ಊರು ಬಿಟ್ಟವರ ಮನೆಗಳೇ ಇಂದು ಪ್ರವಾಸಿಗರ ಮೆಚ್ಚಿನ ತಾಣ!

news18
Updated:July 23, 2018, 5:02 PM IST
ಊರು ಬಿಟ್ಟವರ ಮನೆಗಳೇ ಇಂದು ಪ್ರವಾಸಿಗರ ಮೆಚ್ಚಿನ ತಾಣ!
news18
Updated: July 23, 2018, 5:02 PM IST
-ನ್ಯೂಸ್ 18 ಕನ್ನಡ 

ಎಲ್ಲೆಲ್ಲೂ ಹಸಿರು ಹೊದಿಕೆಯನ್ನು ಹೊದ್ದಂತಿರುವ ಮನೆಗಳು. ನಿಸರ್ಗವೇ ನಿರ್ಮಿಸಿದಂತಿರುವ ಸಣ್ಣ ಕಟ್ಟಡಗಳು. ಎತ್ತ ನೋಡಿದರೂ ಪ್ರಕೃತಿ ಸೌಂದರ್ಯ. ಇದು ಚೀನಾದ ಒಂದು ಊರಿನ ದೃಶ್ಯ. ಪೂರ್ವ ಕರಾವಳಿ ಭಾಗದ ಹೌಟೌವಾನ್ ಗ್ರಾಮದಲ್ಲಿ ಎಲ್ಲವೂ ಸಂಪೂರ್ಣ ಹಸಿರುಮಯ. ಈ ಗ್ರಾಮವು ಈಗ ಚೀನಾ ಪ್ರಸಾಸೋದ್ಯಮದ ಆಕರ್ಷಕ ಕೇಂದ್ರವಾಗಿದೆ. ಅಷ್ಟಕ್ಕೂ ಈ ಊರು ಹಸಿರುಮಯವಾಗಲು ಕಾರಣವೇನು? ಎಂದು ಹುಡುಕಾಡಿದರೆ ಬಡತನದ ಕಥೆಯೊಂದರ ಪುಟ ತೆರೆದುಕೊಳ್ಳುತ್ತದೆ.ಮೀನುಗಾರಿಕೆಯನ್ನು ನಂಬಿದ್ದ ಹೌಟೌವಾನ್ ಗ್ರಾಮದಲ್ಲಿ 1980 ರಲ್ಲಿ 3000ಕ್ಕಿಂತ ಹೆಚ್ಚಿನ ಜನರು ವಾಸವಾಗಿದ್ದರು. ಆದರೆ ಸಣ್ಣ ಬೋಟ್​ಗಳ ಮೂಲಕ ಮೀನುಗಾರಿಕೆ ನಡೆಸುತ್ತಿದ್ದ ಇಲ್ಲಿಯ ಜನರು ದೊಡ್ಡ ಕಂಪನಿಗಳ ವಿರುದ್ಧ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. 90ರ ದಶಕದಲ್ಲಿ ಮೀನುಗಾರಿಕೆಯಿಂದ ಬದುಕನ್ನು ಕಟ್ಟಿಕೊಳ್ಳಲು ಅಸಾಧ್ಯ ಎಂದು ಅರಿತ ಹೌಟೌವಾನ್ ಗ್ರಾಮಸ್ಥರು ಮನೆ ಮಠಗಳನ್ನು ಬಿಟ್ಟು ಇತರೆ ಗ್ರಾಮಗಳಿಗೆ ಗುಳೆ ಹೋಗಿದ್ದಾರೆ.2002ರಲ್ಲಿ ಈ ಗ್ರಾಮದಲ್ಲಿ ನಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಈ ಗ್ರಾಮವನ್ನು ಅಧಿಕೃತವಾಗಿ ಪಕ್ಕದ ಗ್ರಾಮದೊಂದಿಗೆ ವಿಲೀನಗೊಳಿಸಲಾಯಿತು. ಒಂದು ಕಾಲದಲ್ಲಿ ಬೇಸ್ತರಿಂದ ತುಂಬಿ ತುಳುಕುತ್ತಿದ್ದ ಹೌಟೌವಾನ್ ನಿಧಾನಕ್ಕೆ ಯಾರೂ ಇಲ್ಲದೆ ಪಾಳು ಮನೆಗಳ ಬೀಡಾಗಿದೆ. ಇದರಿಂದ ಅಲ್ಲಲ್ಲಿ ಗಿಡ-ಬಳ್ಳಿಗಳು ಬೆಳೆಯಲಾರಂಭಿಸಿ, ಇಡೀ ಗ್ರಾಮವೇ ಹಸಿರಿನಿಂದ ಕಂಗೊಳಿಸುವಂತಾಗಿದೆ. 2015 ರ ತನಕ ಹೌಟೌವಾನ್ ಗ್ರಾಮ ಪ್ರವಾಸಿ ತಾಣವಾಗಿರಲಿಲ್ಲ. ಡಿಜಿಟಲ್ ಯುಗದಲ್ಲಿರುವ ಪ್ರವಾಸಿಗರು ಹೌಟೌವಾನ್​ನ ಹಸಿರು ಮನೆಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾರಂಭಿಸಿದ್ದಾರೆ. ಇದ್ದಕ್ಕಿದ್ದಂತೆ ಜನಾಕರ್ಷಣೆಯ ಕೇಂದ್ರವಾದ ಹೌಟೌವಾನ್ ಬಗ್ಗೆ ತಿಳಿಯಲು ಪ್ರವಾಸೋದ್ಯಮ ಇಲಾಖೆಗಳ ಫೋನ್ ರಿಂಗಣಿಸಲು ಪ್ರಾರಂಭಿಸಿತು. ಈ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಪ್ರವಾಸೋದ್ಯಮಕ್ಕೆ ಅಚ್ಚರಿ ಕಾದಿತ್ತು. ಅದಾಗಲೇ ವ್ಯಕ್ತಿಯೊಬ್ಬರು ಹೌಟೌವಾನ್ ಹಸಿರು ಮನೆಗಳ ಫೋಟೋಗಳನ್ನು ಪ್ರಮುಖ ವೆಬ್​ಸೈಟ್​ನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರಗಳನ್ನು ವೀಕ್ಷಿಸಿರುವ ಪ್ರವಾಸಿಗರು ಪ್ರಕೃತಿ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಬಯಸಿದ್ದರು.ಇದಾದ ಬಳಿಕ ಎರಡು ವರ್ಷಗಳಲ್ಲಿ ಹೌಟೌವಾನ್ ಗ್ರಾಮವನ್ನು ಪ್ರವಾಸಿ ಕೇಂದ್ರವಾಗಿಸಿದ ಚೀನಾ ಸರ್ಕಾರ ಹಸಿರು ಮನೆಗಳನ್ನು ವೀಕ್ಷಿಸಲು ಟಿಕೆಟ್​ಗಳನ್ನು ನಿಗದಿಪಡಿಸಿತು. ದೂರದಿಂದ ಈ ಪ್ರದೇಶದ ಮನೆಗಳನ್ನು ನೋಡಲು 3 ಡಾಲರ್ ಟಿಕೆಟ್ ದರ ವಿಧಿಸಿದರೆ, ಹತ್ತಿರ ವೀಕ್ಷಿಸಲು 8 ಡಾಲರ್ ಶುಲ್ಕ ನೀಡಬೇಕಾಗುತ್ತದೆ. ಅಲ್ಲದೆ ಪ್ರವಾಸಿಗರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಈ ಮನೆಗಳಲ್ಲಿ ಮಾಡಲಾಗಿದ್ದು, ಕಳೆದ ಒಂದು ವರ್ಷದಲ್ಲೇ 100,000 ಡಾಲರ್ ಮೊತ್ತದ ಆದಾಯವನ್ನು ಹೌಟೌವಾನ್ ಗ್ರಾಮದಿಂದ ಪ್ರವಾಸೋದ್ಯಮ ಇಲಾಖೆ ಗಳಿಸಿಕೊಂಡಿದೆ.ಬೇಸಿಗೆಯಲ್ಲಿ ಹೌಟೌವಾನ್ ಗ್ರಾಮವನ್ನು ವೀಕ್ಷಿಸಲು ತುಂಬಾ ಸುಂದರವಾಗಿರುತ್ತದೆ. ಅಲ್ಲಲ್ಲಿ ಅರಳಿ ನಿಂತಿರುವ ಸಣ್ಣ ಹೂವುಗಳು ಕೂಡ ಹಸಿರಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಶಾಂಘೈ ಭಾಗದ ಈ ದ್ವೀಪಕ್ಕೆ ತೆರಳಲು ವಿಶೇಷ ದೋಣಿ ವ್ಯವಸ್ಥೆಗಳನ್ನು ಮಾಡಲಾಗಿದೆ. ದೋಣಿ ಮೂಲಕ ಗೌಕಿ ದ್ವೀಪಕ್ಕೆ ತಲುಪಿದರೆ ಹೌಟೌವಾನ್ ಗ್ರಾಮಕ್ಕೆ ಹೋಗಲು ಟ್ಯಾಕ್ಸಿ ಸರ್ವೀಸ್ ಕೂಡ ಲಭ್ಯವಿದೆ. ಇದಲ್ಲದೆ ತಂಗಲು ಹೋಟೆಲ್ ಮತ್ತು ರೆಸ್ಟೊರೆಂಟ್​ ಸೌಲಭ್ಯಗಳನ್ನು ಹೌಟೌವಾನ್​ನಲ್ಲಿ ಪಡೆಯಬಹುದಾಗಿದೆ. ಫೋಟೋಗ್ರಾಫಿಗೆ ಮತ್ತು ಸಿನಿಮಾ ಚಿತ್ರೀಕರಣಗಳಿಗೆ ಹೇಳಿ ಮಾಡಿಸಿದ ಜಾಗವೆಂದರೆ 'ಹೌಟೌವಾನ್​' ಎನ್ನಬಹುದು.
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...