ಒಮ್ಮೊಮ್ಮೆ ವಿಧಿ ನಮ್ಮ ಜೀವನದಲ್ಲಿ ಎಷ್ಟು ಕ್ರೂರವಾದ ಆಟವನ್ನು ಆಡಿಬಿಡುತ್ತದೆ ಎಂದರೆ ನಾವು ಮಾಡಿಲ್ಲದ ತಪ್ಪಿಗೆ ನಾವೇ ಹೊಣೆಗಾರರಾಗುವ ಪರಿಸ್ಥಿತಿ (Situation) ಬಂದೊದಗುತ್ತದೆ. ಇದನ್ನೇ ವಿಧಿ ವಿಪರ್ಯಾಸ ಎನ್ನುತ್ತಾರೇನೋ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ 42 ವರ್ಷದ ಬೀಡಿ ಕಾರ್ಮಿಕ ಜೀತ್ರಾಯ್ ಸಮಂತ್ ಕೂಡ ವಿಧಿಯಾಡಿದ ಆಟಕ್ಕೆ ಜೈಲುವಾಸ ಅನುಭವಿಸುವಂತಾಗಿದೆ. ಎರಡು ವರ್ಷಗಳ ಹಿಂದೆ ಅವರ ಆಧಾರ್ (Adhar) ಸಂಖ್ಯೆಗೆ ತಪ್ಪಾಗಿ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ (Bank Account) ಅವರನ್ನು ಮೋಸಗಾರ ಎಂಬ ಪಟ್ಟ ಕಟ್ಟುವಂತೆ ಮಾಡಿದೆ ಈ ವಿಷಯದಲ್ಲಿ ಜೀತ್ರಾಯ್ ನಿರ್ದೋಷಿಯಾಗಿದ್ದಾರೆ.
ಆಧಾರ್ ಸಂಖ್ಯೆಗೆ ತಪ್ಪಾಗಿ ಲಿಂಕ್ ಮಾಡಿದ್ದೇ ತಪ್ಪಾಯ್ತು!
ರೂ 1 ಲಕ್ಷಕ್ಕಿಂತ ಹೆಚ್ಚಿನ ಹಣವಿದ್ದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯನ್ನು ಜೀತ್ರಾಯ್ ಆಧಾರ್ ಸಂಖ್ಯೆಗೆ ತಪ್ಪಾಗಿ ಲಿಂಕ್ ಮಾಡಿದ್ದೇ ಇಂದು ಜೀತ್ರಾಯ್ ಸೆರೆಮನೆಯಲ್ಲಿ ದಿನದೂಡುವ ಪರಿಸ್ಥಿತಿ ತಂದಿಟ್ಟಿದೆ. ಆತ ಬ್ಯಾಂಕ್‌ನಲ್ಲಿದ್ದ ಹಣವನ್ನು ವಿದ್‌ಡ್ರಾ ಮಾಡಿಕೊಂಡಿದ್ದಾನೆಂದು ನೀಡಿದ ದೂರಿನ ಮೇರೆಗೆ ಪೊಲೀಸರು ಜೀತ್ರಾಯ್ ಅವರನ್ನು ಬಂಧಿಸಿದ್ದಾರೆ.
ಕೋವಿಡ್ ವ್ಯಾಪಕವಾಗಿ ಪರಿಣಾಮ ಬೀರಿದ್ದ ಸಮಯದಲ್ಲಿ ತಮ್ಮ ಖಾತೆಯಲ್ಲಿದ್ದ ಹಣದ ಬಗ್ಗೆ ಜೀತ್ರಾಯ್‌ಗೆ ಕಾಮನ್ ಸರ್ವಿಸ್ ಸೆಂಟರ್ ಮೂಲಕ ತಿಳಿದುಬರುತ್ತದೆ. ಫಲಾನುಭವಿಯು ತನ್ನ ಖಾತೆಯಲ್ಲಿ ಹೊಂದಿರಬಹುದಾದ ಹಣವನ್ನು ಹಿಂಪಡೆಯಲು ಸಹಾಯ ಮಾಡಲು CSC ಬ್ಯಾಂಕ್ ಪ್ರತಿನಿಧಿಯನ್ನು ಸಹ ಹೊಂದಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಹಣ ಹಿಂತಿರುಗಿಸದ ಜೀತ್ರಾಯ್ ಸಮಂತ್
ಆದರೆ ಜಾರ್ಖಂಡ್ ರಾಜ್ಯ ಗ್ರಾಮೀಣ ಬ್ಯಾಂಕ್‌ನ ಮ್ಯಾನೇಜರ್ ಶ್ರೀಮತಿ ಲಗುರಿ ತಮ್ಮ ಖಾತೆಯಿಂದ ಹಣ ಕಣ್ಮರೆಯಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಜೀತ್ರಾಯ್ ಸಿಕ್ಕಿಬಿದ್ದಿದ್ದಾರೆ. ಮ್ಯಾನೇಜರ್ ಅಧಿಕಾರಿಗಳಿಗೆ ಪತ್ರ ಬರೆದು, ಸಂಭವಿಸಿದ ದೋಷವನ್ನು ಕಂಡುಹಿಡಿದ ನಂತರ ಹಣ ಹಿಂತಿರುಗಿಸುವಂತೆ ಜೀತ್ರಾಯ್‌ಗೆ ತಿಳಿಸುತ್ತಾರೆ. ಆದರೆ ಹಣ ಹಿಂತಿರುಗಿಸಲು ಸಾಧ್ಯವಾಗದ ಕಾರಣ ಅಕ್ಟೋಬರ್‌ನಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 420 (ವಂಚನೆ) ಅಡಿಯಲ್ಲಿ ಜಿಲ್ಲೆಯ ಮುಫಸಿಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು.
ಇದನ್ನೂ ಓದಿ: ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಕೇರಳ ಹೊಸ ಹಾಟ್‌ಸ್ಪಾಟ್! ಯುವ ಜೋಡಿಗಳನ್ನು ಆಕರ್ಷಿಸಲು ಸರ್ಕಾರ ಹೊಸ ಯೋಜನೆ
ಪೊಲೀಸ್ ಸೂಪರಿಂಟೆಂಡೆಂಟ್ ಅಶುತೋಷ್ ಶೇಖರ್ ಸುದ್ದಿಮಾಧ್ಯಮಕ್ಕೆ ತಿಳಿಸಿರುವಂತೆ ಸಮಂತ್‌ರನ್ನು ಬಂಧಿಸಿದ್ದು ನಿಜ ಏಕೆಂದರೆ ಅವರ ಆಧಾರ್ ಅನ್ನು ಬೇರೊಬ್ಬರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವುದೇ ಇಲ್ಲಿ ನಡೆದಿರುವ ತಪ್ಪಾಗಿದೆ. ಆದರೆ ಅವರು ವಿದ್‌ಡ್ರಾ ಮಾಡಿದ್ದ ಹಣವನ್ನು ಹಿಂತಿರುಗಿಸಲಿಲ್ಲ ಹೀಗಾಗಿ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ. ಅದೂ ಅಲ್ಲದೆ CSC ಕಚೇರಿಯಲ್ಲಿ ಆತ ಲಂಚ ನೀಡಿದ್ದು ಈ ವಿಷಯ ಬೇರೆಯವರಿಗೆ ತಿಳಿಯದಂತಹ ವಂಚನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಹಣ ಕಳುಹಿಸಿದ್ದಾರೆ ಎಂದೇ ತಾನು ನಂಬಿದ್ದಾಗಿ ಜೀತ್ರಾಯ್ ಪೊಲೀಸರಿಗೆ ಪತ್ರ ಬರೆದಿದ್ದರು ಎಂದು ತಿಳಿಸಿದ್ದಾರೆ.
ಆಕಸ್ಮಿಕವಾಗಿ ಆಧಾರ್ ಬೇರೊಬ್ಬರ ಖಾತೆಗೆ ಲಿಂಕ್ ಆಗಿದೆ
ಈ ಬಗ್ಗೆ ವಿವರಣೆ ನೀಡಿರುವ ಬ್ಯಾಂಕ್ ಮ್ಯಾನೇಜರ್ ಮನೀಶ್ ಕುಮಾರ್, ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಬ್ಯಾಂಕ್‌ಗೆ ಪ್ರಾಯೋಜಕತ್ವ ನೀಡುತ್ತಿತ್ತು ಮತ್ತು ಈಗ ಅದನ್ನು ಎಸ್‌ಬಿಐ ಮಾಡುತ್ತದೆ ಹಾಗಾಗಿ ಸಂಪೂರ್ಣ ಡೇಟಾವನ್ನು ಏಪ್ರಿಲ್ 2019 ರಲ್ಲಿ ಎಸ್‌ಬಿಐ ಯೊಂದಿಗೆ ವಿಲೀನಗೊಳಿಸಲಾಯಿತು ಮತ್ತು ಈ ಪ್ರಕ್ರಿಯೆಯಲ್ಲಿ ಸಮಂತ್ ಅವರ ಆಧಾರ್ ಸಂಖ್ಯೆಯನ್ನು ಆಕಸ್ಮಿಕವಾಗಿ ಬೇರೊಬ್ಬರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲಾಗಿದೆ. ಈ ಕುರಿತು ಖಾತೆದಾರರು ದೂರು ನೀಡಿರಲಿಲ್ಲ ಇಲ್ಲದಿದ್ದರೆ ಅದನ್ನು ತಡೆಯಬಹುದಿತ್ತು ಹೀಗಾಗಿ ಇದನ್ನು ಬ್ಯಾಂಕ್ ಅಧಿಕಾರಿಯ ತಪ್ಪು ಎಂದು ಹೇಳಲೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಸರಕಾರವೇ ಖಾತೆಗೆ ಹಣ ಕಳುಹಿಸಿದೆ ಎಂದು ಭಾವಿಸಿದ್ದೆ
ಈ ಬಗ್ಗೆ ಸಮಂತ್ ಬಂಧನಕ್ಕೊಳಪಡುವ ಮೊದಲು ಸುದ್ದಿಮಾಧ್ಯಮದೊಂದಿಗೆ ಮಾತನಾಡಿದ್ದು, ಮೊದಲ ಲಾಕ್‌ಡೌನ್ ಸಮಯದಲ್ಲಿ ಗ್ರಾಮದಲ್ಲಿದ್ದ ಪ್ರತಿಯೊಬ್ಬರೂ ಸರಕಾರದಿಂದ ಏನಾದರೂ ಹಣ ದೊರೆಯುತ್ತದೆಂಬ ಆಸೆಯಿಂದ ತಮ್ಮ ತಮ್ಮ ಆಧಾರ್ ಲಿಂಕ್ ಮಾಡಿದ್ದ ಖಾತೆಯನ್ನು ಪರಿಶೀಲಿಸುತ್ತಿದ್ದರು.
ಇದನ್ನೂ ಓದಿ: ಆಫೀಸ್ನಲ್ಲಿ ಧಮ್ ಹೊಡೆಯೋಕೆ ಬ್ರೇಕ್ ತಗೊಳ್ಳೋ ಉದ್ಯೋಗಿಗಳೇ, ಈ ಸುದ್ದಿ ನೋಡಿ!
ನಾನು ಕೂಡ ರೀಡಿಂಗ್ ಮೆಶೀನ್‌ನಲ್ಲಿ ಹೆಬ್ಬೆರಳು ಇರಿಸಿದಾಗ ನನ್ನ ಖಾತೆಯಲ್ಲಿ ರೂ 1,12,000 ಮೊತ್ತ ಜಮೆಯಾಗಿರುವುದು ಕಂಡುಬಂದಿತು. ನಾನು ಗ್ರಾಮೀಣ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ಖಾತೆಗೆ ಯಾವುದೇ ಹಣ ಜಮೆಯಾಗಿರುವುದು ಕಂಡುಬರಲಿಲ್ಲ. ಬ್ಯಾಂಕ್‌ನಲ್ಲಿದ್ದ ಸಿಬ್ಬಂದಿಯನ್ನು ಸಮಂತ್ ವಿಚಾರಿಸಿದಾಗ ಸರಕಾರವೇ ಹಣವನ್ನು ಕಳುಹಿಸುತ್ತದೆ ಎಂದು ಹೇಳಿದ್ದಾರೆ ಎಂದು ಸಮಂತ್ ತಿಳಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಸರಕಾರವೇ ನನ್ನ ಖಾತೆಗೆ ಹಣ ಕಳುಹಿಸಿದೆ ಎಂದು ತಿಳಿದುಕೊಂಡು ನಾನು ಹಣ ಪಡೆದೆ ಎಂದು ಹೇಳಿರುವ ಜೀತ್ರಾಯ್ ನನಗೆ ತಿಳಿಯದೇ ನನ್ನ ಆಧಾರ್ ಅನ್ನು ಬೇರೊಬ್ಬರ ಖಾತೆಗೆ ಲಿಂಕ್ ಮಾಡಿರುವುದರ ಬಗ್ಗೆ ಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾರೆ ಹಾಗೆಯೇ ಬ್ಯಾಂಕ್ ಕೂಡ ಯಾವುದೇ ಮಾಹಿತಿ ನೀಡಿರಲಿಲ್ಲ ಇದರಲ್ಲಿ ನನ್ನ ತಪ್ಪಿಲ್ಲ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ