ಬ್ರಿಟಿಷ್ ರಾಜ ಮನೆತನದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕ್ಲೆ ಕಳೆದ ಹಲವು ದಿನಗಳಿಂದ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಓಪ್ರಾ ವಿನ್ಫ್ರೇ ಅವರಿಗೆ ನೀಡಿದ ಸಂದರ್ಶನ. ಇದು ವಿಶ್ವಾದ್ಯಂತ ನಾನಾ ಚರ್ಚೆಗಳಿಗೆ ಕಾರಣವಾಗಿದೆ. ಬ್ರಿಟಿಷ್ ರಾಜಮನೆತನದಿಂದ ನಾವು ಆರ್ಥಿಕವಾಗಿ ಯಾವುದೇ ಸಹಾಯ ಪಡೆಯುತ್ತಿಲ್ಲ. ಇದಕ್ಕೆ ಕಾರಣ ತನ್ನ ದಿವಂಗತ ತಾಯಿ ರಾಜಕುಮಾರಿ ಡಯಾನಾ ಎಂಬುದನ್ನು ಬಹಿರಂಗಪಡಿಸಿದ್ದರು. ಡಯಾನಾ ಪುತ್ರರ ಹೆಸರಿಗೆ ಬರೆದಿದ್ದ ಹಣದಿಂದಲೇ ರಾಜ ಮನೆತನದ ಸಂಪರ್ಕ ಕಡಿದುಕೊಳ್ಳಲು ಹಾಗೂ ಆರ್ಥಿಕ ಸಹಾಯ ಪಡೆಯುವುದನ್ನು ನಿಲ್ಲಿಸಲು ನನಗೆ ಸಾಧ್ಯವಾಯಿತು ಎಂದೂ ಹೇಳಿಕೊಂಡಿದ್ದಾರೆ.
"ನನ್ನ ಅಮ್ಮ ನನಗೆ ಬಿಟ್ಟುಹೋದ ಆಸ್ತಿಯನ್ನು ನಾನು ಹೊಂದಿದ್ದೇನೆ. ಅದೂ ಇಲ್ಲದೆ, ನಾವು ಬ್ರಿಟಿಷ್ ರಾಜ ಮನೆತನದಿಂದ ಆರ್ಥಿಕ ಸಂಬಂಧ ಕಡಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ" ಎಂದು ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕ್ಲೆ ದಂಪತಿ ಅಮೆರಿಕಕ್ಕೆ ಶಿಫ್ಟ್ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ''ಅಲ್ಲದೆ, ಈ ರೀತಿ ಆಗುವುದನ್ನು ನನ್ನ ತಾಯಿ ಮೊದಲೇ ಊಹಿಸಿದ್ದರೇನೋ.. ಮತ್ತು ಈ ಸಂಪೂರ್ಣ ಪ್ರಕ್ರಿಯೆಯ ಮೂಲಕ ಅವಳು ನಮ್ಮೊಂದಿಗಿದ್ದಾರೆ ಎನಿಸುತ್ತದೆ'' ಎಂದೂ ಪ್ರಿನ್ಸ್ ಹ್ಯಾರಿ ಹೇಳಿದರು. ಇದರ ಜೊತೆಗೆ ''ನೆಟ್‌ಫ್ಲಿಕ್ಸ್ ಮತ್ತು ಸ್ಪಾಟಿಫೈಗಳು ನಮ್ಮ ಯೋಜನೆಯ ಭಾಗವಾಗಿರಲಿಲ್ಲ." ಎಂದೂ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಸ್ತುತ ಡಯಾನಾ, ಹ್ಯಾರಿಗಾಗಿ ಬಿಟ್ಟು ಹೋದ ಹಣದಲ್ಲಿ ಬದುಕುತ್ತಿದ್ದೇವೆ ಎಂದು ಡ್ಯೂಕ್ ಮತ್ತು ಡಚೆಸ್ ಆಫ್ ಸಸೆಕ್ಸ್ ಹೇಳಿದ್ದಾರೆ. ಜನವರಿ 2020 ರಲ್ಲಿ, ರಾಜಮನೆತನ ತೊರೆದ ನಂತರ ಅಮೆರಿಕಕ್ಕೆ ಹೋಗಲು ನಿರ್ಧರಿಸಿದೆವು. ನಾವು ಹೆಚ್ಚಿನ ಖಾಸಗಿ ಸಮಯವನ್ನು ಕಳೆಯಲು ರಾಜಮನೆತನದೊಂದಿಗೆ ಸಂಬಂಧ, ಆರ್ಥಿಕ ಸಹಾಯ ಪಡೆದುಕೊಳ್ಳುವುದನ್ನು ನಿಲ್ಲಿಸಿದೆವು ಎಂದೂ ಹೇಳಿದರು.
ಹ್ಯಾರಿಗೆ ತಾಯಿ ಡಯಾನಾ ನೀಡಿರುವ ಹಣ ಎಷ್ಟು ಗೊತ್ತಾ..?
ರಾಜಕುಮಾರ ಹ್ಯಾರಿ ತಾಯಿಯಿಂದ ಎಷ್ಟು ಹಣ ಪಡೆದಿದ್ದಾರೆಂದು ತಿಳಿಯಲು ಜಗತ್ತಿನಾದ್ಯಂತ ಹಲವು ದೇಶಗಳ ಜನತೆ ಕುತೂಹಲ ಹೊಂದಿದ್ದಾರೆ. "ಡಯಾನಾ ಹ್ಯಾರಿಗೆ ಎಷ್ಟು ಹಣ ಬಿಟ್ಟುಹೋದರು?, ಪ್ರಿನ್ಸ್ ಹ್ಯಾರಿಯ ಆಸ್ತಿ ಮೌಲ್ಯ ಎಷ್ಟು? ಅಥವಾ ಪ್ರಿನ್ಸ್ ಹ್ಯಾರಿ ಡಯಾನಾರಿಂದ ಎಷ್ಟು ಹಣ ಪಡೆದರು..? - ಈ ರೀತಿ ಪ್ರಶ್ನೆಗಳು ಗೂಗಲ್ ಟ್ರೆಂಡ್ ಆಗಿವೆ.
ಈ ಪ್ರಶ್ನೆಗಳಿಗೆ ನಮ್ಮ ಬಳಿ ಕೊನೆಗೂ ಉತ್ತರ ದೊರೆತಿದೆ. ಮೂಲತಃ ಪ್ರಿನ್ಸ್ ಹ್ಯಾರಿ ಅನುವಂಶಿಕವಾಗಿ ಸುಮಾರು 8.9 ಮಿಲಿಯನ್ ಡಾಲರ್ ಹಣ ಪಡೆದಿದ್ದು ಎಂದು ತಿಳಿದುಬಂದಿದೆ. ಇದು ಹೂಡಿಕೆಗಳೊಂದಿಗೆ ಮತ್ತು ಪ್ರಿನ್ಸಿಪಲ್ ಅಕ್ರೂಡ್ ಬಡ್ಡಿಯೊಂದಿಗೆ ಇನ್ನೂ ಹೆಚ್ಚಾಗಿದೆ ಎಂದು ಫಾಕ್ಸ್ ಬಿಸಿನೆಸ್ ವರದಿ ನೀಡಿದೆ.
ಇನ್ನು, ಟೆಲಿಗ್ರಾಫ್ ಪ್ರಕಾರ, ಮೂಲತಃ 6.5 ಮಿಲಿಯನ್ ಪೌಂಡ್ ಅಥವಾ ಸುಮಾರು 8.9 ಮಿಲಿಯನ್ ಡಾಲರ್ ಹಣವನ್ನು ಡಯಾನಾ ಹೂಡಿಕೆ ಮಾಡಿದ್ದರು. ಡಯಾನಾ ಮೃತಪಟ್ಟ ನಂತರ ಬಡ್ಡಿ ಎಲ್ಲ ಸೇರಿ ಹ್ಯಾರಿಯ 30 ನೇ ಹುಟ್ಟುಹಬ್ಬದಂದು "ಸುಮಾರು 10 ಮಿಲಿಯನ್ ಪೌಂಡ್ ಅಥವಾ ಸುಮಾರು 13 ಮಿಲಿಯನ್ ಡಾಲರ್ ಹಣ ದೊರಕಿದೆ'' ಎಂದು ವರದಿ ಮಾಡಿದೆ.
ಇದೇ ರೀತಿ, ಡ್ಯೂಕ್ ಮತ್ತು ಡಚೆಸ್ ಆಫ್ ಸಸೆಕ್ಸ್, ಪ್ರಾಥಮಿಕವಾಗಿ "ಅಂದಾಜು 10 ಮಿಲಿಯನ್ ಡಾಲರ್'' ಹಣವನ್ನು ಪಡೆದಿದ್ದರು. 1997 ರಲ್ಲಿ ಡಯಾನಾ ಮರಣದ ನಂತರ, ತಾಯಿಯ ಎಸ್ಟೇಟ್‌ನಿಂದ ಈ ಹಣ ಪಡೆದರು ಎಂದು ಫೋರ್ಬ್ಸ್ ವರದಿ ಮಾಡಿದೆ.
ಡಯಾನಾ ತನ್ನ ಹಿರಿಯ ಪುತ್ರ ಪ್ರಿನ್ಸ್ ವಿಲಿಯಂ (38) ಗೆ ಸಹ 9 ಮಿಲಿಯನ್ ಡಾಲರ್ ಹಣವನ್ನು ಸಹ ನೀಡಿದ್ದಾರೆ. 25 ನೇ ವಯಸ್ಸಿನಲ್ಲಿ ವಿಲಿಯಂ ಹಾಗೂ ಹ್ಯಾರಿಗೆ ಡಯಾನಾರ ಹಣವನ್ನು ನೀಡಲು ಪ್ರಾರಂಭಿಸಲಾಯ್ತು. 30 ವರ್ಷವಾದ ಬಳಿಕ ಪೂರ್ಣ ಹಣ ಪಡೆದುಕೊಂಡರು ಎಂದೂ ತಿಳಿದುಬಂದಿದೆ.
ಡಯಾನಾ 1997 ರಲ್ಲಿ ಮೃತಪಟ್ಟಾಗ ಅಂದಾಜು 23 ಮಿಲಿಯನ್ ಪೌಂಡ್ ಅಂದರೆ ಸುಮಾರು 31.5 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದರು - ಅದರಲ್ಲಿ ಹೆಚ್ಚಿನ ಹಣ ಪ್ರಿನ್ಸ್ ಚಾರ್ಲ್ಸ್‌ನಿಂದ ವಿಚ್ಛೇದನ ಪಡೆದ ಬಳಿಕ ಬಂದಿತ್ತು ಎಂದೂ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ