ತಂತ್ರಜ್ಞಾನವನ್ನು (Technology) ಇಂದು ಹೆಚ್ಚಿನವರು ತಮ್ಮ ಲಾಭಕ್ಕಾಗಿ ಇಲ್ಲವೇ ಕೆಟ್ಟ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಏಕೆಂದರೆ ಬೆರಳಂಚಿನಲ್ಲಿ ನಮಗೆ ದೊರೆಯುವ ಅದೆಷ್ಟೋ ಮಾಹಿತಿಗಳು ಅದನ್ನು ಬಳಸಿಕೊಳ್ಳುವವರ ಮೇಲೆ ಆಧಾರಿತವಾಗಿರುತ್ತದೆ. ಹಾಗಾಗಿಯೇ ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಉಂಟಾಗಿದ್ದರೂ ಅದರಿಂದ ಒಂದಿಲ್ಲೊಂದು ಬಗೆಯಲ್ಲಿ ಅಪಾಯ ಕೂಡ ಇದ್ದೇ ಇರುತ್ತದೆ. ತಂತ್ರಜ್ಞಾನದ ಬಳಕೆ ಹೇಗೆ ಅಪಾಯಕಾರಿಯಾಗಿದೆ ಎಂಬುದಕ್ಕೆ ದೃಷ್ಟಾಂತವೊಂದು ಮುಂಬೈಯಲ್ಲಿ ವರದಿಯಾಗಿದೆ. ಯುಎಸ್‌ನ ಸೆಂಟ್ರಲ್ ಬ್ಯುರೋ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ 25 ರ ಹರೆಯದ ವ್ಯಕ್ತಿಯನ್ನು ಮುಂಬೈ ಪೊಲೀಸರು (Police) ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಅತಿಯಾದ ಸಾಲದಿಂದ ಕಂಗೆಟ್ಟಿದ್ದ ಐಟಿ ಇಂಜಿನಿಯರ್ ಖಿನ್ನತೆಗೆ ಒಳಗಾಗಿದ್ದರು ಹಾಗೂ ನೋವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈತ ಗೂಗಲ್‌ನಲ್ಲಿ ಹುಡುಕಾಡಿದ್ದು ಅಮೆರಿಕಾದ ಕಾನೂನು ಜಾರಿ ಸಂಸ್ಥೆಗೆ (Organisation) ಈ ಬಗ್ಗೆ ಮಾಹಿತಿ ದೊರಕಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಂಸ್ಥೆ ಈ ಕುರಿತು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ.
ಕಾರ್ಯಪ್ರವೃತ್ತರಾದ ಪೊಲೀಸರು
ಯುಎಸ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ-ಇಂಟರ್‌ಪೋಲ್ ಹಂಚಿಕೊಂಡಿರುವ ಐಪಿ ವಿಳಾಸ ಮತ್ತು ಸ್ಥಳದಂತಹ ಪ್ರಮುಖ ಮಾಹಿತಿಯ ಆಧಾರದ ಮೇಲೆ ಮುಂಬೈನ ಕುರ್ಲಾ ಪ್ರದೇಶದ ಐಟಿ ಕಂಪನಿಯೊಂದರಲ್ಲಿ ಈ ವ್ಯಕ್ತಿಯನ್ನು ಪತ್ತೆಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಯುವಕನಿಗೆ ಕೌನ್ಸಲಿಂಗ್ ನಡೆಸಿ ಸಾಂತ್ವಾನ ನೀಡುವ ಮೂಲಕ ಸಾವಿನ ದವಡೆಯಿಂದ ಪಾರಾಗುವಂತೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ
ಜೋಗೇಶ್ವರಿ ಪ್ರದೇಶದ ನಿವಾಸಿಯಾಗಿರುವ 25 ರ ತರುಣ ಖಾಸಗಿ ಕಂಪನಿಯೊಂದರಲ್ಲಿ ಐಟಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ಹಾಗೂ ಇತರ ಅಗತ್ಯಗಳಿಗಾಗಿ ವಿಪರೀತ ಸಾಲ ಮಾಡಿಕೊಂಡಿದ್ದರು ಹಾಗೂ ಸಾಲ ತೀರಿಸುವ ಬಗೆ ಕಾಣದೇ ತಮ್ಮ ಜೀವವನ್ನು ಅಂತ್ಯಗೊಳಿಸುವ ತಯಾರಿ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಶಿಫ್ಟ್ ಮುಗೀತಾ? ಹಾಗಾದ್ರೆ ಮನೆಗೆ ಹೋಗಿ ಎಂದ ಕಂಪ್ಯೂಟರ್!
ವಿಪರೀತ ಸಾಲ ಮಾಡಿಕೊಂಡಿದ್ದ ತರುಣ ಮನೆಯ ಇಎಮ್‌ಐ ಪಾವತಿಸಲು ಕೂಡ ಹೆಣಗಾಡುತ್ತಿದ್ದರು ಇದರಿಂದ ಒಂದು ರೀತಿಯ ಖಿನ್ನತೆಗೆ ಒಳಗಾಗಿದ್ದರು ಎಂಬುದು ಪೊಲೀಸರ ತನಿಖೆಯಿಂದ ವರದಿಯಾಗಿದೆ. ಬದುಕಿಗೆ ವಿದಾಯ ಹಾಡುವುದೇ ಸರಿ ಎಂದು ನಿರ್ಧರಿಸಿದ ವ್ಯಕ್ತಿ ನೋವಿಲ್ಲದೆ ಹೇಗೆ ಸಾಯಬಹುದು ಎಂದು ಗೂಗಲ್‌ನಲ್ಲಿ ಹುಡುಕಾಡಲು ಆರಂಭಿಸಿದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ತರುಣನನ್ನು ರಕ್ಷಿಸಿ ಹೆತ್ತವರೊಂದಿಗೆ ಕಳುಹಿಸಿಕೊಟ್ಟ ಪೊಲೀಸರು
ಅಮೇರಿಕಾ ಮೂಲದ ಏಜೆನ್ಸಿ ನವದೆಹಲಿಯ ಇಂಟರ್‌ಪೋಲ್ ಕಚೇರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಮುಂಬೈ ಪೊಲೀಸರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಅದರಂತೆ, ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ವ್ಯಕ್ತಿಯನ್ನು ಪತ್ತೆಹಚ್ಚಿ ಆತನ ಸ್ಥಳಕ್ಕೆ ಧಾವಿಸಿದರು ಹಾಗೂ ಅವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಯುವಕನನ್ನು ಅಪರಾಧ ವಿಭಾಗದ ಕಚೇರಿಗೆ ಕರೆತಂದು ಕೌನ್ಸೆಲಿಂಗ್ ನಡೆಸಿದ್ದಾರೆ. ಈ ಹಿಂದೆಯೂ ಅವರು ಮೂರು-ನಾಲ್ಕು ಬಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಲು ಪ್ರಯತ್ನಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಈ ಬಾರಿ ಮಾತ್ರ ಗೂಗಲ್‌ನಲ್ಲಿ ಹುಡುಕಾಡುತ್ತಿರುವ ಸಮಯದಲ್ಲಿ ತರುಣ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೌನ್ಸಲಿಂಗ್ ನಂತರ ಅಧಿಕಾರಿಗಳು ತರುಣನನ್ನು ಆತನ ಹೆತ್ತವರೊಂದಿಗೆ ಮನೆಗೆ ಕಳುಹಿಸಿದ್ದಾರೆ ಮತ್ತು ಮಾನಸಿಕ ಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಂತೂ ಇಂತೂ ತಂತ್ರಜ್ಞಾನದ ಲಾಭ ಪಡೆಯಬೇಕಿದ್ದ ಒಬ್ಬ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ತನ್ನ ಜೀವವನ್ನು ಅಂತ್ಯಗೊಳಿಸುವುದರಿಂದ ರಕ್ಷಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ