ವಿಶ್ವದ ಅತಿ ದೊಡ್ಡ ಮೀನು ಮಾರುಕಟ್ಟೆ ಶೀಘ್ರದಲ್ಲೇ ಬಂದ್

news18
Updated:August 17, 2018, 3:19 PM IST
ವಿಶ್ವದ ಅತಿ ದೊಡ್ಡ ಮೀನು ಮಾರುಕಟ್ಟೆ ಶೀಘ್ರದಲ್ಲೇ ಬಂದ್
news18
Updated: August 17, 2018, 3:19 PM IST
-ನ್ಯೂಸ್ 18 ಕನ್ನಡ

ಜಪಾನಿನ ವಿಶ್ವ ಪ್ರಸಿದ್ಧ  ತ್ಸುಕಿಜಿ ಮೀನು ಮಾರುಕಟ್ಟೆ ಶೀಘ್ರದಲ್ಲೇ ಬಾಗಿಲು ಮುಚ್ಚಲಿದೆ. ಶಿಥಿಲಗೊಳ್ಳುತ್ತಿರುವ ಮಾರುಕಟ್ಟೆಯ ಪುನರ್ ನಿರ್ಮಾಣ ಕಷ್ಟಸಾಧ್ಯ ಎಂಬ ತೀರ್ಮಾನಕ್ಕೆ ಇಲ್ಲಿನ ಮೀನು ಮಾರಾಟಗಾರರು ಬಂದಿದ್ದು, ಮುಂದಿನ ವರ್ಷದಿಂದ ಬೇರೊಂದು ಕಡೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದೆ. ಟೋಕಿಯೊದಲ್ಲಿರುವ ಈ ಮಾರುಕಟ್ಟೆಯ ಏರ್ ಕಂಡಿಷನರ್​ಗಳು ಸದ್ಯದ ಜಪಾನಿನ ತಾಪಮಾನಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ವಿಫಲವಾಗುತ್ತಿದೆ. ಹಳೆಯ ಕಾಲದ ಈ ಮೀನು ಮಾರ್ಕೆಟ್​ನಲ್ಲಿ ಉಷ್ಣಾಂಶ ಕೂಡ ಹೆಚ್ಚಾಗುತ್ತಿರುವುದರಿಂದ ಮೀನುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗುತ್ತಿಲ್ಲ. ಹೀಗಾಗಿ ಆಧುನಿಕ ಮಾರುಕಟ್ಟೆಯೊಂದನ್ನು ಸೃಷ್ಟಿಸಿ ಅಲ್ಲಿಗೆ ಸ್ಥಳಾಂತರಗೊಳ್ಳಲು ಇಲ್ಲಿನ ವ್ಯಾಪಾರಿಗಳು ತೀರ್ಮಾನಿಸಿದ್ದಾರೆ.

ಹಳೆಯ ಕಾಲದ ಹವಾನಿಯಂತ್ರಿಕಗಳನ್ನು ಹೊಂದಿರುವ ಈ ಮಾರುಕಟ್ಟೆಯಲ್ಲಿ ಉಷ್ಣಾಂಶವನ್ನು ಸರಿ ಹೊಂದಿಸುವುದು ಕಷ್ಟಕರವಾಗಿದ್ದು, ಶೀಘ್ರದಲ್ಲೇ ಮತ್ತೊಂದು ಮಾರುಕಟ್ಟೆ ಸ್ಥಳಾಂತರಗೊಳ್ಳಲಿದೆ ಎಂದು ತ್ಸುಕಿಜಿ ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೂನಾ ಮೀನುಗಳ ಅತಿ ದೊಡ್ಡ ಮಾರುಕಟ್ಟೆಯಾಗಿರುವ  ಈ ವ್ಯಾಪಾರಿ ಕೇಂದ್ರದಲ್ಲಿ ಮೀನುಗಳನ್ನು ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್​ನಲ್ಲಿ ಇಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಪಾನಿನಲ್ಲಿ ಉಷ್ಣಾಂಶ ಹೆಚ್ಚಾಗಿರುವ ಪರಿಣಾಮ ಮಾರುಕಟ್ಟೆ 20 ಡಿಗ್ರಿ ಸೆಲ್ಸಿಯಸ್​ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಮೀನುಗಳು ತಾಜಾತನದಿಂದ ಕೂಡಿರುವುದಿಲ್ಲ.​ ಇದಕ್ಕಾಗಿ ಇಲ್ಲಿನ ವ್ಯಾಪಾರಿಗಳು ಮೀನುಗಳನ್ನು ಟ್ರಕ್​ನಲ್ಲಿರಿಸಿ, ಹರಾಜಿಗಿಂತ ಕೆಲ ನಿಮಿಷಗಳ ಮುಂಚಿತವಾಗಿ ಮಾರುಕಟ್ಟೆಯ ಒಳಗೆ ತರುತ್ತಿದ್ದಾರೆ. ಇದರಿಂದ ಮೀನಿನ ವ್ಯಾಪಾರ ಕೂಡ ಕಡಿಮೆಯಾಗಿದೆ ಎಂದು ಅಲ್ಲಿನ ವ್ಯಾಪಾರಿಗಳು ತಿಳಿಸಿದ್ದಾರೆ.

80 ವರ್ಷಗಳಷ್ಟು ಹಳೆಯದಾದ ಈ ಮಾರುಕಟ್ಟೆಯನ್ನು ಟೊಯೊಸುಗೆ ಸ್ಥಳಾಂತರಿಸಲು ಸೂಚಿಸಿದ್ದು, ಅಕ್ಟೋಬರ್ 11 ರ ನಂತರ ಇದರ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾರುಕಟ್ಟೆಯ ಆಡಳಿತ ಮಂಡಳಿ ತಿಳಿಸಿದೆ. ವಿಶ್ವದ ಅತಿದೊಡ್ಡ ಮೀನು ಮಾರುಕಟ್ಟೆಯಾಗಿರುವ ಈ ಪ್ರದೇಶವು ರೆಸ್ಟೋರೆಂಟ್​ ಮತ್ತು ಅಂಗಡಿ ಮುಂಗಟ್ಟುಗಳಿಂದ ಜನಪ್ರಿಯ ಪ್ರವಾಸಿ ಕೇಂದ್ರವಾಗಿ ಮಾರ್ಪಟಿತ್ತು. ಆದರೆ ಕೆಲ ವರ್ಷಗಳಿಂದ ಈ ಹಳೆಯ ಮಾರುಕಟ್ಟೆ ಶಿಥಿಲಾವಸ್ಥೆಗೆ ತಿರುಗಿದೆ. 2016 ರಲ್ಲಿ ಈ ಮಾರುಕಟ್ಟೆಯನ್ನು ಸ್ಥಳಾಂತರಿಸುವ ಯೋಜನೆಯನ್ನು ನಿಗದಿ ಪಡಿಸಲಾಗಿತ್ತು. ಆದರೆ ಟೊಸೊಯೊನಲ್ಲಿನ ಮಣ್ಣಿನ ಪರೀಕ್ಷೆಯಲ್ಲಿ ವಿಬಂಬವಾದರಿಂದ ಮಾರುಕಟ್ಟೆಯ ಸ್ಥಾಪನೆಗೆ ತಡವಾಯಿತು ಎಂದು ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತ್ಸುಕಿಜಿ ಮಾರುಕಟ್ಟೆಯನ್ನು 1935 ರಲ್ಲಿ ಪ್ರಾರಂಭಿಸಲಾಗಿತ್ತು. ಟ್ಯೂನಾ ಮೀನುಗಳ ಹರಾಜಿನಲ್ಲಿ ಈ ಮಾರುಕಟ್ಟೆಯು ವಿಶ್ವ ಪ್ರಸಿದ್ಧಿ ಪಡೆದಿದ್ದು, ಹೊಸ ವರ್ಷದ ಹರಾಜಿನ ಸಂದರ್ಭದಲ್ಲಿ ಇಲ್ಲಿ ಒಂದು ಮೀನು 3 ಲಕ್ಷ ಡಾಲರ್​ಗೂ ಹೆಚ್ಚಿನ ಮೊತ್ತಕ್ಕೆ ಹರಾಜಾಗಿ ದಾಖಲೆ ನಿರ್ಮಿಸಿತ್ತು. ಸದ್ಯ ಜಪಾನಿನ ಹವಮಾನದಲ್ಲಿ ಉಷ್ಣಾಂಶ ಹೆಚ್ಚಾಗಿರುವುರಿಂದ ಸಾವು ನೋವುಗಳು ಸಂಭವಿಸುತ್ತಿದೆ. ಕಳೆದ ಒಂದು ತಿಂಗಳಲ್ಲೇ 119 ಜನರು ತೀವ್ರ ಸೆಕೆಯಿಂದ ಮೃತಪಟ್ಟರೆ, 50 ಸಾವಿರಕ್ಕಿಂತ ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಿದ್ದರು.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...