‘ದ್ವಿಚಕ್ರ (Two Wheeler ) ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಿರಿ, ಅಪಘಾತವಾದರೆ ನಿಮ್ಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಜೀವಕ್ಕೆ ಕಂಟಕವಾಗಬಹುದು’ ಅಂತ ಪೊಲೀಸರು ಪದೇ ಪದೇ ಹೇಳಿದರೂ ಸಹ ಅನೇಕರು ಹೆಲ್ಮೆಟ್ ಇಲ್ಲದೆಯೇ ಬೈಕ್ ಜೋರಾಗಿ ಓಡಿಸಿಕೊಂಡು ಹೋಗುವುದನ್ನು ನಾವೆಲ್ಲಾ ಪ್ರತಿದಿನ ನೋಡುತ್ತಲೇ ಇರುತ್ತೇವೆ. ಈ ಹೆಲ್ಮೆಟ್ (Helmet) ಎಂಬುದು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಬೈಕ್ ಚಲಾಯಿಸುವವರಿಗೂ ಮತ್ತು ಹಿಂದೆ ಕುಳಿತ ವ್ಯಕ್ತಿಗೂ ತುಂಬಾನೇ ಅವಶ್ಯಕವಾದದ್ದು. ಏಕೆಂದರೆ ಎಷ್ಟೋ ಜನ ಬೈಕ್ (Bike) ಅಪಘಾತವಾದಾಗ, ಕೆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಸಹ ಸಾಕಷ್ಟಿವೆ.
ಹೆಲ್ಮೆಟ್ ಧರಿಸಿ ಹ್ಯುಂಡೈ ಕ್ರೆಟಾ ಓಡಿಸುವ ವ್ಯಕ್ತಿ
ಆದರೆ ರಾಜಸ್ಥಾನದಲ್ಲಿ ಒಬ್ಬ ವ್ಯಕ್ತಿ ತನ್ನ ಹ್ಯುಂಡೈ ಕ್ರೆಟಾ ಎಸ್‌ಯುವಿ ಓಡಿಸುವಾಗ ಹೆಲ್ಮೆಟ್ ಧರಿಸ್ತಾರಂತೆ ನೋಡಿ. ಅಯ್ಯೋ, ಏನಿದು ಎಸ್‌ಯುವಿ ಓಡಿಸುವಾಗ ಹೀಗೆ ಹೆಲ್ಮೆಟ್ ಧರಿಸುವುದು ಏನು ವಿಚಿತ್ರ ಅಂತ ನಿಮಗೆ ಅನ್ನಿಸಬಹುದು. ಆದರೆ ಇದರ ಹಿಂದೆ ಒಂದು ಬಲವಾದ ಕಾರಣವಿದೆಯಂತೆ ನೋಡಿ.
ಹೀಗೆ ಒಂದು ಬಾರಿ ಇವರು ತಮ್ಮ ಕ್ರೆಟಾ ಓಡಿಸಿಕೊಂಡು ಹೋಗುವಾಗ, ಹೆಲ್ಮೆಟ್ ಧರಿಸಿಲ್ಲ ಅಂತ ಅವರ ಮೇಲೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದರಂತೆ. ಹಾಗಾಗಿ ಅವರು ಆವತ್ತಿನಿಂದ ತಮ್ಮ ಕ್ರೆಟಾ ಓಡಿಸಿಕೊಂಡು ಹೋಗುವಾಗ ತಪ್ಪದೆ ಹೆಲ್ಮೆಟ್ ಧರಿಸುತ್ತಾರಂತೆ.
ಇದು ನಿಮಗೆ ವಿಲಕ್ಷಣವೆಂದು ತೋರಿದರೂ, ಇದು ನಿಜ ಕಣ್ರೀ. ರಾಜಸ್ಥಾನದ ಭಿವಾಡಿಯ ಖೋಹ್ರಿ ಖುರ್ದ್ ನಿವಾಸಿ ಖಲೀಲ್ ಮೊಹಮ್ಮದ್ ಅವರು ತಮ್ಮ ಹ್ಯುಂಡೈ ಕ್ರೆಟಾವನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ ಅಂತ ಪೊಲೀಸ್ ಅಧಿಕಾರಿಯೊಬ್ಬರು 1,000 ರೂಪಾಯಿಗಳ ದಂಡವನ್ನು ವಿಧಿಸಿದ್ದಾರೆ ಎಂದು ಹೇಳಿದ್ದಾರೆ.
ಕ್ರೆಟಾ ಓಡಿಸುವಾಗ ಹೆಲ್ಮೆಟ್ ಧರಿಸಿಲ್ಲ ಅಂತ ದಂಡ ವಿಧಿಸಿದ್ದರಂತೆ ಪೊಲೀಸ್ ಅಧಿಕಾರಿ
ಖಲೀಲ್ ಮೊಹಮ್ಮದ್ ಅವರ ಪ್ರಕಾರ, ಅವರು ತಮ್ಮ ಕ್ರೆಟಾ ಎಸ್‌ಯುವಿಯನ್ನು ಒಂದು ದಿನ ಮಧ್ಯಾಹ್ನ 3:30 ಕ್ಕೆ ಭಿವಾಡಿ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ವಾಹನವು ಅವರ ಕ್ರೆಟಾವನ್ನು ಓವರ್ ಟೇಕ್ ಮಾಡಿ ಕ್ಯಾಪಿಟಲ್ ಗಲೇರಿಯಾದ ಮುಂದೆ ಬಂದು ನಿಂತಿತು. ಅದು ಪೊಲೀಸ್ ಕಾರು ಅಂತ ಅವರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಪೊಲೀಸ್ ಅಧಿಕಾರಿಗಳು ಖಲೀಲ್ ಅವರನ್ನು ಕರೆದು 2,000 ರೂಪಾಯಿ ಕೊಡಿ ಅಂದ್ರಂತೆ ಎಂದು ಖಲೀಲ್ ಹೇಳಿದರು.
ಇದನ್ನೂ ಓದಿ: Taj Hotelಗೆ ಮತ್ತೆ ಬಂತು "ಮಹಾರಾಜ"ನ ಕಳೆ! ಏನಿದು ವಿಷಯ?
ಸುಮ್ಮನೆ ಏಕೆ 2000 ರೂಪಾಯಿ ಕೊಡಬೇಕು ಅಂತ ಖಲೀಲ್ ಅವರು ಕೇಳಿದ್ದಕ್ಕೆ, ಪೊಲೀಸ್ ಅಧಿಕಾರಿ ಕ್ರೆಟಾದ ನಿಖರವಾದ ಕಾಗದಪತ್ರಗಳನ್ನು ಕೇಳಿದನು, ಎಲ್ಲವನ್ನೂ ಪರಿಶೀಲನೆ ಮಾಡಿದ ನಂತರವೂ ಸಹ ಮತ್ತೆ 2000 ರೂಪಾಯಿ ಕೊಡಿ ಅಂತ ಅಧಿಕಾರಿ ಕೇಳಿದ್ರಂತೆ. ಖಲೀಲ್ ಕುಡಿದು ವಾಹನ ಚಲಾಯಿಸುತ್ತಿದ್ದ ಎಂದು ಅಧಿಕಾರಿ ಹೇಳಿದ್ದಾರೆ, ಆದ್ದರಿಂದ ಅವರು 2,000 ರೂಪಾಯಿಗಳನ್ನು ಕೇಳುತ್ತಿದ್ದರಂತೆ. ಆದರೆ ಖಲೀಲ್ ಹಣ ಕೊಡಲು ನಿರಾಕರಿಸಿದರು, ಆಗ ಪೊಲೀಸ್ ಅಧಿಕಾರಿ ಅವರಿಗೆ 1,000 ರೂಪಾಯಿಗಳಿಗೆ ಚಲನ್ ನೀಡಿದರು.
ಈ ವಿಷಯದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಲೀಲ್ ಭಿವಾಡಿ ಎಸ್‌ಪಿ ಮತ್ತು ಯುಐಟಿ ಪೊಲೀಸ್ ಠಾಣೆಯನ್ನು ಒತ್ತಾಯಿಸಿದರು. ಆಪಾದಿತ ಪೊಲೀಸ್ ಅಧಿಕಾರಿಯ ವಿರುದ್ಧ ಕಾನೂನು ಮೊಕದ್ದಮೆ ಹೂಡುವುದಾಗಿ ಸಹ ಅವರು ಹೇಳಿದ್ದಾರೆ. ಈ ಘಟನೆಯು ಖಲೀಲ್ ಅವರನ್ನು ಆಘಾತಕ್ಕೀಡು ಮಾಡಿದೆ ಎಂದು ವರದಿಯಾಗಿದೆ, ಮತ್ತು ಅವರು ಈಗ ತಮ್ಮ ಹ್ಯುಂಡೈ ಕ್ರೆಟಾ ಓಡಿಸುವಾಗಲೆಲ್ಲಾ ಹೆಲ್ಮೆಟ್ ಧರಿಸುತ್ತಾರಂತೆ.
ಇದನ್ನೂ ಓದಿ: ಮೆಕ್‌ಡೊನಾಲ್ಡ್ ಚಿಕನ್ನಿಂದಾಗಿ 4 ವರ್ಷದ ಮಗುವಿಗೆ ಸುಟ್ಟಗಾಯ, ಕೇಸ್ ದಾಖಲಿಸಿದ ಪೋಷಕರು
ಟ್ರಾಫಿಕ್ ಪೊಲೀಸರ ಭ್ರಷ್ಟಾಚಾರವೇ ಇದಕ್ಕೆಲ್ಲಾ ಕಾರಣವಂತೆ.
ಸಂಚಾರ ಪೊಲೀಸ್ ಪಡೆಯಲ್ಲಿನ ಭ್ರಷ್ಟಾಚಾರವು ಅಮಾಯಕ ಜನರಿಂದ ಲಂಚವನ್ನು ಸ್ವೀಕರಿಸುವುದು ಮತ್ತು ಸುಳ್ಳು ಚಲನ್ ಗಳನ್ನು ನೀಡುವುದನ್ನು ಒಳಗೊಂಡಿದೆ. ಈ ರೀತಿಯ ಭ್ರಷ್ಟಾಚಾರವು ಸಂಚಾರ ಕಾನೂನುಗಳ ಬಗ್ಗೆ ಒಟ್ಟಾರೆ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ.
ಭಾರತದಲ್ಲಿ ಸಂಚಾರ ಪೊಲೀಸರ ಭ್ರಷ್ಟಾಚಾರವು ಸಾರ್ವಜನಿಕ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಭಾರತದಲ್ಲಿ ಸಂಚಾರ ಪೊಲೀಸ್ ಭ್ರಷ್ಟಾಚಾರವನ್ನು ತಡೆಯಲು ಸಿಸಿಟಿವಿ ಕ್ಯಾಮೆರಾಗಳು ಮತ್ತು ಇ-ಚಲನ್ ವ್ಯವಸ್ಥೆಗಳ ಬಳಕೆಯಂತಹ ಸಂಚಾರ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಇದಲ್ಲದೆ, ಭ್ರಷ್ಟ ಅಧಿಕಾರಿಗಳಿಗೆ ಸೇವೆಯಿಂದ ವಜಾ ಮತ್ತು ಸೆರೆವಾಸದಂತಹ ಕಠಿಣ ಶಿಕ್ಷೆಗಳನ್ನು ಸಹ ಪರಿಚಯಿಸಲಾಗಿದೆ. ಆದಾಗ್ಯೂ, ಈ ಕ್ರಮಗಳ ಹೊರತಾಗಿಯೂ, ಸಂಚಾರ ಪೊಲೀಸ್ ಪಡೆಯೊಳಗಿನ ಭ್ರಷ್ಟಾಚಾರವು ಒಂದು ದೊಡ್ಡ ಸವಾಲಾಗಿಯೇ ಉಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ