಡುವಿನ ದಿನಾಂಕದ ನಂತರ,ಅಂದರೆ ಜೂನ್ 30ರ ನಂತರ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿದರೆ, ಸೆಕ್ಷನ್ 234ಹೆಚ್ ಪ್ರಕಾರ ಅಂತಹ ವ್ಯಕ್ತಿಗಳಿಗೆ ದಂಡ ವಿಧಿಸಲಾಗುವುದು.
ಹಾಗಾಗಿ ಗಡುವು ಮೀರುವ ಮುನ್ನವೇ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಮಾಡುವ ಸಲಹೆ ನೀಡಲಾಗಿದೆ. ಆದಾಯ ತೆರಿಗೆ ಕಾನೂನುಗಳ ಪ್ರಕಾರ, ವ್ಯಕ್ತಿಯು ಜೂನ್ 30ರ ಒಳಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಮಾಡಿಲ್ಲದ ಕಾರಣ ಅದು ನಿಷ್ಕ್ರೀಯವಾಗಿದ್ದರೆ, ಅಂತಹ ವ್ಯಕ್ತಿಯ ಪ್ಯಾನ್ ಕಾರ್ಡನ್ನು ಉಲ್ಲೇಖಿಸಲು ಅಥವಾ ಒದಗಿಸುವ ಅಗತ್ಯವಿದ್ದರೆ, ಅವರು ಡಾಕ್ಯುಮೆಂಟ್ನಲ್ಲಿ ಆ ಅಗತ್ಯವನ್ನು ಒದಗಿಸಿಲ್ಲ/ತಿಳಿಸಿಲ್ಲ / ಉಲ್ಲೇಖಿಸಿಲ್ಲ ಎಂದು ಪರಿಗಣಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯಡಿ ಎಲ್ಲಾ ಪರಿಣಾಮಗಳಿಗೆ ಅವರೇ ಹೊಣೆಯಾಗಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ