Justice: 35 ವರ್ಷದಲ್ಲಿ ಬರೋಬ್ಬರಿ 400 ಬಾರಿ ಕೋರ್ಟ್‌ ಮುಂದೆ ಹಾಜರಾದ ವೃದ್ಧನಿಗೆ ಕೊನೆಗೂ ಸಿಕ್ತು ಜಯ

ಪ್ರಕರಣದ ವಿಚಾರಣೆಯು 35 ವರ್ಷಗಳಷ್ಟು ದೀರ್ಘಕಾಲ ತೆಗೆದುಕೊಂಡರೂ ನನ್ನ ಕಕ್ಷಿದಾರ ಧರ್ಮಪಾಲ್ ಸಿಂಗ್ ವಿರುದ್ಧ ಯಾವುದೇ ಸಾಕ್ಷಿಯನ್ನಾಗಲಿ ಅಥವಾ ಸಾಕ್ಷಿದಾರರನ್ನಾಗಲಿ ಹಾಜರು ಪಡಿಸುವಲ್ಲಿ ಪೊಲೀಸರು ವಿಫಲವಾದರು ಎಂದು ಧರ್ಮಪಾಲ್ ಸಿಂಗ್ ಪರ ವಕೀಲ ಕರಣ್ ಸಿಂಗ್ ಪುಂಡಿರ್ ತಿಳಿಸಿದ್ದಾರೆ.

 ಕೇಸ್‌ ಗೆದ್ದ ವೃದ್ಧ

ಕೇಸ್‌ ಗೆದ್ದ ವೃದ್ಧ

  • Share this:
ಈ ವ್ಯಕ್ತಿಯ ಹೆಸರು ಧರ್ಮಪಾಲ್ ಸಿಂಗ್ ( Dharmapal Singh). ಈತ ಮೂಲತಃ ಉತ್ತರ ಪ್ರದೇಶದ (Uttar Pradesh) ಶಮ್ಲಿ ಜಿಲ್ಲೆಯ ಹರಣ್ ಗ್ರಾಮಕ್ಕೆ ಸೇರಿದವರು. ಈತನ ವಿರುದ್ಧ 35 ವರ್ಷಗಳ ಹಿಂದೆ ಪರವಾನಗಿ ಪಡೆಯದೆ ಕ್ರಿಮಿನಾಶಕ ತಯಾರಿಸುತ್ತಿದ್ದ ಆರೋಪ ಹೊರಿಸಲಾಗಿತ್ತು. ಈ ಸಂಬಂಧ ಧರ್ಮಪಾಲ್ ಸಿಂಗ್ ಕಳೆದ 35 ವರ್ಷಗಳಲ್ಲಿ ಬರೋಬ್ಬರಿ 400 ಬಾರಿ ಕೋರ್ಟ್‌ಗೆ(Court) ಹಾಜರಾಗಿದ್ದರು. 18 ದಿನಗಳ ಕಾಲ ಸೆರೆವಾಸವನ್ನೂ ಅನುಭವಿಸಿದ್ದರು. ಆದರೆ, ತನ್ನ ಈ ಕಾನೂನು ಹೋರಾಟದಲ್ಲಿ ಕೊನೆಗೂ ಗೆಲುವಿನ (Victory ) ನಗೆ ಬೀರಿದ್ದಾರೆ. ನ್ಯಾಯಾಲಯವು ಧರ್ಮಪಾಲ್ ಸಿಂಗ್ ನಿರ್ದೋಷಿ ಎಂದು ತೀರ್ಪು ನೀಡಿದೆ. ತನ್ನ ಪರ ಈ ನ್ಯಾಯ(Justice) ಪಡೆಯುವ ಹೊತ್ತಿಗೆ ಧರ್ಮಪಾಲ್ ಸಿಂಗ್‌ಗೆ ಮುಪ್ಪು ಅವರಿಸಿದೆ.

ಪೂರಕ ಸಾಕ್ಷ್ಯಾಧಾರ ಕೊರತೆ
ಪರವಾನಗಿ ಪಡೆಯದೆ ಧರ್ಮಪಾಲ್ ಸಿಂಗ್( 85 ವರ್ಷ) ಹಾಗೂ ಆತನ ಸಹೋದರ ಕುನ್ವರ್‌ಪಾಲ್ ಮತ್ತು ಲಿಯಾಕತ್ ಅಲಿ ಎಂಬುವವರು ಕ್ರಿಮಿನಾಶಕ ತಯಾರಿಸುತ್ತಿದ್ದರು ಎಂದು ಆರೋಪಿಸಿ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರೆ, 35 ವರ್ಷ ಕಳೆದರೂ ಅದಕ್ಕೆ ಪೂರಕ ಸಾಕ್ಷ್ಯಾಧಾರ ಒದಗಿಸದ ಕಾರಣ ಮುಜಾಫರ್‌ನಗರದ ಎಸಿಜೆಎಂ ಕೋರ್ಟ್ ಧರ್ಮಪಾಲ್ ಸಿಂಗ್‌ರನ್ನು ಆರೋಪಮುಕ್ತಗೊಳಿಸಿದೆ. ಈ ದಾವೆಯಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಧರ್ಮಪಾಲ್ ಸಿಂಗ್ ಸಹೋದರ ಕುನ್ವರ್‌ಪಾಲ್ ತೀರ್ಪು ಹೊರಬೀಳುವ ಮುನ್ನವೇ ಕೊನೆಯುಸಿರೆಳೆದಿದ್ದರು. ಮತ್ತೊಬ್ವ ಆರೋಪಿ ಲಿಕಾಯತ್ ಖಾನ್ ಅನ್ನು ತಲೆ ಮರೆಸಿಕೊಂಡಿರುವ ಆರೋಪಿ ಎಂದು ನ್ಯಾಯಾಲಯ ಘೋಷಿಸಿದೆ.

35 ವರ್ಷ ಕಾನೂನು ಹೋರಾಟ
1986ರಲ್ಲಿ ತನ್ನ ಮನೆಯಲ್ಲಿ ಪರವಾನಗಿ ಇಲ್ಲದೆ ಕ್ರಿಮಿನಾಶಕ ತಯಾರಿಸುತ್ತಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದ ಧರ್ಮಪಾಲ್ ಸಿಂಗ್ ಕಳೆದ 35 ವರ್ಷಗಳ ತಮ್ಮ ಕಾನೂನು ಹೋರಾಟಕ್ಕಾಗಿ ಭಾರಿ ಹಣ ವ್ಯಯಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮುಜಾಫರ್‌ನಗರದ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು, ಧರ್ಮಪಾಲ್ ಸಿಂಗ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪೊಲೀಸರು ವಿಫಲರಾಗಿದ್ದರಿಂದ ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದರು.

ಇದನ್ನೂ ಓದಿ: Supreme Court: ನ್ಯಾಯ ವಿತರಣೆಯಲ್ಲಿ ವಿಳಂಬ ಉಂಟಾಗಲು ನ್ಯಾಯಾಲಯಗಳು ಕಾರಣವಾಗಬಾರದು; ಸುಪ್ರೀಂಕೋರ್ಟ್

400 ಬಾರಿ ನ್ಯಾಯಾಲಯದ ಎದುರು ಹಾಜರು
ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಧರ್ಮಪಾಲ್ ಸಿಂಗ್, ನಾನು ನನ್ನ ಕಾನೂನು ಸಮರದ ಸಂದರ್ಭದಲ್ಲಿ ನನ್ನ ಗೌರವ, ಹಣ ಮತ್ತು ಮಾನಸಿಕ ಶಾಂತಿ ಕಳೆದುಕೊಂಡೆ. ನನಗೆ ನ್ಯಾಯ ತೀರಾ ವಿಳಂಬವಾಗಿ ದೊರೆತಿದ್ದರೂ, ಕೊನೆಗಾದರೂ ನನ್ನ ವಿರುದ್ಧ ಹೊರಿಸಲಾಗಿದ್ದ ಎಲ್ಲ ಆರೋಪಗಳಿಂದ ಮುಕ್ತನಾಗಿರುವುದಕ್ಕೆ ಸಂತೋಷವಾಗಿದೆ. ಕಳೆದ 35 ವರ್ಷಗಳಿಂದ ನಡೆದ ವಿಚಾರಣೆಯ ಸಂದರ್ಭದಲ್ಲಿ ನಾನು 400 ಬಾರಿ ನ್ಯಾಯಾಲಯದ ಎದುರು ಹಾಜರಾದೆ. ಇದಕ್ಕಾಗಿ ಸಾಕಷ್ಟು ಹಣ ಮತ್ತು ಸಮಯ ವ್ಯಯಿಸಿದೆ ಎಂದು ತಿಳಿಸಿದ್ಧಾರೆ.

ಪ್ರಕರಣದ ವಿಚಾರಣೆಯು 35 ವರ್ಷಗಳಷ್ಟು ದೀರ್ಘಕಾಲ ತೆಗೆದುಕೊಂಡರೂ ನನ್ನ ಕಕ್ಷಿದಾರ ಧರ್ಮಪಾಲ್ ಸಿಂಗ್ ವಿರುದ್ಧ ಯಾವುದೇ ಸಾಕ್ಷಿಯನ್ನಾಗಲಿ ಅಥವಾ ಸಾಕ್ಷಿದಾರರನ್ನಾಗಲಿ ಹಾಜರು ಪಡಿಸುವಲ್ಲಿ ಪೊಲೀಸರು ವಿಫಲವಾದರು ಎಂದು ಧರ್ಮಪಾಲ್ ಸಿಂಗ್ ಪರ ವಕೀಲ ಕರಣ್ ಸಿಂಗ್ ಪುಂಡಿರ್ ತಿಳಿಸಿದ್ದಾರೆ.

ಇದನ್ನೂ ಓದಿ: Supreme Court CJI: ಕೋರ್ಟ್ ಭೌತಿಕ ಕಲಾಪಗಳು ಏಕೆ ಆರಂಭವಾಗಿಲ್ಲ?; ಸುಪ್ರೀಂಕೋರ್ಟ್ ಸಿಜೆಐಗೆ ಪತ್ರದ ಮೂಲಕ ಪ್ರಶ್ನಿಸಿದ ಪುಟ್ಟ ಬಾಲಕಿ!

18 ದಿನಗಳ ಕಾಲ ಸೆರೆವಾಸ
ಪ್ರಕರಣದ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಗಳು ಧರ್ಮಪಾಲ್ ಸಿಂಗ್ ಮತ್ತವರ ಸಹೋದರ ಕುನ್ವರ್‌ಪಾಲ್ ಸಿಂಗ್ ಹಾಗೂ ಲಿಕಾಯತ್ ಸಿಂಗ್ ಯಾವುದೇ ಮಾನ್ಯತೆವುಳ್ಳ ಪರವಾನಗಿ ಪಡೆಯದೆ ಕ್ರಿಮಿನಾಶಕ ತಯಾರಿಸುತ್ತಿದ್ದರು. ನಾವು ಸ್ಥಳದಿಂದ ಟ್ರಕ್‌ಗೆ ತುಂಬಿಸಲಾಗುತ್ತಿದ್ದ 26 ಚೀಲ ಕ್ರಿಮಿನಾಶಕ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಆರೋಪಿಸಿದ್ದರು. ಈ ಸಂಬಂಧ ಮೂವರೂ ಆರೋಪಿಗಳನ್ನು ಐಪಿಸಿ ಸೆಕ್ಷನ್ 420 ಹಾಗೂ ಮತ್ತಿತರ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ಪೊಲೀಸರು ಬಂಧಿಸಿದ್ದರು. ಬಂಧನದ ನಂತರ 18 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದ ಈ ಮೂವರೂ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
Published by:vanithasanjevani vanithasanjevani
First published: