ಹೃದಯ ವಿದ್ರಾವಕ ಘಟನೆ : ಹೆಗಲ ಮೇಲೆ ಪತ್ನಿಯ ಶವ ಹೊತ್ತೊಯ್ದ ಪತಿ

news18
Updated:May 8, 2018, 8:30 PM IST
ಹೃದಯ ವಿದ್ರಾವಕ ಘಟನೆ : ಹೆಗಲ ಮೇಲೆ ಪತ್ನಿಯ ಶವ ಹೊತ್ತೊಯ್ದ ಪತಿ
news18
Updated: May 8, 2018, 8:30 PM IST
ನ್ಯೂಸ್ 18 ಕನ್ನಡ

ಪ್ರತಿಬಾರಿಯು ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಂದ  ಸಮಾಜದಲ್ಲಿ  ಮಾನವೀಯತೆಯ ಮೌಲ್ಯವು ಕುಸಿಯುತ್ತಿರುವುದು ಸಾಬೀತಾಗುತ್ತಿದೆ. ಹೆಣವನ್ನು ಹೆಗಲ ಮೇಲೆ ಹೊತ್ತೊಯ್ದ ಸುದ್ದಿಗಳು, ಅಪಘಾತಕ್ಕೀಡಾದ ವ್ಯಕ್ತಿಗೆ  ಸಹಾಯಹಸ್ತ ಚಾಚುವ ಬದಲು ವಿಡಿಯೋ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಇಂತಹದ್ದೆ ಒಂದು ಘಟನೆ ಮತ್ತೆ ಮರುಕಳಿಸಿದೆ.

ಉತ್ತರ ಪ್ರದೇಶದ ಬದಾಯೂ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತಶರೀರವನ್ನು ಹೆಗಲ ಮೇಲೆ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ನಡೆದಿದೆ . ಸಾದಿಕ್ ಎಂಬಾತ ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತೊಯ್ಯುವ ದೃಶ್ಯ ನಮ್ಮ ಸಮಾಜ ಬದಲಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕೆಲದಿನಗಳ ಹಿಂದೆ ಸಾದಿಕ್ ಪತ್ನಿಯು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯ ಚಿಕಿತ್ಸೆ ಫಲಕಾರಿಯಾಗದೇ ಅವರ ಪತ್ನಿ ಮೃತಪಟ್ಟಿದ್ದರು. ದೂರದ ತನ್ನ ಮಝರಾ ಹಳ್ಳಿಗೆ ಮೃತ ಪತ್ನಿಯ ಶರೀರವನ್ನು ಸಾಗಿಸಲು ಆ್ಯಂಬುಲೆನ್ಸ್ ಸೌಲಭ್ಯ ಒದಗಿಸುವಂತೆ ಆಸ್ಪತ್ರೆಯವರಲ್ಲಿ ಮನವಿ ಮಾಡಿದ್ದಾರೆ. ಆದರೆ ಇವರ ಮನವಿಯನ್ನು ಆಸ್ಪತ್ರೆ ಸಿಬ್ಬಂದಿಗಳು ನಿರಾಕರಿಸಿದರು. ಆ್ಯಂಬುಲೆನ್ಸ್​ ವೆಚ್ಚ ಭರಿಸಲು ಸಾದಿಕ್ ಕೈಯಲ್ಲಿ ಹಣವಿಲ್ಲದಿರುವುದು ವಾಹನ ನಿರಾಕರಿಸಲು ಕಾರಣ ಎನ್ನಲಾಗಿದೆ.

ಆಸ್ಪತ್ರೆಯವರಿಂದ ಯಾವುದೇ ಸಹಾಯ ಸಿಗದಿದ್ದಾಗ ಸಾದಿಕ್ ಶವವನ್ನು ಹೆಗಲೇರಿಸಿಕೊಂಡು ಹೊರಟರು. ಮಾರ್ಗ ಮಧ್ಯೆ ಗಮನಿಸಿದ ವ್ಯಕ್ತಿಯೊಬ್ಬರು ಕೇಳಿದಾಗ ಮನೆಯು 25 ಕಿ.ಮೀ ದೂರದಲ್ಲಿದ್ದು, ಹಣವಿಲ್ಲದಿರುವುದರಿಂದ ಹೆಗಲ ಮೇಲೆ ಶವ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಜನಬಿಡ ಪ್ರದೇಶದಲ್ಲಿ ಸಾಗುತ್ತಿದ್ದರೂ ಸಾದಿಕ್ ನೆರವಿಗೆ ಯಾರೂ ಕೂಡ ಬರದಿರುವುದು ನಿಜಕ್ಕೂ ದುರಂತ.

ಬಳಿಕ ಶವವನ್ನು ಹೆಗಲ ಮೇಲೆ ಸಾಗಿಸುವುದನ್ನು ಗಮನಿಸಿದ ಪತ್ರಕರ್ತರೊಬ್ಬರು ಸಾದಿಕ್ ಅವರಿಗೆ 200 ರೂ ನೀಡಿ ಮೃತದೇಹವನ್ನು  ಕೊಂಡೊಯ್ಯಲು ನೆರವಾಗಿದ್ದಾರೆ.

ಈ ಹಿಂದೆ ಕೂಡ ದೇಶದಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆದಿದ್ದು, ಅವುಗಳೆಂದರೆ;
Loading...

ಆಗಸ್ಟ್ 24, 2016 - ಒಡಿಶಾ
ಆ್ಯಂಬುಲೆನ್ಸ್‌ ಸಿಗದೆ ಪತ್ನಿಯ ಶವವನ್ನು 10 ಕಿ.ಮೀ. ಹೊತ್ತೊಯ್ದ ಒರಿಶಾದ ದನಾ ಮಾಂಝಿ ಪ್ರಕರಣ ನೆನಪಿದೆಯೇ? ಪತ್ನಿ ಶವ ಹೊತ್ತುಕೊಂಡು ದುಃಖಿಸುತ್ತಾ ಮಗಳೊಂದಿಗೆ ದನಾ ಮಾಂಝಿ ಅವರು ಹೆಜ್ಜೆ ಹಾಕಿದ ಚಿತ್ರಣವು ನಮ್ಮ ಸಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು.

ಜನವರಿ 4, 2017- ಒಡಿಶಾ
ಪುಟ್ಟ ಮಗಳ ಮೃತದೇಹವನ್ನು ಹೊತ್ತು ಅಪ್ಪ ನಡೆದದ್ದು 15 ಕಿ.ಮೀ.ಗಿಂತಲೂ ಹೆಚ್ಚು ದೂರ. ಒಡಿಶಾ ಪೆಟಾಮುಡಿ ಗ್ರಾಮದಲ್ಲಿನ ಗಟಿ ಧೀಬಾರ್ ಎಂಬಾತ ತನ್ನ 5 ವರ್ಷದ ಮಗಳ ಮೃತದೇಹವನ್ನು ಸಾಗಿಸಲು ಆಸ್ಪತ್ರೆ ವಾಹನ ನಿರಾಕರಿಸಿತ್ತು. ಆದರೆ ಧೃತಿಗೆಡದೆ ಹೆಗಲ ಮೇಲೆ ಮಗಳ ಮೃತದೇಹ ಹೊತ್ತು ಸಾಗಿಸುತ್ತಿರುವ ವಿಡಿಯೋ ಎಂಥವರ ಮನವನ್ನು ಕಲುಕುವಂತಿತ್ತು.

ಮೇ 2, 2017 - ಉತ್ತರ ಪ್ರದೇಶ
ಅನಾರೋಗ್ಯದಿಂದ ಮೃತಪಟ್ಟ ಮಗನ ಶವವನ್ನು ಹೆಗಲ ಮೇಲೆ ಹೊತ್ತು ಉದಯ್‌ವೀರ್‌ ಹೆಜ್ಜೆ ಹಾಕುತ್ತಿದ್ದರು. ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ನಿರಾಕರಿಸಿದ್ದರಿಂದ ವ್ಯಕ್ತಿಯೊಬ್ಬರ ಸಹಾಯದಿಂದ ಬೈಕ್‌ನಲ್ಲಿಯೇ ಶವವನ್ನು ಇರಿಸಿಕೊಂಡು ಮನೆಗೆ ಸಾಗಿಸಿದ್ದರು. ಈ ಹೃದಯವಿದ್ರಾವಕ ಘಟನೆಯನ್ನು ಹೇಗೆ ತಾನೆ ಮರೆಯುವುದು.

 
First published:May 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...