Mount Everest: ಒಂದೇ ಋತುವಿನಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿ ವಿಶ್ವದಾಖಲೆ ನಿರ್ಮಿಸಿದ ನೇಪಾಳಿ ಶೆರ್ಪಾ

Mount Everest: ನೇಪಾಳಿ ಪರ್ವತ ಮಾರ್ಗದರ್ಶಿ ಮಿಂಗ್ಮಾ ತೆಂಜಿ ಶೆರ್ಪಾ, ಎವರೆಸ್ಟ್ ಪರ್ವತವನ್ನು ಒಂದೇ ಋತುವಿನಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಎರಡು ಬಾರಿ ಏರುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ

ಮೌಂಟ್ ಎವರೆಸ್ಟ್

ಮೌಂಟ್ ಎವರೆಸ್ಟ್

  • Share this:
43 ವರ್ಷದ ನೇಪಾಳಿ ಪರ್ವತ ಮಾರ್ಗದರ್ಶಿ ಮಿಂಗ್ಮಾ ತೆಂಜಿ ಶೆರ್ಪಾ, ಎವರೆಸ್ಟ್ ಪರ್ವತವನ್ನು ಒಂದೇ ಋತುವಿನಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಎರಡು ಬಾರಿ ಏರುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಸಂಘಟಕರು ಗುರುವಾರ ತಿಳಿಸಿದ್ದಾರೆ. ಪೂರ್ವ ನೇಪಾಳದ ಸಂಖುವಸಭಾ ಜಿಲ್ಲೆಯ ನಿವಾಸಿ ಮಿಂಗ್ಮಾ ತೆಂಜಿ ಶೆರ್ಪಾ ಅವರು ಮೊದಲು ಮೇ 7 ರ ಸಂಜೆ ಪರ್ವತಾರೋಹಣ ಮಾರ್ಗಕ್ಕೆ ಹಗ್ಗ ಕಟ್ಟುವ ತಂಡದ ಸದಸ್ಯರಾಗಿ ಎವರೆಸ್ಟ್ ಶಿಖರವನ್ನು ತಲುಪಿದರು, ಮತ್ತು ನಂತರ ಮೇ 11 ರ ಬೆಳಿಗ್ಗೆ ವಿಶ್ವದ ಅತಿ ಎತ್ತರದ ಪರ್ವತವನ್ನು ಮಾಪನ ಮಾಡುವ ತಂಡದ ಜೊತೆಗೆ ಎವರೆಸ್ಟ್ ಶಿಖರ ಏರುವ ಮೂಲಕ ದಾಖಲೆ ನಿರ್ಮಾಣ ಮಾಡಿದರು ಎಂದು ಈ ಪರ್ವತಾರೋಹಣವನ್ನು ಆಯೋಜಿಸಿದ ಸೆವೆನ್ ಶೃಂಗಸಭೆ ಚಾರಣದ ಅಧ್ಯಕ್ಷರೂ ಆಗಿರುವ ಮಿಂಗ್ಮಾ ಶೆರ್ಪಾ ಹೇಳಿಕೊಂಡಿದ್ದಾರೆ. ಎರಡನೇ ಬಾರಿಗೆ ಶೆರ್ಪಾ ಎವರೆಸ್ಟ್ ಏರುವ ಸಂದರ್ಭದಲ್ಲಿ ಬಹ್ರೇನ್ ರಾಜಕುಮಾರ ಶೇಖ್ ಮೊಹಮ್ಮದ್ ಹಮದ್ ಮೊಹಮ್ಮದ್ ಅಲ್ ಖಲೀಫಾ ನೇತೃತ್ವದ 16 ಸದಸ್ಯರ ಪರ್ವತಾರೋಹಣ ತಂಡಕ್ಕೆ ಮಾರ್ಗದರ್ಶಿಯಾಗಿ ಕೂಡ ತೆರಳಿದ್ದರು.

ಅವರು ಕೇವಲ ನಾಲ್ಕು ದಿನಗಳಲ್ಲಿ ಎರಡು ಬಾರಿ ಎವರೆಸ್ಟ್ ತಲುಪಿದರು ಹಾಗೂ ವಿಶ್ವ ದಾಖಲೆಯನ್ನು ಸೃಷ್ಟಿಸಿದರು ಎಂದು ಸಂಘಟಕರಾಗಿರುವ ಮಿಂಗ್ಮಾ ಹೇಳಿದರು.

ಈ ಹಿಂದೆ, ಭಾರತೀಯ ಪರ್ವತಾರೋಹಿ ಅನ್ಶು ಜಮ್ಸೆನ್ಪಾ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಮೌಂಟ್ ಎವರೆಸ್ಟ್ ಏರುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದರು. ಅನ್ಶು ಜಮ್ಸೆನ್ಪಾ ಅವರು 2017 ರಲ್ಲಿ 118 ಗಂಟೆ 15 ನಿಮಿಷಗಳಲ್ಲಿ ಎರಡು ಬಾರಿ ಪರ್ವತವನ್ನು ಏರುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮಿಂಗ್ಮಾ ತೆಂಜಿ ಶೆರ್ಪಾ ತಮ್ಮದಾಗಿಸಿಕೊಂಡಿದ್ದಾರೆ. ಇಷ್ಟಾದರೂ ಕೂಡ ಎವರೆಸ್ಟ್‌ ಶಿಖರವನ್ನು ಕಡಿಮೆ ಸಮಯದ ಅವಧಿಯಲ್ಲಿ ಎರಡು ಸಾರಿ ಏರಿದ ಮಹಿಳೆ ಎನ್ನುವ ಖ್ಯಾತಿ ಭಾರತೀಯ ನಾರಿ ಅನ್ಶು ಜಮ್ಸೆನ್ಪಾ ಅವರ ಹೆಸರಿನಲ್ಲಿದೆ.

ಇದೀಗ ಮೌಂಟ್ ಎವರೆಸ್ಟ್ ನಿಖರ ಎತ್ತರ 8,848.86 ಮೀಟರ್ ಆಗಿದ್ದು, ಈ ಎತ್ತರವನ್ನು ಏರಿದ ವಿಶ್ವದ ಮೊದಲ ಅಂತಾರಾಷ್ಟ್ರೀಯ ತಂಡ ಎನ್ನುವ ಖ್ಯಾತಿಯನ್ನು ಬಹರೇನ್‌ನ ರಾಯಲ್ ಗಾರ್ಡ್ ತಂಡ ತನ್ನದಾಗಿಸಿಕೊಂಡಿದೆ.

ಮೇ 8ರಂದು ನೇಪಾಳಿ ಪರ್ವತ ಮಾರ್ಗದರ್ಶಿ ಕಮಿ ರೀಟಾ ಶೆರ್ಪಾ 25ನೇ ಬಾರಿಗೆ ಎವರೆಸ್ಟ್ ಪರ್ವತವನ್ನು ಏರುವ ಮೂಲಕ ತಮ್ಮದೇ ಆದ ದಾಖಲೆಯನ್ನು ಮುರಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನೇಪಾಳ ಮತ್ತು ಚೀನಾ ಜಂಟಿಯಾಗಿ ವಿಶ್ವದ ಅತ್ಯುನ್ನತ ಶಿಖರದ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಘೋಷಿಸಿತು, ಇದು 1954 ರಲ್ಲಿ ಭಾರತ ಮಾಡಿದ ಹಿಂದಿನ ಅಳತೆಗಿಂತ ಸುಮಾರು 86 ಸೆಂಟಿಮೀಟರ್ ಹೆಚ್ಚಾಗಿದೆ.

2015ರ ಭೀಕರ ಭೂಕಂಪ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮೌಂಟ್ ಎವರೆಸ್ಟ್ ಪರ್ವತದ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂಬ ಚರ್ಚೆಗಳ ನಡುವೆ ನೇಪಾಳ ಸರ್ಕಾರ ಪರ್ವತದ ನಿಖರವಾದ ಎತ್ತರವನ್ನು ಅಳೆಯಲು ನಿರ್ಧರಿಸಿತು.
Published by:Sushma Chakre
First published: