ಕೊರೋನಾ ಒಂದನೇ ಅಲೆ, ಎರಡನೇ ಅಲೆ ಎರಡು ವರ್ಷಗಳಿಂದ ಇಡೀ ಪ್ರಪಂಚದ ಜನರನ್ನು ಹೈರಾಣು ಮಾಡಿಬಿಟ್ಟಿವೆ. ಬದುಕಿನ ಚಿತ್ರಣವನ್ನು ಕೆಡಿಸಿಬಿಟ್ಟಿದೆ. ಮಧ್ಯಮ, ಬಡ ವರ್ಗದವರ ಬವಣೆ ಮಾತ್ರ ಹೇಳತೀರದಾಗಿದೆ.ಇಷ್ಟೆಲ್ಲಾ ಹೊಡೆತ ತಿಂದ ಮೇಲೆ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಧರಿಸುವಿಕೆಯೇ ಕೊರೋನಾ ತಡೆಗೆ ಮೂಲ ಕಾರಣ ಎಂದು ಸರ್ಕಾರದಿಂದ ಹಿಡಿದು ಜನಸಾಮಾನ್ಯರವರೆಗೂ ಅರಿವಾಗಿದೆ. ಒಟ್ಟಿನಲ್ಲಿ ಕೊರೋನಾದಿಂದ ನಾನಾ ಬದಲಾವಣೆಯೊಂದಿಗೆ ಹೊಸ ಜೀವನ ವಿಧಾನವನ್ನು ರೂಢಿಸಿಕೊಂಡಿದ್ದೇವೆ.
ಸಾಮಾಜಿಕ ಅಂತರದ ಜೊತೆಗೆ ಅದರಲ್ಲೂ ಇತ್ತೀಚಿನ ದಿನಮಾನಗಳಲ್ಲಿ ಮಾಸ್ಕ್ (ಮುಖಗವಸು) ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾಸ್ಕ್ ಧರಿಸದೇ ಮನೆಯಿಂದ ಒಂದು ಅಡಿಯೂ ಹೊರ ಇಡುವಂತಿಲ್ಲ. ಅಷ್ಟರಮಟ್ಟಿಗೆ ಬದುಕಿನೊಟ್ಟಿಗೆ ಬೆರೆತು ಹೋಗಿದೆ.
ಜನರ ನಿರ್ಲಕ್ಷ್ಯ ಧೋರಣೆಯಿಂದಾಗಿ ಕೊರೋನಾ ಎರಡನೇ ಅಲೆಯಿಂದ ಭಾರತ ಯಾವ ಹಂತಕ್ಕೆ ತಲುಪಿತು ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಹಾಗಾಗಿ ಮಾಸ್ಕ್ ಧರಿಸಿ ಜೀವ ಉಳಿಸಿ ಎಂಬ ಘೋಷವಾಕ್ಯಗಳು ಸಹ ಪ್ರಚಲಿತತೆಗೆ ಬಂದವು.
ಮಾಸ್ಕ್ಗಳು ನಮ್ಮ ಬದುಕಿನ, ಜೀವನದ ಉಸಿರಾಗಿದ್ದು ಇವುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮಾರುಕಟ್ಟೆಯಲ್ಲಿ ಎನ್95, ಕಾಟನ್ ಬಟ್ಟೆ ಮಾಸ್ಕ್, ಹೀಗೆ ನಾನಾ ರೀತಿಯ ಮಾಸ್ಕ್ಗಳು ಸ್ಥಾನ ಪಡೆದಿವೆ. ಬೇಡಿಕೆ ಹೆಚ್ಚಾದಂತೆ ಮಾಸ್ಕ್ ದರಗಳು ಸಹ ದಿನೇ ದಿನೇ ಹೆಚ್ಚಾಗುತ್ತಿದ್ದು, ಇವುಗಳನ್ನು ಖರೀದಿಸುವುದಕ್ಕೂ ಹಣ ನೀಡಬೇಕಾಗಿದೆ.
ಆದರೆ ಇದೀಗ ಮಾಸ್ಕ್ಗಳನ್ನು ಮಾರುಕಟ್ಟೆಯಿಂದಲೇ ಖರೀದಿಸಿ ತರಬೇಕೆಂದಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಮನೆಯಲ್ಲೇ ಸುಲಭವಾಗಿ ಮಾಸ್ಕ್ ತಯಾರಿಸಬಹುದು. ವೈರಸ್ನಿಂದ ರಕ್ಷಣೆ ಪಡೆಯಬಹುದು.
ಹೌದು, ಕೇವಲ ಟಿಶ್ಯೂ ಪೇಪರ್ ಬಳಸಿ ಸುಲಭ ವಿಧಾನದೊಂದಿಗೆ ಮಾಸ್ಕ್ ತಯಾರಿಸಬಹುದು. ಟಿಶ್ಯೂ ಪೇಪರ್ ಅನ್ನು ಕೈ, ಮುಖ ಒರೆಸಿಕೊಳ್ಳಲು, ಒಟ್ಟಿನಲ್ಲಿ ಸ್ವಚ್ಛತೆಯ ಮೂಲವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೀಗ ಇದರಿಂದ ಮಾಸ್ಕ್ ಸಹ ತಯಾರು ಮಾಡಬಹುದು.
ಇಲ್ಲಿದೆ ನೋಡಿ ಟಿಶ್ಯೂ ಪೇಪರ್ನಿಂದ ಮಾಸ್ಕ್ ತಯಾರಿಸುವ ಸುಲಭ ವಿಧಾನ
ಮಾಸ್ಕ್ ತಯಾರಿಕೆಗೆ ಬೇಕಾಗುವ ವಸ್ತುಗಳು:
ಟಿಶ್ಯೂ ಪೇಪರ್, ಎರಡು ರಬ್ಬರ್ ಬ್ಯಾಂಡ್, ಸ್ಟ್ಯಾಪ್ಲರ್ ಇವುಗಳಿದ್ದರೆ ಸರಳವಾಗಿ ಮಾಸ್ಕ್ ತಯಾರಾಗುತ್ತದೆ.
ತಯಾರಿಸುವ ವಿಧಾನ
ಮೊದಲ ಹಂತ:ಮೊದಲು ಟಿಶ್ಯೂ ಪೇಪರ್ ತೆಗೆದುಕೊಂಡು ಅರ್ಧ ಭಾಗವಾಗಿ ಮಡಚಿ.
ಎರಡನೇ ಹಂತ:ನಂತರ ಮುಂದುವರೆದು ಟಿಶ್ಯೂವನ್ನು ಹಿಂದೆ, ಮುಂದೆ ಉದ್ದುದ್ದವಾಗಿ ಪರ್ಯಾಯವಾಗಿ ಮಡಚುತ್ತಾ ಹೋಗಬೇಕು.
ಮೂರನೇ ಹಂತ: ಹೀಗೆ ಮಡಚಿಯಾದ ಮೇಲೆ ಮಡಿಕೆಯ ತುದಿ ಭಾಗದಲ್ಲಿ ರಬ್ಬರ್ ಬ್ಯಾಂಡ್ ಇರಿಸಿ ನಂತರ ಸ್ವಲ್ಪ ಭಾಗ ಮಡಚಿ ಸ್ಟೇಪ್ಲರ್ ಪಿನ್ ಹೊಡೆಯಬೇಕು. ತದನಂತರ ಇದೇ ರೀತಿಯಲ್ಲಿ ಮತ್ತೊಂದು ಕಡೆಯೂ ಮಾಡಬೇಕು.
ನಾಲ್ಕನೇ ಹಂತ:ಕೊನೆಯಲ್ಲಿ ಮಧ್ಯದ ಭಾಗವನ್ನು ಅಗಲವಾಗಿ ಬಿಡಿಸಬೇಕು.
ಈ ಎಲ್ಲಾ ಹಂತಗಳು ಮುಗಿದಲ್ಲಿ ನಮಗೆ ಟಿಶ್ಯೂ ಮಾಸ್ಕ್ ಲಭ್ಯವಾಗುತ್ತದೆ. ಸರಳವಾಗಿ ಮನೆಯಲ್ಲಿ ಯಾವುದೇ ಖರ್ಚಿಲ್ಲದೇ ಕಡಿಮೆ ಅವಧಿಯಲ್ಲಿ ಮಾಸ್ಕ್ ತಯಾರಿಸಬಹುದು. ಅಂದರೆ ಕೇವಲ ಐದು ನಿಮಿಷ ಮೀಸಲಿಟ್ಟರೆ ಟಿಶ್ಯೂ ಮಾಸ್ಕ್ ಸಿದ್ಧವಾಗುತ್ತದೆ. ಇವುಗಳನ್ನು ಬಳಸಿ ಬಿಸಾಡಬಹುದು. ಈ ರೀತಿಯ ಮಾಸ್ಕ್ನಿಂದ ಪರಿಸರಕ್ಕೂ ಸಹ ಯಾವುದೇ ಹಾನಿ ಸಂಭವಿಸುವುದಿಲ್ಲ. ಒಟ್ಟಿನಲ್ಲಿ ಇದೊಂದು ಪರಿಸರ ಸ್ನೇಹಿ ಮಾಸ್ಕ್ ಎಂದೇ ಕರೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ