ಪ್ರತಿಯೊಂದು ರಂಗಗಳಲ್ಲಿ ಇರುವಂತೆ ಕೃಷಿಯಲ್ಲೂ ವಿಭಿನ್ನ ಬಗೆ ಮತ್ತು ಹೊಸ ಹೊಸ ಆವಿಷ್ಕಾರಗಳು ಹಾಗೂ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅದರ ಪರಿಣಾಮವಾಗಿ ಪ್ರತಿ ದಿನ ಹೊಸ ಮತ್ತು ಹೈಬ್ರಿಡ್ ಹಣ್ಣು ಹಾಗೂ ತರಕಾರಿಗಳು(Hybrid Fruit and Vegetables) ಸೃಷ್ಟಿಯಾಗುತ್ತಿವೆ. ಈ ಭೂಮಿಯ ಮೇಲಿನ ಕೆಲವು ದುಬಾರಿ ಹಣ್ಣುಗಳೆಂದರೆ ರೂಬಿ ರೋಮನ್ ದ್ರಾಕ್ಷಿಗಳು(Ruby Roman Grapes), ಡೆಕೋಪಾಸ್ ಕಿತ್ತಳೆ(Dekopon oranges) ಸೆಕೈ ಇಚಿ ಸೇಬುಗಳು(Sekai Ichi Apples). ಆದರೆ ಅವೆಲ್ಲವನ್ನು ಮೀರಿಸಿದ ಅತ್ಯಂತ ದುಬಾರಿ ಬೆಲೆಯ ಹಣ್ಣೊಂದಿದೆ, ಅದುವೇ ಜಪಾನಿನ ಯುಬಾರಿ ಖರ್ಬೂಜ(Yubari melon) ಹಣ್ಣು. ಒಂದು ನಿರ್ದಿಷ್ಟ ವಿಧದ ಐಷಾರಾಮಿ ಹಣ್ಣುಗಳು ಮತು ತರಕಾರಿಗಳು ಹೊಸದೇನಲ್ಲ. ಆದರೆ, ಯುಬಾರಿ ಖರ್ಬೂಜ ಹಣ್ಣು ಮಾತ್ರ ವಿಶೇಷ, ಏಕೆಂದರೆ ಅದು ಅತ್ಯಂತ ದುಬಾರಿ(Costly). ನೀವು ಭೂಮಿ ಅಥವಾ ಚಿನ್ನಕ್ಕೆ ವ್ಯಯಿಸುವಷ್ಟೇ ಹಣವನ್ನು ಈ ಹಣ್ಣನ್ನು ಕೊಳ್ಳಲು ತೆರಬೇಕಾಗುತ್ತದೆ. ಅಷ್ಟು ಬೆಲೆಯುಳ್ಳದ್ದು ಯುಬಾರಿ ಖರ್ಬೂಜ ಹಣ್ಣು.
ವರದಿಗಳ ಪ್ರಕಾರ, ಜಪಾನಿನ ಈ ಹಣ್ಣು ಎಷ್ಟು ದುಬಾರಿ ಎಂದರೆ, ಒಮ್ಮೊಮ್ಮೆ ಇದರ ಬೆಲೆ ಲಕ್ಷಕ್ಕೆ ಏರುವುದುಂಟು. ಯುಬಾರಿ ಖರ್ಬೂಜ ಹಣ್ಣು ತಿನ್ನುವ ಆಸೆಯಾಗಿದೆ, ಲಕ್ಷ ರೂಪಾಯಿಯು ಇದೆ ಎಂದ ಮಾತ್ರಕ್ಕೆ ಗ್ರಾಹಕರು ಈ ಹಣ್ಣನ್ನು ಎಲ್ಲಿ ಬೇಕಾದರೂ ಖರೀದಿಸುವಂತಿಲ್ಲ. ಏಕೆಂದರೆ, ಈ ಯುಬಾರಿ ಖರ್ಬೂಜ ಹಣ್ಣನ್ನು ಜಪಾನ್ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಮತ್ತು ಅಲ್ಲಿನ ಸ್ಥಳೀಯ ಮಾರುಕಟ್ಟೆಗಳಲ್ಲಿ ಹಾಗೂ ಸೂಪರ್ ಮಾರ್ಕೆಟ್ಗಳಲ್ಲಿ ಕೂಡ ಅದು ಲಭ್ಯವಿರುವುದು ಕಷ್ಟಕರ. ಅದೇ ಕಾರಣಕ್ಕಾಗಿ ಯುಬಾರಿ ಖರ್ಬೂಜ ಹಣ್ಣಿಗೆ ಅಷ್ಟೊಂದು ಬೆಲೆ.
ವರದಿಗಳ ಪ್ರಕಾರ ಒಂದು ಕಿಲೋ ಗ್ರಾಂ ಯುಬಾರಿ ಖರ್ಬೂಜ ಹಣ್ಣಿಗೆ ಸುಮಾರು 20 ಲಕ್ಷ ರೂ. ಇರುತ್ತದೆ. ಈ ಖರ್ಬೂಜ ಹಣ್ಣನ್ನು, ಸಮಾಜದ ಗಣ್ಯರು, ಅದರಲ್ಲೂ ಮುಖ್ಯವಾಗಿ ಆಗರ್ಭ ಶ್ರೀಮಂತರಿಗೆ ಮಾತ್ರ ಪ್ರತ್ಯೇಕವಾಗಿ ಲಭ್ಯವಿರುವಂತದ್ದು. ಯುಬಾರಿ ಖರ್ಬೂಜ ಹಣ್ಣು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ, ಅದನ್ನು ಸಾಮಾನ್ಯವಾಗಿ ವ್ಯಾಪಾರಿಗಳು ಮಾರುವುದಿಲ್ಲ ಅಥವಾ ಯಾವುದೇ ರೆಸ್ಟೊರೆಂಟ್ಗಳಲ್ಲೂ ಇದನ್ನು ಬಳಸುವುದಿಲ್ಲ.ಯುಬಾರಿ ಖರ್ಬೂಜ ಹಣ್ಣಿನ ಬೆಲೆ ಕಿಲೋ ಗ್ರಾಂಗೆ 20 ಲಕ್ಷ ರೂ. ವರೆಗೆ ಇದ್ದರೂ ಕೂಡ, ಜಪಾನಿನ ಶ್ರೀಮಂತರಲ್ಲಿ ಈ ಖರ್ಬೂಜ ಹಣ್ಣಿಗೆ ಬಹಳ ಬೇಡಿಕೆ ಇದೆ. ಕಾರಣ ಯುಬಾರಿ ಖರ್ಬೂಜ ಹಣ್ಣು ಅತ್ಯಂತ ಸಿಹಿಯಾಗಿರುತ್ತದೆ ಮಾತ್ರವಲ್ಲ, ಇದನ್ನು ಖರೀದಿಸುವುದು ಪ್ರತಿಷ್ಠೆಯ ಸಂಕೇತವೂ ಹೌದು.
ಶ್ರೀಮಂತರಿಗಾಗಿಯೇ ಈ ಹಣ್ಣಿನ ಮಾರಾಟದ ಹರಾಜು ನಡೆಯುತ್ತದೆಯಂತೆ. ಯುಬಾರಿ ಖರ್ಬೂಜ ಹಣ್ಣನ್ನು ವಿಶೇಷವಾಗಿ ಕೇವಲ ಜಪಾನಿನ ಪುಟ್ಟ ಪಟ್ಟಣವಾದ ಯುಬಾರಿ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಸಾಮೂಹಿಕ ಕೃಷಿಯಲ್ಲಿ ಬೆಳೆಯುವ ಹಣ್ಣು ಇದಲ್ಲ, ಇದನ್ನು ಕೇವಲ ಹಸಿರು ಮನೆಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಈ ಹಣ್ಣು ಬೆಳೆಯಲು 100 ದಿನಗಳು ಬೇಕು. ಈ ಯುಬಾರಿ ಖರ್ಬೂಜ ಹಣ್ಣುಗಳು ತುಂಬಾ ದುಬಾರಿ ಇರಲು ಕಾರಣ ಏನೆಂದರೆ, ಅವು ವ್ಯಾಗ್ಯೂ ಗೋಮಾಂಸ ಅಥವಾ ಐಬೀರಿಯನ್ ಹ್ಯಾಮ್ನಂತೆ , ಭೌಕೋಳಿಕ ಸೂಚನೆಗಳಿಂದ ರಕ್ಷಿಸಲ್ಪಟ್ಟಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ