ನವದೆಹಲಿ: ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಹಿಟ್ಲರ್ ಹೆಸರನ್ನು ಕೇಳದವರು ಯಾರಿದ್ದಾರೆ ಹೇಳಿ. ಅಡಾಲ್ಫ್ ಹಿಟ್ಲರ್ (Adolf Hitler), ನಾಜಿ ಜನಾ೦ಗದ ಓರ್ವ ನಿರ೦ಕುಶ ಪ್ರಭುವಾಗಿದ್ದು, ಪ್ರಪ೦ಚವನ್ನು ವಿನಾಶದ೦ಚಿಗೆ ತಳ್ಳಿದ ಮಹಾಕ್ರೂರಿ ಆಡಳಿತಗಾರ (Ruler) ಎನ್ನಬಹುದು. ಇದೆಲ್ಲಾ ಇತಿಹಾಸದ ಕಥೆಗಳು ಬಿಡಿ. ಹೊಸ ವಿಷಯ ಏನೆಂದರೆ ಹಿಟ್ಲರ್ ಧರಿಸುತ್ತಿದ್ದ ವಾಚ್ ಅನ್ನು (Watch) ವ್ಯಕ್ತಿಯೊಬ್ಬರು ಕೋಟಿಗಟ್ಟಲೇ ನೀಡಿ ಖರೀದಿಸಿದ್ದಾರೆ. ಹೌದು, ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ಗೆ ಸೇರಿದ್ದೆಂದು ಹೇಳಲಾದ ಕೈ ಗಡಿಯಾರವನ್ನು ಮೇರಿಲ್ಯಾಂಡ್ನ ಅಲೆಕ್ಸಾಂಡರ್ ಹಿಸ್ಟಾರಿಕಲ್ ಹರಾಜಿನಲ್ಲಿ ಅನಾಮಧೇಯ ಖರೀದಿದಾರರಿಗೆ $ 1.1 ಮಿಲಿಯನ್ (ಸುಮಾರು 8.7 ಕೋಟಿ ರೂ.) ಗೆ ಮಾರಾಟ (Sold) ಮಾಡಲಾಗಿದೆ.
ಈ ಹರಾಜು ಬಹಳಷ್ಟು ಗಮನ ಸೆಳೆದಿದ್ದು, ನಿಜವಾಗಿಯೂ ಹಿಟ್ಲರ್ ಗೆ ಸೇರಿರುವ ಕೈ ಗಡಿಯಾರವೇ ಅಂತಾ ಹಲವು ಪ್ರಶ್ನೆಗಳು ಸಹ ಹುಟ್ಟಿಕೊಳ್ಳುತ್ತಿವೆ.
ವಾಚ್ ನಲ್ಲಿ ಏನೇನಿದೆ ?
ಹಿಟ್ಲರ್ ಧರಿಸುತ್ತಿದ್ದ ಎನ್ನಲಾಗಿರುವ ಈ ವಾಚ್ ಅನ್ನು ಜರ್ಮನ್ ವಾಚ್ ಫರ್ಮ್ ಹ್ಯೂಬರ್ ತಯಾರಿಸಿದೆ. ಚಿನ್ನದ ವಾಚ್ ಮೇಲೆ ಸ್ವಸ್ತಿಕ ಮತ್ತು ನಾಜಿ ಹದ್ದು ಚಿಹ್ನೆ ಇದ್ದು, ಎಎಚ್ ಎಂಬ ಎರಡು ಅಕ್ಷರಗಳು ಕೂಡ ಇವೆ. ಎಎಚ್ ಎಂದರೆ ಇಲ್ಲಿ ಅಡಾಲ್ಫ್ ಹಿಟ್ಲರ್ ಎಂದು ಊಹಿಸಬಹುದು. ವಿಶೇಷವಾಗಿ ಹಿಟ್ಲರನ ಜನ್ಮ ದಿನಾಂಕಗಳನ್ನು ಸಹ ಇಲ್ಲಿ ಕೆತ್ತಲಾಗಿದೆ.
ಹರಾಜು ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ, ಹಿಟ್ಲರ್ನ 44ನೇ ಜನ್ಮದಿನದಂದು, ಏಪ್ರಿಲ್ 20, 1933 ರಂದು, ಜರ್ಮನಿಯ ಚಾನ್ಸೆಲರ್ ಆಗಿದ್ದ ಸಮಯದಲ್ಲಿ ಚಿನ್ನದ ಆಂಡ್ರಿಯಾಸ್ ಹ್ಯೂಬರ್ ರಿವರ್ಸಿಬಲ್ ಕೈ ಗಡಿಯಾರವನ್ನು ಹಿಟ್ಲರ್ ಗೆ ನೀಡಲಾಗಿತ್ತು ಎಂದಿದೆ. ಅಮೆರಿಕಾದ ಈ ಹರಾಜು ಮನೆಯು ಐತಿಹಾಸಿಕ ಆಟೋಗ್ರಾಫ್ಗಳು, ದಾಖಲೆಗಳು, ಛಾಯಾಚಿತ್ರಗಳು, ಮಿಲಿಟರಿ ಮತ್ತು ಪ್ರಮುಖ ಅವಶೇಷಗಳೊಂದಿಗೆ ವ್ಯವಹಸಿಸುವಂತಹ ಸ್ಥಳವಾಗಿದೆ.
ಹಿಟ್ಲರನ ವಾಚ್ ಬಗ್ಗೆ ನಿಮಗೆಷ್ಟು ಗೊತ್ತು?
ಇದನ್ನೂ ಓದಿ: Viral Video: ಯಾವುದೇ ಸಪೋರ್ಟ್ ಇಲ್ಲದೆ ಕಲ್ಲಿನ ಬೆಟ್ಟ ಹತ್ತಿದ ಭಿಕ್ಕು! ಅಬ್ಬಾ ಎನರ್ಜಿಯೇ, ನೆಟ್ಟಿಗರು ಫಿದಾ
34 ಯಹೂದಿ ನಾಯಕರು ಬಹಿರಂಗ ಪತ್ರಕ್ಕೆ ಸಹಿ ಹಾಕಿ, ಪತ್ರದಲ್ಲಿ ವಾಚ್ ಮಾರಾಟವನ್ನು "ಅಸಹ್ಯಕರ" ಎಂದು ಉಲ್ಲೇಖಿಸಿದ್ದಾರೆ. ಹಿಟ್ಲರನ ಪತ್ನಿ ಇವಾ ಬ್ರಾನ್ಗೆ ಸೇರಿದ ಉಡುಗೆ, ನಾಜಿ ಅಧಿಕಾರಿಗಳ ಹಸ್ತಾಕ್ಷರ ಚಿತ್ರಗಳು ಮತ್ತು ಹಳದಿ ಬಟ್ಟೆಯ ಡೇವಿಡ್ ನಕ್ಷತ್ರವಿರುವ "ಜೂಡ್" ಸೇರಿ ನಾಜಿ ವಸ್ತುಗಳನ್ನು ಹರಾಜಿನಿಂದ ಹಿಂತೆಗೆದುಕೊಳ್ಳುವಂತೆ ಯಹೂದಿಗಳು ಅಲೆಕ್ಸಾಂಡರ್ ಹಿಸ್ಟಾರಿಕಲ್ ಹರಾಜು ಮನೆಗೆ ಕರೆ ನೀಡಿದ್ದರು. ಆದರೆ ಯಹೂದಿಗಳ ವಿರೋಧದ ನಡುವೆಯೇ ಹರಾಜು ನಡೆದಿದ್ದು, ಬರೋಬ್ಬರಿ 8.7 ಕೋಟಿಗೆ ಮಾರಾಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ