ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಗುರು ಶಿಷ್ಯರ ಸಂಬಂಧ ಅವಿನಾಭಾವವಾದದ್ದೂ ಹಾಗೂ ಪ್ರಪಂಚಕ್ಕೆ ಬಹಳ ಆದರ್ಶಪೂರ್ಣವಾಗಿರುವುದಾಗಿದೆ. ಗುರುವಿನ ಮಾರ್ಗದರ್ಶನವಿಲ್ಲದೆ ನಮ್ಮ ಬದುಕು ಗುರಿ ಮುಟ್ಟಲು ಸಾಧ್ಯವಿಲ್ಲ. “ಗುರು” ಎಂದರೆ, ಶಿಷ್ಯನ ಅಜ್ಞಾನವನ್ನು, ಅಂಧಕಾರವನ್ನು ದೂರಗೊಳಿಸುವವನು ಎಂದರ್ಥ. ಶಿಷ್ಯನ ಸರ್ವತೋಮುಖ ಅಭಿವೃದ್ಧಿಯನ್ನು ಗುರುವು ಬಯಸುವವನಾಗಿರುತ್ತಾನೆ. ತನ್ನ ವಿದ್ಯಾರ್ಥಿಯನ್ನು ಚಕ್ರವರ್ತಿಯನ್ನಾಗಿ ಮಾಡಿ ತಾನು ಮಾತ್ರ ಶಿಕ್ಷಕನಾಗಿಯೇ ಉಳಿದು ಮುಂದಿನ ಶಿಷ್ಯ ಸಮೂಹವನ್ನು ಸಾಕಿ ಬೆಳೆಸುವ ವಿಶಾಲವಾದ ಆತ್ಮ ಗುರುವಿನದ್ದಾಗಿರುತ್ತದೆ.
ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಿ ಸಕಲ ವಿದ್ಯೆಯನ್ನು ಬೋಧಿಸಿ, ಆತ್ಮವಿಶ್ವಾಸದಿಂದ ಬದುಕುವುದನ್ನು ಕಲಿಸಿಕೊಡುವ ತಾಯಿಯ ಇನ್ನೊಂದು ಸ್ವರೂಪವೇ ಗುರು. ಜೀವನದಲ್ಲಿ ತಾಯಿ ಇಲ್ಲದೇ ಬದುಕಿದವರು ಹಲವಾರು ಜನ ಇರುವವರು ಆದರೇ, ಗುರುವಿಲ್ಲದೇ ಬದುಕಿದವರು ಯಾರೂ ಇರಲಾರರು. ಇಷ್ಟೊಂದು ಮಹತ್ವ ಹೊಂದಿರುವ ಗುರುವನ್ನು ವಿಶೇಷವಾಗಿ ಪೂಜಿಸುವ ದಿನವನ್ನು ಗುರು ಪೂರ್ಣಿಮೆ ಎಂಬ ಹೆಸರಿನಿಂದ ಕರೆಯುತ್ತೇವೆ.
ಗುರು ಪೂರ್ಣಿಮೆಯು ಹಿಂದೂ ಧರ್ಮದ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಆಚರಿಸುವ ಸಾಂಪ್ರದಾಯಕ ಹಬ್ಬವಾಗಿದೆ. ನಮ್ಮ ಉಪನಿಷತ್ತುಗಳಲ್ಲಿ “ ಆಚಾರ್ಯದೇವೋಭವ” ಎಂದು ಗುರುಗಳನ್ನು ದೇವರಂತೆ ಪೂಜಿಸಬೇಕು ಎಂಬುವುದಾಗಿ ಹೇಳಿದ್ದಾರೆ. ನಮ್ಮ ಬದುಕಿಗೆ ಮಾರ್ಗದರ್ಶನ ನೀಡಿದ, ವಿದ್ಯಾದಾನವನ್ನು ಮಾಡಿದ ಗುರುಪರಂಪರೆಗೆ ನಿತ್ಯದಂತಲ್ಲದೆ ಈ ದಿನವು ವಿಶೇಷವಾಗಿ ನಮಿಸುವುದು ಈ ಗುರು ಪೂರ್ಣಿಮೆಯ ಮುಖ್ಯ ಧ್ಯೇಯವಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಪ್ರವಾಹ: ಗಂಗಾವಳಿ ನದಿ ಅಬ್ಬರಕ್ಕೆ ಕೊಚ್ಚಿ ಹೋದ ಜನರ ಬದುಕು
ವಸಿಷ್ಠ ಮಹರ್ಷಿಗಳ ಮರಿಮಗನಾಗಿ, ಶಕ್ತಿ ಮಹರ್ಷಿಗಳ ಮೊಮ್ಮಗನಾಗಿ, ಪರಾಶರರ ಮಗನಾಗಿ ‘ಕೃಷ್ಣ ದ್ವೈಪಾಯನರು’ ಅವತರಿಸಿದರು. ಅಪಾರವಾದ ಗ್ರಂಥ ರಾಶಿ, ಜ್ಞಾನ ಭಂಡಾರ ಎಂದು ಪರಿಗಣಿಸಲಾದ ವೇದಗಳನ್ನು ಪೂರ್ಣವಾಗಿ ಅಧ್ಯಯನ ಮಾಡುವುದು ಕಷ್ಟದ ಕೆಲಸವೆಂದು ತಿಳಿದು ಸಂಹಿತಾ ಭಾಗದಲ್ಲಿನ ಮಂತ್ರಗಳನ್ನು ಋಗ್ವೇದವನ್ನಾಗಿ, ಯಜ್ಞ-ಯಾಗದ ವಿಧಿ ನಿಯಮಗಳನ್ನು ಒಳಗೊಂಡ ಭಾಗವನ್ನು ಯಜುರ್ವೇದವನ್ನಾಗಿ, ಸಾಮಗಳನ್ನೊಳಗೊಂಡ ಭಾಗವನ್ನು ಸಾಮವೇದವನ್ನಾಗಿ, ವ್ಯಾವಹಾರಿಕ ಕ್ರಿಯೆಗಳನ್ನೊಳಗೊಂಡ ಭಾಗವನ್ನು ಅಥರ್ವಣವೇದ ಎನ್ನುವುದಾಗಿ ನಾಲ್ಕು ಭಾಗಗಳನ್ನು ಮಾಡಿ ಅಧ್ಯಯನ ಮಾಡುವವರಿಗೆ ಹಾದಿಯನ್ನು ಹಾಕಿಕೊಟ್ಟ ಕೀರ್ತಿಯು ಕೃಷ್ಣ ದ್ವೈಪಾಯನರಿಗೆ ಸೇರಿರುವಂತದ್ದು.
‘ವ್ಯಾಸ’ ಎಂದರೆ ವಿಭಜನೆ ಎಂದರ್ಥ. ವೇದಗಳನ್ನು ವಿಭಜನೆ ಮಾಡಿದ ಕಾರಣದಿಂದಾಗಿ ಕೃಷ್ಣ ದ್ವೈಪಾಯನರಿಗೆ “ವೇದವ್ಯಾಸ” ಎಂದು ಹೆಸರು ಬಂದಿದೆ. ಪಂಚಮವೇದ ಎಂದೇ ಪರಿಗಣಿಸಲಾದ ಶ್ರೀಮನ್ ಮಹಾಭಾರತವನ್ನು ವ್ಯಾಸರು ರಚಿಸಿದರು. ಇವೆಲ್ಲ ಕಾರಣಗಳಿಂದ ವೇದವ್ಯಾಸರನ್ನು ಆದಿಗುರು ಎಂಬುವುದಾಗಿ ಕರೆಯುತ್ತಿದ್ದೇವೆ. ತಪೆÇೀ ಮೂರ್ತಿಗಳೂ, ಚಿರಂಜೀವಿಗಳೂ, ಮಹಾವಿಷ್ಣು ಸ್ವರೂಪರೂ, ವೇದನಿಧಿಗಳೂ ಆದ ಭಗವಾನ್ ವೇದವ್ಯಾಸರು ಆಷಾಢ ಶುದ್ಧ ಪೂರ್ಣಿಮೆಯಂದು ಅವತರಿಸಿದರು. ಈ ರೀತಿಯಲ್ಲಿ ಶ್ರೇಷ್ಠರಾದ ಆದಿಗುರುಗಳವರ ಜನ್ಮದಿನವನ್ನು ಒಂದು ಪರ್ವಕಾಲ ಎಂದು ನಾವುಗಳು ಗೌರವಿಸುತ್ತೇವೆ. ಇದರಿಂದಲೇ ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತೇವೆ.
ಪ್ರತಿ ಸಂವತ್ಸರದಲ್ಲೂ ದಕ್ಷಿಣಾಯನದ ಮೊದಲ ನಾಲ್ಕು ತಿಂಗಳನ್ನು ಭವಗಂತನ ಪ್ರೀತ್ಯರ್ಥವಾಗಿ ಯತಿಗಳು ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆಷಾಢ ಹುಣ್ಣಿಮೆಯ ಗುರು ಪೂರ್ಣಿಮೆಯ ಸುದಿನದಂದು ಮಹಾನ್ ಗುರು ಎಂದು ಕರೆಯುವ ವೇದವ್ಯಾಸರನ್ನು ಹಾಗು ತಮ್ಮ ಗುರುಪರಂಪರೆಯನ್ನು ಪೂಜಿಸಿ ಈ ವ್ರತದ ಸಂಕಲ್ಪವನ್ನು ಮಾಡುವುದು ಪದ್ಧತಿಯಲ್ಲಿ ಬಂದಿದೆ.
(ಲೇಖನ: ಕೆ. ಎಲ್ ವಿದ್ಯಾಶಂಕರ ಸೋಮಯಾಜಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ