news18-kannada Updated:April 7, 2021, 3:34 PM IST
ನಾಯಿಯನ್ನು ಗ್ರೂಮ್ ಮಾಡ್ತಿರೋ ಪ್ರತೀಕ್
ಬೆಂಗಳೂರು (ಏಪ್ರಿಲ್ 07): ನೀವೇನಾದ್ರೂ ನಾಯಿ ಸಾಕಿದ್ರೆ ನಾಯಿಗೊಂದು ಸ್ನಾನ ಮಾಡಿಸೋದು ಅದೆಷ್ಟು ಕಷ್ಟದ ಕೆಲಸ ಅನ್ನೋದು ನಿಮಗೆ ಗೊತ್ತಿರುತ್ತದೆ. ಆ ಕೆಲಸ ಸುಲಭ ಆಗ್ಲಿ ಅಂತ ಅಂಗಡಿಯಿಂದ ನಾನಾ ಬಗೆಯ ಉತ್ಪನ್ನಗಳನ್ನೂ ತಂದು ಗುಡ್ಡೆ ಹಾಕಿರ್ತೀರಾ. ಆದ್ರೆ ಅದ್ಯಾವುದೂ ಒಮ್ಮೆಯೂ ಪ್ರಯೋಜನಕ್ಕೆ ಬರೋದೇ ಇಲ್ಲ.
ಆದ್ರೆ ಪ್ರತೀಕ್ ಬಂದ್ರೆ ಹಾಗಲ್ಲ. ನಾಯಿಗೊಂದು ಹಾಯ್ ! ಹೇಳಿ ಮೊದಲು ಅದರ ಜೊತೆಗೊಂದು ಗೆಳೆತನ ಬೆಳೆಸಿಕೊಳ್ತಾರೆ. ನಂತರ ನಿಧಾನಕ್ಕೆ ಅದಕ್ಕೆ ತನ್ನ ಮೇಲೆ ನಂಬಿಕೆ ಬಂದಿದೆ ಅಂತ ಗೊತ್ತಾದ್ಮೇಲೆ ತಮ್ಮ ಕೆಲಸ ಶುರು ಮಾಡ್ತಾರೆ. ಲೈಟಾಗಿ ನಾಯಿಗೆ ಮಸಾಜ್ ಮಾಡುತ್ತಾ ಅದಕ್ಕೆ ಸ್ನಾನ ಮಾಡಿಸಿ, ಕೂದಲು ಕಟ್ ಮಾಡಿ, ಉಗುರು ಕತ್ತರಿಸಿ…ನಾಯಿ ಒಂಥರಾ ಸ್ಪಾನಲ್ಲಿ ರಿಲ್ಯಾಕ್ಸ್ ಆಗಿರೋ ಫೀಲ್ನಲ್ಲಿ ಇರುತ್ತೆ. ಹಾಗಿರುತ್ತೆ ಇವರ ಕೆಲಸದ ಚಾಕಚಕ್ಯತೆ.
ಚಿಕ್ಕಮಗಳೂರು ಮೂಲದ ಪ್ರತೀಕ್ ಬಿಳಗಲಿ ಅಶೋಕ್ ಗೆ ಚಿಕ್ಕಂದಿನಿಂದಲೂ ಪ್ರಾಣಿಗಳು ಅಂದ್ರೆ ವಿಪರೀತ ಇಷ್ಟ. ಅದಕ್ಕಾಗೇ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆರಿಸಿಕೊಂಡು ಉತ್ತಮ ಅಂಕಗಳ್ನೂ ಪಡೆದಿದ್ರು. ಆದರೆ ಅವರಿಗೆ ಇಷ್ಟವಿದ್ದ ಕಾಲೇಜಿನಲ್ಲಿ ಕಾರಣಾಂತರಗಳಿಂದ ಸೀಟು ಸಿಗಲಿಲ್ಲವಂತೆ. ಅದರಿಂದ ಅದೆಷ್ಟು ಬೇಸರವಾಯ್ತು ಅಂದ್ರೆ ವಿಜ್ಞಾನವನ್ನೇ ತ್ಯಜಿಸಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಲಿಯಲು ಹೊರಟುಬಿಟ್ಟರಂತೆ. ನಂತರ ಎಂಬಿಎ ಮುಗಿಸಿ ಐಬಿಎಂ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಇವರಿಗಿತ್ತು.

ಬಗೀರಾ ಮತ್ತು ಸ್ಪ್ಲಾಶ್ ಜೊತೆ ಪ್ರತೀಕ್
ಇಷ್ಟೆಲ್ಲಾ ಇದ್ದರೂ ಇವರ ಮನಸ್ಸು ನಾಯಿಗಳ ಗ್ರೂಮಿಂಗ್ ಬಗ್ಗೆಯೇ ಇರುತ್ತಿತ್ತು. ಹಾಗಾಗಿ ಸಂಜೆ 4ರಿಂದ ಬೆಳಗಿನ ಜಾವ 2 ಗಂಟೆಯ ವಿಚಿತ್ರ ಶಿಫ್ಟ್ನಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸ್ವಲ್ಪ ನಿದ್ದೆ ಮಾಡಿ ಬೆಳಗ್ಗಿನ ಹೊತ್ತು ಮತ್ತು ರಜಾ ದಿನಗಳಲ್ಲಿ ತನ್ನಿಚ್ಛೆಯ ಡಾಗ್ ಗ್ರೂಮಿಂಗ್ ಮುಂದುವರೆಸಿದ್ರು ಪ್ರತೀಕ್. ಸುಮಾರು 5 ವರ್ಷ ಹೀಗೇ ಮಾಡಿದ ನಂತರ, ದುಡಿದ ಹಣವನ್ನೆಲ್ಲಾ ಉಳಿಸಿಕೊಂಡು ದ ಸಿಂಗಾಪುರ್ ಕೆನೆಲ್ ನಲ್ಲಿ ಪೆಟ್ ಗ್ರೂಮಿಂಗ್ ಬಗ್ಗೆ 5 ತಿಂಗಳ ಒಂದು ಕೋರ್ಸ್ ಕೂಡಾ ಮಾಡಿಕೊಂಡು ಬಂದ್ರು ಪ್ರತೀಕ್.
ನಂತರ ತನ್ನದೇ ಆದ ‘Pawz and Care’ ಎನ್ನುವ ಪೆಟ್ ಗ್ರೂಮಿಂಗ್ ಸಂಸ್ಥೆಯೊಂದನ್ನು ಆರಂಭಿಸಿ ಫುಲ್ ಟೈಮ್ Pet Grooming ಮಾಡುತ್ತಿದ್ದಾರೆ. ತಿಂಗಳಿಗೆ ಕಡಿಮೆ ಎಂದರೂ 130 ರಿಂದ 140 ನಾಯಿಗಳಿಗೆ ಗ್ರೂಮಿಂಗ್ ಮಾಡೋ ಇವರದ್ದು ಬಿಡುವಿಲ್ಲದ ಕೆಲಸ. ಒಂದು ನಾಯಿಯನ್ನು ಗ್ರೂಮ್ ಮಾಡೋಕೆ ಕನಿಷ್ಠ ಎರಡು ಗಂಟೆಗಳಾದರೂ ಬೇಕಾಗುತ್ತದಂತೆ. ಕೆಲವು ನಾಯಿಗಳು ಸ್ವಲ್ಪ ಅಗ್ರೆಸಿವ್ ಆಗಿರುತ್ತವೆ. ಆದ್ರೆ ಯಾವುದೇ ಕಾರಣಕ್ಕೂ ನಾಯಿಗಳಿಗೆ ಮತ್ತು ಬರುವ ಔಷಧ ನೀಡದೆ ಅದರೊಂದಿಗೆ ಮತ್ತೊಂದು ಗಂಟೆ ಹೆಚ್ಚು ಸಮಯ ಕಳೆಯೋದ್ರಿಂದ ಗ್ರೂಮಿಂಗ್ ಸುಲಭ ಅಂತಾರೆ ಪ್ರತೀಕ್. ಆಗಾಗ ನಾಯಿಗಳು ಪರಚೋದು, ಕಚ್ಚೋದು ಇದ್ದೇ ಇರುತ್ತಂತೆ. ಹಾಹಾಗಿ ತನ್ನ ಮತ್ತು ಕುಟುಂಬಸ್ಥರ ರಕ್ಷಣೆಗಾಗಿ ಪ್ರತೀವರ್ಷ Anti Rabies ಇಂಜೆಕ್ಷನ್ ತೆಗೆದುಕೊಳ್ತಾರೆ.
ಅಂದ್ಹಾಗೆ ಪ್ರತೀಕ್ ಪತ್ನಿ ಮಧುಮಿತಾಗೆ ನಾಯಿಗಳು ಅಂದ್ರೆ ಸ್ವಲ್ಪವೂ ಇಷ್ಟವಿಲ್ಲವಂತೆ, ನಾಯಿಯನ್ನ ಮುಟ್ಟೋದೂ ಇಲ್ಲ ಅಂತ ನಗುತ್ತಾರೆ ಪ್ರತೀಕ್. ಆದ್ರೆ ತನ್ನ ಸಂಗಾತಿ ಹೀಗೇ ಇರಬೇಕು ಅನ್ನೋ ಅಪೇಕ್ಷೆ ಅವರದ್ದಾಗಿತ್ತು. ಇಲ್ಲದಿದ್ರೆ ಜೀವನ ಪೂರ್ತಿ ನಾಯಿಗಳ ಲೋಕದಲ್ಲೇ ಇದ್ದುಬಿಡ್ತಿದ್ದೆ, ಖಾಸಗಿ ಬದುಕನ್ನು ಇದಕ್ಕಿಂತ ಹೊರತಾಗಿ ಇಡುವ ಅವಶ್ಯಕತೆ ಇದೆ ಅಂತಾರವರು. ಹೊಸಾ ವರ್ಷವನ್ನು ಬರಮಾಡಿಕೊಳ್ಳೋಕೆ ಪ್ರತೀ ವರ್ಷ ತಪ್ಪದೇ ಈ ದಂಪತಿ ತಮ್ಮ ಮನೆಯ ಎರಡು ನಾಯಿಗಳಾದ ಬಗೀರಾ ಮತ್ತು ಸ್ಪ್ಲಾಶ್ ಜೊತೆ ಸಮುದ್ರ ತೀರಗಳಿಗೆ ಟ್ರಿಪ್ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇವರು ಸಾಕಿದ ನಾಯಿ ಬಗೀರಾಗೆ ಬೆಂಗಳೂರಿನ ಇವರ ಮನೆಗಿಂತ ಚಿಕ್ಕಮಗಳೂರಿನ ತೋಟದ ಮನೆಯಲ್ಲೇ ಇರೋದು ಹೆಚ್ಚು ಖುಷಿ ಕೊಡ್ತಿದೆ ಅನ್ನೋದು ಗೊತ್ತಾದಾಗ ಅದನ್ನು ತಮ್ಮ ತಂದೆ ಅಶೋಕ್ ಬಿಳಗಲಿ ಬಳಿಯೇ ಬಿಟ್ಟು ಬಂದಿದ್ದಾರೆ.ಪೆಟ್ ಗ್ರೂಮಿಂಗ್ ಅಂದ್ರೆ ಮೇಲ್ನೋಟಕ್ಕೆ ನಾಯಿಗೆ ಸ್ನಾನ ಮಾಡಿಸೋದು ಅಷ್ಟೇ ಅಂತ ಅನಿಸುತ್ತೆ. ಆದ್ರೆ ಅದು ಅಷ್ಟೇ ಅಲ್ಲ. ಅದರಲ್ಲಿರೋ ನಾನಾ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಹಾಗಾಗಿ ದಿನದ ಕೆಲಸ ಮುಗಿಸಿ ಮರಳುವಾಗ ಕೈಬೆರಳುಗಳು, ಕಾಲು ವಿಪರೀತ ನೋಯುತ್ತಿರುತ್ತದೆ. ಗಂಟೆಗಟ್ಟಲೆ ನಿಂತೇ ಇರೋದ್ರಿಂದ, ನಿರಂತರವಾಗಿ ಮಸಾಜ್ ಮಾಡ್ತಾ ಇರೋದ್ರಿಂದ ಹಾಗಾಗುತ್ತೆ. ಆದ್ರೆ ತಾನು ಗ್ರೂಮ್ ಮಾಡಿರುವ ನಾಯಿಯ ಚಿತ್ರ ನೋಡಿದ ನಂತರ ಆ ಎಲ್ಲಾ ನೋವು ಸಾರ್ಥಕ ಎನಿಸುತ್ತೆ ಅಂತಾರೆ ಪ್ರತೀಕ್.
ಈಗಲೂ ಇವರ ಗೆಳೆಯರು, ಕಸಿನ್ಸ್ ಎಲ್ಲಾ “ನಾಯಿಗೆ ಸ್ನಾನ ಮಾಡ್ಸೋನೇ…” ಅಂತ ಇವರನ್ನು ರೇಗಿಸ್ತಾರಂತೆ. ಇವರ ತಂದೆಗೂ ಆರಂಭದಲ್ಲಿ ಮಗನ ಭವಿಷ್ಯವೇನು, ಇದೇನು ವೃತ್ತಿ ಎಂದೆಲ್ಲಾ ಸಹಜವಾದ ಆತಂಕವಿತ್ತು. ಆದ್ರೆ ಕ್ರಮೇಣ ಅವರಿಗೂ ಪ್ರತೀಕ್ನ ಪ್ಯಾಷನ್ ಅರ್ಥವಾಗಿ ಈಗ ಎಲ್ಲವೂ ಉತ್ತಮವಾಗಿದೆ ಎನ್ನುತ್ತಾರೆ ಪ್ರತೀಕ್. ಕನಿಷ್ಠ ಒಂದು ವಾರದ ಮುಂಚೆ ಅಪಾಯಿಂಟ್ಮೆಂಟ್ ತೆಗೆದುಕೊಳ್ಳದ ಹೊರತು ಪ್ರತೀಕ್ ಬಳಿಗೆ ನಿಮ್ಮ ನಾಯಿಯ ಗ್ರೂಮಿಂಗ್ ಮಾಡಿಸೋಕೆ ಸಾಧ್ಯವಿಲ್ಲ ಎನ್ನುವಷ್ಟು ಅವರೀಗ ಬ್ಯುಸಿ. ಆದ್ರೆ ಮಾಡುತ್ತಿರುವ ಕೆಲಸವನ್ನು ಬಹಳ ಇಷ್ಟಪಟ್ಟು ಮಾಡ್ತಿದ್ದೇನೆ ಮತ್ತು ನನಗೆ ಇದು ಖುಷಿ ಕೊಡ್ತಿದೆ, ಅಷ್ಟು ಸಾಕು ಅಂತಾರೆ ಪ್ರತೀಕ್.
Published by:
Soumya KN
First published:
April 7, 2021, 3:30 PM IST